ಅಪರಾಧಿಗೆ ಶಿಕ್ಷೆ ಕಡಿತ: ಮನವಿಗೆ ಅವಕಾಶ - ಅಧೀನ ನ್ಯಾಯಾಲಯದ ವಿಚಾರಣೆ ವಿಳಂಬಕ್ಕೆ ಹೈಕೋರ್ಟ್‌ ಗರಂ

Published : Apr 02, 2025, 10:34 AM IST
Highcourt

ಸಾರಾಂಶ

 ಅಧೀನ ನ್ಯಾಯಾಲಯದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ಶಿಕ್ಷೆ ಪ್ರಮಾಣ ಕಡಿಮೆಗೊಳಿಸಲು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಅನುಮತಿಸಿದೆ.

 ವೆಂಕಟೇಶ್‌ ಕಲಿಪಿ

 ಬೆಂಗಳೂರು : ಒಂದೇ ದಿನ ಮಾಡಿದ ಎರಡು ಕೊಲೆ ಪ್ರಕರಣಗಳನ್ನು ಜಂಟಿಯಾಗಿ ವಿಚಾರಣೆ ನಡೆಸದೆ ಪ್ರಕರಣಗಳ ವಿಲೇವಾರಿಯಲ್ಲಿ ಐದೂವರೆ ವರ್ಷ ವಿಳಂಬ ಮಾಡಿರುವ ಅಧೀನ ನ್ಯಾಯಾಲಯದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ಶಿಕ್ಷೆ ಪ್ರಮಾಣ ಕಡಿಮೆಗೊಳಿಸಲು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಅನುಮತಿಸಿದೆ.

ವಿಚಾರಣೆ ವಿಳಂಬದಿಂದ ಶಿಕ್ಷೆ ಪ್ರಮಾಣ ಕಡಿತಗೊಳಿಸಿ ಆದೇಶಿಸಬೇಕು ಎಂದು ಕೋರಿ ಎರಡು ಕೊಲೆ ಪ್ರಕರಣಗಳಲ್ಲಿ ಎರಡು ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಬೆಂಗಳೂರು ನಿವಾಸಿ ಫ್ರಾಂಕ್‌ ಆ್ಯಂಟೋನಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವಿಳಂಬದಿಂದ ಆ್ಯಂಟೋನಿಯು ಶಿಕ್ಷೆ ಪ್ರಮಾಣ ಕಡಿತಗೊಳಿಸಲು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಬಹುದು. ಒಂದೊಮ್ಮೆ ಆ್ಯಂಟೋನಿ ಅಂತಹ ಮನವಿ ಪತ್ರ ಸಲ್ಲಿಸಿದರೆ, ಆತನಿಗೆ ಶಿಕ್ಷೆ ಕಡಿತಗೊಳಿಸಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಸರ್ಕಾರ ತನ್ನ ವಿವೇಚನೆ ಬಳಸಿ ತೀರ್ಮಾನ ಕೈಗೊಳ್ಳಬಹುದು ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ವಿವರ:

ಬೆಂಗಳೂರಿನ ತಟ್ಟಗುಪ್ಪೆ ನಿವಾಸಿ ಫ್ರಾಂಕ್‌ ಆ್ಯಂಟೋನಿ 2009ರ ಆ.9ರಂದು 82 ವರ್ಷದ ವೃದ್ಧೆ ಲೌರ್ಡ್‌ ಮೇರಿಯನ್ನು ಶ್ರೀನಿವಾಸ್‌ ಎಂಬಾತನೊಂದಿಗೆ ಸೇರಿ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ. ಬಳಿಕ ಚಿನ್ನಾಭರಣ ಮಾರಾಟ ಮಾಡುವುದರಿಂದ ಬರುವ ಹಣದಲ್ಲಿ ಹೆಚ್ಚಿನ ಪಾಲು ಕೇಳಿದ ಕಾರಣಕ್ಕೆ ಶ್ರೀನಿವಾಸ್‌ನನ್ನೂ ಅದೇ ದಿನ ಆ್ಯಂಟೋನಿ ಕೊಲೆ ಮಾಡಿದ್ದ. ಈ ಎರಡೂ ಪ್ರಕರಣದಲ್ಲಿ ಆ್ಯಂಟೋನಿಯನ್ನು ದೋಷಿಯಾಗಿ ಪರಿಗಣಿಸಿದ ಬೆಂಗಳೂರಿನ 64ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಎರಡು ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದ ಅಪರಾಧಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

ಅಪರಾಧಿ ಪರ ವಕೀಲ ವಿ.ಜಿ.ತಿಗಡಿ ವಾದ ಮಂಡಿಸಿ, ಅಪರಾಧ ಪ್ರಕ್ರಿಯಾ ಸಂಹಿತೆ-1973 (ಸಿಆರ್‌ಪಿಸಿ) ಸೆಕ್ಷನ್‌ 220 (1) ಅನ್ವಯ ಎರಡು ಅಪರಾಧ ಕೃತ್ಯಗಳನ್ನು ಒಂದೇ ದಿನ ಸ್ವಲ್ಪ ಸಮಯದ ಅಂತರದಲ್ಲಿ ಎಸಗಿದ್ದರೆ, ಆ ಕೃತ್ಯಗಳನ್ನು ಪ್ರತ್ಯೇಕ ಅಪರಾಧಗಳೆಂದು ಹೇಳಲಾಗುವುದಿಲ್ಲ. ಸೆಕ್ಷನ್‌ 219ರ ಅನ್ವಯ ಓರ್ವ ಆರೋಪಿಯು 12 ತಿಂಗಳ ಒಳಗೆ ಒಂದೇ ರೀತಿಯಲ್ಲಿ ಒಂದಕ್ಕಿಂತ ಹೆಚ್ಚು ಅಪರಾಧ ಕೃತ್ಯ ಎಸಗಿದ್ದರೆ, ಆತನನ್ನು ಒಂದು ವಿಚಾರಣೆಗೆ ಒಳಪಡಿಸಬೇಕಿದೆ ಎಂದು ವಾದಿಸಿದ್ದರು.

ಈ ಎರಡೂ ಕೊಲೆಗಳು ಬೇರೆ ಬೇರೆಯಾಗಿದ್ದು, ಒಂದೇ ದಿನ ಒಂದೇ ರೀತಿಯ ವ್ಯವಹಾರಕ್ಕಾಗಿ ನಡೆದಿವೆ. ಎರಡೂ ಪ್ರಕರಣಗಳಲ್ಲಿನ ಕೆಲ ಸಾಕ್ಷಿಗಳು ಒಬ್ಬರೇ ಆಗಿದ್ದಾರೆ. ಆದ್ದರಿಂದ ಎರಡೂ ಪ್ರಕರಣಗಳನ್ನು ಒಂದೇ ಸೆಷನ್ಸ್‌ ನ್ಯಾಯಾಲಯವು ಜಂಟಿಯಾಗಿ ವಿಚಾಣೆ ನಡೆಸಬೇಕಿತ್ತು. ಆದರೆ, ಮೊದಲಿಗೆ ಎರಡು ಪ್ರಕರಣಗಳನ್ನು ಬೇರೆ ಬೇರೆ ನ್ಯಾಯಾಲಯಗಳು ವಿಚಾರಣೆ ನಡೆಸುತ್ತಿದ್ದವು. 2015ರ ಅ.31ರಂದು ಎರಡೂ ಪ್ರಕರಣಗಳನ್ನು ಜೊತೆಗೂಡಿ ಒಂದೇ ಸೆಷನ್ಸ್‌ ನ್ಯಾಯಾಲಯ ಜಂಟಿಯಾಗಿ ವಿಚಾರಣೆ ನಡೆಸಿ, 2021ರ ಜೂ.14ರಂದು ತೀರ್ಪು ನೀಡಿದೆ. ಇದರಿಂದ ವಿಚಾರಣೆ ಪೂರ್ಣಗೊಳ್ಳಲು ವಿಳಂಬವಾಗಿದೆ. ಇದರಿಂದ ಸಿಆರ್‌ಪಿಸಿ ಸೆಕ್ಷನ್‌ 432ರ ಅಡಿಯಲ್ಲಿ ಶಿಕ್ಷೆ ಕಡಿತಕ್ಕೆ ಆ್ಯಂಟೋನಿ ಅರ್ಹನಾಗಿದ್ದಾನೆ ಎಂದು ವಾದಿಸಿದರು.

ಈ ವಾದ ಪುರಸ್ಕರಿಸಿರುವ ಹೈಕೋರ್ಟ್‌, ಮೇಲ್ಮನವಿದಾರನನ್ನು ಒಂದೇ ವಿಚಾರಣೆಗೆ ಒಳಪಡಿಸಿದ್ದರೆ, ಆತನ ವಿರುದ್ಧದ ಪ್ರಕರಣಗಳ ವಿಲೇವಾರಿಯಲ್ಲಿ ಉಂಟಾಗಿರುವ ವಿಳಂಬವನ್ನು ತಡೆಯಬಹುದಾಗಿತ್ತು. ಮೇಲ್ಮನವಿದಾರ 2009ರ ಡಿ.10ರಂದು ಬಂಧನಕ್ಕೆ ಒಳಗಾಗಿದ್ದು, ಜಾಮೀನು ಮೇಲೆ ಬಿಡುಗಡೆಯಾಗಿಲ್ಲ. ಪ್ರಕರಣಗಳ ವಿಚಾರಣೆ ವಿಳಂಬದಲ್ಲಿ ಆತ ಕಾರಣನಲ್ಲ. ಮೊದಲಿನಿಂದಲೂ ಎರಡೂ ಪ್ರಕರಣಗಳನ್ನು ಜಂಟಿಯಾಗಿ ಒಂದೇ ನ್ಯಾಯಾಲಯ ವಿಚಾರಣೆ ನಡೆಸಿದ್ದರೆ 2015ರ ಅಂತ್ಯದೊಳಗೆ ವಿಚಾರಣೆ ಪೂರ್ಣಗೊಳ್ಳುತ್ತಿತ್ತು. ಆ ರೀತಿ ಮಾಡದಕ್ಕೆ ವಿಚಾರಣೆ ಪೂರ್ಣಗೊಳ್ಳಲು ಐದು ವರ್ಷ ಆರು ತಿಂಗಳ ಕಾಲ ವಿಳಂಬವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ರಾಜ್ಯ ಸರ್ಕಾರವು 2014ರ ಜ.7ರಂದು ಹೊರಡಿಸಿರುವ ಮಾರ್ಗಸೂಚಿಗಳನ್ವಯ ಒಂದಕ್ಕಿಂತ ಹೆಚ್ಚು ಕೊಲೆಗಳಿಗೆ ಶಿಕ್ಷೆಗೊಳಗಾದ ಕೈದಿಯು ಶಿಕ್ಷೆ ಪ್ರಮಾಣದಲ್ಲಿ ವಿನಾಯಿತಿ ಪಡೆಯಲು ಅರ್ಹನಾಗಿರುತ್ತಾನೆ. ಈ ಪ್ರಕರಣದಲ್ಲಿ ವಿಚಾರಣೆ ವಿಳಂಬವಾಗಿರುವುದರಿಂದ ಆ್ಯಂಟೋನಿಯು ಅಪರಾಧ ಸಾಬೀತಾಗುವ ಮುನ್ನ ಅನುಭವಿಸಿರುವ ಜೈಲು ವಾಸದ ಅವಧಿಯನ್ನು ಕಡಿತಗೊಳಿಸಲಾಗಿದೆ ಎಂಬುದಾಗಿ ಸಿಆರ್‌ಪಿಸಿ ಸೆಕ್ಷನ್‌ 428 ಅನ್ವಯ ಪರಿಗಣಿಸಬಹುದಾಗಿದೆ. ಅದರಂತೆ ಶಿಕ್ಷೆ ಕಡಿತಕ್ಕಾಗಿ ಮೇಲ್ಮನವೀದಾರ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪೀಠ ಆದೇಶಿಸಿದೆ.

ಆಗಿದ್ದು ಏನು?

*2009ರಲ್ಲಿ ಸ್ನೇಹಿತನ ಜೊತೆ ಸೇರಿ ವೃದ್ಧೆಯನ್ನು ಕೊಂದು ಚಿನ್ನ ದೋಚಿದ್ದ ಆ್ಯಂಟೋನಿ

*ಅದೇ ದಿನ ಚಿನ್ನ ಮಾರಿ ಬಂದ ಹಣದಲ್ಲಿ ಹೆಚ್ಚಿನ ಭಾಗ ಕೇಳಿದ ಎಂದು ಸ್ನೇಹಿತನ ಹತ್ಯೆ

*ಎರಡು ಕೊಲೆ ಪ್ರಕರಣವನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದ ಸೆಷನ್ಸ್‌ ನ್ಯಾಯಾಲಯ

*ಇದರಿಂದ ಹಂತಕನ ಮೂಲ ಹಕ್ಕಿಗೆ ಚ್ಯುತಿ ಎಂದು ವಾದಿಸಿದ ಅಪರಾಧಿ ಪರ ವಕೀಲರು

*ಇದನ್ನು ಪರಿಗಣಿಸಿದ ಹೈಕೋರ್ಟ್‌, ಸರ್ಕಾರಕ್ಕೆ ಶಿಕ್ಷೆ ಇಳಿಕೆಗೆ ಕೋರಿಕೆ ಸಲ್ಲಿಸಲು ಒಪ್ಪಿಗೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ