ಏಪ್ರಿಲಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ

KannadaprabhaNewsNetwork |  
Published : May 13, 2025, 01:42 AM ISTUpdated : May 13, 2025, 05:09 AM IST
ಬಿಯರ್‌ | Kannada Prabha

ಸಾರಾಂಶ

ಪದೇ ಪದೆ ಬೆಲೆ ಹೆಚ್ಚಳದಿಂದಾಗಿ ರಾಜ್ಯದಲ್ಲಿ ಬಿಯರ್‌ ಮಾರಾಟದಲ್ಲಿ ಗಣನೀಯ ಕುಸಿತ ಕಂಡುಬರುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಐತಿಹಾಸಿಕ ದಾಖಲೆಯ ಬಿಯರ್‌ ಮಾರಾಟವಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಭಾರೀ ಕುಸಿತ ಕಂಡುಬಂದಿದೆ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : ಪದೇ ಪದೆ ಬೆಲೆ ಹೆಚ್ಚಳದಿಂದಾಗಿ ರಾಜ್ಯದಲ್ಲಿ ಬಿಯರ್‌ ಮಾರಾಟದಲ್ಲಿ ಗಣನೀಯ ಕುಸಿತ ಕಂಡುಬರುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಐತಿಹಾಸಿಕ ದಾಖಲೆಯ ಬಿಯರ್‌ ಮಾರಾಟವಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಭಾರೀ ಕುಸಿತ ಕಂಡುಬಂದಿದೆ.

2024 ರ ಏಪ್ರಿಲ್‌ನಲ್ಲಿ 49.72 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ನಲ್ಲಿ 650 ಎಂಎಲ್‌ನ 12 ಬಾಟಲ್‌) ಮಾರಾಟವಾಗಿತ್ತು. ಇದು ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಒಂದು ತಿಂಗಳಿನಲ್ಲಿ ನಡೆದ ಅತಿ ಹೆಚ್ಚಿನ ಮಾರಾಟವಾಗಿದ್ದು ದಾಖಲೆ ನಿರ್ಮಾಣವಾಗಿತ್ತು. ಆದರೆ ಪ್ರಸಕ್ತ ಸಾಲಿನ ಏಪ್ರಿಲ್‌ನಲ್ಲಿ 41.60 ಲಕ್ಷ ಬಾಕ್ಸ್‌ ಬಿಯರ್‌ ಮಾತ್ರ ಮಾರಾಟವಾಗಿದೆ.

ಅಬಕಾರಿ ಇಲಾಖೆ ಈಗಾಗಲೇ ಕಳೆದ ಎರಡು ವರ್ಷದಲ್ಲಿ ಈಗಾಗಲೇ ಮೂರು ಬಾರಿ ಮದ್ಯ ಮಾರಾಟ ದರ ಹೆಚ್ಚಳ ಮಾಡಿದ್ದು, ಇದೀಗ ನಾಲ್ಕನೇ ಬಾರಿ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ. ಈ ಬಗ್ಗೆ ಏ.29 ರಂದು ನೋಟಿಫಿಕೇಷನ್‌ ಹೊರಡಿಸಿದ್ದು ಶೀಘ್ರ ಮತ್ತೊಂದು ಸುತ್ತಿನ ಬೆಲೆ ಹೆಚ್ಚಳಕ್ಕೆ ಇಲಾಖೆ ಸನ್ನದ್ಧವಾಗಿದೆ. ಮದ್ಯ ಮಾರಾಟ ಕುಸಿಯಲು ಇದೇ ಪ್ರಮುಖ ಕಾರಣವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಐಎಂಎಲ್‌ ಮದ್ಯ ಮಾರಾಟ ಜಿಗಿತ:

ರಾಜ್ಯದಲ್ಲಿ ಬಿಯರ್‌ ಮಾರಾಟ ಕುಸಿತವಾಗುತ್ತಿದ್ದರೆ ಮತ್ತೊಂದೆಡೆ ವಿಸ್ಕಿ, ರಮ್‌, ಜಿನ್‌, ಬ್ರಾಂಡಿ ಸೇರಿ ಐಎಂಎಲ್‌ ಮದ್ಯ ಮಾರಾಟ ಹೆಚ್ಚಳವಾಗಿದೆ. 2024 ಏಪ್ರಿಲ್‌ನಲ್ಲಿ 54.46 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ನಲ್ಲಿ 180 ಎಂಎಲ್‌ನ 48 ಬಾಟಲ್‌) ಐಎಂಎಲ್‌ ಮದ್ಯ ಮಾರಾಟವಾಗಿದ್ದರೆ ಈ ಸಲ 57.44 ಲಕ್ಷ ಬಾಕ್ಸ್‌ ಮದ್ಯ ಮಾರಾಟವಾಗಿದೆ.

ಬೆಲೆ ಹೆಚ್ಚಳವೇ ಮೂಲ ಕಾರಣ

ಬಿಯರ್‌ ಮಾರಾಟದಲ್ಲಿ ಭಾರೀ ಇಳಿಕೆ ಆಗಲು ಬೆಲೆ ಹೆಚ್ಚಳವೇ ಪ್ರಮುಖ ಕಾರಣ. ಹೊಸ ಸರ್ಕಾರ ಬಂದಾಗಿನಿಂದ ನಾಲ್ಕನೇ ಬಾರಿ ಮದ್ಯದ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ ಎಂದು ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್‌ ಹೆಗ್ಡೆ ಆರೋಪಿಸಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಅವೈಜ್ಞಾನಿಕವಾಗಿ ಪದೇ ಪದೆ ಮದ್ಯದ ದರ ಹೆಚ್ಚಳ ಮಾಡಬಾರದು ಎಂದು ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಬಿಯರ್‌ ಕುಡಿಯುತ್ತಿದ್ದವರನ್ನು ಐಎಂಎಲ್‌ ಮದ್ಯ ಕುಡಿಯಲು ಪ್ರೋತ್ಸಾಹಿಸುವಂತಿದೆ ಸರ್ಕಾರದ ನಡೆ ಎಂದು ಟೀಕಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ