ಶಿರಸಿ: ಜೇನು ಕೃಷಿ ತರಬೇತಿ ಪಡೆದು ಆರಂಭಿಸಿ, ವೈಜ್ಞಾನಿಕ ಪದ್ಧತಿಯಲ್ಲಿ ಕಲಿತರೆ ಇದನ್ನು ದೊಡ್ಡ ಉದ್ಯಮವಾಗಿ ಬೆಳೆಸಬಹುದು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ನಿರ್ದೇಶಕ ಬಸವರಾಜ್ ತಿಳಿಸಿದರು.ಬುಧವಾರ ನಗರದ ಟಿಎಂಎಸ್ ಸಭಾಭವನದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಹಾಗೂ ಸ್ಕೊಡ್‌ವೆಸ್ ಆಶ್ರಯದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಜೇನು ಕೃಷಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜೇನು ಕೃಷಿ ಉದ್ಯಮವಾಗಿ ಮಾಡಿದರೆ ಸಾಕಷ್ಟು ಲಾಭದಾಯಕವಾಗಿದೆ. ಜೇನಿನಿಂದ ಎರಡು ಸಾವಿಕ್ಕೂ ಹೆಚ್ಚಿನ ಪ್ರಾಡಕ್ಟ್‌ಗಳು ತಯಾರಾಗುತ್ತವೆ. ಈ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ. ಪಶ್ಚಿಮ ಘಟ್ಟದ ಜೇನು ಆರೋಗ್ಯಕಾರಿಯಾಗಿದ್ದು, ಕ್ಯಾನ್ಸರ್‌ನಂಥ ರೋಗವನ್ನೂ ನಿಯಂತ್ರಿಸುವ ಶಕ್ತಿ ಜೇನುತುಪ್ಪಕ್ಕಿದೆ ಎಂದರು. ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಮಾತನಾಡಿ, ಜೇನು ಕೃಷಿಯಿಂದ ಉದ್ಯೋಗಾವಕಾಶದ ಜತೆಗೆ ಆದಾಯ ಮೂಲವನ್ನಾಗಿಯೂ ಮಾಡಿಕೊಳ್ಳಬಹುದು. ಜಿಲ್ಲೆಯಲ್ಲಿ ಅತ್ಯುತ್ತಮ ಅವಕಾಶವಿದೆ. ಜೇನು ಕೃಷಿ ಯೋಜನೆಗೆ ಜನರ ಸಹಭಾಗಿತ್ವ ಅತ್ಯಂತ ಮುಖ್ಯ. ಹಾಲು ಉತ್ಪಾದಕರ ಸಂಘದಂತೆ ಜೇನು ಕೃಷಿಯಲ್ಲೂ ಮಾಡಬಹುದಾಗಿದೆ. ಜೇನು ಸಹಕಾರಿ ಸಂಘ ಬಹಳ ಹಿಂದೆಯೇ ಆರಂಭವಾಯಿತು. ಆದರೆ ಕೆಎಂಎಫ್‌ನಂತೆ ಬೆಳೆಯಲಿಲ್ಲ. ಹಾಲು ಸೊಸೈಟಿಯಂತೆ ಫೆಡರೇಶನ್ ಮಾಡಿದರೆ ದೊಡ್ಡ ಉದ್ಯಮವಾಗಿ ಮಾಡಬಹುದು ಎಂದರು.ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ವಾಸುದೇವ ಮಾತನಾಡಿ, ಜೇನನ್ನು ಆಹಾರವಾಗಿ ಸ್ವೀಕರಿಸುವ ಪದ್ಧತಿ ಮೊದಲು ನಮ್ಮಲ್ಲಿ ಇರಲಿಲ್ಲ. ಆಯುರ್ವೇದದ ಔಷಧವಾಗಿ ಜೇನು ಸ್ವೀಕರಿಸುತ್ತಿದ್ದೆವು. ಆದರೆ ಇತ್ತೀಚೆಗೆ ಜೇನಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ವುತ್ತಿದೆ. ರಾಸಾಯನಿಕ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಜೇನು ಸಂತತಿ ನಾಶವಾಗುತ್ತಿದೆ ಎಂದರು. ಪ್ರಾಸ್ತಾವಿಕವಾಗಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶದ ಡಾ. ವೆಂಕಟೇಶ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಶೇ. ೮೦ರಷ್ಟು ಅರಣ್ಯ ಕಡಿಮೆ ಆಗಿದೆ. ಅರಣ್ಯ ಉತ್ಪನ್ನಗಳು ಇಳಿಕೆಯಾಗಿದೆ. ಅರಣ್ಯ ಜೇನು ನಶಿಸಿಹೋಗುವ ಹಂತದಲ್ಲಿವೆ. ಅರಣ್ಯ ಉತ್ಪನ್ನಗಳು ಕಡಿಮೆ ಆಗಿರುವುದರಿಂದ ಕಾಡುಪ್ರಾಣಿಗಳು ನಾಡಿಗೆ ಬಂದು ಹಾವಳಿ ನೀಡುತ್ತವೆ. ಹೀಗೆಯೇ ಮುಂದುವರಿದರೆ ಮನುಕುಲ ನಾಶವಾಗುವ ಹಂತಕ್ಕೆ ತಲುಪಲಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ಸ್ವಾಗತಿಸಿದರು. ಗಂಗಾಧರ ನಾಯ್ಕ ನಿರೂಪಿಸಿದರು. ಕೆವಿಕೆ ಮುಖ್ಯಸ್ಥೆ ಡಾ. ರೂಪಾ ಪಾಟೀಲ್, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ರಾಮದಾಸ್ ಢೋಮೆವಾಲೆ, ಖಾದಿ ಮತ್ತು ಗ್ರಾಮೋದ್ಯೋಗದ ಸಹಾಯಕ ನಿರ್ದೇಶಕ ರಾಜಣ್ಣ, ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸರಸ್ವತಿ ಎನ್. ರವಿ, ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಪ್ರೊ. ಕೆ.ಎನ್. ಹೊಸ್ಮನಿ ಮತ್ತಿತರರು ಉಪಸ್ಥಿತರಿದ್ದರು.