ಕನ್ನಡಪ್ರಭ ವಾರ್ತೆ ಮಂಗಳೂರು
ಸುಮಾರು 1,200 ವರ್ಷ ಇತಿಹಾಸದ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ದೇವರಗುಡ್ಡೆ ಭಟ್ರಬೈಲು ಶ್ರೀಗೋಪಾಲಕೃಷ್ಣ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಏ.19ರಿಂದ 22ರ ವರೆಗೆ ನಡೆಯಲಿದೆ ಎಂದು ಸೇವಾ ಟ್ರಸ್ಟ್ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತುಕರಾಮ ನಾಯಕ್ ನಾಗರಕೋಡಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಏ.19ರಂದು ಸುದರ್ಶನ ಹವನ ಮತ್ತಿತರ ಕಾರ್ಯಕ್ರಮ ನಡೆಯಲಿದ್ದು, ಏ.20ರಂದು ಭೂಖನನಾದಿ ಸಪ್ತಶುದ್ಧಿ, ದ್ವಾದಶಮೂರ್ತಿ ಆರಾಧನೆ, ಸಮಾರಾಧನೆ ನಡೆಯಲಿದೆ. ಏ.22ರಂದು ಬೆಳಗ್ಗೆ 8.30ರಿಂದ ನೂತನ ದೇಗುಲಕ್ಕೆ ಶಿಲಾನ್ಯಾಸ ನೆರವೇರಲಿದ್ದು, ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಬೆಳಗ್ಗೆ 10ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಗಣೇಶ್ ರಾವ್ ಶಿಲಾನ್ಯಾಸ ನೆರವೇರಿಸುವರು. ಕನ್ಯಾಡಿ ಶ್ರೀರಾಮ ಕ್ಷೇತ್ರ ಸಂಸ್ಥಾನದ ಪೀಠಾಧಿಪತಿ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ಹರೀಶ್ ಪೂಂಜಾ, ಎಸ್‌ಕೆಡಿಆರ್‌ಡಿಪಿ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಮೈಸೂರಿನ ಹಿರಿಯ ವಕೀಲ ಶ್ಯಾಮ ಭಟ್ ಒಡಿಯೂರು, ಕಂಕನಾಡಿ ಬ್ರಹ್ಮಬೈದರ್ಕಳ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್, ಬೆಳ್ತಂಗಡಿ ವಕೀಲ ಧನಂಜಯ ರಾವ್, ನಿವೃತ್ತ ಯೋಧ ಚಂದಪ್ಪ ಮೂಲ್ಯ, ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆ ಮುಖ್ಯಸ್ಥ ಡಾ.ನಿರಂಜನ್ ರೈ ಅತಿಥಿಗಳಾಗಿ ಭಾಗವಹಿಸುವರು ಎಂದರು.ದೇವಸ್ಥಾನದ ಕುರುಹು ಪತ್ತೆಯಾದ ಭಟ್ರಬೈಲಿನಲ್ಲಿ 16 ಮಂದಿಯ ಸೇವಾ ಟ್ರಸ್ಟ್ ರಚಿಸಿ 35 ಲಕ್ಷ ರು.ಗಳಿಗೆ ಅನ್ಯಧರ್ಮೀಯರ ವಶದಲ್ಲಿದ್ದ ಜಾಗವನ್ನು ದೇವಸ್ಥಾನಕ್ಕೆ ವಶಕ್ಕೆ ಪಡೆಯಲಾಗಿದೆ. 13 ವರ್ಷದ ಪ್ರಯತ್ನದ ಫಲವಾಗಿ ದೇವಸ್ಥಾನ ನಿರ್ಮಾಣವಾಗುತ್ತಿದ್ದು, ಸುಮಾರು 2.50 ಕೋಟಿ ರು.ಗಳ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಈ ದೇವಸ್ಥಾನ ತೆಕ್ಕಾರು, ಬಾರ್ಯ, ಪುತ್ತಿಲ, ತಣ್ಣೀರುಪಂತ, ಉಳಿ, ಮಣಿನಾಲ್ಕೂರು ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದೆ ಎಂದು ಉಪಾಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಹೇಳಿದರು.
ಸಂಚಾಲಕ ಲಕ್ಷ್ಮಣ ಭಟ್ರಬೈಲು, ಟ್ರಸ್ಟಿ ಪ್ರವೀಣ್ ಪೊರ್ಕಳ ಇದ್ದರು.