ಹಂಪಿ ಐತಿಹಾಸಿಕ ಸ್ಮಾರಕಗಳಿಗೆ ಬೀಮ್‌ ರಕ್ಷಣೆ : ಹಂತ ಹಂತವಾಗಿ ಜೀರ್ಣೋದ್ಧಾರಗೊಳಿಸಲು ಸಿದ್ಧತೆ

KannadaprabhaNewsNetwork | Updated : Dec 12 2024, 12:42 PM IST

ಸಾರಾಂಶ

ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಒತ್ತು ನೀಡಿರುವ ಭಾರತೀಯ ಪುರಾತತ್ವ ಇಲಾಖೆ ಶಿಥಿಲ ಸ್ಮಾರಕ, ಮಂಟಪ, ದೇವಾಲಯಗಳಿಗೆ ರಕ್ಷಣಾ ಬೀಮ್‌ಗಳನ್ನು ಅಳವಡಿಸಿದೆ. ಈ ಮೂಲಕ ಹಂತ ಹಂತವಾಗಿ ಜೀರ್ಣೋದ್ಧಾರಗೊಳಿಸಲು ಸಿದ್ಧತೆ ಮಾಡಿಕೊಂಡಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಒತ್ತು ನೀಡಿರುವ ಭಾರತೀಯ ಪುರಾತತ್ವ ಇಲಾಖೆ ಶಿಥಿಲ ಸ್ಮಾರಕ, ಮಂಟಪ, ದೇವಾಲಯಗಳಿಗೆ ರಕ್ಷಣಾ ಬೀಮ್‌ಗಳನ್ನು ಅಳವಡಿಸಿದೆ. ಈ ಮೂಲಕ ಹಂತ ಹಂತವಾಗಿ ಜೀರ್ಣೋದ್ಧಾರಗೊಳಿಸಲು ಸಿದ್ಧತೆ ಮಾಡಿಕೊಂಡಿದೆ.

ಹಂಪಿಯ ಕೆಲ ಸ್ಮಾರಕಗಳು ಮಳೆಗಾಲದಲ್ಲಿ ಬಿದ್ದ ಹಿನ್ನೆಲೆಯಲ್ಲಿ ಸಂಭಾವ್ಯ ಶಿಥಿಲ ಸ್ಮಾರಕಗಳನ್ನು ಭಾರತೀಯ ಪುರಾತತ್ವ ಇಲಾಖೆಯ ಹಂಪಿ ವಲಯದ ಅಧಿಕಾರಿಗಳು ಗುರುತಿಸಿದ್ದಾರೆ. ಇದರ ಆಧಾರದಲ್ಲಿ ಶಿಥಿಲಗೊಂಡ ಸ್ಮಾರಕಗಳಿಗೆ ಕಬ್ಬಿಣದ ಬೀಮ್‌ ಅಳವಡಿಸಿ ರಕ್ಷಿಸಲಾಗುತ್ತಿದೆ.

ಜೀರ್ಣೋದ್ಧಾರ:

ಹಂಪಿ ಸ್ಮಾರಕಗಳ ವೀಕ್ಷಣೆಗೆ ವಾರ್ಷಿಕ 2 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರು, 35 ಲಕ್ಷಕ್ಕೂ ಅಧಿಕ ದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಜಿ-20 ಶೃಂಗಸಭೆ ಬಳಿಕ ಹಂಪಿ ಸ್ಮಾರಕಗಳ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸ್ಮಾರಕಗಳ ಸಂರಕ್ಷಣೆಗೂ ಪುರಾತತ್ವ ಇಲಾಖೆ ಒತ್ತು ನೀಡಿದೆ.

ಈ ನಡುವೆ ಭಾರತೀಯ ಪುರಾತತ್ವ ಇಲಾಖೆಯ ಹೊಸದಿಲ್ಲಿಯ ಕಚೇರಿಗೆ ಹಂಪಿ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಅನುದಾನ ಬಂದ ಬಳಿಕ ಹಂತ ಹಂತವಾಗಿ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲು ಪುರಾತತ್ವ ಇಲಾಖೆ ಯೋಜನೆ ರೂಪಿಸಿದೆ.

ಯಾವ್ಯಾವ ಸ್ಮಾರಕಗಳು?:

ಹಂಪಿಯ ಅರಮನೆ ಪ್ರದೇಶದ ದಂಡನಾಯಕನ ಕೋಟೆ, ಅಷ್ಟಭುಜ ಸ್ನಾನದ ಕೋಳ, ನೆಲಸ್ತರದ ಶಿವ ದೇವಾಲಯ, ಶ್ರೀವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯ ಸಾಲು ಮಂಟಪ, ಕಮಲ ಮಹಲ್‌, ಜನಾನ ಆವರಣದ ಕೋಟೆ, ಕೆಲ ಮಂಟಪ, ಸ್ಮಾರಕ, ದೇವಾಲಯಗಳ ರಕ್ಷಣೆಗೂ ಬೀಮ್‌ ಅಳವಡಿಕೆ ಕಾರ್ಯ ನಡೆಸಲಾಗಿದೆ. ವಿಜಯ ವಿಠಲ ದೇಗುಲದ ದೀಪಸ್ತಂಭ, ವಿಠಲ ದೇವಾಲಯ, ಹಜಾರರಾಮ ದೇವಾಲಯ ಸೇರಿದಂತೆ ವಿವಿಧೆಡೆ ಸ್ಮಾರಕಗಳಿಗೆ ರಕ್ಷಣೆಗಾಗಿ ಕಬ್ಬಿಣದ ತುಂಡುಗಳನ್ನು ಅಳವಡಿಸಲಾಗಿದೆ.

ಹಂಪಿ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಮುಂದಿನ ಪೀಳಿಗೆಗೆ ಸ್ಮಾರಕಗಳನ್ನು ಕಾಪಾಡುವುದಕ್ಕಾಗಿ ಈಗ ಪುರಾತತ್ವ ಇಲಾಖೆ ಸ್ಮಾರಕಗಳನ್ನು ರಕ್ಷಣೆ ಮಾಡುವ ಕಾರ್ಯಕ್ಕೆ ಒತ್ತು ನೀಡಿದೆ.

ಹಂಪಿ ಸ್ಮಾರಕಗಳ ರಕ್ಷಣೆಗೆ ಆದ್ಯತೆ ನೀಡಲು ಈಗಾಗಲೇ ಸ್ಮಾರಕಗಳ ಪ್ರಿಯರು, ಇತಿಹಾಸಕಾರರು ಕೂಡ ಪುರಾತತ್ವ ಇಲಾಖೆಗೆ ಆಗ್ರಹಿಸಿದ್ದಾರೆ. ಇನ್ನೊಂದೆಡೆ ಹಂಪಿ ಸ್ಮಾರಕಗಳ ವೀಕ್ಷಣೆಗೆ ಗಣ್ಯಾತಿಗಣ್ಯರು ಹಾಗೂ ವಿದೇಶಿ ರಾಯಭಾರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಎಚ್ಚೆತ್ತುಕೊಂಡು ಸ್ಮಾರಕಗಳ ರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗಿದೆ. ಹಂಪಿ ವಲಯದ ಅಧಿಕಾರಿಗಳ ತಂಡವೊಂದು ದಿನ ನಿತ್ಯವೂ ಹಂಪಿ ಸ್ಮಾರಕಗಳ ಬಳಿ ಗಸ್ತು ತಿರುಗಾಡುತ್ತಿದ್ದಾರೆ. ಇನ್ನೊಂದೆಡೆ ದೇವಾಲಯ, ಸ್ಮಾರಕಗಳು, ಮಂಟಪಗಳ ಕ್ಲಸ್ಟರ್‌ಗಳನ್ನು ಮಾಡಿ, ಅಧಿಕಾರಿಗಳಿಗೆ ಜವಾಬ್ದಾರಿ ಹೊರಿಸಲಾಗಿದೆ. ಹಾಗಾಗಿ ಹಂಪಿ ಸ್ಮಾರಕಗಳ ರಕ್ಷಣಾ ಕಾರ್ಯವೂ ಸಾಗಿದೆ.

ಹಂಪಿಯ ಸ್ಮಾರಕಗಳನ್ನು ರಕ್ಷಣೆ ಮಾಡುವ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಕೆಲ ಶಿಥಿಲ ಸ್ಮಾರಕಗಳನ್ನು ಗುರುತಿಸಿ ಬೀಮ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಕೇಂದ್ರ ಕಚೇರಿಯಿಂದ ಅನುದಾನ ಬಂದ ಬಳಿಕ ಹಂತ ಹಂತವಾಗಿ ಜಿರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗುವುದು ಎನ್ನುತ್ತಾರೆ ಅಧಿಕಾರಿ ಕೇಂದ್ರ ಪುರಾತತ್ವ ಇಲಾಖೆ ಹಂಪಿ ಸುನೀಲ್‌.

Share this article