ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ- ಕಿತ್ತೂರು- ಧಾರವಾಡ ರೈಲು ಮಾರ್ಗ ಯೋಜನೆ ವಿಳಂಬವಾಗುತ್ತಿದೆ. ಆಮೆ ನಡಿಗೆಯಲ್ಲಿ ಸಾಗುತ್ತಿರುವ ಈ ಯೋಜನೆಗೆ ಭೂಸ್ವಾಧೀನ ಸಮಸ್ಯೆ ಎದುರಾಗಿದೆ. ಯೋಜನೆಯನ್ನು ಪೂರ್ಣಗೊಳಿಸಲು ರಾಜ್ಯವು ರೈಲ್ವೆ ಇಲಾಖೆಗೆ ಭೂಮಿಯನ್ನು ಹಸ್ತಾಂತರಿಸಬೇಕಾಗಿದೆ. ಪದೇ ಪದೆ ಸಭೆ ನಡೆಸುವುದಕ್ಕೆ ಈ ಯೋಜನೆ ಸೀಮಿತವಾಗಿದೆ.
ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕನಸಿನ ಯೋಜನೆಯಾಗಿತ್ತು. ಸೆಪ್ಟೆಂಬರ್ 2019 ರಲ್ಲಿ ಕೇಂದ್ರ ಸರ್ಕಾರವು 73 ಕಿಮೀ ಬೆಳಗಾವಿ-ಕಿತ್ತೂರು-ಧಾರವಾಡ ರೈಲ್ವೆ ಯೋಜನೆಗೆ ಅನುಮೋದನೆ ನೀಡಿತು. ಯೋಜನೆಯ ಒಟ್ಟು ವೆಚ್ಚ ₹927 ಕೋಟಿ ಆಗಿದ್ದು, ಅದರಲ್ಲಿ ರಾಜ್ಯ ಸರ್ಕಾರ ಅರ್ಧದಷ್ಟು ಹಣವನ್ನು ನೀಡಲಿದ್ದು, ಅಗತ್ಯವಿರುವ ಭೂಮಿಯನ್ನು ರೈಲ್ವೆ ಇಲಾಖೆಗೆ ಉಚಿತವಾಗಿ ನೀಡಲಾಗುವುದು. ಯೋಜನೆಯಡಿ ಬೆಳಗಾವಿ ಜಿಲ್ಲೆಯ ತೇಗೂರು, ಕಿತ್ತೂರು, ಹುಲಿಕಟ್ಟಿ, ಎಂ.ಕೆ.ಹುಬ್ಬಳ್ಳಿ, ಬಾಗೇವಾಡಿ, ಕಣವಿ ಕುರುವಿನಕೊಪ್ಪ, ಮತ್ತು ದೇಸೂರಿನಲ್ಲಿ ರೈಲು ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಧಾರವಾಡ ಜಿಲ್ಲೆಯ ಕ್ಯಾರಕೊಪ್ಪ ಮತ್ತು ಮುಮ್ಮಿಗಟ್ಟಿ ಗ್ರಾಮಗಳ ಬಳಿಯೂ ರೈಲು ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಕ್ಯಾರಕೊಪ್ಪ ಮತ್ತು ದೇಸೂರಿನಲ್ಲಿ ಜಂಕ್ಷನ್‌ಗಳನ್ನು ನಿರ್ಮಿಸುವ ಯೋಜನೆಯ ಭಾಗವಾಗಿದೆ.ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗ ಅನುಷ್ಠಾನಕ್ಕೆ ಒಟ್ಟು 826 ಎಕರೆ ಜಮೀನು ಗುರುತಿಸಲಾಗಿದ್ದು, ಈ ಪೈಕಿ ಧಾರವಾಡ ಜಿಲ್ಲೆಯಲ್ಲಿ 226 ಎಕರೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 600 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳ ಪ್ರಕಾರ, ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಬೆಳಗಾವಿಯ ಮೂರು ಗ್ರಾಮಗಳ ರೈತರು ಭೂ ಸ್ವಾಧೀನಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಸುಮಾರು 155 ಎಕರೆ ಭೂಸ್ವಾಧೀನ ಬಾಕಿ ಇದೆ. ಭೂಮಿ ಹಸ್ತಾಂತರವಾದ ನಂತರ ರೈಲ್ವೆ ಇಲಾಖೆ ಟೆಂಡರ್ ಕರೆಯಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರೈತರಿಂದ ಭೂಮಿ ಸ್ವಾಧೀನಪಡಿಸಿಕೊಳ್ಳುವ ಕೆಲಸವನ್ನು ಕೆಐಎಡಿಬಿ ಇನ್ನೂ ಮಾಡಿಲ್ಲ. ರೈತರು ಭೂಮಿ ಕೊಡಲು ಸುತಾರಾಂ ಒಪ್ಪುತ್ತಿಲ್ಲ. ಇದರ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕಳೆದ 5 ವರ್ಷಗಳಲ್ಲಿ ಈ ರೈಲು ಮಾರ್ಗಕ್ಕೆ ಅಗತ್ಯವಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ನಡೆಸಿರುವುದು ಕೂಡ ಇಲ್ಲಿ ಗಮನಾರ್ಹ.ಕೇವಲ ಸಭೆಗಳಿಗೆ ಸೀಮಿತವಾಯಿತೇ?:ಬೆಳಗಾವಿ- ಕಿತ್ತೂರು ಧಾರವಾಡ ರೈಲು ಮಾರ್ಗದ ಯೋಜನೆ ಅನುಷ್ಠಾನ ಸಂಬಂಧ ಪದೇ ಪದೆ ಸಭೆಗಳು ನಡೆಯುತ್ತಿವೆ. ಆದರೆ, ಅನುಷ್ಠಾನದ ಕಾರ್ಯ ಮಾತ್ರ ಶೂನ್ಯವಾಗಿದೆ. ರಾಜಕೀಯ ಮೇಲಾಟ ಈ ಯೋಜನೆಗೆ ಅಡ್ಡಿಯುಂಟಾಗಿದೆ. ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ್ ಮತ್ತು ರಾಜ್ಯಸಭಾ ಸದಸ್ಯಈರಣ್ಣ ಕಡಾಡಿ ನಿರಂತರವಾಗಿ ಸಂಬಂಧಿತ ಇಲಾಖೆಗಳ ಜೊತೆಗೆ ಸಭೆ ನಡೆಸಿದ್ದಾರೆ. ಅಲ್ಲದೇ, ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡಿದ್ದಾರೆ. 2027ರ ಡಿಸೆಂಬರ್ ಅಂತ್ಯದೊಳಗೆ ಈ ಮಾರ್ಗದಲ್ಲಿ ರೈಲು ಸೇವೆ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯಸಚಿವ ವಿ.ಸೋಮಣ್ಣ ಕೂಡ ಭರವಸೆ ಕೊಟ್ಟಿದ್ದಾರೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಈ ಯೋಜನೆಯ ಪ್ರಗತಿ ಕಂಡುಬರುತ್ತಿಲ್ಲ. ಭೂಮಿ ಕೊಡಲು ರೈತರು ಒಪ್ಪುತ್ತಿಲ್ಲ. ರಾಜ್ಯ ಸರ್ಕಾರ ನಿರ್ಲಕ್ಷ ಧೋರಣೆ ಅನುಸರಿಸುತ್ತಿದೆ. ರಾಜಕೀಯ ಮೇಲಾಟಗಳ ಪರಿಣಾಮ ಭೂ ಸ್ವಾಧೀನ ಪ್ರಕ್ರಿಯೆ ಕೇವಲ ಕಾಗದದಲ್ಲಿಯೇ ಉಳಿದಿದೆ. ಒಟ್ಟು 888 ಎಕರೆ ಪ್ರದೇಶದ ಸಮೀಕ್ಷೆ ಕಾರ್ಯ ನಡೆಯಬೇಕಿದ್ದು ಇನ್ನೂ 155 ಎಕರೆ ಕಾರ್ಯ ಬಾಕಿ ಉಳಿದಿದೆ. ಬಾಕಿ ಉಳಿದಿರುವ ಭೂಮಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇದೆ. ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ, ದೇಸೂರ, ಗರ್ಲಗುಂಜಿ, ರಾಜಹಂಸಘಡ, ನಂದಿಹಳ್ಳಿ, ನಾಗೇನಹಳ್ಳಿ, ನಾಗಿರಹಾಳ, ಹಲಗಿಮರಡಿ ಸೇರಿದಂತೆ ಸುಮಾರು 10 ಹಳ್ಳಿಗಳ ಕೆಲವು ರೈತರು ಭೂಮಿ ಕೊಡಲು ಹಿಂದೇಟು ಹಾಕಿರುವದು ಹಾಗೂ ಮಾರ್ಗ ಬದಲಾವಣೆ ಮಾಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಇದರಿಂದಾಗಿ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.ಒಟ್ಟು 73 ಕಿ.ಮೀ ಉದ್ದದ ಈ ಯೋಜನೆಗೆ ಧಾರವಾಡ ಜಿಲ್ಲೆಯಲ್ಲಿ 25 ಕಿ.ಮೀ. ಸರ್ವೆ ಕಾರ್ಯ ಮುಕ್ತಾಯವಾಗಿದೆ. ಇನ್ನುಳಿದ ಭೂಮಿ ಬೆಳಗಾವಿ ಜಿಲ್ಲೆಯಲ್ಲಿಯಲ್ಲಿದ್ದು, 48 ಕಿ.ಮೀ ಭೂಮಿಯ ಸರ್ವೆ ಕಾರ್ಯ ನಡೆಯಬೇಕಿದೆ. ಅದರಲ್ಲಿ 11 ಕಿಲೋಮೀಟರ್ ಮಾತ್ರ ಸಮೀಕ್ಷೆ ಕಾರ್ಯ ಬಾಕಿ ಉಳಿದಿದೆ. ಬೆಳಗಾವಿ- ಕಿತ್ತೂರು- ಧಾರವಾಡ ನೂತನ ರೈಲ್ವೆ ಮಾರ್ಗ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು.ಈ ಸಂಬಂಧ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿದೆ.ಜಗದೀಶ ಶೆಟ್ಟರ್,
ಸಂಸದರು.