ಆನ್‌ಲೈನ್‌ನಲ್ಲಿ ಆಸ್ತಿ ನೋಂದಣಿ ಸಂಬಂಧ ಅಭಿವೃದ್ಧಿಪಡಿಸಿರುವ ಕಾವೇರಿ 2.0 ತಂತ್ರಾಂಶದ ಮೇಲೆ ದುಷ್ಕರ್ಮಿಗಳು ಡಿಡಿಒಎಸ್ (ಡಿಸ್ಟ್ರಿಬ್ಯೂಟೆಡ್ ಡಿನೈಯಲ್ ಆಫ್ ಸರ್ವಿಸ್) ಸೈಬರ್ ದಾಳಿ ನಡೆಸಿರುವ ಆರೋಪದಡಿ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಆನ್‌ಲೈನ್‌ನಲ್ಲಿ ಆಸ್ತಿ ನೋಂದಣಿ ಸಂಬಂಧ ಅಭಿವೃದ್ಧಿಪಡಿಸಿರುವ ಕಾವೇರಿ 2.0 ತಂತ್ರಾಂಶದ ಮೇಲೆ ದುಷ್ಕರ್ಮಿಗಳು ಡಿಡಿಒಎಸ್ (ಡಿಸ್ಟ್ರಿಬ್ಯೂಟೆಡ್ ಡಿನೈಯಲ್ ಆಫ್ ಸರ್ವಿಸ್) ಸೈಬರ್ ದಾಳಿ ನಡೆಸಿರುವ ಆರೋಪದಡಿ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಎ.ದಯಾನಂದ್ ಅವರು ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?:
ಉಪನೋಂದಣಿ ಕಚೇರಿಗಳಲ್ಲಿ ಈ ಕಾವೇರಿ 2.0 ತಂತ್ರಾಂಶದ ಮುಖಾಂತರ ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿ, ಋಣಭಾರ ಪ್ರಮಾಣ ಪತ್ರ (ಇಸಿ), ಸರ್ಟಿಫಿಕೇಟ್ ಕಾಪಿ (ಸಿಸಿ) ಮತ್ತು ಇತರ ಸೇವೆಗಳನ್ನು ನೀಡಲಾಗುತ್ತಿದೆ. ಈ ತಂತ್ರಾಂಶವನ್ನು ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ ಅಡಿ ಸ್ಮಾರ್ಟ್ ಗವರ್ನೆನ್ಸ್ ಸೆಂಟರ್(ಸಿಎಸ್‌ಜಿ) ಅಭಿವೃದ್ಧಿಪಡಿಸಿದ್ದು, ನಿರ್ವಹಣೆ ಸಹ ಮಾಡುತ್ತಿದೆ.
ಕಳೆದ ಡಿಸೆಂಬರ್‌ನಲ್ಲಿ ಏಕಾಏಕಿ ಈ ತಂತ್ರಾಂಶದಲ್ಲಿ ದೋಷ ಉಂಟಾಯಿತು. ಇದನ್ನು ಸಿಎಂಜಿ ತಜ್ಞರ ತಂಡವು ಪರಿಶೀಲಿಸಿದಾಗ ಡಿಡಿಒಎಸ್ ಸೈಬರ್ ದಾಳಿ ನಡೆದಿರುವುದು ಗೊತ್ತಾಗಿತ್ತು. ಕೆಲ ಸೈಬರ್ ದಾಳಿಕೋರರು ಸ್ವಯಂಚಾಲಿತ ಟೂಲ್‌ಗಳನ್ನು ಬಳಸಿ ನಕಲಿ ಖಾತೆಗಳನ್ನು ತೆರೆದು ತಂತ್ರಾಂಶಕ್ಕೆ ಪ್ರವೇಶ ಪಡೆದಿದ್ದರು. 14 ಐಪಿ ವಿಳಾಸದಿಂದ 62 ಇ-ಮೇಲ್ ಖಾತೆ ತೆರೆದು ಕಾವೇರಿ ತಂತ್ರಾಂಶ 2.0 ಪ್ರವೇಶ ಮಾಡಿ, ಇಸಿ, ಸಿಸಿ ಇನ್ನಿತರ ಸೇವೆಗೆ ಅರ್ಜಿ ಸಲ್ಲಿಸುತ್ತಿದ್ದರು. ಇದರಿಂದ ಸರ್ವರ್‌ನಲ್ಲಿ ಡೌನ್ ಆಗಿ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯವಾಗಿತ್ತು.
ಕಳೆದ ಜನವರಿಯಲ್ಲೂ ತಂತ್ರಾಂಶದ ಮೇಲೆ ಸೈಬರ್ ದಾಳಿ ನಡೆದಿದ್ದು, ಸಿಟಿಜನ್ ಲಾಗಿನ್‌ನಲ್ಲಿ ಪ್ರವೇಶ ಮಾಡಿ ಇಸಿ ಸರ್ಚ್ ಮಾಡಿದ್ದರು. ಅಂದರೆ, ಕೇವಲ 2 ತಾಸಿನಲ್ಲಿ 6.2 ಲಕ್ಷ ಇಸಿಗೆ ಮನವಿ ಬಂದಿದ್ದವು. ಜತೆಗೆ ದುರುದ್ದೇಶ ಪೂರ್ವಕವಾಗಿ ಹುಡುಕಾಡುವುದು ಮತ್ತು ಮನವಿ ಸಲ್ಲಿಸಿದ್ದರು. ಹೀಗಾಗಿ ಸರ್ವರ್ ಡೌನ್ ಆಗಿ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಈ ಸೈಬರ್ ದಾಳಿ ಮುಖಾಂತರ ಸರ್ಕಾರದ ಸೇವೆಗೆ ಪದೇ ಪದೇ ಧಕ್ಕೆ ಉಂಟು ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.