ಬೆಳ್ತಂಗಡಿ: ಆಡಳಿತ ಸೌಧಕ್ಕೆ ಲೋಕಾಯುಕ್ತ ದಿಢೀರ್‌ ಭೇಟಿ

KannadaprabhaNewsNetwork | Published : May 7, 2024 1:02 AM

ಸಾರಾಂಶ

ಬೆಳ್ತಂಗಡಿ ಆಡಳಿತ ಸೌಧ ಭೇಟಿಯಲ್ಲಿ 94ಸಿಸಿ , ಆಹಾರ ಇಲಾಖೆಯಲ್ಲಿ ಸಾರ್ವಜನಿಕರಿಗೆ ಪಡಿತರ ವಿತರಣೆ ಸರಿಯಾಗಿ ಅಗುತ್ತಿಲ್ಲ, ವಿಧವ ವೇತನ ಬರುತ್ತಿಲ್ಲ, ಗೃಹ ಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಬರುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರನ್ನು ಕರೆದು ಸಮಸ್ಯೆ ಆಲಿಸಿ, ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಲೋಕಾಯುಕ್ತ ಪೊಲೀಸರು ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಸಾರ್ವಜನಿಕರ ಜೊತೆ ಸಮಸ್ಯೆಗಳನ್ನು ಕೇಳಿ ಸ್ಥಳದಲ್ಲಿಯೇ ಬಗೆಹರಿಸುವ 26 ಅಂಶಗಳ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ಆಡಳಿತ ಸೌಧಕ್ಕೆ ಇತ್ತೀಚೆಗೆ ದಿಢೀರ್ ಭೇಟಿ ನೀಡಿ ಸಾರ್ವಜನಿಕರಿಂದ ಹಲವು ಅಹವಾಲುಗಳನ್ನು ಸ್ವೀಕರಿಸಿದರು.

ಬೆಳ್ತಂಗಡಿ ಆಡಳಿತ ಸೌಧ ಭೇಟಿಯಲ್ಲಿ 94ಸಿಸಿ , ಆಹಾರ ಇಲಾಖೆಯಲ್ಲಿ ಸಾರ್ವಜನಿಕರಿಗೆ ಪಡಿತರ ವಿತರಣೆ ಸರಿಯಾಗಿ ಅಗುತ್ತಿಲ್ಲ, ವಿಧವ ವೇತನ ಬರುತ್ತಿಲ್ಲ, ಗೃಹ ಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಬರುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರನ್ನು ಕರೆದು ಸ್ಥಳದಲ್ಲಿಯೇ ಪುಸ್ತಕ ದಾಖಲೆ ಹಾಗೂ ಕಂಪ್ಯೂಟರ್ ದಾಖಲೆಗಳನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

ಇನ್ನೂ 750 ಬಿಪಿಎಲ್ ಕಾರ್ಡ್ ಸಾರ್ವಜನಿಕರಿಗೆ ಸಿಗಲು ಬಾಕಿ ಇರುವ ಬಗ್ಗೆ ಕೂಡ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ಕಂಡು ಬಂದಿದ್ದು. ಶೀಘ್ರದಲ್ಲೇ ಪರಿಹರಿಸಲು ಸೂಚನೆ ನೀಡಿದ್ದಾರೆ‌.

ಪುಂಜಾಲಕಟ್ಟೆಯ ಕುಕ್ಕಳ ಗ್ರಾಮದ ಸುನಿತಾ (32) ಎಂಬವರ ಗಂಡ ಅಶೋಕ್ ಮೃತಪಟ್ಟ ಬಳಿಕ ಏಳು ತಿಂಗಳಿನಿಂದ ಪಡಿತರ ಅಕ್ಕಿ ವಿತರಣೆ ಆಗದೆ ಹಲವಾರು ಬಾರಿ ಆಹಾರ ಇಲಾಖೆಯಲ್ಲಿ ಅಲೆದಾಟ ಮಾಡುತ್ತಿದ್ದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ಸಿಕ್ಕಿತು.

ತಕ್ಷಣ ನೊಂದ ಮಹಿಳೆ ಸುನಿತಾ ಅವರನ್ನು ಮತ್ತು ಆಹಾರ ಇಲಾಖೆಯ ಅಧಿಕಾರಿಗಳನ್ನು ಕರೆಸಿ ದಾಖಲೆ ಪರಿಶೀಲನೆ ನಡೆಸಿದಾಗ ಆಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಹಿಳೆಗೆ ಪಡಿತರ ದೊರಕದೆ ಏಳು ತಿಂಗಳಿನಿಂದ ಬಾಕಿಯಾಗಿರುವುದು ಪತ್ತೆಯಾಗಿದೆ. ತಕ್ಷಣ ಸ್ಥಳದಲ್ಲಿಯೇ ದಾಖಲೆ ಸರಿಪಡಿಸಿ ಮಹಿಳೆಗೆ ಪಡಿತರ ಸಿಗುವಂತೆ ಲೋಕಾಯುಕ್ತ ಅಧಿಕಾರಿಗಳು ಮಾಡಿದ್ದಾರೆ.

ಡಿವೈಎಸ್ಪಿ ಡಾ.ಗಾನ.ಪಿ.ಕುಮಾರ್ , ಡಿವೈಎಸ್ಪಿ ಚೆಲುವರಾಜ್, ಇನ್‌ಸ್ಪೆಕ್ಟರ್‌ಗಳಾದ ಅಮನುಲ್ಲಾ ಎ., ಸುರೇಶ್.ಕೆ.ಎನ್, ಸುರೇಶ್.ಸಿ.ಎಲ್ ಮತ್ತು ಸಿಬ್ಬಂದಿ ಹಾಜರಿದ್ದರು.

Share this article