ರೈತರಿಂದ ಜಮೀನು ಖರೀದಿಸಿ ಹಣ ನೀಡದೆ ಬೆಂಗಳೂರು ಉದ್ಯಮಿಯಿಂದ ವಂಚನೆ

KannadaprabhaNewsNetwork |  
Published : Sep 26, 2025, 01:00 AM IST
25ಕೆಎಂಎನ್ ಡಿ11 | Kannada Prabha

ಸಾರಾಂಶ

ಮುಂಗಡ ಹಣವಾಗಿ ಇಬ್ಬರಿಗೂ ಕೇವಲ 15 ಲಕ್ಷ ರು. ಮಾತ್ರ ನೀಡಿ ಬಾಕಿ ಕೋಟ್ಯಾಂತರ ರು. ಹಣವನ್ನು ಕಾರಿನೊಳಗೆ ಬ್ಯಾಗಿನಲ್ಲಿ ಇರಿಸಲಾಗಿದ್ದು, ನೋಂದಣಿ ಬಳಿಕ ನೀಡುವುದಾಗಿ ನಂಬಿಸಿ ಉಪನೋಂದಣಾ ಕಚೇರಿಯಲ್ಲಿ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಎರಡು ರೈತಾಪಿ ಕುಟುಂಬಗಳಿಂದ ಬೆಂಗಳೂರಿನ ಉದ್ಯಮಿ ನಾಗರಾಜು ಎಂಬಾತ ಜಮೀನು ಖರೀದಿಸಿ, ಬಳಿಕ ಕೋಟ್ಯಾಂತರ ರು. ಹಣ ನೀಡದೆ ವಂಚಿಸಿರುವ ಹಿನ್ನೆಲೆಯಲ್ಲಿ ಅನ್ಯಾಯಕ್ಕೊಳಗಾದ ರೈತರ ವಿರುದ್ಧವೇ ಸುಳ್ಳು ಪ್ರಕರಣ ದಾಖಲಿಸಿರುವ ವಂಚಕ ಆಸ್ತಿ ಪರಭಾರೆ ಮಾಡದಂತೆ ತಡೆ ಹಿಡಿಯಬೇಕು ಎಂದು ಪಾಂಡವಪುರ ಉಪನೋಂದಣಾಧಿಕಾರಿ ಟಿ.ವೆಂಕಟೇಶ್ ಅವರನ್ನು ರೈತ ಮುಖಂಡರು ಒತ್ತಾಯಿಸಿದರು.

ರೈತನಾಯಕ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಗೆ ತೆರಳಿದ ರೈತ ಮುಖಂಡರು, ವಂಚಕ ನಾಗರಾಜು ಬೇರೆಯವರಿಗೆ ರೈತರ ಜಮೀನು ಮಾರಾಟ ಮಾಡದಂತೆ ತಡೆಯಬೇಕು ಎಂದು ಆಗ್ರಹಿಸಿದರು.

ಈ ವೇಳೆ ರೈತ ನಾಯಕ, ಬಿಜೆಪಿ ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ತಾಲೂಕಿನ ದರಸಗುಪ್ಪೆ ಗ್ರಾಮದ ರೈತ ರವಿ, ಪತ್ನಿ ಸವಿತಾ ಹಾಗೂ ಹುಲಿಕೆರೆ ಗ್ರಾಮದ ರೈತ ಮಹಿಳೆ ಲಕ್ಷ್ಮೀ ಹೆಸರಿನಲ್ಲಿ ಕೆಆರ್ ಎಸ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಂಡವಪುರ ತಾಲೂಕು ಗಿರಿಯಾರಹಳ್ಳಿಯಲ್ಲಿ ತವರಿನಿಂದ ದೊರೆತ ಆಸ್ತಿ ಒಟ್ಟು 2 ಎಕರೆ 18 ಗುಂಟೆ ಜಮೀನನ್ನು ಬೆಂಗಳೂರಿನ ಉದ್ಯಮಿ ನಾಗರಾಜು ಎಂಬಾತ ಖರೀದಿಸಲು ನಿರ್ಧರಿಸಿದ್ದನು.

ಮುಂಗಡ ಹಣವಾಗಿ ಇಬ್ಬರಿಗೂ ಕೇವಲ 15 ಲಕ್ಷ ರು. ಮಾತ್ರ ನೀಡಿ ಬಾಕಿ ಕೋಟ್ಯಾಂತರ ರು. ಹಣವನ್ನು ಕಾರಿನೊಳಗೆ ಬ್ಯಾಗಿನಲ್ಲಿ ಇರಿಸಲಾಗಿದ್ದು, ನೋಂದಣಿ ಬಳಿಕ ನೀಡುವುದಾಗಿ ನಂಬಿಸಿ ಉಪನೋಂದಣಾ ಕಚೇರಿಯಲ್ಲಿ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ ಎಂದು ಆರೋಪಿಸಿದರು.

ಆದರೆ, ಇದಾದ ಬಳಿಕ ಮೊದಲೇ ತೀರ್ಮಾನಿಸಿ ಮಾತನಾಡಿದ್ದ ಲಕ್ಷಾಂತರ ರು. ಹಣ ನೀಡದ ಈತ ಸುಳ್ಳು ಕಥೆಗಳನ್ನು ಕಟ್ಟಿ ಬ್ಯಾಂಕಿನ ಐದಾರು ಚೆಕ್ಕುಗಳನ್ನು ರೈತರಿಗೆ ನೀಡಿ ಸ್ಥಳದಿಂದ ತೆರಳಿದ್ದಾನೆ. ಆತ ನೀಡಿರುವ ಚೆಕ್ಕುಗಳು ನಕಲಿಯಾಗಿವೆ. 3 ತಿಂಗಳು ಕಳೆದರೂ ಹಣ ನೀಡದೆ ರೈತರ ಫೋನ್ ಕರೆಗಳು ಸ್ವೀಕರಿಸದೆ ಈತ ಬೆಂಗಳೂರಿನ ಮನೆಯಲ್ಲಿ ಹುಡುಕಿ ಹೋದ ರೈತರಿಗೂ ನೇರವಾಗಿ ಸಿಗದೆ ಕದ್ದು ಮುಚ್ಚಿ ಸತಾಯಿಸಿ ಅಲೆದಾಡಿಸಿ ಚಾರ್ಲ್ಸ್ ಶೋಭರಾಜು ಮೀರಿಸುವಂತೆ ವಂಚನೆ ಎಸಗಿದ್ದಾನೆ ಎಂದು ಆರೋಪಿಸಿದರು.

ಈ ವೇಳೆ ಉಪನೋಂದಣಾಧಿಕಾರಿ ಟಿ.ವೆಂಕಟೇಶ್ ಅವರು, ಒಂದು ಬಾರಿ ನೋಂದಣಿಯಾದ ಆಸ್ತಿಯನ್ನು ತಡೆ ಹಿಡಿಯಲು ಸಾಧ್ಯವಿಲ್ಲ. ಬೇಕಿದ್ದರೆ ಜಿಲ್ಲಾ ನೋಂದಣಾಧಿಕಾರಿಗಳಿಂದ ಜಿಲ್ಲೆಯ ಎಲ್ಲಾ ತಾಲೂಕುಗಳ ಉಪನೋಂದಣಾಧಿಕಾರಿಗಳಿಗೆ ಪತ್ರ ರವಾನಿಸಿದರೆ ಪರಭಾರೆ ಮಾಡದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ತಾಲೂಕು ರೈತಸಂಘದ ಅಧ್ಯಕ್ಷ ಕೆ.ಎನ್.ವಿಜಯಕುಮಾರ್, ಬಿಜೆಪಿ ಮುಖಂಡ ಕನ್ನಂಬಾಡಿ ಸುರೇಶ್ ಇತರರಿದ್ದರು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ