ಬೆಂಗಳೂರಲ್ಲಿ ನಿತ್ಯ 1,000 ಕೊಳವೆ ಬಾವಿ ಡ್ರಿಲ್‌, ಭವಿಷ್ಯದಲ್ಲಿ ಕಂಟಕ : ಅಂತರ್ಜಲ ತಜ್ಞರ ಕಳವಳ

ಸಾರಾಂಶ

ನಿತ್ಯ ಬೆಂಗಳೂರು, ಸುತ್ತ ಮುತ್ತ ಸುಮಾರು 1000 ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದ್ದು, ಸಾವಿರಾರು ಅಡಿ ಆಳಕ್ಕೆ ಕೊರೆದು ಎತ್ತುವ ನೀರು ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ಅಪಾಯವಾಗುವ ಜೊತೆಗೆ ಭವಿಷ್ಯದಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತದೆ

  ಬೆಂಗಳೂರು : ನಿತ್ಯ ಬೆಂಗಳೂರು, ಸುತ್ತ ಮುತ್ತ ಸುಮಾರು 1000 ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದ್ದು, ಸಾವಿರಾರು ಅಡಿ ಆಳಕ್ಕೆ ಕೊರೆದು ಎತ್ತುವ ನೀರು ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ಅಪಾಯವಾಗುವ ಜೊತೆಗೆ ಭವಿಷ್ಯದಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಇದಕ್ಕೆ ಮಳೆನೀರು ಕೊಯ್ಲು ಏಕೈಕ ಪರಿಹಾರ ಎಂದು ಅಂತರ್ಜಲ ಹಾಗೂ ಮಳೆನೀರು ಕೊಯ್ಲು ತಜ್ಞ ಎನ್.ಜೆ. ದೇವರಾಜ ರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘ ಆಯೋಜಿಸಿದ್ದ ''''ಜಲಪಥ'''' ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ನಗರದಲ್ಲಿ ಅಂತರ್ಜಲ ಶೋಷಣೆ ತಪ್ಪಿಸಲು ಕೊಳವೆಬಾವಿ ಕೊರೆಸುವುದನ್ನು ನಿಷೇಧಿಸಲಾಗಿದೆ. ಆದರೂ, ನೂರಾರು ಯಂತ್ರಗಳು ಕೊಳವೆಬಾವಿ ಕೊರೆಯುತ್ತಿವೆ. ಇದರ ಹಿಂದೆ ದೊಡ್ಡ ಲಾಭಿಯೇ ಅಡಗಿದೆ. ನೀರು ಬಾರದಿದ್ದರೂ ಬಿಲ್ಡರ್‌ಗಳು ₹8 ಲಕ್ಷದವರೆಗೆ ಖರ್ಚು ಮಾಡಿ 3 ಸಾವಿರ ಅಡಿ ಆಳದವರೆಗೆ ಕೊಳವೆಬಾವಿ ಕೊರೆಸಲು ಸಿದ್ಧರಿದ್ದಾರೆ ಎಂದರು.

ಬೆಂಗಳೂರು ನಗರದಲ್ಲಿ ವಾರ್ಷಿಕ 950 ಮಿ.ಮೀ ಮಳೆ ಬೀಳುತ್ತದೆ. ಮುಚ್ಚಿರುವ ಬಾವಿಗಳಿಗೆ ಮರುಜೀವ ನೀಡಬೇಕು. ಉದ್ಯಾನಗಳಲ್ಲಿ ಸಣ್ಣ ಕೊಳಗಳ ನಿರ್ಮಾಣ, ಕೆರೆಗಳಿಗೆ ಮಳೆ ನೀರು ಹರಿಯುವ ವ್ಯವಸ್ಥೆ, ಹೆಚ್ಚು ನೀರು ಇಂಗುವ ಲಾವಂಚ ಹುಲ್ಲು ಬೆಳೆಸಬೇಕು. ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಕಡ್ಡಾಯ ಮಳೆನೀರು ಕೊಯ್ಲು ವ್ಯವಸ್ಥೆ ಮಾಡಿದರೆ ಕೇವಲ ಒಂದು ವರ್ಷದಲ್ಲಿ ನಗರದ ನೀರಿನ ಸಮಸ್ಯೆ ಪರಿಹರಿಸಬಹುದು ಎಂದು ತಿಳಿಸಿದರು.

ನೀರು ಬಾರದ ಅಥವಾ ಒಣಗಿದ ಕೊಳವೆ ಬಾ‍ವಿಗಳಿಗೆ ಮಣ್ಣು ಹಾಕಿ ಮುಚ್ಚಬಾರದು. ಮೇಲ್ಭಾಗವನ್ನು ಭದ್ರವಾಗಿ ಮುಚ್ಚಿಟ್ಟರೆ ಕೆಲವು ವರ್ಷಗಳ ಬಳಿಕ ಅಲ್ಲಿಯೂ ನೀರು ಸಿಗುತ್ತದೆ. ನಗರಕ್ಕೆ ನೈಸರ್ಗಿಕವಾಗಿಯೇ ಸಾಕಷ್ಟು ನೀರು ಲಭ್ಯವಾಗುತ್ತಿದ್ದು, ಸರಿಯಾಗಿ ಬಳಸಬೇಕು. ಅದರ ಬದಲು ಕೊಳವೆಬಾವಿ ಕೊರೆಯುತ್ತಾ ಹೋದರೆ ಬೆಂಗಳೂರಿಗೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ವಿಚಾರ ಸಂಕಿರಣದಲ್ಲಿ ಪ್ರಧಾನ ಅಭಿಯಂತರ ಬಿ. ಸುರೇಶ್, ಅಭಿಯಂತರರ ಸಂಘದ ಅಧ್ಯಕ್ಷ ಬಿ.ಸಿ. ಗಂಗಾಧರ ಉಪಸ್ಥಿತರಿದ್ದರು.

1 ಎಕರೆಯಲ್ಲಿ 21 ಕೊಳವೆಬಾವಿ !

ಆನೇಕಲ್ ಬಳಿ ಜಮೀನುದಾರರೊಬ್ಬರು ತಮ್ಮ 1 ಎಕರೆ ಜಮೀನಿನಲ್ಲಿ ಸಾವಿರಕ್ಕೂ ಹೆಚ್ಚು ಅಡಿ ಆಳದ 21 ಬೋರ್‌ವೆಲ್ ಕೊರೆಸಿದ್ದಾರೆ. ಒಂದರಲ್ಲೂ ನೀರು ಬಂದಿಲ್ಲ. ಪಟ್ಟು ಬಿಡದ ಅವರು ನನ್ನನ್ನು ಸಂಪರ್ಕಿಸಿದರು. ಅವರಿಗೆ ಮಳೆನೀರು ಕೊಯ್ಲು ಮಾಡುವ ಐಡಿಯಾ ಕೊಟ್ಟಿದ್ದೇನೆ ಎಂದು ದೇವರಾಜ ರೆಡ್ಡಿ ತಿಳಿಸಿದರು. 

Share this article