ವಿಧಾನಸೌಧದಲ್ಲಿ ಸೋಮವಾರ ನಡೆದ ‘ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ -2024’ ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ ಆಗಮಿಸಿದ್ದ ಮಕ್ಕಳ ಪ್ರತಿನಿಧಿಗಳು ಸರ್ಕಾರದ ಮುಂದಿಟ್ಟ ಮಕ್ಕಳ ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸುವಂತೆ ವ್ಯಕ್ತಪಡಿಸಿದ ಆಗ್ರಹದ ಪರಿ.
ಬೆಂಗಳೂರು : ‘ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದ್ದು ಅವುಗಳನ್ನು ಶೀಘ್ರ ಭರ್ತಿ ಮಾಡಿ. 40 ಸಾವಿರ ಅತಿಥಿ ಶಿಕ್ಷಕರಿದ್ದರೂ ಇಂಗ್ಲೀಷ್, ವಿಜ್ಞಾನ ವಿಷಯ ಬೋಧಿಸುವವರಿಲ್ಲ. ಶಾಲಾ ಹಂತದಿಂದಲೇ ಕೌಶಲ್ಯ ಆಧಾರಿತ ಶಿಕ್ಷಣ ಕೊಡಿ. ಹೆಣ್ಣು ಮಕ್ಕಳು ದೌರ್ಜನ್ಯಗಳಿಂದ ರಕ್ಷಿಸಿಕೊಳ್ಳಲು ಶಾಲೆಯಲ್ಲಿ ಕರಾಟೆ ಕಲಿಸಿ....’
ಇವು, ವಿಧಾನಸೌಧದಲ್ಲಿ ಸೋಮವಾರ ನಡೆದ ‘ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ -2024’ ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ ಆಗಮಿಸಿದ್ದ ಮಕ್ಕಳ ಪ್ರತಿನಿಧಿಗಳು ಸರ್ಕಾರದ ಮುಂದಿಟ್ಟ ಮಕ್ಕಳ ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸುವಂತೆ ವ್ಯಕ್ತಪಡಿಸಿದ ಆಗ್ರಹದ ಪರಿ.
ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಯೂನಿಸೆಫ್ ಸೇರಿದಂತೆ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಕ್ಷರಶಃ ಮಕ್ಕಳ ಧನಿ ಮೊಳಗಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೈರು ಹಾಜರಿಯಿಂದಾಗಿ ಮಕ್ಕಳ ಪ್ರಶ್ನೆಗಳ ಸುಳಿಗೆ ಸಿಕ್ಕಿಕೊಂಡ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಮಕ್ಕಳ ಸಮಸ್ಯೆಗಳನ್ನು ಆಲಿಸಿ ಸಮಾಲೋಚನೆ ನಡೆಸಿದರು. ಮಕ್ಕಳಿಂದ ಬಂದ ಪ್ರತಿಯೊಂದು ಆಗ್ರಹ, ಮನವಿಗೂ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಇಲಾಖಾ ಸಚಿವರ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಾಡುವ ಸಿದ್ಧ ಉತ್ತರ ನೀಡಿದರು.
ಇಂಗ್ಲಿಷ್-ವಿಜ್ಞಾನ ಶಿಕ್ಷಕರಿಗೆ ಆದ್ಯತೆ:
ಖಾಲಿ ಇರುವ ಶಿಕ್ಷಕ ಹುದ್ದೆಗಳ ಭರ್ತಿ ಮಾಡಬೇಕೆಂಬ ಮಕ್ಕಳ ಆಗ್ರಹಕ್ಕೆ ಉತ್ತರಿಸಿದ ಅವರು, ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಶಿಕ್ಷಕರ ಹುದ್ದೆ ಖಾಲಿ ಇರುವುದು ನಿಜ. ಪ್ರಸ್ತುತ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ 5500 ಶಿಕ್ಷಕ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹುದ್ದೆಗಳ ಭರ್ತಿಗೆ ಅನುಮತಿ ಸಿಗುವ ಸಾಧ್ಯತೆ ಇದೆ. ಮುಂದಿ ವರ್ಷಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗ ಇಂಗ್ಲೀಷ್, ವಿಜ್ಞಾನ ವಿಷಯಗಳ ಬೋಧಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೆಣ್ಣು ಮಕ್ಕಳಿಗೆ ಶಾಲೆಯಲ್ಲೇ ಕರಾಟೆ ಕಲಿಸಿ:
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ಅನೇಕ ಕಾನೂನುಗಳನ್ನು ತಂದಿದೆ. ಆದರೆ, ಎಲ್ಲ ಸಮಯದಲ್ಲೂ ಆ ಕಾನೂನು ಕೆಲಸಕ್ಕೆ ಬರಲ್ಲ. ಹಾಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಶಾಲಾ ಹಂತದಿಂದಲೇ ಕರಾಟೆ ಕಲಿಸಿ ಎಂದು ವಿದ್ಯಾರ್ಥಿನಿಯೊಬ್ಬಳು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ರಿತೇಶ್ ಕುಮಾರ್, ಶಾಲೆಗಳಲ್ಲಿ ಕರಾಟೆ ಕಲಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿಲ್ಲ. ಕೆಲವೆಡೆ ಸ್ಥಳೀಯ ಅಧಿಕಾರಿಗಳು, ಸಂಘ ಸಂಸ್ಥೆಗಳು, ಪೋಷಕರ ಸಹಕಾರದೊಂದಿಗೆ ಕೆಲ ಶಾಲೆಗಳಲ್ಲಿ ಕರಾಟೆ ಕಲಿಸಲು ಅವಕಾಶ ನೀಡಿರಬಹುದು. ಆದರೂ, ನಿಮ್ಮ ಸಲಹೆ ಉಪಯುಕ್ತವಾಗಿದ್ದು ಇದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ಸ್ಯಾನಿಟರಿ ನ್ಯಾಪ್‌ಕಿನ್ ಬಂದಿಲ್ಲ:
ಶಾಲಾ ಮಕ್ಕಳಿಗೆ ‘ಶುಚಿ’ ಯೋಜನೆಯಡಿ ಸಿಗಬೇಕಾದ ಸ್ಯಾನಿಟರಿ ನ್ಯಾಪ್‌ಕಿನ್ ಸರಿಯಾಗಿ ಸರಬರಾಜಾಗುತ್ತಿಲ್ಲ. ಪ್ರತೀ ತಿಂಗಳು ನೀಡಬೇಕಾದ ನ್ಯಾಪ್‌ಕಿನ್ ಅನ್ನು ಇದುವರೆಗೆ ಒಂದು ತಿಂಗಳಷ್ಟೇ ನೀಡಲಾಗಿದೆ. ಕೆಲವೆಡೆ ಶಾಲೆಗಳಿಗೆ ಬಂದಿದ್ದರೂ ಶಿಕ್ಷಕರು ಕೊಡುತ್ತಿಲ್ಲ ಎಂದು ಅನೇಕ ವಿಧ್ಯಾರ್ಥಿನಿಯರು ಆರೋಪಿಸಿದ ಘಟನೆ ನಡೆಯಿತು. ಅಲ್ಲದೆ, ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶೌಚಾಲಯಗಳು ಬಹಳ ಕಿರಿದಾಗಿವೆ, ಅವುಗಳನ್ನು ದೊಡ್ಡದಾಗಿ ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿದರು. ಇದಕ್ಕೆ ರಿತೇಶ್ ಕುಮಾರ್ ಅವರು, ಆರೋಗ್ಯ ಇಲಾಖೆಯ ಗಮನಕ್ಕೆ ನ್ಯಾಪ್‌ಕಿನ್ ಸಮಸ್ಯೆ ಪರಿಹರಿಸಲಾಗುವುದು. ಶೌಚಾಲಯ ವಿಸ್ತೀರ್ಣ ದೊಡ್ಡದಾಗಿಸುವ ಕುರಿತು ತಮ್ಮ ಇಲಾಖಾ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಕೃಷಿ, ಪಂಚರ್ ಹಾಕೋದು ಕಲಿಸಿ:
ಬರೀ ಪುಸ್ತಕದ ಓದು ಬದಲು ಶಾಲೆಯಿಂದಲೇ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುವಂತೆ ವಿದ್ಯಾರ್ಥಿನಿಯೊಬ್ಬಳು ಮನವಿ ಮಾಡಿದರು. ನಾವು ಇಂತಹದ್ದೇ ಕೌಶಲ್ಯ ಎಂದು ಹೇಳುತ್ತಿಲ್ಲ. ಕೃಷಿ ಇರಲಿ, ಪಂಚರ್ ಹಾಕುವುದಿರಲಿ ಹೀಗೆ ಯಾವುದಾದರೂ ಆಗಲಿ, ಕೌಶಲ್ಯ ಆಧಾರಿತ ಶಿಕ್ಷಣ ಆರಂಭಿಸಿ. ಏಕೆಂದರೆ ನಾವು ಎಸ್ಸೆಸ್ಸೆಲ್ಸಿ ಮುಗಿಸಿ ನಂತರ ಕೌಶಲ್ಯ ತರಬೇತಿ ಪಡೆಯುವ ಬದಲು ಶಾಲಾ ಹಂತದಲ್ಲೇ ಇಂತಹ ತರಬೇತಿ ಪಡೆದುಕೊಂಡರೆ ಭವಿಷ್ಯಕ್ಕೆ ಉತ್ತಮ ನೆರವಾಗಲಿದೆ ಎಂದು ಅಭಿಪ್ರಾಯ ಮಂಡಿಸಿದರು. ಇದಕ್ಕೆ ಅಧಿಕಾರಿಗಳು ಇದು ಉತ್ತಮ ಸಲಹೆಯಾಗಿದ್ದು, ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದರು.
ತಂದೆ ಹೆಸರು ಕಡ್ಡಾಯ ಬೇಡವೆಂದು ಆಗ್ರಹ:
ಶಾಲೆ, ಹಾಸ್ಟೆಲ್ ಪ್ರವೇಶ, ಉದ್ಯೋಗ ಸೇರಿದಂತೆ ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಾಗ ದಾಖಲೆಗಳಲ್ಲಿ ತಂದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕೆಂಬ ನಿಯಮ ಕೈಬಿಡಬೇಕೆಂದು ದೇವದಾಸಿಯ ಪುತ್ರಿಯೊಬ್ಬಳು ಆಗ್ರಹಿಸಿದ ಘಟನೆ ನಡೆಯಿತು. ದೇವದಾಸಿಯರ ಮಕ್ಕಳಿಗೆ ತಂದೆ ಯಾರೆಂದು ಗೊತ್ತಿರುವುದಿಲ್ಲ. ಗೊತ್ತಿದ್ದರೂ ಹೇಳಿಕೊಳ್ಳಲು ಆಗುವುದಿಲ್ಲ. ಹಾಗಾಗಿ ತಾಯಿ ಹೆಸರನ್ನು ಮಾತ್ರ ದಾಖಲೆಗಳಲ್ಲಿ ಕಡ್ಡಾಯ ಮಾಡಬೇಕು. ತಂದೆ ಹೆಸರು ದಾಖಲಿಸುವುದು ಬಡುವುದನ್ನು ಆಯ್ಕೆಗೆ ಬಿಡಬೇಕೆಂದು ಆಗ್ರಹಿಸಿದರು.
ಶಾಲೆ ಸಮೀಪವೇ ಬಾರ್‌ಗಳಿವೆ:
ಯಾವುದೇ ಶಾಲೆಯ 100 ಮೀಟರ್ ಅಂತರದಲ್ಲಿ ಮದ್ಯದಂಗಡಿ, ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆಗಳು ಇರುವಂತಿಲ್ಲ ಎಂಬ ನಿಯಮವಿದ್ದರೂ ಇದು ಅನೇಕ ಕಡೆ ಪಾಲನೆಯಾಗುತ್ತಿಲ್ಲ. ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದರ ಕಟ್ಟುನಿಟ್ಟಿನ ಪಾಲನೆಗೆ ಕ್ರಮ ಕೈಗೊಳ್ಳಿ ಎಂದು ಮಕ್ಕಳು ಆಗ್ರಹಿಸಿದರು. ಇದಕ್ಕೆ ಅಧಿಕಾರಿಗಳು ಮತ್ತೊಮ್ಮೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸಂಚಾಲಕ ಡಾ. ಎನ್.ವಿ. ವಾಸುದೇವಶರ್ಮಾ, ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಟ್ರಸ್ಟಿ ಅಂಜಲಿ ರಾಮಣ್ಣ, ಸಿವಿಕ್ ಟ್ರಸ್ಟಿ ಕಾತ್ಯಾಯಿನಿ ಚಾಮರಾಜು ಉಪಸ್ಥಿತರಿದ್ದರು.