ನವದೆಹಲಿ : ಬಿಹಾರದಲ್ಲಿ ಈಗ ನಡೆಯುತ್ತಿರುವ ರೀತಿಯಲ್ಲೇ ಮುಂದಿನ ತಿಂಗಳಿಂದ ದೇಶಾದ್ಯಂತ ಮತದಾರ ಪಟ್ಟಿ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಅನ್ನು ಆರಂಭಿಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ಆಯೋಗದ ಎಲ್ಲ ಸಿಬ್ಬಂದಿಯನ್ನು ಸಕ್ರಿಯಗೊಳಿಸಿದೆ. ಈ ಬಗ್ಗೆ ಮಾಸಾಂತ್ಯಕ್ಕೆ ಅಂತಿಮ ನಿರ್ಧಾರವನ್ನು ಆಯೋಗ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಇದು ಜಾರಿಯಾದರೆ ಮತದಾರರು ಚುನಾವಣಾ ಆಯೋಗ ನಿಗದಿಪಡಿಸುವ 14 ಗುರುತು ಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಹಾಗೂ ತಾವು ಅದೇ ಕ್ಷೇತ್ರದ ಮತದಾರರೇ ಅಲ್ಲವೇ ಎಂಬುದನ್ನು ದೃಢಪಡಿಸಬೇಕು. ಇದರಿಂದ 2 ಕ್ಷೇತ್ರದಲ್ಲಿ ಮತದಾರರಾಗಿದ್ದರೆ (ಇದ್ದ ಊರು/ ಹುಟ್ಟೂರು) ಒಂದು ಕ್ಷೇತ್ರದ ಮತದಾರ ಗುರುತು ಚೀಟಿ ರದ್ದಾಗುತ್ತದೆ ಹಾಗೂ ಅಕ್ರಮ ವಲಸಿಗರಾಗಿದ್ದರೆ ಮತದಾರ ಗುರುತು ಚೀಟಿ ಸಂಪೂರ್ಣ ರದ್ದಾಗುತ್ತದೆ.
ಬಿಹಾರ ಮಾದರಿ:
ಬಿಹಾರದಲ್ಲಿ ಮತದಾರರ ವಿವಿಧ ಗುರುತು ಪತ್ರಗಳನ್ನು ಪಡೆದು ಅವರು ನೈಜ ಭಾರತೀಯರೇ ಅಲ್ಲವೇ ಹಾಗೂ ತಾವಿರುವ ಕ್ಷೇತ್ರಗಳ ಹಾಲಿ ನಿವಾಸಿಗಳು ಹೌದೇ ಅಲ್ಲವೇ ಎಂದು ಪತ್ತೆ ಮಾಡಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಇತ್ತೀಚೆಗೆ ಆಯೋಗ ಆರಂಭಿಸಿತ್ತು. ಆದರೆ ಇದು ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ವಿಪಕ್ಷಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು.
ಆದರೆ ಪರಿಷ್ಕರಣೆ ಸಂವಿಧಾನಾತ್ಮಕವಾಗಿದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ನಿರ್ಧರಿಸಿದ್ದ 11 ಗುರುತು ಪತ್ರಗಳ ಜತೆ ಆಧಾರ್ ಸೇರಿ ಇನ್ನೂ 3 ಗುರುತು ಪತ್ರಗಳನ್ನು ಮತದಾರರಿಂದ ಪಡೆಯಲು ಸೂಚಿಸಿತ್ತು ಹಾಗೂ ಬಿಹಾರದಲ್ಲಿ ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿಸಿತ್ತು. ಇದಲ್ಲದೆ, ದೇಶಾದ್ಯಂತ ಈ ಪ್ರಕ್ರಿಯೆ ಏಕೆ ಆರಂಭಿಸಿಲ್ಲ? ಬಿಹಾರದಲ್ಲಿ ಮಾತ್ರ ಏಕೆ ಎಂದು ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ದೇಶಾದ್ಯಂತ ಪ್ರಕ್ರಿಯೆ ಆರಂಭಿಸಲು ಆಯೋಗ ಸಜ್ಜಾಗಿದೆ.
ಜು.28ರ ನಂತರ ನಿರ್ಧಾರ:
ಜುಲೈ 28ರಂದು ಬಿಹಾರ ಮತದಾರ ಪಟ್ಟಿ ಪರಿಷ್ಕರಣೆ ಪ್ರಕರಣವು ಮತ್ತೆ ಸುಪ್ರೀಂ ಕೋರ್ಟಲ್ಲಿ ವಿಚಾರಣೆಗೆ ಬರಲಿದೆ. ಇದಾದ ನಂತರ ರಾಷ್ಟ್ರವ್ಯಾಪಿ ಪರಿಷ್ಕರಣೆ ಬಗ್ಗೆ ಚುನಾವಣಾ ಆಯೋಗ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೆಲ ರಾಜ್ಯದಲ್ಲಿ ಪ್ರಕ್ರಿಯೆ ಶುರು:
ಇದರ ನಡುವೆ, ಕೆಲವು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು (ಸಿಇಒ) ತಮ್ಮ ರಾಜ್ಯಗಳಲ್ಲಿ ನಡೆದ ಕೊನೆಯ ಪರಿಷ್ಕರಣೆ ನಂತರ ಅಂತಿಮಗೊಂಡಿದ್ದ ಮತದಾರರ ಪಟ್ಟಿಯನ್ನು ಪ್ರಕಟಿಸಲು ಪ್ರಾರಂಭಿಸಿದ್ದಾರೆ.
ದೆಹಲಿ ಸಿಇಒ ವೆಬ್‌ಸೈಟ್‌ನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕೊನೆಯ ಬಾರಿಗೆ ಪರಿಷ್ಕರಣೆ ನಡೆದ 2008ರ ಮತದಾರರ ಪಟ್ಟಿ ಹಾಕಲಾಗಿದೆ. ಉತ್ತರಾಖಂಡದಲ್ಲಿ, ಕೊನೆಯ ಪರಿಷ್ಕರಣೆ 2006ರಲ್ಲಿ ನಡೆದಿತ್ತು ಮತ್ತು ಆ ವರ್ಷದ ಮತದಾರರ ಪಟ್ಟಿಯನ್ನು ಈಗ ರಾಜ್ಯ ಸಿಇಒ ವೆಬ್‌ಸೈಟ್‌ಗೆ ಹಾಕಲಾಗಿದೆ.
ಬಿಹಾರದಲ್ಲಿ 2003ರ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಮಾನದಂಡವಾಗಿ ಇರಿಸಿಕೊಂಡು ಈಗ ತೀವ್ರ ಪರಿಷ್ಕರಣೆಗೆ ಒಳಪಡಿಸುತ್ತಿದೆ ಹೆಚ್ಚಿನ ರಾಜ್ಯಗಳು 2002 ಮತ್ತು 2004 ರ ನಡುವೆ ಮತದಾರರ ಪಟ್ಟಿಗಳ ಪರಿಷ್ಕರಣೆ ನಡೆಸಿವೆ.
ವಿದೇಶಿ ಅಕ್ರಮ ವಲಸಿಗರನ್ನು ಅವರ ಜನ್ಮಸ್ಥಳವನ್ನು ಪರಿಶೀಲಿಸುವ ಮೂಲಕ ಮತದಾರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ದೇಶಾದ್ಯಂತ ಮತದಾರ ಪಟ್ಟಿ ಪರಿಷ್ಕರಣೆ ನಡೆಸುವುದಾಗಿ ಆಯೋಗ ಹೇಳಿತ್ತು. ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಕ್ರಮ ವಿದೇಶಿ ವಲಸಿಗರ ಮೇಲೆ ಹದ್ದಿನ ಕಣ್ಣು ಇರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಕ್ರಮ ಮಹತ್ವದ್ದಾಗಿದೆ.
ಈ ವರ್ಷ ಬಿಹಾರದಲ್ಲಿ ಚುನಾವಣೆ ನಡೆಯಲಿದ್ದು, ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳಲ್ಲಿ 2026 ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ಪರಿಷ್ಕರಣೆ ಏಕೆ?
ಒಬ್ಬನೇ ಮತದಾರನ ಹೆಸರು ಎರಡು ಕಡೆ ನೋಂದಣಿಯಾಗಿದ್ದರೆ ಅದನ್ನು ರದ್ದುಪಡಿಸುವ ಗುರಿ
ಮತದಾರರ ಪಟ್ಟಿಗೆ ಬಾಂಗ್ಲನ್ನರು ಸೇರಿ ಅಕ್ರಮ ವಲಸಿಗರು ಸೇರಿದ್ದರೆ ಅದನ್ನು ತೆಗೆವ ಉದ್ದೇಶ
ಮತದಾರ ಭಾರತೀಯನೇ? ಮತ ಚಲಾಯಿಸುವ ಕ್ಷೇತ್ರದಲ್ಲಿ ವಾಸವಿರುವ ಕುರಿತು ಮಾಹಿತಿ
ಶಾಶ್ವತ ನಿವಾಸ ಪ್ರಮಾಣಪತ್ರ ಅಥವಾ ಹಾಲಿ ನಿವಾಸಿ ಪ್ರಮಾಣಪತ್ರ, ಪಿಂಚಣಿ ಪಾವತಿ ಪ್ರಮಾಣಪತ್ರ, ಜುಲೈ 1, 1987ಕ್ಕಿಂತ ಮೊದಲು ನೀಡಲಾದ ಯಾವುದೇ ಪ್ರಮಾಣಪತ್ರ/ಅಧಿಕೃತ ದಾಖಲೆ, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಶೈಕ್ಷಣಿ ಪ್ರಮಾಣಪತ್ರ, ಮೂಲ ವಿಳಾಸ ಪುರಾವೆ, ಜಾತಿ ಪ್ರಮಾಣಪತ್ರ, ಅರಣ್ಯ ಹಕ್ಕುಗಳ ಪ್ರಮಾಣಪತ್ರ, ಕುಟುಂಬ ನೋಂದಣಿ ಪ್ರಮಾಣಪತ್ರ, ಸರ್ಕಾರದಿಂದ ಪಡೆದ ಭೂಮಿ ಅಥವಾ ಮನೆ ಪ್ರಮಾಣಪತ್ರ, ಪಾನ್ ಕಾರ್ಡ್, ಪಡಿತರ ಚೀಟಿ, ವೋಟರ್ ಐಡಿ