ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ವಿವಿಧ ಕಡೆಗಳಲ್ಲಿ ಸರಕಳ್ಳತನ ಪ್ರಕರಣ, ಹೆರಾಯಿನ್, ಗಾಂಜಾ, ಇ-ಸಿಗರೇಟ್ ಮಾರಾಟ ಮಾಡುವವರ ಮೇಲೆ ನಗರ ಪೊಲೀಸರು ಮಿಂಚಿನ ದಾಳಿ ನಡೆಸಿ 10 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಜತೆಗೆ ನಗರದ ವಿವಿಧ ಠಾಣೆಗಳಲ್ಲಿ ಪ್ರತ್ಯೇಕ 6 ಪ್ರಕರಣ ದಾಖಲಿಸಿದ್ದು, ತನಿಖೆ ಮಂದುವರಿಸಿದ್ದಾರೆ.ಇಲ್ಲಿನ ಸದಾಶಿವನಗರದಲ್ಲಿ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗಮೇಶ್ವರ ನಗರದ ಸಮಾನ್ ಅಹ್ಮದ್ ರಿಯಾಜ್ ಅಹ್ಮದ್ ನಕ್ಕರಚಿ (28), ಶಹಪುರದ ಸರಾಫ್ ಗಲ್ಲಿ ನಿವಾಸಿ ಸೂರ್ಯಕಾಂತ ದಿಲೀಪ್ ಅನ್ವೇಕರ್ ಬಂಧಿತರು. ಮಾ.13ರಂದು ಸದಾಶಿವನಗರದಲ್ಲಿ ಲಕ್ಷ್ಮೀ ಕಲ್ಲಪ್ಪ ಕಿಳ್ಳಿಕೇತರ ನಡೆದುಕೊಂಡು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನದ ಮೇಲೆ ಎದುರಿನಿಂದ ಬಂದ ಇಬ್ಬರು ಕಳ್ಳರು ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಲಕ್ಷ್ಮೀ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಮೊದಲು ಆರೋಪಿ ಸಮಾನ್ ಅಹ್ಮದ್ ನಕ್ಕರಚಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದು, ಈತ ನೀಡಿದ ಮಾಹಿತಿ ಮೇರೆಗೆ ಚಿನ್ನದ ಸರ ಖರೀದಿಸಿದ್ದ ಸೂರ್ಯಕಾಂತ ಅನ್ವೇಕರನನ್ನು ಬಂಧಿಸಿದ್ದಾರೆ. ಬಂಧಿತರಿಂದ ₹ 24 ಸಾವಿರ ಮೌಲ್ಯದ 4 ಗ್ರಾಂ ಚಿನ್ನದ ಸರ, ₹ 560 ಮೌಲ್ಯದ 8 ಗ್ರಾಂ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.
ಇ -ಸಿಗರೇಟ್ ಮಾರಾಟ ಅಂಗಡಿ ಮೇಲೆ ದಾಳಿ:ನಿಷೇಧಿತ ಇ-ಸಿಗರೇಟ್ ಹಾಗೂ ಇನ್ನಿತರ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ನಗರದ ಕೊಲ್ಹಾಪುರ ವೃತ್ತದ ಬಳಿರುವ ಯುನಿಕ್ ಶಾಪ್ ಮೇಲೆ ಮಾರ್ಕೆಟ್ ಠಾಣೆ ಪೊಲೀಸರು ದಾಳಿ ನಡೆಸಿ ಕೇರಳದ ಕಾಸರಗೋಡು ಮೂಲದ ನುಮಾನ್ ಮಹ್ಮದ್ ಅಬ್ದುಲ್ಲಾ (33) ಹಾಗೂ ಮೊಹಮ್ಮದ್ ನಿಯಾಜ್ ಮೋಹಿದು ಕುನ್ಹಿ (21) ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ₹ 1,38,511 ಮೌಲ್ಯದ ಇ-ಸಿಗರೇಟ್ ಮತ್ತು ತಂಬಾಕು ಉತ್ಪನ್ನ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಮಾರಾಟಗಾರನ ಬಂಧನ:ನಗರದಲ್ಲಿ ಮಾರಾಟ ಮಾಡಲು ದ್ವಿಚಕ್ರ ವಾಹನದಲ್ಲಿ ಗಾಂಜಾ ತರುತ್ತಿದ್ದ ಯುವಕನನ್ನು ಬಂಧಿಸಿ ₹10 ಸಾವಿರ ಮೌಲ್ಯದ 380 ಗ್ರಾಂ ಗಾಂಜಾ, ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ₹ 25250 ಮೌಲ್ಯದ ಸ್ವತ್ತನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಆನಂದ ಶರದ ಪತಂಗೆ (23) ಬಂಧಿತ ಆರೋಪಿ. ಗಣೇಶಪುರ ಕಡೆಯಿಂದ ಜ್ಯೋತಿ ಕಾಲೇಜು ಕಡೆಗೆ ಗಾಂಜಾ ಮಾರಾಟ ಮಾಡಲು ಬರುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಗಣೇಶಪುರದ ಉದಯ ಕಾಂಬಳೆ ಎಂಬಾತನ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.ಹೆರಾಯಿನ್ ಮಾರಾಟ: ಮೂವರ ಬಂಧನ:
ನಗರದ ಹಳೇ ಪೂನಾ-ಬೆಂಗಳೂರು ರಸ್ತೆ ಪಕ್ಕದಲ್ಲಿರುವ ಹಳೇ ತರಕಾರಿ ಮಾರುಕಟ್ಟೆ ಬಳಿ ಹೆರಾಯಿನ್ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ನಗರದ ಸಿಇಎನ್ ಠಾಣೆ ಪೊಲೀಸರು ಕಂಜರಗಲ್ಲಿಯ ಅಪ್ಜಾನ್ ಅಲ್ತಾಫ್ ಸುಬೇದಾರ್ (22) ಹಾಗೂ ಅಪ್ತಾಬ್ ಅಲ್ತಾಫ್ ಸುಬೇದಾರ (20)ನನ್ನು ಬಂಧಿಸಿ ₹ 80 ಸಾವಿರ ಮೌಲ್ಯದ 16 ಗ್ರಾಂ ಹೆರಾಯಿನ್, ₹ 3530 ನಗದು, ಮೊಬೈಲ್ ಸೇರಿ ಒಟ್ಟು ₹ 86530 ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.ನಗರದ ಕಾಳಿ ಅಂಬ್ರಾಯಿಯಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಹೆರಾಯಿನ್ ಮಾರಾಟ ಮಾಡುತ್ತಿದ್ದ ಕಾಳಿ ಅಂಬ್ರಾಯಿ ನಿವಾಸಿ ವಿನೂತ ಕೊಣ್ಣೂರ ಉರ್ಫ್ ನ್ಯಾಮಗೌಡರ (26)ನನ್ನು ಬಂಧಿಸಿ ₹1.30 ಲಕ್ಷ ಮೌಲ್ಯದ 45 ಗ್ರಾಂ ಹೆರಾಯಿನ್, ₹1200 ನಗದು, ಮೊಬೈಲ್ ಹಾಗೂ ದ್ವಿಚಕ್ರ ವಾಹನ ಸೇರಿ ಒಟ್ಟು ₹ 209200 ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಹುಕ್ಕಾ, ತಂಬಾಕು ಮಾರಾಟ: ಇಬ್ಬರ ಬಂಧನ:ನಗರದ ಟಿಳಕವಾಡಿ ಪ್ರದೇಶದ ಆರ್‌ಪಿಡಿ ಕ್ರಾಸ್ ಹತ್ತಿರ ಬೆಳಗಾವಿ ಗ್ಯಾಲರಿ ಸ್ಮೋಕ್ ಮತ್ತು ಚಾಕಲೇಟ್ ಗಿಫ್ಟ್ ಆ್ಯಂಡ್ ಮೋರ್ ಅಂಗಡಿ ಮೇಲೆ ದಾಳಿ ನಡೆಸಿದ ಟಿಳಕವಾಡಿ ಠಾಣೆಯ ಪೊಲೀಸರು, ಮಂಗಳೂರು ಮೂಲದ ಅಬುಬಕ್ಕರ್ ಜೈನಾಭಾ ಸಿದ್ದಿಕ್ (31) ಹಾಗೂ ಶಬಾಬ್ ಶಖೀಲ್ ಅಹಮ್ಮದ್ (22) ಎಂಬುರನ್ನು ಬಂಧಿಸಿ ಒಟ್ಟು ₹2,56,600 ಮೌಲ್ಯದ ಹುಕ್ಕಾ ಮತ್ತು ತಂಬಾಕು ಉತ್ಪನ್ನ ವಶಪಡಿಸಿಕೊಂಡಿದ್ದಾರೆ.
ಮಿಂಚಿನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ನಗರ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಇನಸ್ಪೆಕ್ಟರ್, ಪಿಎಸ್‌ಐ, ಎಎಸ್‌ಐ ಹಾಗೂ ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು, ಡಿಸಿಪಿಗಳು ಶ್ಲಾಘಿಸಿದ್ದಾರೆ.