ರಾಜಕಾರಣದಲ್ಲಿ ಕಾಡುವ ಕೊರತೆ ಎಸ್‌.ಎಂ.ಕೃಷ್ಣ

ಸಾರಾಂಶ

ನನ್ನಂತಹ ಅವೆಷ್ಟೋ ರಾಜಕಾರಣಿಗಳಿಗೆ ಅವರಿಲ್ಲದ ಬೇಸರ । ಹಲವು ಆಯಾಮಗಳಲ್ಲಿ ನನ್ನನ್ನು ಕಂಡಿದ್ದ ಹಿರಿಯ ಜೀವ

-ಡಾ। ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರು

ಡಾ। ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರು

ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಆಡಳಿತದ ದಿನಗಳು ಭವ್ಯವಾಗಿದ್ದವು. ಭೀಕರ ಬರಗಾಲ ಮತ್ತು ಕಾವೇರಿ ನದಿ ನೀರಿನ ಹಂಚಿಕೆ ವಿವಾದದಿಂದ ಸರ್ಕಾರ ನಡೆಸುವುದು ಸವಾಲಾಗಿತ್ತು. ಅವರಿಗೆ ಇಷ್ಟೆಲ್ಲ ಸಮಸ್ಯೆ ಪರಿಹರಿಸುವುದು ಸಾಧ್ಯವಿಲ್ಲವೆಂದೇ ಅನೇಕರು ಟೀಕೆ ಮಾಡಿದ್ದರು. ಆದರೆ ಛಲ ಬಿಡದೆ ಅವರು ಎಲ್ಲ ಸಮಸ್ಯೆಗಳನ್ನು ನಿಭಾಯಿಸಿದ್ದರು.

ನಟಸಾರ್ವಭೌಮ ಡಾ। ರಾಜ್‌ಕುಮಾರ್‌ ಅಪಹರಣ ಕೃಷ್ಣ ಅವರ ನಿದ್ದೆಗೆಡಿಸಿದ್ದು ನಿಜ. ಆಗಲೂ ಸ್ಥಿಮಿತ ಕಳೆದುಕೊಳ್ಳದೆ ಜಾಣ ರಾಜಕಾರಣಿಯಾಗಿ ಕೆಲಸ ಮಾಡಿದ್ದರು. ಆ ಮೂಲಕ ‘ಟ್ರಬಲ್‌ ಶೂಟರ್‌ʼ ಎಂಬ ಖ್ಯಾತಿ ಪಡೆದರು.

ಕೆಲವು ತಿಂಗಳಿಂದ ರಾಜಕಾರಣದಲ್ಲಿ ದೊಡ್ಡ ಕೊರತೆಯೊಂದು ಕಾಡುತ್ತಿದೆ ಎಂದು ನನಗೆ ಅನ್ನಿಸಿತು. ಒಂದು ರೀತಿಯ ಶೂನ್ಯ. ಆದರೆ ಏನೆಂದು ಕೂಡಲೇ ಹೊಳೆಯಲಿಲ್ಲ. ನಂತರ ತಲೆಗೆ ಹೊಳೆದಿದ್ದು ‘ಎಸ್‌.ಎಂ.ಕೃಷ್ಣʼ ಎಂಬ ಹೆಸರು. ಅವರು ವಿಧಿವಶರಾದಾಗಿನಿಂದಲೂ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಏನೋ ಒಂದು ಖಾಲಿತನ ಇದೆ ಎಂದು ಅನ್ನಿಸುತ್ತಿತ್ತು. ಹಿರಿಯ ರಾಜಕಾರಣಿಗಳು ಮೃತರಾದಾಗ ನನ್ನಂತಹ ಯುವ ರಾಜಕಾರಣಿಗಳಿಗೆ ಹೀಗೆ ಅನ್ನಿಸುವುದು ಸಹಜ. ಆದರೆ ಎಸ್‌.ಎಂ.ಕೃಷ್ಣ ಅವರ ಕೊರತೆ ತೀವ್ರವಾಗಿ ಕಾಡುತ್ತಿದೆ.

ಸಂಸದರಾಗಿ, ಶಾಸಕರಾಗಿ, ವಿದೇಶಾಂಗ ಸಚಿವರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದ ಅವರು ಅಪಾರ ಅನುಭವದ ಖಜಾನೆ. ತಾವು ಬೆಳೆಯುವುದರ ಜೊತೆಗೆ ಇತರರೂ ಬೆಳೆಯಲಿ ಎಂಬ ಕಾರಣಕ್ಕೆ ಯುವ ರಾಜಕಾರಣಿಗಳನ್ನು ಸದಾ ಪ್ರೋತ್ಸಾಹಿಸುತ್ತಿದ್ದರು. ನಾನು ಜನಸೇವಾ ಕ್ಷೇತ್ರದಲ್ಲಿ ಈ ಮಟ್ಟಕ್ಕೆ ಬರಲು ಅವರ ಆಶೀರ್ವಾದ, ಹಾರೈಕೆ, ಮಾರ್ಗದರ್ಶನ ಬಹಳ ಕೆಲಸ ಮಾಡಿದೆ.

ವರ್ಷಕ್ಕೆ ಎರಡು ದಿನ, ಅಂದರೆ ಕೃಷ್ಣ ಅವರ ಹುಟ್ಟುಹಬ್ಬದ ದಿನ ಹಾಗೂ ನನ್ನ ಹುಟ್ಟುಹಬ್ಬದ ದಿನ ತಪ್ಪದೇ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದೆ. ಇದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬದಂದು ಅವರು ನಮ್ಮ ಜೊತೆಗಿಲ್ಲ. ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನಂತೆಯೇ ಕರ್ನಾಟಕದಾದ್ಯಂತ ಅನೇಕ ಕನ್ನಡಿಗರು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಎಸ್‌.ಎಂ.ಕೃಷ್ಣ ಅವರನ್ನು ಅಜಾತಶತ್ರು, ಡಿಗ್ನಿಫೈಡ್‌ ರಾಜಕಾರಣಿ ಎಂದೇ ಕರೆಯಲಾಗುತ್ತಿತ್ತು. ಅವರ ಬದುಕಿನ ಶೈಲಿ, ಮಾತು ಬಹಳ ಸ್ಟಾಂಡರ್ಡ್‌ ಎಂದು ತೋರಿದರೂ, ಅವರಷ್ಟು ಜನಮಾನಸಕ್ಕೆ ಹತ್ತಿರವಾದವರು ಬೇರೊಬ್ಬರಿಲ್ಲ.

ಗುರು-ಶಿಷ್ಯ ಸಂಬಂಧ

ಎಸ್‌.ಎಂ.ಕೃಷ್ಣ ಅನೇಕ ರಾಜಕಾರಣಿಗಳಿಗೆ ಗುರುವಾಗಿದ್ದರು. ಗುರು ಎಂದರೆ ಕೈ ಹಿಡಿದು ಮುನ್ನಡೆಸುವವರು. ಆದರೆ ರಾಜಕಾರಣದಲ್ಲಿ ಇದು ಸುಲಭವಲ್ಲ. ಇಲ್ಲಿ ಸ್ಪರ್ಧೆ, ಅಸೂಯೆ, ದ್ವೇಷವೇ ಹೆಚ್ಚಿರುತ್ತದೆ ಎಂಬುದು ಜನರ ಸಾಮಾನ್ಯ ಅಭಿಮತ. ಸ್ಪರ್ಧೆ ಇರುವುದು ನಿಜವಾದರೂ ಅದು ಆರೋಗ್ಯಕರವಾಗಿರಬೇಕು ಎಂಬುದು ಕೃಷ್ಣ ಅವರ ಅಭಿಪ್ರಾಯವಾಗಿತ್ತು. ತಮ್ಮ ಕಿರಿಯರನ್ನು ಹಾಗೂ ತಮ್ಮ ಸಮಕಾಲೀನರಿಗೆ ಬೆಳೆಯಲು ಸಹಾಯ ಹಸ್ತ ಚಾಚಲು ಅವರಿಗೆ ಯಾವುದೇ ಸ್ಪರ್ಧೆ ಅಡ್ಡಿ ಮಾಡಿರಲಿಲ್ಲ. ತಮ್ಮ ಜೊತೆಗೆ ಎಲ್ಲರನ್ನೂ ಒಂದಾಗಿ ಕರೆದೊಯ್ಯುವ ಮನೋಭಾವದಿಂದಲೇ ಬೇಗ ಎಲ್ಲರಿಗೂ ಆಪ್ತರಾಗಿಬಿಟ್ಟಿದ್ದರು. ಪ್ರತಿಪಕ್ಷಗಳ ನಾಯಕರು ಕೂಡ ಅವರನ್ನು ಮೆಚ್ಚಿಕೊಳ್ಳದೇ ಇರುತ್ತಿರಲಿಲ್ಲ.

ನನ್ನ ಹಾಗೂ ಕೃಷ್ಣ ಅವರ ಸಂಬಂಧ ಗುರು-ಶಿಷ್ಯ ಬಾಂಧವ್ಯಕ್ಕೂ ಒಂದು ಹಂತ ಮೇಲಕ್ಕೆ ಏರಿತ್ತು. ಗುರುವಾಗಿ, ಆತ್ಮೀಯ ಸ್ನೇಹಿತನಾಗಿ, ಮಾರ್ಗದರ್ಶಕರಾಗಿ, ಕಿವಿ ಹಿಂಡುವ ತಂದೆಯಾಗಿ, ದಾರಿ ತೋರುವ ಅಣ್ಣನಾಗಿ ಹೀಗೆ ಹಲವು ಆಯಾಮಗಳಲ್ಲಿ ಅವರು ನನಗೆ ಕಂಡಿದ್ದರು.

ಕೃಷ್ಣ ಅವರ ತಂದೆ ಎಸ್.ಸಿ.ಮಲ್ಲಯ್ಯ ಆಗಿನ ಕಾಲದ ಬಹಳ ಖ್ಯಾತ ಸಮಾಜ ಸುಧಾರಕರು. 1934ರಲ್ಲಿ ಮಹಾತ್ಮ ಗಾಂಧೀಜಿ ಮೈಸೂರು ರಾಜ್ಯಕ್ಕೆ ಬಂದಾಗ, ಮಲ್ಲಯ್ಯನವರ ಮನೆಗೆ ಭೇಟಿ ನೀಡಿದ್ದರು. ‘ಹರಿಜನ ಫಂಡ್ʼ ನಿಧಿಗೆ ದಾನ ಮಾಡಿ ಎಂದು ಗಾಂಧೀಜಿ ಕೇಳುತ್ತಿದ್ದರು. ಮಲ್ಲಯ್ಯನವರು ತಮ್ಮ ಪುತ್ರ, ಬಾಲಕ ಕೃಷ್ಣ ಕೈಯಿಂದ ಎರಡು ರೂಪಾಯಿ ಕಾಣಿಕೆ ನೀಡಲು ಮುಂದೆ ಬಂದಾಗ, ಬಾಲಕನ ಕಿವಿ ಓಲೆ ಸಾಕು ಎಂದು ಗಾಂಧೀಜಿ ತಮಾಷೆಯಾಗಿ ಹೇಳಿದರು. ಮಲ್ಲಯ್ಯನವರು ಮಗನ ಕಿವಿಯಿಂದ ಓಲೆ ತೆಗೆದು ಗಾಂಧೀಜಿಯ ಕೈಯಲ್ಲಿ ಇಟ್ಟುಬಿಟ್ಟರು. ಅದನ್ನು ನೋಡಿ ಗಾಂಧೀಜಿ ಅಚ್ಚರಿಗೊಳಗಾಗಿ, ಬಾಲಕ ಕೃಷ್ಣ ಅವರನ್ನು ಪ್ರೀತಿಯಿಂದ ಹರಸಿದ್ದರು.

ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಆಡಳಿತದ ದಿನಗಳು ಭವ್ಯವಾಗಿದ್ದವು. ಭೀಕರ ಬರಗಾಲ ಮತ್ತು ಕಾವೇರಿ ನದಿ ನೀರಿನ ಹಂಚಿಕೆ ವಿವಾದದಿಂದ ಸರ್ಕಾರ ನಡೆಸುವುದು ಸವಾಲಾಗಿತ್ತು. ಅವರಿಗೆ ಇಷ್ಟೆಲ್ಲ ಸಮಸ್ಯೆ ಪರಿಹರಿಸುವುದು ಸಾಧ್ಯವಿಲ್ಲವೆಂದೇ ಅನೇಕರು ಟೀಕೆ ಮಾಡಿದ್ದರು. ಆದರೆ ಛಲ ಬಿಡದೆ ಅವರು ಎಲ್ಲ ಸಮಸ್ಯೆಗಳನ್ನು ನಿಭಾಯಿಸಿದ್ದರು. ನಟಸಾರ್ವಭೌಮ ಡಾ। ರಾಜ್‌ಕುಮಾರ್‌ ಅಪಹರಣ ಕೃಷ್ಣ ಅವರ ನಿದ್ದೆಗೆಡಿಸಿದ್ದು ನಿಜ. ಆಗಲೂ ಸ್ಥಿಮಿತ ಕಳೆದುಕೊಳ್ಳದೆ ಜಾಣ ರಾಜಕಾರಣಿಯಾಗಿ ಕೆಲಸ ಮಾಡಿದ್ದರು. ಆ ಮೂಲಕ ‘ಟ್ರಬಲ್‌ ಶೂಟರ್‌ʼ ಎಂಬ ಖ್ಯಾತಿ ಪಡೆದರು.

ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿಗೆ ಹೈಟೆಕ್‌ ಸ್ಪರ್ಶ ನೀಡುವಲ್ಲಿನ ಅವರ ಕೊಡುಗೆಯನ್ನು ನಾವು ಯಾವಾಗಲೂ ಸ್ಮರಿಸುತ್ತೇವೆ.

ರಾಜಕೀಯಕ್ಕೆ ಪಾದಾರ್ಪಣೆ

ನಾನು ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದರಲ್ಲಿ ಕೃಷ್ಣ ಅವರು ಬಹಳ ಮುತುವರ್ಜಿ ವಹಿಸಿದ್ದರು. ನನ್ನಲ್ಲಿ ಒಬ್ಬ ರಾಜಕಾರಣಿ ಇದ್ದಾನೆ ಎಂಬುದನ್ನು ಅವರು ಗಮನಿಸಿದ್ದರು.

2004 ಹಾಗೂ 2009 ರ ಲೋಕಸಭೆ ಚುನಾವಣೆಗಳಲ್ಲಿ ನನಗೆ ಟಿಕೆಟ್‌ ಕೊಡಿಸುವ ಪ್ರಯತ್ನ ಮಾಡಿದ್ದರೂ ಅದು ಕೈಗೂಡಲಿಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಕೊಡಿಸಿ, ಆಶೀರ್ವದಿಸಿ ಶಾಸಕನಾಗಿ ಮಾಡಿದರು. ಆ ಕ್ಷಣದಿಂದ ರಾಜಕೀಯವೇ ನನ್ನ ಬದುಕಾಯಿತು. ಆ ಪ್ರಮುಖ ಮೆಟ್ಟಿಲು ಹತ್ತಲು ಕೃಷ್ಣ ಅವರು ನನಗಾಗಿ ಪಟ್ಟ ಶ್ರಮವನ್ನು ಸದಾ ಸ್ಮರಿಸುತ್ತಿರುತ್ತೇನೆ.

ಅವರು ವಿದೇಶಾಂಗ ಸಚಿವರಾಗಿದ್ದಾಗ ಶ್ರೀಲಂಕಾದ ರಾಯಾಭಾರಿಯಾಗುವ ಅವಕಾಶ ಮಾಡಿಕೊಟ್ಟಿದ್ದರು. ಒಮ್ಮೆ ಕಾರ್ಯನಿಮಿತ್ತ ದೆಹಲಿಗೆ ಭೇಟಿ ನೀಡಿದ್ದಾಗ ಅವರ ಮಗಳು ಶಾಂಭವಿ ಅಕ್ಕ ಜೊತೆಗಿದ್ದರು. ಅವರ ಮಗಳ ಜೊತೆ ನನ್ನನ್ನೂ ಸ್ವಂತ ಮಗನಂತೆ ದೆಹಲಿಯ ಹೋಟೆಲ್‌ಗೆ ಊಟಕ್ಕೆ ಕರೆದುಕೊಂಡು ಹೋಗಿದ್ದರು. ವಿದೇಶಾಂಗ ಸಚಿವರೆನ್ನುವ ಬಿಗುಮಾನವಿಲ್ಲದೆ ನನ್ನನ್ನು ಮನೆ ಮಗನಂತೆ ನೋಡಿಕೊಂಡರು. ಈಗಲೂ ಅದನ್ನು ನೆನೆಸಿಕೊಂಡರೆ ಕಣ್ಣೀರು ಬರುತ್ತದೆ.

2024ರ ಲೋಕಸಭೆ ಚುನಾವಣೆ ವೇಳೆ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದರು. ಆದರೂ ಪ್ರತಿ ದಿನ ಪ್ರೇಮಮ್ಮ ಅವರ ಬಳಿ, ಸುಧಾಕರ್‌ನ ಚುನಾವಣೆ ಹೇಗೆ ನಡೆಯುತ್ತಿದೆ ಎಂದು ಕೇಳುತ್ತಿದ್ದರಂತೆ. ಫಲಿತಾಂಶದ ದಿನವೂ ಸುಧಾಕರ್‌ನ ಫಲಿತಾಂಶ ಏನಾಯ್ತು ಎಂದು ಕೇಳಿದ್ದರಂತೆ. ನನ್ನ ಬಗ್ಗೆ ಅವರಿಗೆ ಅಷ್ಟು ಕಾಳಜಿ ಇತ್ತು.

ಕೋವಿಡ್‌ ನೆನಪು

ಕೋವಿಡ್‌ ಸಮಯ ನಮಗೆಲ್ಲರಿಗೂ ಕ್ಲಿಷ್ಟಕರವಾಗಿತ್ತು. ಅಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಆರೋಗ್ಯ ಸಚಿವನಾಗಿದ್ದಾಗ ಯಾರೂ ಎಂದೂ ಅನುಭವಿಸದ ತುಮುಲಕ್ಕೆ ಒಳಗಾಗಿದ್ದೆ. ಒಂದು ಕಡೆ ಇಡೀ ಆರೋಗ್ಯ ವ್ಯವಸ್ಥೆಗೆ ಆಘಾತವಾಗಿದ್ದರೆ, ಮತ್ತೊಂದು ಕಡೆ ಅನೇಕರು ಈ ಮಾರಣಾಂತಿಕ ರೋಗದಿಂದ ಸಾಯುತ್ತಿದ್ದರು. ಆದರೂ ವೇಗದ ಮೂಲಸೌಕರ್ಯ ಸುಧಾರಣೆಯಿಂದ ಅನೇಕ ಸಾವುಗಳನ್ನು ತಪ್ಪಿಸಿದ್ದೆವು. ಈ ಸಂದರ್ಭ ಒಮ್ಮೆ ಕೃಷ್ಣ ಅವರನ್ನು ಭೇಟಿ ಮಾಡಿದ್ದೆ. ಜನರ ಆರೋಗ್ಯ ರಕ್ಷಣೆಗಾಗಿ ಇನ್ನಷ್ಟು ಶ್ರಮಿಸುವಂತೆ ಅವರು ನನ್ನನ್ನು ಹುರಿದುಂಬಿಸಿದ್ದರು.

ಎಸ್‌.ಎಂ.ಕೃಷ್ಣ ಅವರು ತೀವ್ರ ಅನಾರೋಗ್ಯಕ್ಕೊಳಗಾದಾಗ, ತಮಿಳುನಾಡಿನ ಶ್ರೀರಂಗಂ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದೆ. ಮತ್ತೆ ಅವರನ್ನು ಭೇಟಿ ಮಾಡಲು ಹೋದಾಗ ಹಾಸಿಗೆಯಲ್ಲೇ ಗುರುತು ಹಿಡಿದರು. ಮರಳುವಾಗ ಕೈ ಎತ್ತಿ ಹಾರೈಸಿದ್ದರು. ಆ ಕೊನೆ ಭೇಟಿ ಯಾವಾಗಲೂ ನೆನಪಾಗುತ್ತಿರುತ್ತದೆ. ಇಂದು ಅವರು ಇಲ್ಲದ ಬೇಸರ ನನ್ನನ್ನು ಕಾಡುತ್ತಿದೆ. ನನ್ನಂತಹ ಅವೆಷ್ಟೋ ರಾಜಕಾರಣಿಗಳಿಗೆ ಹೀಗೆಯೇ ಅನ್ನಿಸುತ್ತಿರಬಹುದು.

Share this article