20 ತಿಂಗಳಾದರೂ ಭೋವಿ ನಿಗಮ ಹಗರಣ ವಿಚಾರಣೆಗೆ ಕರೆಯದ ಸಿಐಡಿ : ಹೈಕೋರ್ಟ್ ಕಿಡಿಕಿಡಿ

Published : Dec 20, 2024, 07:45 AM IST
Karnataka highcourt

ಸಾರಾಂಶ

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ಹಣದ ಅವ್ಯವಹಾರ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸದ ರಾಜ್ಯ ಸಿಐಡಿ ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ತನಿಖೆಯನ್ನು ಸಿಬಿಐಗೆ ಏಕೆ ವಹಿಸಬಾರದು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಬೆಂಗಳೂರು : ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ಹಣದ ಅವ್ಯವಹಾರ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸದ ರಾಜ್ಯ ಸಿಐಡಿ ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ತನಿಖೆಯನ್ನು ಸಿಬಿಐಗೆ ಏಕೆ ವಹಿಸಬಾರದು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಹಗರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ 7 ಮತ್ತು 8ನೇ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸರ್ಕಾರದ ತನಿಖೆಯ ವೈಖರಿಯನ್ನು ಆಕ್ಷೇಪಿಸಿದರು.

ಪ್ರಕರಣವು ಸಂಬಂಧ 2023ರಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮೊದಲಿಗೆ 8 ಮಂದಿ ಆರೋಪಿಗಳಿದ್ದರು. ಸದ್ಯ 14 ಆರೋಪಿಗಳಿದ್ದಾರೆ. ಸರ್ಕಾರಿ ಅಭಿಯೋಜಕ ಹೇಳುವ ಪ್ರಕಾರವೇ ಭೋವಿ ಅಭಿವೃದ್ಧಿ ನಿಗಮದಲ್ಲಿ ₹100 ಕೋಟಿಗಿಂತ ಅಧಿಕ ಮೊತ್ತದ ಹಗರಣ ನಡೆದಿದೆ. ಇಷ್ಟು ದೊಡ್ಡ ಮೊತ್ತದ ಹಗರಣ ನಡೆದಿದೆ. ಆದರೆ, ಪ್ರಕರಣ ದಾಖಲಾಗಿ 20 ತಿಂಗಳು ಕಳೆದಿದ್ದರೂ 1, 2, 3 ಮತ್ತು 5ನೇ ಆರೋಪಿಯನ್ನು ವಿಚಾರಣೆಗೆ ಕರೆದಿಲ್ಲ. ಅವರು ಸಹ ಯಾವುದೇ ಕೋರ್ಟ್‌ನಿಂದ ಜಾಮೀನು ಪಡೆದಿಲ್ಲ. ಇದು ರಾಜ್ಯ ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ ಎನ್ನುವುದನ್ನು ತೋರಿಸುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ನುಡಿದಿದೆ.

ಅಲ್ಲದೆ, ಪ್ರಕರಣ ಕುರಿತು ರಾಜ್ಯ ಸರ್ಕಾರವು ಬಸವನ ಹುಳ ತೆವಳುವಂತೆ ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿದೆ. ಇದು ಸಿಬಿಐ ತನಿಖೆಗೆ ವಹಿಸಲು ಅರ್ಹ ಪ್ರಕರಣವಾಗಿದೆ. ಆದ್ದರಿಂದ ಏಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬಾರದು? ಪ್ರಕರಣದ 1, 2, 3 ಮತ್ತು 5ನೇ ಆರೋಪಿಗಳು ವಿಚಾರಣೆ ಎದುರಿಸಿದ್ದಾರೆಯೇ? ಮತ್ತು ಅವರು ಯಾವುದೇ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆಯೇ? ಎಂಬ ಬಗ್ಗೆ ಅರ್ಜಿಯ ಮುಂದಿನ ವಿಚಾರಣೆ ವೇಳೆ ವಿವರಣೆ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ರಾಜ್ಯ ಸರ್ಕಾರದ ತನಿಖೆಯು ಪೂರ್ವಗ್ರಹ ಪೀಡಿತದಿಂದ ಕೂಡಿದೆ. ಕಾರಣ ಎಫ್‌ಐಆರ್‌ ದಾಖಲಾಗಿ 20 ತಿಂಗಳು ಕಳೆದರೂ ಈವರೆಗೂ 1, 2, 3 ಮತ್ತು 5 ಅವರನ್ನು ವಿಚಾರಣೆಗೆ ಕರೆದಿಲ್ಲ. ಅವರು ಜಾಮೀನು ಸಹ ಪಡೆದಿಲ್ಲ. ಹೀಗಿದ್ದರೂ ಅವರನ್ನು ಬಂಧಿಸಿಲ್ಲ ಎಂದರು.

ಸರ್ಕಾರಿ ಅಭೀಯೋಜಕರು ಉತ್ತರಿಸಿ, ತನಿಖಾಧಿಕಾರಿಗಳು ಒಬ್ಬ ಆರೋಪಿಯನ್ನು ಬಂಧಿಸಿತ್ತು. ಅವರಿಗೆ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿದ್ದರಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಇತರೆ ಆರೋಪಿಗಳನ್ನು ಏಕೆ ಬಿಟ್ಟಿದ್ದೀರಾ? ಜಾಮೀನು ಪಡೆಯದಿದ್ದರೂ ಏಕೆ ಅವರನ್ನು ಬಂಧಿಸಿಲ್ಲ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿ ಬಿಡುತ್ತೇನೆ. ಇಷ್ಟು ದೊಡ್ಡ ಪ್ರಕರಣದಲ್ಲಿ ಹಗರಣ ನಡೆದಿದ್ದರೇ? ಸರ್ಕಾರ ಬಸವನ ತೆವಳುವಂತೆ ನಿಧಾನವಾಗಿ ತನಿಖೆ ನಡೆಸುತ್ತಿದೆ ಎಂದು ಆಕ್ಷೇಪಿಸಿದರು.

ಸರ್ಕಾರಿ ಅಭಿಯೋಜಕರು, ಒಬ್ಬರನ್ನು ಬಂಧಿಸಲಾಗಿತ್ತು. ಹೈಕೋರ್ಟ್‌ನ ಮತ್ತೊಂದು ಪೀಠವು ಇನ್ನಿಬ್ಬರು ಆರೋಪಿಗಳ ವಿರುದ್ಧದ ತನಿಖೆಗೆ ತಡೆ ನೀಡಿದೆ. ಇನ್ನೂ ಕೆಲ ತನಿಖಾಧಿಕಾರಿಗಳು ಆರೋಪಿಗಳೊಂದಿಗೆ ಶಾಮೀಲಾಗಿದ್ದರು. ಅದರಿಂದ ಅವರನ್ನು ಅಮಾನತುಪಡಿಸಲಾಗಿದೆ. ಈ ಮಧ್ಯೆ ತನಿಖಾಧಿಕಾರಿ ಬದಲಾಗಿದ್ದಾರೆ ಎಂದು ಸಮಜಾಯಿಷಿ ನೀಡಿದರು.

ಅದಕ್ಕೆ ಒಪ್ಪದ ನ್ಯಾಯಮೂರ್ತಿಗಳು, ಎಲ್ಲ ಆರೋಪಿಗಳ ವಿರುದ್ಧವೂ ತಡೆಯಾಜ್ಞೆ ನೀಡಲಾಗಿದೆಯೇ? ಇಬ್ಬರ ಮೇಲೆ ತಡೆಯಾಜ್ಞೆ ನೀಡಿದರೆ ಉಳಿದವರ ವಿಚಾರವೇನು? ಅವರು ಜಾಮೀನು ಪಡೆದಿದ್ದಾರೆಯೇ? ಜಾಮೀನು ಪಡೆಯದಿದ್ದರೂ ಅವರನ್ನೇ ಏಕೆ ಬಂಧಿಸಿಲ್ಲ. ಗಂಭೀರ ಸ್ವರೂಪದಲ್ಲಿ ಹಗರಣ ನಡೆದಿರುವಾಗ ಸರ್ಕಾರ ಏಕೆ ರೀತಿ ನಡೆದುಕೊಳ್ಳುತ್ತಿದೆ. ಇದು 100 ಕೋಟಿ ರು. ಅಧಿಕ ಮೊತ್ತದ ಹಗರಣವಾಗಿದೆ. ಒಂದೂವರೆ ವರ್ಷದಿಂದ ತಪ್ಪಿತಸ್ಥರು ಹೊರಗಿದ್ದಾರೆ. ಸರ್ಕಾರದ ಆರೋಪಿಗಳನ್ನು ಯತ್ನಿಸಲು ಪ್ರಯತ್ನಿಸುತ್ತಿದ್ದರೆ, ಖಚಿತವಾಗಿಯೂ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗುವುದು. ಸಿಬಿಐಗೆ ತನಿಖೆಗೆ ವಹಿಸಲು ಇದು ಅರ್ಹ ಪ್ರಕರಣ. ವಕೀಲೆ ಜೀವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಪೊಲೀಸ್‌ ಅಧಿಕಾರಿಯನ್ನು ಈವರೆಗೂ ಬಂಧಿಸಿಲ್ಲ. ಇದು ರಾಜ್ಯ ಸರ್ಕಾರ ನಡೆಸುವ ತನಿಖೆ ವೈಖರಿ ಎಂದು ಚಾಟಿ ಬೀಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ