ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ

Published : Jul 18, 2025, 01:00 PM IST
anganwadi

ಸಾರಾಂಶ

ಅಂಗನವಾಡಿ ಬಳಿಕ ಶಾಲೆಗೆ ಸೇರುವ ಮಕ್ಕಳ ಅನುಕೂಲಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 12 ಸಂಖ್ಯೆಯ ಅಪಾರ್‌ ಐಡಿಯನ್ನು(ಅಟೋಮೆಟೆಡ್‌ ಪರ್ಮನೆಂಟ್‌ ಅಕಾಡೆಮಿಕ್‌ ಅಕೌಂಟ್‌ ರಿಜಿಸ್ಟ್ರಿ) ಶೀಘ್ರ ಜಾರಿಗೆ  

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು  : ಅಂಗನವಾಡಿ ಬಳಿಕ ಶಾಲೆಗೆ ಸೇರುವ ಮಕ್ಕಳ ಅನುಕೂಲಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 12 ಸಂಖ್ಯೆಯ ಅಪಾರ್‌ ಐಡಿಯನ್ನು(ಅಟೋಮೆಟೆಡ್‌ ಪರ್ಮನೆಂಟ್‌ ಅಕಾಡೆಮಿಕ್‌ ಅಕೌಂಟ್‌ ರಿಜಿಸ್ಟ್ರಿ) ಶೀಘ್ರ ಜಾರಿಗೆ ತರಲಿದ್ದು, ದೇಶದಲ್ಲೇ ಈ ಯೋಜನೆ ಜಾರಿಗೆ ತರುತ್ತಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.

 ಈ ಐಡಿಯಿಂದಾಗಿ ಅಂಗನವಾಡಿಗೆ ಸೇರ್ಪಡಗೊಂಡ ಮಗು, ಮುಂದಿನ ಶಿಕ್ಷಣಕ್ಕಾಗಿ ದೇಶದ ಯಾವುದೇ ಭಾಗದಲ್ಲಿರುವ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯಲು ಸಹಾಯಕವಾಗಲಿದೆ. ಮಕ್ಕಳ ‘ಕ್ರೆಡಿಟ್’ ಗುರುತಿಸುವಿಕೆ, ವರ್ಗಾವಣೆ ಪತ್ರದ(ಟಿಸಿ) ಪ್ರಕ್ರಿಯೆಗಳನ್ನು ಇದು ಸರಳಗೊಳಿಸುತ್ತದೆ. ಶೈಕ್ಷಣಿಕ ಪ್ರಗತಿ ಮತ್ತು ಹಿಂದಿನ ಕಲಿಕೆಯ ಗುರುತಿಸುವಿಕೆಯೂ ಸುಗಮವಾಗಲಿದೆ.

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ‘ಒನ್‌ ನೇಷನ್‌, ಒನ್‌ ಸ್ಟೂಡೆಂಟ್‌ ಐಡಿ’ ಯೋಜನೆಯಡಿ ಅಪಾರ್‌ ಐಡಿಯನ್ನು ಕರ್ನಾಟಕದ ಅಂಗನವಾಡಿ ಕೇಂದ್ರಗಳಲ್ಲಿ ಜಾರಿಗೆ ತರಲಾಗುತ್ತಿದೆ. ದೇಶಾದ್ಯಂತ ಈ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಅಂಗನವಾಡಿಗೆ ದಾಖಲಾಗುವ ವೇಳೆ ಪಾಲಕರ/ಪೋಷಕರ ವಿವರ, ತಂದೆ-ತಾಯಿಯ ಮೊಬೈಲ್‌ ಸಂಖ್ಯೆ, ಆಧಾರ್‌ ಸಂಖ್ಯೆ, ಜನನ ಪ್ರಮಾಣ ಪತ್ರವನ್ನೂ ಇದಕ್ಕಾಗಿ ನೀಡಬೇಕು. ಈ ಮಾಹಿತಿಯನ್ನು ಪೋಷಣ್‌ ಟ್ರ್ಯಾಕರ್‌ನಲ್ಲಿ ಭರ್ತಿ ಮಾಡಿದರೆ ಅಪಾರ್‌ ಐಡಿ ಸಿಗಲಿದೆ. ಪ್ರತಿ ಮಕ್ಕಳಿಗೂ ಕಾರ್ಡ್‌ ನೀಡಲಿದ್ದು, ಇದರಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಅಂಶಗಳೆಲ್ಲ ಇರಲಿವೆ. 

ಏನು ಪ್ರಯೋಜನ?: ಮಕ್ಕಳು ಅಂಗನವಾಡಿ ಸೇರ್ಪಡೆಗೊಂಡ ಬಳಿಕ ಪೋಷಣ್‌ ಟ್ರ್ಯಾಕರ್ ಆ್ಯಪ್‌ ಮೂಲಕ ಅಪಾರ್‌ ಐಡಿ ಸಂಖ್ಯೆ ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳ ಪ್ರಗತಿಯನ್ನು ಪತ್ತೆ ಹಚ್ಚಲು ಮತ್ತು ಶೈಕ್ಷಣಿಕ ದಾಖಲೆಗಳನ್ನು ವ್ಯವಸ್ಥಿತಗೊಳಿಸಲು ನೆರವಾಗುತ್ತದೆ. ಅಂಗನವಾಡಿ ಬಳಿಕ ಶಾಲಾ ದಾಖಲಾತಿ ವೇಳೆ ಉಂಟಾಗುವ ಗೊಂದಲಕ್ಕೂ ಕಡಿವಾಣ ಬೀಳುತ್ತದೆ. ಶಿಕ್ಷಣದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಖಚಿತಪಡಿಸುತ್ತದೆ. ಅಂಗನವಾಡಿಗೆ ಸೇರ್ಪಡೆಗೊಂಡ ಬಳಿಕ ಸಿಗುವ ಅಪಾರ್‌ ಐಡಿಯು ಆ ವಿದ್ಯಾರ್ಥಿ ಉನ್ನತ ಶಿಕ್ಷಣ ಪೂರೈಸುವವರೆಗೂ ಚಾಲ್ತಿಯಲ್ಲಿರುತ್ತದೆ. ಅಪಾರ್‌ ಐಡಿಗೆ ಯಾವುದೇ ಹೆಚ್ಚುವರಿ ಪ್ರಮಾಣ ಪತ್ರಗಳ ಅಗತ್ಯವಿರುವುದಿಲ್ಲ. ಶಾಲಾ ದಾಖಲಾತಿ ವೇಳೆ ಪ್ರಮಾಣ ಪತ್ರಗಳನ್ನು ಕಳೆದುಕೊಳ್ಳುವ ಭಯವಿಲ್ಲ. ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ವರ್ಗಾವಣೆ, ಪ್ರವೇಶ ಪರೀಕ್ಷೆ, ಪ್ರವೇಶ, ಉದ್ಯೋಗ ಅರ್ಜಿ, ಕೌಶಲ್ಯ ತರಬೇತಿ, ಉನ್ನತೀಕರಣ ಸೇರಿ ಬಹುತೇಕ ಸಂದರ್ಭಗಳಿಗೆ ಉಪಯುಕ್ತವಾಗಿದೆ.

ದೇಶದಲ್ಲೇ ಮೊದಲ ಬಾರಿಗೆ ಅಪಾರ್‌ ಐಡಿಯನ್ನು ನಾವು ಜಾರಿಗೆ ತರುತ್ತಿದ್ದು, ತಿಂಗಳಾಂತ್ಯದಲ್ಲಿ ಅಂಗನವಾಡಿ ಮಕ್ಕಳಿಗೆ ಐಡಿ ಸಿಗಲಿದೆ. ಕೇಂದ್ರದ ಯೋಜನೆಯನ್ನು ನಾವು ಸಮಪರ್ಕವಾಗಿ ಜಾರಿಗೆ ತರುತ್ತಿದ್ದೇವೆ.

- ಲಕ್ಷ್ಮೀ ಹೆಬ್ಬಾಳ್ಕರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ

ಶೈಕ್ಷಣಿಕ ದಾಖಲಾತಿ ಸಂಗ್ರಹಿಸಲು ಅಪಾರ್‌ ಐಡಿಯಿಂದ ಅನುಕೂಲವಾಗಲಿದೆ. ಅಂಗನವಾಡಿ ಬಿಟ್ಟ ಮಕ್ಕಳು ಶಾಲೆಗೆ ಸೇರಿದ್ದಾರೆಯೇ, ಇಲ್ಲವೇ ಎಂಬುದನ್ನು ಪತ್ತೆ ಹಚ್ಚಬಹುದು. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ತಪ್ಪಲಿದೆ.

-ಬಿ.ಎಚ್‌.ನಿಶ್ಚಲ್‌, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜಂಟಿ ನಿರ್ದೇಶಕ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!