ಗದಗ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮುಂದೆ ಹಲವಾರು ಜನರಿಗೆ ಉದ್ಯೋಗ ನೀಡುವಂಥವರಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.ಬುಧವಾರ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾರ್ವಜನಿಕ ಸೇವೆಯಲ್ಲಿ ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಸೇವೆ ನೀಡಬೇಕು. ಬಹುತೇಕ ಗ್ರಾಮೀಣ ಪ್ರದೇಶದಿಂದ ಬಂದಿರುವ ಯುವ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಅವಿಸ್ಮರಣೀಯ ಹಾಗೂ ಸಂತೃಪ್ತಿ ತರುವಂತಹ ದಿನವಾಗಿದೆ. ಈ ಜ್ಞಾನ ಭಂಡಾರದಿಂದ ಜೀವನದ ಮೌಲ್ಯ, ಸಿದ್ಧಾಂತಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು ಎಂದು ಹೇಳಿದರು.ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಘಟಿಕೋತ್ಸವ ಮಹತ್ವದ ಹೆಜ್ಜೆಯಾಗಿದೆ. ವಿಶ್ವವಿದ್ಯಾಲಯದಲ್ಲಿ ಪಡೆದಿರುವ ಜ್ಞಾನ ಮತ್ತು ಕೌಶಲ್ಯವನ್ನು ಬಳಸಿಕೊಂಡು ಸಾಮಾಜಿಕ ಪರಿವರ್ತನೆ ತರುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಲೆಗೆ ವಿಜ್ಞಾನ ಅಳವಡಿಸುವುದೇ ತಂತ್ರಜ್ಞಾನ ಎಂದು ಸರಳ ಭಾಷೆಯಲ್ಲಿ ಹೇಳಬಹುದು. ದೇಶದ ಆರ್ಥಿಕ ಪ್ರಗತಿಯಲ್ಲಿ ತಂತ್ರಜ್ಞಾನದ ಪಾತ್ರ ಪ್ರಮುಖವಾಗಿದೆ.ಕೇಂದ್ರ ಸರ್ಕಾರ ಪಂಚಾಯತ್ ರಾಜ್ ಮಂತ್ರಾಲಯದ ಮಾಜಿ ಜಂಟಿ ಕಾರ್ಯದರ್ಶಿ ಡಾ. ಟಿ.ಆರ್. ರಘುನಂದನ್ ಘಟಿಕೋತ್ಸವ ಭಾಷಣ ಮಾಡಿ, ಕೃಷಿ ವಲಯವು ಕುಂಠಿತವಾಗಿರುವ ಇಂದಿನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯಲ್ಲಿ ಗ್ರಾಮೀಣ ಆರ್ಥಿಕತೆ ವಿಶೇಷವಾಗಿ, ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ಪ್ರಜಾಸತ್ತಾತ್ಮಕ ವಿಕೇಂದ್ರೀಕರಣದ ಅರ್ಥಪೂರ್ಣ ಮತ್ತು ಭಾರತ ಪರಿಣಾಮಕಾರಿ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ ಅರ್ಥಪೂರ್ಣ ಗ್ರಾಮೀಣ ಅಥವಾ ನಗರ ಅಭಿವೃದ್ಧಿಯನ್ನು ಸಾಧಿಸಲಾಗುವುದಿಲ್ಲ ಎಂದರು.ಡಾ. ಭೀಮರಾವ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಅವರು ಪಂಚಾಯತ್ ವ್ಯವಸ್ಥೆಯ ವಿಕೇಂದ್ರೀಕರಣದ ಪರವಾಗಿದ್ದರು. ಆದರೆ ಸ್ಥಳೀಯ ಸರ್ಕಾರಗಳು ಎಲ್ಲ ಸಾಮಾಜಿಕ ವರ್ಗಗಳನ್ನು ಒಳಗೊಂಡಿರಬೇಕು ಎಂದು ಬಯಸಿದ್ದರು. 73 ಮತ್ತು 74ನೇ ಸಂವಿಧಾನಿಕ ತಿದ್ದುಪಡಿಗಳ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ಥಳೀಯ ಸರ್ಕಾರಗಳಿಗೆ ಸಂವಿಧಾನಿಕ ಸ್ಥಾನಮಾನ ನೀಡಿ ಮೂವತ್ತು ವರ್ಷಗಳಾಗಿದ್ದರೂ, ಪಂಚಾಯತ್ ರಾಜ್‌ನ ಅನುಷ್ಠಾನವು ಎಲ್ಲ ರಾಜ್ಯಗಳಲ್ಲಿ ಅರೆಮನಸ್ಸಿನಿಂದ ಅನುಷ್ಠಾನ ಆಗಿರುವುದು ಕಂಡು ಬಂದಿದೆ ಎಂದು ಹೇಳಿದರು.ನಾವೆಲ್ಲ ವಿವಿಧ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಪ್ರಾದೇಶಿಕ ಮತ್ತು ಭಾಷಾ ಹಿನ್ನೆಲೆಯಿಂದ ಬಂದವರು. ವಿಭಜನೆಯನ್ನು ಉತ್ತೇಜಿಸಲು ಅಥವಾ ಏಕತೆಯನ್ನು ಉತ್ತೇಜಿಸಲು ನಾವು ಇವುಗಳನ್ನು ಬಳಸಬಹುದು. ನಿಮ್ಮ ವೈವಿಧ್ಯತೆಯು ಏಕತೆ, ಸಹಾನುಭೂತಿ ಮತ್ತು ದೇಶಭಕ್ತಿಗೆ ಅಡ್ಡಿ ಬಾರದಂತೆ ಖಚಿತಪಡಿಸಿಕೊಳ್ಳಲು ಸರಳವಾದ ಮಾರ್ಗವಿದೆ. ವಿದ್ಯಾರ್ಥಿಗಳಿಗೆ ಸತ್ಯ, ಅಹಿಂಸೆ, ಸ್ವರಾಜ್, ಸರ್ವೋದಯ ಮತ್ತು ಅಂತ್ಯೋದಯ -ಈ ತತ್ವಗಳನು ಅನುಸರಿಸಲು ನಿಮಗೆ ಎರಡು ಪ್ರಮುಖ ಗುಣಲಕ್ಷಣಗಳು ಅಗತ್ಯವಾಗಿವೆ. ಅವುಗಳೆಂದರೆ ಧೈರ್ಯ ಮತ್ತು ತಾಳ್ಮೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹಲೋತ್, ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ, ಕುಲಸಚಿವ ಡಾ. ಸುರೇಶ ನಾಡಗೌಡ್ರ, ಉಪಸ್ಥಿತರಿದ್ದರು.