ಹುಬ್ಬಳ್ಳಿ: ದ.ರಾ. ಬೇಂದ್ರೆ ಅವರಂಥ ಮಹಾಕವಿಗಳಿಗೆ, ಅವರ ಸಾಧನೆಗಳಿಗೆ ದೊರೆಯಬೇಕಾಗಿದ್ದ ಪ್ರಶಸ್ತಿ- ಸನ್ಮಾನಗಳು ದೊರೆಯದೇ ಹೋದದ್ದು ಮಹಾದುರಂತ ಎಂದು ಮಾಜಿ ಸಚಿವ ಎಚ್.ವಿಶ್ವನಾಥ ಅಭಿಪ್ರಾಯಪಟ್ಟರು.
ಬೇಂದ್ರೆ ಅವರಿಗೆ ಪ್ರಶಸ್ತಿ ಸನ್ಮಾನಗಳು ದೊರೆಯದೇ ಇರುವುದಕ್ಕೆ ಸರ್ಕಾರ ಸಾಧಕರಿಗೆ ಪ್ರಶಸ್ತಿ ವಿತರಿಸುವಲ್ಲಿ ತೋರಿದ ಮನೋಭಾವವೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವರ ವಿಚಾರಗಳು ಕಾರ್ಯರೂಪಕ್ಕೆ ಬಂದರೆ, ಹೊಸ ವಿಶ್ವವೇ ನಿರ್ಮಾಣವಾದೀತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಬೇಂದ್ರೆ ಕಾವ್ಯದಲ್ಲಿ ನವ ಮಾನವ ಸಿದ್ಧಾಂತ ಎಂಬ ವಿಷಯ ಕುರಿತು ಮಾತನಾಡಿದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್. ದುರ್ಗಾದಾಸ್, ಬೇಂದ್ರೆಯವರ ಕಾವ್ಯದಲ್ಲಿ ಮಾನವ ಸಮಾಜದ ಪರಿವರ್ತನೆ ಕುರಿತು ಅನೇಕ ಕ್ರಾಂತಿಕಾರಿ ವಿಚಾರಗಳು ಒಳಗೊಂಡಿದ್ದು, ಈ ವಿಚಾರಗಳು ವಿಶ್ವದಲ್ಲಿ ನವ ಮಾನವೀಯತೆಯ ಪ್ರತಿಷ್ಠಾಪನೆ ಕುರಿತಾಗಿ ಇರುವುದು ಇಂದಿಗೂ ಪ್ರಸ್ತುತ ಹಾಗೂ ಅಧ್ಯಯನಾರ್ಹ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದ.ರಾ. ಬೇಂದ್ರೆಯವರ "ಗರಿ " ಕವನ ಸಂಕಲನದ ಲೋಕಾರ್ಪಣೆ ಮಾಡಲಾಯಿತು. ಬೇಂದ್ರೆ ಪ್ರತಿಷ್ಠಾನದ ಸಂಚಾಲಕ ಡಾ. ಕೆ.ಎಸ್. ಶರ್ಮಾ, ಪುನರ್ವಸು ಬೇಂದ್ರೆ, ಸುಮಿತ್ರಾ ಪೋತ್ನಿಸ್ ಹಾಗೂ ಸುಲೋಚನಾ ಪೋತ್ನಿಸ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಎಚ್. ವಿಶ್ವನಾಥ ಅವರಿಗೆ ಬೇಂದ್ರೆ ಅವರಂತೆ ಉಡುಪು ಹಾಕಿಸಿ ಪ್ರಶಸ್ತಿ ನೀಡಿದ್ದು ವಿಶೇಷ.
ಸುಲೋಚನಾ ಪೋತ್ನಿಸ್ ಕಾರ್ಯಕ್ರಮ ನಿರೂಪಿಸಿದರು. ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸಿ.ಸಿ. ಹಿರೇಮಠ ವಂದಿಸಿದರು.