ಕನ್ನಡಪ್ರಭ ವಾರ್ತೆ ಚಾಮರಾಜನಗರ
ಲೋಕಸಭಾ ಚುನಾವಣೆ ಮತದಾನ ಸಂದರ್ಭದಲ್ಲಿ ಇಂಡಿಗನತ್ತ ಗ್ರಾಮದಲ್ಲಿ ನಡೆದ ಘಟನೆ ದುರದೃಷ್ಟಕರ. ಆದರೂ ಅಲ್ಲಿನ ಜನರ ಮೂಲ ಉದ್ದೇಶ ಮೆಂದರೆ, ಇಂಡಿಗನತ್ತ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸದೇ ಇರುವುದು. ಈ ನಿಟ್ಟಿನಲ್ಲಿ ಸರ್ಕಾರ, ಅರಣ್ಯ ಇಲಾಖೆ, ಜಿಲ್ಲಾಡಳಿತ ಕೇಂದ್ರಕ್ಕೆ ಪ್ತಸ್ರಾವನೆ ಸಲ್ಲಿಸಿ, ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಅಗತ್ಯವಾಗಿದೆ ಎಂದು ಪಿಯುಸಿಎಲ್‌ನ ಕೆ. ವೆಂಕಟರಾಜು ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಪಿಯುಸಿಎಲ್, ಸೋಲಿಗ ಅಭಿವೃದ್ಧಿ ಸಂಘ ಹಾಗೂ ಪುನರ್ಜಿತ್ ಸಂಸ್ಥೆ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ ೯ ರಂದು ಈ ಮೂರು ಸಂಸ್ಥೆಗಳು ನಡೆಸಿದ ಸತ್ಯ ಶೋಧನಾ ವರದಿಯ ಪ್ರಕಾರ ಇಲ್ಲಿನ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯ ದೊರಕದೇ ಇರುವುದು ಎಂದರು.ಇಲ್ಲಿ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ, ಪ್ರತಿ ಚುನಾವಣೆಯಲ್ಲೂ ಇದೇ ಸಮಸ್ಯೆ ಇಟ್ಟುಕೊಂಡು ಮತದಾನ ಬಹಿಷ್ಕಾರದ ಮಾತುಗಳನ್ನು ಹೇಳುತ್ತಿದ್ದರು, ಆವಾಗ ಅಧಿಕಾರಿಗಳು ಹೋಗಿ ಮನವೊಲಿಸಿ, ರಸ್ತೆಗೆ ಮಣ್ಣು, ಕುಡಿಯುವ ನೀರಿಗೆ ಕೆಲ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಆದರೆ ಈ ಬಾರಿ ಗಟ್ಟಿ ನಿರ್ಧಾರ ತೆಗೆದುಕೊಂಡು ಇಂಡಿಗನತ್ತ ಗ್ರಾಮಸ್ಥರು ಮತದಾನ ಬಹಿಷ್ಕಾರ ಹಾಕಿದ್ದರು, ಮೆಂದರೆ ಗ್ರಾಮಸ್ಥರು ಬರುವ ಕೆಲ ಸೌಲಭ್ಯಗಳು ನಿಲ್ಲುತ್ತವೆ ಎಂಬ ಭಯದಿಂದ ಮತದಾನ ಮಾಡಲು ಬಂದಿದ್ದಾರೆ. ಇದರಿಂದ ಇಂಡಿಗನತ್ತ ಗ್ರಾಮಸ್ಥರು ತಿಳಿಯದೇ ಕೋಪದಿಂದ ಮೆಂದಾರೆ ಗ್ರಾಮಸ್ಥರ ಹಲ್ಲೆ ಮಾಡಿದ್ದಾರೆ. ಕೆಲವರು ಅವಿವೇಕಿತನದಿಂದ ಇವಿಎಂ ಧ್ವಂಸ ಮಾಡಿದ್ದಾರೆ, ಸೋಲಿಗರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಆನಂತರ ಪೊಲೀಸರು ಬಂದ ನಂತರವು ಗಲಾಟೆಯಾಗಿ, ತಹಸೀಲ್ದಾರ್, ಮತಗಟ್ಟೆ ಅಧಿಕಾರಿಗಳಿಗೂ ಗಾಯಗಳಾಗಿವೆ ಎಂದರು.ನಂತರ ಎಫ್‌ಐಆರ್, ೨೫೦ ಜನರ ಮೇಲೆ ದೂರು ದಾಖಲಾಗಿ ಒಂದು ದೂರಿನ ಮೇಲೆ ಕೆಲವರಿಗೆ ಜಾಮೀನು ಸಿಕ್ಕಿದೆ, ಕೆಲವರು ಊರು ಬಿಟ್ಡು ಹೋಗಿದ್ದಾರೆ. ಈಗ ಸೋಲಿಗ ಸಮುದಾಯದ ಜನಾಂಗಕ್ಕೆ ಹಾಗೂ ಇಂಡಿಗನತ್ತ ಗ್ರಾಮದ ಜನರ ನಡುವೆ ಶಾಂತಿ, ಸೌದಾರ್ಹತೆ ಮೂಡಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿರುವುದು ಸ್ವಾಗತಾರ್ಹ ಎಂದರು.ಆದಿವಾಸಿಗಳು ಕೂಲಿ ಕಾರ್ಮಿಕರಾಗಿ ಶತಮಾನಗಳಿಂದ ಅರಣ್ಯ ಸಂರಕ್ಷಣೆ ಮಾಡುತ್ತಾ ಕನಿಷ್ಠ ಸೌಕರ್ಯಗಳು ಇಲ್ಲದಿದ್ದರೂ ಸಹ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಅವರ ಹಕ್ಕೊತ್ತಾಯಗಳು ಘಟನೆಗೆ ಕಾರಣವಾದ ಮೂಲ ಸೌಲಭ್ಯಗಳಾದ ರಸ್ತೆ ಮತ್ತು ನೀರಿನ ಸಮರ್ಪಕ ವ್ಯವಸ್ಥೆ ಆಗಬೇಕು. ಮೆಂದರೆಯ ಪೋಡಿನವರು ತಮಗೆ ಜೀವಿಸಲು ನಮ್ಮ ಸಮುದಾಯಗಳಿರುವ ಕಡೆ ಸ್ಥಳ ಕೊಟ್ಟು, ಪುನರ್ವಸತಿ ಮಾಡಿ ಎಂದು ಮೊರೆ ಇಡುತ್ತಿದ್ದಾರೆ. ನಾವು ಹಿಂದಿನಂತೆ ಬದುಕಲು ಸಾಧ್ಯವಿಲ್ಲ ಎಂಬುದು ಅವರ ಏಕಕಂಠದ ಅಭಿಪ್ರಾಯ ಎಂದರು.ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ಎರಡು ಗುಂಪುಗಳ ನಡುವೆ ಸೌಹಾರ್ದತೆ ಬೆಸೆಯಬೇಕು. ಮೆಂದರೆ ಪೋಡಿನವರಿಗೆ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸುವುದು. ಜನರಿಗೆ ಕೂಲಿಯ ವ್ಯವಸ್ಥೆ ಆಗಬೇಕು. ಪೋಡಿನ ೮೧ ಆದಿವಾಸಿ ಕುಟುಂಬಗಳ ಪೈಕಿ ೫೪ ಕುಟುಂಬಗಳಿಗೆ ಮಾತ್ರ ಪೌಷ್ಟಿಕ ಆಹಾರ ಸಿಗುತ್ತಿದ್ದು, ವಿವಿಧ ಕಾರಣಗಳಿಂದ ೨೬ ಕುಟುಂಬಗಳಿಗೆ ಸಿಗುತ್ತಿಲ್ಲ. ಆ ಬಗ್ಗೆ ಗಮನ ಕೊಡಬೇಕು. ಅನೇಕರಿಗೆ ರೇಷನ್ ಕಾರ್ಡ್ ಸಮಸ್ಯೆ ಇದ್ದು, ಅವರಿಗೆ ಸರ್ಕಾರಿ ಸವಲತ್ತು ಲಭ್ಯವಾಗುತ್ತಿಲ್ಲ. ಅದಕ್ಕೆ ವ್ಯವಸ್ಥೆ ಮಾಡಬೇಕು. ಸಾಧ್ಯವಿದ್ದಲ್ಲಿ ಕಾಡಿನ ಉಪ ಉತ್ಪನ್ನಗಳನ್ನು ತೆಗೆಯಲು ಅವಕಾಶ ಮಾಡಿಕೊಡಬೇಕು. ಉದ್ಯೋಗ ಖಾತ್ರಿ ಕೆಲಸಗಳಿಗೆ ಆದ್ಯತೆ ನೀಡಬೇಕು. ಮೆಂದರೆಯ ಸೋಲಿಗರ ಬದುಕು ಅಸಹನೀಯ ಇಂತಹ ಪರಿಸ್ಥಿತಿಯಲ್ಲಿ ಮನುಷ್ಯರು ಬದುಕುತ್ತಿದ್ದಾರೆ ಎಂಬುದನ್ನು ನೋಡಲು ಮತ್ತು ಕೆಳಿಸಿಕೊಳ್ಳುವುದೇ ಅಸಾಧ್ಯ. ಹಾಗಾಗಿ ಅರಣ್ಯ ಹಕ್ಕು ಕಾಯಿದೆಯಡಿ ಸೂಕ್ತವಾದ ಕಡೆ ಪುನರ್ವಸತಿ ಮಾಡಿ. ಕಾಡಿನ ರಕ್ಷಣೆಯ ಕಾರಣ ಹೇಳಿ ರಸ್ತೆ ಮಾಡದಿರುವುದು ಅಮಾನವೀಯ ಮತ್ತು ಮನುಷ್ಯರಿಗೆ ಎಸಗಿರುವ ದ್ರೋಹ ಮತ್ತು ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ. ಇಲ್ಲಿ ರಸ್ತೆ, ನೀರು, ಆರೋಗ್ಯ ಮತ್ತು ಶಿಕ್ಷಣ ಸೇವೆ ಕೂಡಲೇ ಆಗಬೇಕು ಮತ್ತು ಸೂಕ್ತವಾದ ಕಡೆ ಪುನರ್ವಸತಿ ಆಗಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪಿಯುಸಿಎಲ್ ಡಿ.ಎಸ್. ದೊರೆಸ್ವಾಮಿ, ಅಬ್ರಹಾಂ ಡಿಸಿಲ್ವ, ಪುನರ್ಜಿತ್ ಸಂಸ್ಥೆ ವೀರಭದ್ರನಾಯಕ ಸೋಲಿಗ ಅಭಿವೃದ್ಧಿ ಸಂಘದ ಮುತ್ತಯ್ಯ, ಬ್ರಿಜೇಶ್ ಒಲಿವೆರಾ ಇದ್ದರು.