ಬಿಯರ್‌ ಆಯ್ತು, ಈಗ ಕ್ವಾರ್ಟರ್‌ ಮದ್ಯ ₹15 ಹೆಚ್ಚಳ

KannadaprabhaNewsNetwork |  
Published : May 17, 2025, 01:36 AM IST
ಮದ್ಯದ ದರ ಹೆಚ್ಚಳ | Kannada Prabha

ಸಾರಾಂಶ

ಅಬಕಾರಿ ರಾಜಸ್ವ ಸಂಗ್ರಹದ ಗುರಿ ತಲುಪಲು ಪೂರಕವಾಗಿ ಸರ್ಕಾರವು ಕಡಿಮೆ ಬೆಲೆಯ ಐಎಂಎಲ್‌ ಮದ್ಯದ ದರವನ್ನೂ ಹೆಚ್ಚಳ ಮಾಡಿದ್ದು, ಹೊಸ ದರ ಗುರುವಾರದಿಂದಲೇ ಜಾರಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಬಕಾರಿ ರಾಜಸ್ವ ಸಂಗ್ರಹದ ಗುರಿ ತಲುಪಲು ಪೂರಕವಾಗಿ ಸರ್ಕಾರವು ಕಡಿಮೆ ಬೆಲೆಯ ಐಎಂಎಲ್‌ ಮದ್ಯದ ದರವನ್ನೂ ಹೆಚ್ಚಳ ಮಾಡಿದ್ದು, ಹೊಸ ದರ ಗುರುವಾರದಿಂದಲೇ ಜಾರಿಗೆ ಬಂದಿದೆ.

ಮದ್ಯವನ್ನು ದರಕ್ಕೆ ಅನುಗುಣವಾಗಿ ಒಟ್ಟು 16 ಸ್ಲ್ಯಾಬ್‌ಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಒಂದರಿಂದ ಮೂರನೇ ಸ್ಲ್ಯಾಬ್‌ವರೆಗೂ ಪ್ರತಿ 180 ಎಂಎಲ್‌ ಬಾಟಲ್‌ ಮೇಲೆ ತಲಾ 15 ರು. ಹೆಚ್ಚಳ ಮಾಡಲಾಗಿದ್ದು, ನಾಲ್ಕನೇ ಸ್ಲ್ಯಾಬ್‌ನ ಮದ್ಯದ ಮೇಲೆ ತಲಾ 5 ರು. ದರ ಏರಿಕೆಯಾಗಿದೆ. ಒಟ್ಟಾರೆ ಶೇ.10 ರಿಂದ 20 ರಷ್ಟು ದರ ಹೆಚ್ಚಳವಾಗಿದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬಿಯರ್‌ ದರವನ್ನೂ ಹೆಚ್ಚಳ ಮಾಡಿತ್ತು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಎರಡು ಬಾರಿ ಐಎಂಎಲ್‌ ಮದ್ಯದ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಮೂರನೇ ಸಲ ಐಎಂಎಲ್‌ ಮದ್ಯದ ದರ ಏರಿಸಲಾಗಿದೆ. 2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 38,525 ಕೋಟಿ ರು. ರಾಜಸ್ವ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಆದರೆ ಅಪೇಕ್ಷಿತ ರಾಜಸ್ವ ಸಂಗ್ರಹವಾಗಿರಲಿಲ್ಲ.

ಪ್ರಸಕ್ತ ಸಾಲಿನಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರು. ರಾಜಸ್ವ ಸಂಗ್ರಹದ ಗುರಿ ಇದ್ದು, ಇದಕ್ಕೆ ಪೂರಕವಾಗಿ ಐಎಂಎಲ್‌ ಮದ್ಯದ ದರ ಹೆಚ್ಚಳ ಮಾಡಲಾಗಿದೆ. 1 ರಿಂದ 4 ನೇ ಸ್ಲ್ಯಾಬ್‌ವರೆಗೂ ಕಡಿಮೆ ದರದ ಮದ್ಯಗಳು ಇರಲಿದ್ದು, ಶ್ರಮಿಕರು ಹೆಚ್ಚಾಗಿ ಉಪಯೋಗಿಸುವ ಮದ್ಯಗಳಾಗಿವೆ. ಇವುಗಳ ಬೆಲೆಯನ್ನು ಮಾತ್ರ ಹೆಚ್ಚಿಸಿದ್ದು ದುಬಾರಿ ಬೆಲೆಯ ಪ್ರೀಮಿಯಂ ಮತ್ತು ಸೆಮಿ ಪ್ರೀಮಿಯಂ ಮದ್ಯದ ದರ ಹೆಚ್ಚಳ ಮಾಡಿಲ್ಲ.ಅಬಕಾರಿ ಲೈಸೆನ್ಸ್‌ ಶುಲ್ಕ ಭಾರೀ ಹೆಚ್ಚಳಕ್ಕೆ ಸಿದ್ಧತೆ

ಅಬಕಾರಿ ಸನ್ನದುಗಳ ಮೇಲಿನ ವಾರ್ಷಿಕ ಶುಲ್ಕ ಸೇರಿ ವಿವಿಧ ರೀತಿಯ ಶುಲ್ಕಗಳನ್ನೂ ಗಣನೀಯವಾಗಿ ಹೆಚ್ಚಿಸಲು ಮುಂದಾಗಿರುವ ಸರ್ಕಾರ, ಈ ಬಗ್ಗೆ ಕರಡು ಅಧಿಸೂಚನೆ ಪ್ರಕಟಿಸಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಲಾಗಿದೆ.

ಜು.1 ರಿಂದ ಶುಲ್ಕ ಹೆಚ್ಚಳ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಒಂದೊಮ್ಮೆ ಆಕ್ಷೇಪಣೆಗಳು ಬಾರದಿದ್ದರೆ ಸುಗ್ರೀವಾಜ್ಞೆ ಮೂಲಕ ಅಥವಾ ಮುಂಗಾರು ಅಧಿವೇಶನದಲ್ಲಿ ಮಂಡಿಸಿ ಇದಕ್ಕೆ ಅನುಮೋದನೆ ಪಡೆಯಬಹುದು.

ಡಿಸ್ಟಿಲರಿ ಮತ್ತು ಬ್ರೀವರಿಗೆ ಒಂದು ಲಕ್ಷ ರುಪಾಯಿಗೆ ಬದಲಾಗಿ ಎರಡು ಲಕ್ಷ ರು, 20 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಮಹಾನಗರ ಪಾಲಿಕೆ ಪ್ರದೇಶಗಳ ವಾರ್ಷಿಕ ಶುಲ್ಕ 6.90 ಲಕ್ಷ ರು ಇದ್ದುದನ್ನು (ಶುಲ್ಕ 6 ಲಕ್ಷ ರು. ಮತ್ತು ಸೆಸ್‌ 90 ಸಾವಿರ ರು.) 13.90 ಲಕ್ಷ ರುಪಾಯಿಗೆ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ.

ಇತರೆ ನಗರ ಪಾಲಿಕೆಗಳಲ್ಲಿ 10 ಲಕ್ಷ ರು., ನಗರ ಸಭೆ ವ್ಯಾಪ್ತಿಗೆ 9 ಲಕ್ಷ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ 8 ಲಕ್ಷ ರು. ಹಾಗೂ ವಾರ್ಷಿಕ ಪರವಾನಗಿ ಶುಲ್ಕವನ್ನು ಮೂರು ಪಟ್ಟು ಹೆಚ್ಚು ಮಾಡಲು ಸರ್ಕಾರ ನಿರ್ಧರಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು