ಸರ್ಕಾರಿ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜು ವಿದ್ಯಾರ್ಥಿಗಳಿಗೆ ಅವರ ವ್ಯಾಸಂಗದ ಅವಧಿಯಲ್ಲೇ ಭವಿಷ್ಯದ ಉದ್ಯೋಗಾವಕಾಶಕ್ಕೆ ಪೂರಕವಾಗಿ ವಿಸ್ತೃತ ಕೌಶಲ್ಯ ತರಬೇತಿ ನೀಡಲು ರಾಜ್ಯ ಸರ್ಕಾರ ರಾಜ್ಯದ ವಿವಿಧ ಭಾಗಗಳಲ್ಲಿ ‘ಏಳು ಸೆಂಟರ್ಸ್ ಆಫ್ ಎಕ್ಸಲೆನ್ಸ್’ ಆರಂಭಿಸಲು ಯೋಜನೆ ರೂಪಿಸಿದೆ.
ಲಿಂಗರಾಜು ಕೋರಾ
ಬೆಂಗಳೂರು : ಸರ್ಕಾರಿ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜು ವಿದ್ಯಾರ್ಥಿಗಳಿಗೆ ಅವರ ವ್ಯಾಸಂಗದ ಅವಧಿಯಲ್ಲೇ ಭವಿಷ್ಯದ ಉದ್ಯೋಗಾವಕಾಶಕ್ಕೆ ಪೂರಕವಾಗಿ ವಿಸ್ತೃತ ಕೌಶಲ್ಯ ತರಬೇತಿ ನೀಡಲು ರಾಜ್ಯ ಸರ್ಕಾರ ರಾಜ್ಯದ ವಿವಿಧ ಭಾಗಗಳಲ್ಲಿ ‘ಏಳು ಸೆಂಟರ್ಸ್ ಆಫ್ ಎಕ್ಸಲೆನ್ಸ್’ ಆರಂಭಿಸಲು ಯೋಜನೆ ರೂಪಿಸಿದೆ. ಅಲ್ಲದೆ, ಇದಕ್ಕೆ ಪೂರಕವಾಗಿ ಪಠ್ಯಕ್ರಮ ತಯಾರಿ ಕಾರ್ಯವನ್ನೂ ಆರಂಭಿಸಿದೆ.
ಸುಮಾರು 3,250 ಕೋಟಿ ರು. ಮೊತ್ತದ ಈ ಮಹತ್ವಾಕಾಂಕ್ಷಿ ಯೋಜನೆಗೆ ವಿಶ್ವ ಬ್ಯಾಂಕ್‌ನಿಂದ ಶೇ.70ರಷ್ಟು ಅಂದರೆ 2500 ಕೋಟಿ ರು. ಸಾಲದ ನೆರವು ಪಡೆದು ಉಳಿದ ಶೇ.30ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಬರಿಸಲು ನಿರ್ಧರಿಸಲಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಬರುವ ಜೂನ್ ವೇಳೆಗೆ ವಿಶ್ವ ಬ್ಯಾಂಕ್‌ನಿಂದ ಈ ಸಾಲ ಯೋಜನೆಗೆ ಅನುಮತಿ ದೊರೆಯುವ ನಿರೀಕ್ಷೆ ಉನ್ನತ ಶಿಕ್ಷಣ ಇಲಾಖೆಯದ್ದಾಗಿದೆ.
ಈ ಸಂಬಂಧ ಇಲಾಖೆಯು ವಿವರವಾದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮೂಲಕ ವರ್ಲ್ಡ್ ಬ್ಯಾಂಕಿಗೆ ಸಲ್ಲಿಸಿದೆ. ಇದಕ್ಕೆ ಕೇಂದ್ರ ಶಿಕ್ಷಣ ಇಲಾಖೆಯ ಒಪ್ಪಿಗೆ ದೊರಕಿದ್ದು, ಕಡತವು ಅಲ್ಲಿಂದ ಆರ್ಥಿಕ ವ್ಯವಹಾರಗಳ ಇಲಾಖೆ ತಲುಪಿದೆ. ಆ ಇಲಾಖೆಯ ಸಮ್ಮತಿ ಸಿಕ್ಕ ಕೂಡಲೇ ಅದು ವಿಶ್ವ ಬ್ಯಾಂಕ್ ಮುಂದೆ ಹೋಗಲಿದೆ. ಜೂನ್ ವೇಳೆಗೆ ಎಲ್ಲಾ ಪ್ರಕ್ರಿಯೆ ಮುಗಿದು ವಿಶ್ವ ಬ್ಯಾಂಕ್‌ನ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಪದವಿ ಪೂರೈಸಿದ ವಿದ್ಯಾರ್ಥಿಗಳು ಮೆಕ್ಯಾನಿಕಲ್, ಸಿವಿಲ್, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಸೇರಿ ಯಾವೆಲ್ಲಾ ಉದ್ಯೋಗಗಳಿಗೆ ಸೇರಬಹುದೋ ಅದಕ್ಕೆ ಪೂರಕವಾದ ವಿಸ್ತೃತ ಕೌಶಲ್ಯ ತರಬೇತಿಯನ್ನು ಸೆಂಟರ್ಸ್ ಆಫ್ ಎಕ್ಸಲೆನ್ಸ್‌ಗಳಲ್ಲಿ ಒಂದೇ ಸೂರಿನಡಿ ನೀಡಲಾಗುತ್ತದೆ. ಓದು ಮುಗಿಸಿದ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಕೈಗಾರಿಕೆ, ಕಂಪನಿಗಳಲ್ಲಿ ವರ್ಷಾನುಗಟ್ಟಲೆ ತರಬೇತಿ ಪಡೆಯಬೇಕಾಗುತ್ತದೆ. ವ್ಯಾಸಂಗದ ಅವಧಿಯಲ್ಲೇ ಅವರಿಗೆ ತಮ್ಮ ಅಧ್ಯಯನಕ್ಕೆ ಪೂರಕವಾಗಿ ಕನಿಷ್ಠ ಕೌಶಲ್ಯ ತರಬೇತಿ ನೀಡಿ ಉದ್ಯೋಗಕ್ಕೆ ಸಜ್ಜುಗೊಳಿಸುವುದು ಈ ಯೋಜನೆಯ ಉದ್ದೇಶ.
ಪ್ರಾಯೋಗಿಕವಾಗಿ ಟೊಯೋಟಾ ಕಂಪನಿಯವರೊಂದಿಗೆ ರಾಜ್ಯದ 11 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇಂತಹ ಕೌಶಲ್ಯ ತರಬೇತಿ ಕೇಂದ್ರ ತೆರೆಯಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಆರು ಕಾಲೇಜುಗಳಲ್ಲಿ ಟೊಯೋಟಾ ತನ್ನ ಕೇಂದ್ರಗಳನ್ನು ಸ್ಥಾಪಿಸಿದೆ. ಉಳಿದ 5 ಕಾಲೇಜುಗಳಲ್ಲಿ ಈ ವರ್ಷ ಆರಂಭಿಸಲಿದೆ. ಈ ಕೇಂದ್ರಗಳಲ್ಲಿ ಸಂಸ್ಥೆಯು ತನ್ನ ಹೈಬ್ರಿಡ್ ಎಂಜಿನ್ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ. ಈಗ ರಾಜ್ಯ ಸರ್ಕಾರ ಇದೇ ಮಾದರಿಯಲ್ಲಿ ರಾಜ್ಯದ ಏಳೆಂಟು ಭಾಗಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲೇ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲು ಯೋಜನೆ ರೂಪಿಸಿದೆ.
ಆಯಾ ಭಾಗದ ಕಾಲೇಜುಗಳ ಸಂಖ್ಯೆ ಮತ್ತು ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಆಧಾರಿಸಿ ಈ ಕೇಂದ್ರಗಳನ್ನು ಆರಂಭಿಸಲು ಕಾಲೇಜುಗಳನ್ನು ಗುರುತಿಸಲಾಗುತ್ತದೆ. ಈ ಕೇಂದ್ರಗಳ ಶೇ.60ರಷ್ಟು ಸ್ಥಳದಲ್ಲಿ ಸರ್ಕಾರದಿಂದ ಕೌಶಲ್ಯ ತರಬೇತಿಗೆ ಬೇಕಾದ ಕನಿಷ್ಠ ಯಂತ್ರೋಪಕರಣ, ತಂತ್ರಜ್ಞಾನ ಸೌಲಭ್ಯ ಅಳವಡಿಸುವುದು, ಶೇ.20ರಷ್ಟು ಜಾಗದಲ್ಲಿ ಬೇರೆ ಬೇರೆ ಕಂಪನಿಗಳು ತಮ್ಮಲ್ಲಿನ ಉದ್ಯೋಗಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲು ಮುಂದೆ ಬಂದರೆ ಅವರದ್ದೇ ಕೇಂದ್ರಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವುದು, ಬಾಕಿ ಶೇ.20ರಷ್ಟು ಜಾಗದಲ್ಲಿ ಸ್ಟಾರ್ಟ್ ಅಪ್‌ಗಳಿಗೆ ಅವಕಾಶ ನೀಡುವ ಬಗ್ಗೆ ಪ್ರಾಥಮಿಕ ಹಂತದ ಲೆಕ್ಕಾಚಾರ ನಡೆದಿದೆ.
ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಾಗುವ ನಿಟ್ಟಿನಲ್ಲಿ ವಿವಿಧ ಕೈಗಾರಿಕೆಗಳು, ಕಂಪನಿಗಳು, ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಗುಣಮಟ್ಟದ ಶಿಕ್ಷಣ, ಶೈಕ್ಷಣಿಕ ಪ್ರಗತಿ, ಕೌಶಲ್ಯ ತರಬೇತಿ ಉದ್ದೇಶಗಳಿಗೆ ಸುಮಾರು 20 ಒಡಂಬಡಿಕೆಗಳನ್ನು ಮಾಡಿಕೊಂಡಿದ್ದೇವೆ. ಅದರ ಮುಂದುವರೆದ ಭಾಗವಾಗಿ ವಿಶ್ವ ಬ್ಯಾಂಕ್ ನೆರವಿನಲ್ಲಿ ರಾಜ್ಯದ ಏಳೆಂಟು ಕಡೆ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಸ್ಥಾಪಿಸುವ ಮಹತ್ವದ ಯೋಜನೆ ರೂಪಿಸಲಾಗಿದೆ. ಜೂನ್ ವೇಳೆಗೆ ಅನುಮೋದನೆ ಸಿಗುವ ನಿರೀಕ್ಷೆ ಇದೆ.
-ಡಾ. ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ