ಬಜೆಟ್‌ ಮೇಲೆ ಬೆಳಗಾವಿಗರ ಬೆಟ್ಟದಷ್ಟು ನಿರೀಕ್ಷೆ

KannadaprabhaNewsNetwork | Published : Mar 7, 2025 12:46 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಲಿರುವ 2025-26ನೇ ಸಾಲಿನ ರಾಜ್ಯ ಬಜೆಟ್‌ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದ್ದು, ಗಡಿ ಜಿಲ್ಲೆ ಬೆಳಗಾವಿ ಜನರಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ ಜಿಲ್ಲೆ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಾಶಸ್ತ್ಯ ಸ್ಥಳವಾಗಿದೆ. ಆದರೆ, ಈವರೆಗೂ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿಲ್ಲ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಲಿರುವ 2025-26ನೇ ಸಾಲಿನ ರಾಜ್ಯ ಬಜೆಟ್‌ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದ್ದು, ಗಡಿ ಜಿಲ್ಲೆ ಬೆಳಗಾವಿ ಜನರಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ ಜಿಲ್ಲೆ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಾಶಸ್ತ್ಯ ಸ್ಥಳವಾಗಿದೆ. ಆದರೆ, ಈವರೆಗೂ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿಲ್ಲ.

ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, 150 ಫೌಂಡ್ರಿ ಸೇರಿದಂತೆ ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆ ಉದ್ಯಮಗಳಿವೆ. ಆದರೆ, ಬೃಹತ್ ಕೈಗಾರಿಕೆಗಳನ್ನು ಇಲ್ಲಿ ಆಕರ್ಷಿಸುವ ಕೆಲಸ ಆಗಿಲ್ಲ. ಪ್ರಮುಖವಾಗಿ ಜಾಗದ ಕೊರತೆ ಇದೆ. 2023ರಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಣ್ಣ ಕೈಗಾರಿಕೆಗಳಿಗೆ 2 ಸಾವಿರ ಮತ್ತು ಫೌಂಡ್ರಿಗಳಿಗೆ 500 ಎಕರೆ ಘೋಷಿಸಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ.ಫೌಂಡ್ರಿ ಮತ್ತು ಸಣ್ಣ ಕೈಗಾರಿಕೆಗಳ ವಿಸ್ತರಣೆಗೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದ ಬಳಿ 4 ಸಾವಿರ ಎಕರೆ ಸರ್ಕಾರಿ ಜಮೀನು ಹಾಗೂ ಕಿತ್ತೂರು ಕೈಗಾರಿಕೆ ಪ್ರದೇಶದಲ್ಲಿ 900 ಎಕರೆ ಭೂಮಿ ಗುರುತಿಸಲಾಗಿದೆ. ಇದರಲ್ಲಿ ವಂಟಮೂರಿ ಜಮೀನು ವ್ಯಾಜ್ಯ ಕೋರ್ಟ್‌ನಲ್ಲಿದೆ. ಅದೇ ರೀತಿ ನಿಪ್ಪಾಣಿ ಕಣಗಲಾ 500 ಎಕರೆ ಭೂಸ್ವಾಧೀನಪಡಿಸಿಕೊಂಡು, ಅಧಿಸೂಚನೆ ಹೊರಡಿಸಲಾಗಿದೆ. ಇನ್ನೂ ಅಭಿವೃದ್ಧಿಪಡಿಸಬೇಕಿದೆ. ಭೂಸ್ವಾಧೀನಪಡಿಸಿಕೊಳ್ಳಲು ಹೆಚ್ಚಿನ ಅನುದಾನವನ್ನು ಕೆಐಎಡಿಬಿಗೆ ನೀಡಬೇಕು ಎಂಬುದು ಉದ್ಯಮಿಗಳ ಹಕ್ಕೊತ್ತಾಯ. 2011ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ 2 ಸಾವಿರ ಎಕರೆ ಪ್ರದೇಶದಲ್ಲಿ ಲ್ಯಾಂಡ್ ಬ್ಯಾಂಕ್ ನಿರ್ಮಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ, ಅದೂ ಹುಸಿಯಾಗಿದೆ. ಜಿಲ್ಲೆಯ ಕೈಗಾರಿಕೆ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ವಿದ್ಯುತ್ ದರ ಹೆಚ್ಚಳ, ಪ್ರೋತ್ಸಾಹ ಸಿಗದೇ ಪರದಾಡುತ್ತಿರುವ ಕೈಗಾರಿಕೆಗಳಿಗೆ ಬಲ ತುಂಬುವ ಅವಶ್ಯಕತೆ ಇದೆ.ಧಾರವಾಡ- ಕಿತ್ತೂರು- ಬೆಳಗಾವಿ ರೈಲು ಮಾರ್ಗ:

ಧಾರವಾಡ - ಕಿತ್ತೂರು - ಬೆಳಗಾವಿ ನೇರ ರೈಲು ಮಾರ್ಗ ಕಾಮಗಾರಿ ಶೀಘ್ರ ಆರಂಭವಾಗಬೇಕಿದೆ. ಈ ರೈಲು ಮಾರ್ಗಕ್ಕೆ ಬೆಳಗಾವಿ ತಾಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಇದರಿಂದಾಗಿ ಈ ಕಾಮಗಾರಿ ವಿಳಂಬವಾಗುತ್ತ ಸಾಗಿದೆ. ಅದೇ ರೀತಿ ಬೆಳಗಾವಿ ವಿಮಾನ‌ ನಿಲ್ದಾಣದಿಂದ ಕಾರ್ಗೋ ಸೇವೆ ಶುರು ಮಾಡಿದರೆ ಮತ್ತಷ್ಟು ಉದ್ಯಮಿಗಳನ್ನು ಬೆಳಗಾವಿಯತ್ತ ಸೆಳೆಯಬಹುದು.

ಬೆಳಗಾವಿಯಲ್ಲಿ ಐಟಿ ಪಾರ್ಕ್ ಮತ್ತು ಚಿಕ್ಕೋಡಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಬೇಕು ಎಂಬುದು ದಶಕಗಳ ಬೇಡಿಕೆಯಾಗಿದೆ. ಇಲ್ಲಿನ ಯುವಕರು ಉದ್ಯೋಗ ಅರಸಿ ದೂರದ ಬೆಂಗಳೂರು, ಪುಣೆ, ಮುಂಬೈ ಸೇರಿ ಮತ್ತಿತರೆ ನಗರಗಳಿಗೆ ಹೋಗಬೇಕಿದೆ. ಇಲ್ಲಿ ತಂದೆ - ತಾಯಿ, ಕುಟುಂಬಸ್ಥರನ್ನು ಬಿಟ್ಟು ಇರಬೇಕಿದೆ. ಹಾಗಾಗಿ, ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಬೆಳಗಾವಿಯಲ್ಲೆ ಐಟಿ, ಬಿಟಿ ಕಂಪನಿ ಆರಂಭಿಸಬೇಕು ಎನ್ನುವುದು ಈ ಭಾಗದ ಜನತೆಯ ಬೇಡಿಕೆಯಾಗಿದೆ.ಸುವರ್ಣ ಸೌಧ ಶಕ್ತಿಸೌಧವಾಗಲಿ:

₹ 500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸುವರ್ಣ ವಿಧಾನಸೌಧದ ಕಟ್ಟಡ ವರ್ಷದಲ್ಲಿ ಒಂದು ಬಾರಿ ಅಧಿವೇಶನಕ್ಕೆ ಮಾತ್ರ ಸೀಮಿತವಾಗಿದೆ. ಸುವರ್ಣ ಸೌಧಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಮಾಹಿತಿ ಹಕ್ಕು ಆಯುಕ್ತರ ಕಚೇರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಕಚೇರಿಯ ವಲಯ ವಿಭಾಗ ಹೊರತುಪಡಿಸಿದರೆ ರಾಜ್ಯಮಟ್ಟದ ಪ್ರಮುಖ ಕಚೇರಿಗಳು ಸ್ಥಳಾಂತರಗೊಂಡಿಲ್ಲ. ಬಿಳಿ ಆನೆಯಂತಾಗಿರುವ ಸುವರ್ಣ ವಿಧಾನಸೌಧಕ್ಕೆ ಶಕ್ತಿ ತುಂಬಬೇಕಿದೆ. ಅಲ್ಲದೇ, ರಾಜ್ಯದಲ್ಲೇ ಬೆಳಗಾವಿ ನಗರದಲ್ಲಿ ಮಾತ್ರ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆಯನ್ನು ಅತೀ ಅದ್ಧೂರಿಯಿಂದ ಆಚರಿಸಲಾಗುತ್ತಿದೆ. ಬೆಳಗಾವಿ ರಾಜ್ಯೋತ್ಸವ ಆಚರಣೆಗೆ ಅನುದಾನ ನೀಡಬೇಕು.ಅನುಷ್ಠಾನಗೊಳ್ಳದ ಕಾಮಗಾರಿಗಳು:

ಕಳೆದ ಸಾಲಿನ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಹಲವು ಕೊಡುಗೆಗಳನ್ನು ಘೋಷಣೆ ಮಾಡಲಾಗಿತ್ತು. ಆದರೆ, ಕೆಲವಷ್ಟೇ ಯೋಜನೆಗಳು ಅನುಷ್ಠಾನಗೊಂಡಿವೆ. ಮತ್ತೆ ಕೆಲವು ಯೋಜನೆಗಳು ಅನುದಾನದ ಕೊರತೆಯಿಂದಾಗಿ ಬರೀ ಕಾಗದದಲ್ಲೇ ಉಳಿದುಕೊಂಡಿವೆ. ಇನ್ನೂ ಕೆಲವು ಯೋಜನೆಗಳು ಅರ್ಧಕ್ಕೆ ಸ್ಥಗಿತಗೊಂಡಿವೆ.ಬೆಳಗಾವಿ ನಗರದಲ್ಲಿ ಸಂಚಾರ ಸಮಸ್ಯೆ ತೀವ್ರಗೊಂಡಿದೆ. ಮೇಲ್ಸೇತುವೆ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಿ ವರ್ಷಗಳೇ ಉರುಳಿವೆ. ಆದರೆ, ಅನುದಾನ ಲಭ್ಯವಾಗದ್ದರಿಂದ ಯೋಜನೆ ಬರೀ ಕಾಗದದಲ್ಲೇ ಉಳಿದಿದೆ. ಸರ್ಕಾರ ಕೂಡಲೇ ಅನುದಾನ ಒದಗಿಸುವ ಮೂಲಕ ಕಾಮಗಾರಿ ಆರಂಭಿಸಬೇಕಿದೆ.ಯೋಜನೆಯ ಪ್ರಾಥಮಿಕ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ-48 ರಿಂದ ಬೋಗಾರ್‌ ವೇಸ್‌ವರೆಗೆ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವವಿತ್ತು. ನಂತರ ಮಾರ್ಪಾಡು ಮಾಡಲಾಗಿದ್ದು, ಗಾಂಧಿ ನಗರದಿಂದ 4.5 ಕಿ.ಮೀ ವ್ಯಾಪ್ತಿಯಲ್ಲಿ ಮೇಲ್ಸೇತುವೆ ನಿರ್ಮಿಸುವ ನವೀಕೃತ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ಈ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಳ್ಳುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಬಜೆಟ್‌ನಲ್ಲಿ ಅನುದಾನ ಲಭ್ಯವಾಗಲಿಲ್ಲ.ಅರ್ಧಕ್ಕೆ ನಿಂತ ಕಾಮಗಾರಿಗಳು:

ರೈತರ ಬೇಡಿಕೆಗೆ ಅನುಗುಣವಾಗಿ ಈವರೆಗೆ 9ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರಕ್ಕೆ ಸಂಬಂಧಿಸಿದ ಇಲಾಖೆಗಳಿಂದ ಪ್ರಸ್ತಾವ ಸಲ್ಲಿಕೆಯಾಗಿದೆ. ₹1300 ಕೋಟಿ ವೆಚ್ಚದಲ್ಲಿ ಕಾಗವಾಡ ತಾಲೂಕಿನ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ 2017ರಲ್ಲಿ, ಅಥಣಿ ತಾಲೂಕಿನ ಕೊಟ್ಟಲಗಿಯಲ್ಲಿ ₹1486 ಕೋಟಿ ವೆಚ್ಚದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ 2024ರಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಬಸವೇಶ್ವರ ಯೋಜನೆ ಅನುದಾನವಿಲ್ಲದೆ ಅರ್ಧಕ್ಕೆ ನಿಂತಿದೆ. ಅಮ್ಮಾಜೇಶ್ವರಿ ಯೋಜನೆ ಕಾಮಗಾರಿ ಆರಂಭವಾಗಿಲ್ಲ. ಹಲವು ನೀರಾವರಿ ಯೋಜನೆಗಳು ದಾಖಲೆಯಲ್ಲೇ ಉಳಿದಿವೆ.ಜಿಲ್ಲಾ ವಿಭಜನೆ ಕೂಗು:

ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜನೆ ಮಾಡಿ, ಬೆಳಗಾವಿ, ಗೋಕಾಕ ಮತ್ತು ಚಿಕ್ಕೋಡಿಯನ್ನು ಹೊಸದಾಗಿ ಜಿಲ್ಲೆಯನ್ನಾಗಿ ಘೋಷಿಸುವಂತೆ ಮತ್ತೆ ಕೂಗು ಕೇಳಿಬಂದಿದೆ. ಕಳೆದ ಮೂರು ದಶಕಗಳಿಂದ ಹೋರಾಟ ಕೂಡ ನಡೆಯುತ್ತ ಬಂದಿದೆ. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಜಿಲ್ಲಾ ವಿಭಜನೆ ಆಗುತ್ತಿಲ್ಲ. ಈ ಬಾರಿಯಾದರೂ ಬಜೆಟ್‌ನಲ್ಲಿ ಜಿಲ್ಲಾ ವಿಭಜನೆ ಬೇಡಿಕೆಗೆ ಸ್ಪಂದನೆ ಸಿಗುವುದೇ ಎಂಬ ನಿರೀಕ್ಷೆ ಮೂಡಿದೆ. ಅಲ್ಲದೇ, ಬೆಳಗಾವಿ ನಗರವನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು ಎಂಬ ಬೇಡಿಕೆಯೂ ಕೂಡ ಕೇಳಿಬರುತ್ತಿದೆ.ಅನುಷ್ಠಾನಗೊಂಡ ಯೋಜನೆಗಳು:

-ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಮಂಡಳಿ ರಚನೆ ಮಾಡಲಾಗಿದೆ.

-ಖಾನಾಪುರ ಪಟ್ಟಣದಲ್ಲಿ 100 ಹಾಸಿಗೆ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಗಿದೆ.

-ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸ್ಮರಣಾರ್ಥ ಬೆಳಗಾವಿಯಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.

Share this article