ಎಸ್ಸೆಸ್ಸೆಲ್ಸಿ ಪಾಸ್‌ಗೆ 33% ಅಂಕ: ಮಿಶ್ರ ಪ್ರತಿಕ್ರಿಯೆ

Published : Jul 26, 2025, 09:33 AM IST
SSLC exam

ಸಾರಾಂಶ

ಸಿಬಿಎಸ್‌ಇ ಮಾದರಿಯಲ್ಲಿ ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಪಾಸ್‌ ಅಂಕಗಳ ಪ್ರಮಾಣವನ್ನು ಆಂತರಿಕ ಮೌಲ್ಯಮಾಪನದ ಅಂಕಗಳನ್ನೊಳನ್ನು ಸೇರಿಸಿ ಶೇ.33ಕ್ಕೆ ಇಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಕರಡು ನಿಯಮಾವಳಿ ಅಧಿಸೂಚನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ

 

 ಬೆಂಗಳೂರು :  ಸಿಬಿಎಸ್‌ಇ ಮಾದರಿಯಲ್ಲಿ ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಪಾಸ್‌ ಅಂಕಗಳ ಪ್ರಮಾಣವನ್ನು ಆಂತರಿಕ ಮೌಲ್ಯಮಾಪನದ ಅಂಕಗಳನ್ನೊಳನ್ನು ಸೇರಿಸಿ ಶೇ.33ಕ್ಕೆ ಇಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಕರಡು ನಿಯಮಾವಳಿ ಅಧಿಸೂಚನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಶಾಲಾ ಸಂಘಟನೆಗಳು, ಪೋಷಕರು ಹಾಗೂ ಶಿಕ್ಷಕ ಸಂಘಟನೆಗಳು ಈ ನಡೆ ಸ್ವಾಗತಿಸಿದರೆ, ಕೆಲ ಶಿಕ್ಷಣದ ತಜ್ಞರು ಶೈಕ್ಷಣಿಕ ದಿವಾಳಿತನಕ್ಕೆ ಇದು ಕೈಗನ್ನಡಿ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌, ಇದು ರಾಜ್ಯದ ಲಕ್ಷಾಂತರ ಮಕ್ಕಳಿಗೆ ಆಗುತ್ತಿದ್ದ ಅನ್ಯಾಯ ಸರಿಪಡಿಸುವ ಕ್ರಮ. ಇದು ಅತ್ಯಂತ ಸ್ವಾಗತಾರ್ಹ. ಇದರ ಜೊತೆ ಪ್ರಥಮ ಭಾಷಾ ವಿಷಯದ ಪರೀಕ್ಷೆಗೆ ಮಾತ್ರ 125 ಅಂಕ ಇರುವುದನ್ನು ಇತರೆ ಐದು ವಿಷಯಗಳಂತೆ 100 ಅಂಕಗಳಿಗೆ ಇಳಿಸಬೇಕು. ತಪ್ಪು ಗ್ರಹಿಕೆ ಬೇಡ. ಪ್ರಥಮ ಭಾಷೆ ಎಂದರೆ ಕನ್ನಡ ಮಾತ್ರವಲ್ಲ, ಇಂಗ್ಲಿಷ್‌, ಹಿಂದಿ ಸೇರಿ ಬೇರೆ ಬೇರೆ ಮಕ್ಕಳು ಬೇರೆ ಬೇರೆ ಭಾಷಾ ವಿಷಯಗಳನ್ನು ಪ್ರಥಮ ಭಾಷೆಯಾಗಿ ಓದುತ್ತಾರೆ. ಸಿಬಿಎಸ್‌ಇ, ಐಸಿಎಸ್‌ಇ ಸೇರಿ ಇಡೀ ದೇಶದಲ್ಲಿ ಎಲ್ಲೂ ಇಲ್ಲದ ಹೆಚ್ಚುವರಿ ಅಂಕದ ಪರೀಕ್ಷೆ ನಮ್ಮಲ್ಲಿ ಏಕೆ? ಇದನ್ನು ಕೂಡ ಪರಷ್ಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎನ್.ಯೋಗಾನಂದ ಅವರು, ಎಸ್ಸೆಸ್ಸೆಲ್ಸಿ ಪಾಸ್‌ ಅಂಕ ಶೇ.33ಕ್ಕೆ ಇಳಿಸಿರುವುದರಿಂದ ಕೇಂದ್ರ ಪಠ್ಯಕ್ರಮ ಮತ್ತು ರಾಜ್ಯಪಠ್ಯಕ್ರಮ ಪರೀಕ್ಷಾ ವ್ಯವಸ್ಥೆಯಲ್ಲಿ ಇದ್ದ ವ್ಯತ್ಯಾಸ, ತಾರತಮ್ಯ ಹೋಗಲಾಡಿಸಿದಂತಾಗಲಿದೆ. ಫಲಿತಾಂಶ ಹೆಚ್ಚಾಗಲು ಇದು ಸಹಕಾರಿ ಎಂದು ಹೇಳಿದ್ದಾರೆ.

ಅವರ್ ಸ್ಕೂಲ್ಸ್‌ ಪ್ರಧಾನ ಕಾರ್ಯದರ್ಶಿ ಪ್ರಭಾಕರ್‌ ಅರಸ್‌, ಇದು ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡ ಕಡಿಮೆ ಮಾಡಲಿದೆ. ಈ ಬದಲಾವಣೆಯನ್ನು ದ್ವಿತೀಯ ಪಿಯುಸಿಗೂ ವಿಸ್ತರಿಸಿ 2024-25ನೇ ಸಾಲಿನಿಂದ ಪೂರ್ವಾನ್ವಯವಾಗುವಂತೆ ಎರಡು ಪರೀಕ್ಷೆಗಳಿಗೆ ಜಾರಿಗೊಳಿಸಬೇಕು ಎಂದಿದ್ದಾರೆ.

ಶಿಕ್ಷಣ ಇಲಾಖೆಯ ಕಳಪೆ ಮನಸ್ಥಿತಿ

ಪ್ರತೀಕ: ನಿರಂಜನಾರಾಧ್ಯ ಟೀಕೆ

ಶೇ.33 ಅಂಕದ ಮಾನದಂಡ ಬ್ರಿಟಿಷ್‌ ವಸಾಹತುಶಾಹಿ ಯುಗದ್ದು. 1858ರ ಮೊದಲು ಮೆಟ್ರಿಕ್ಯುಲೇಷನ್‌ ಪರೀಕ್ಷೆಯೊಂದಿಗೆ ಈ ಮಾನದಂಡ ಪರಿಚಯಿಸಲಾಯಿತು. ತಮ್ಮ ದೇಶದಲ್ಲಿ ಉತ್ತೀರ್ಣತೆಗೆ ಸರಾಸರಿ ಶೇ.65 ಅಂಕದ ಮಾನದಂಡ ಹೊಂದಿದ್ದ ಬ್ರಿಟಿಷರು, ಭಾರತೀಯರು ತಮ್ಮ ನಾಗರಿಕರಿಕರಷ್ಟು ಸಮರ್ಥರಲ್ಲ ಎಂದು ನಮ್ಮನ್ನು 2ನೇ ದರ್ಜೆಯ ನಾಗರಿಕರಂತೆ ಕೀಳರಿಮೆ ನೆಲೆಯಲ್ಲಿ ಸೃಷ್ಟಿಸಿದ ಮಾನದಂಡ ಇದು. ಇದನ್ನು ಶೇ.50 ಅಂಕಕ್ಕೆ ಹೆಚ್ಚಿಸಿಕೊಂಡು ಬಲಿಷ್ಠ ಜ್ಞಾನ ವ್ಯವಸ್ಥೆ ಕಟ್ಟಿಕೊಳ್ಳುವ ಬದಲು 165 ವರ್ಷಗಳ ಹಳೆಯ ಮಾನದಂಡವನ್ನು ಮರುಜಾರಿ ಮಾಡುತ್ತಿರುವುದು ಶಿಕ್ಷಣದ ಹಿಮ್ಮುಖ ನಡೆಯ ಮುನ್ಸೂಚನೆ. ಆರೋಗ್ಯಕರ ಸ್ಪರ್ಧೆಗೆ ಶಕ್ತಿಯಿಲ್ಲದ ಶಿಕ್ಷಣ ಇಲಾಖೆಯ ಕಳಪೆ ಮನಸ್ಥಿಯ ಪ್ರತೀಕ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಹೇಳಿದ್ದಾರೆ.

PREV
Read more Articles on

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ
ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ