ವಿದ್ಯುತ್‌ ಬೇಡಿಕೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳ : 2 ತಿಂಗಳಲ್ಲಿ 18000 ಮೆ.ವ್ಯಾಟ್‌ ದಾಟಿದ ಬೇಡಿಕೆ

ಸಾರಾಂಶ

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಕಳೆದ ಎರಡು ತಿಂಗಳಲ್ಲಿ ಗರಿಷ್ಠ ಬೇಡಿಕೆ 18 ಸಾವಿರ ಮೆ.ವ್ಯಾಟ್ ದಾಟಿದೆ. ಏಪ್ರಿಲ್‌ ತಿಂಗಳ ವೇಳೆಗೆ 18,500 ರಿಂದ 19,000 ಮೆ.ವ್ಯಾಟ್‌ವರೆಗೂ ಏರಿಕೆಯಾಗುವ ಸಾಧ್ಯತೆ 

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಕಳೆದ ಎರಡು ತಿಂಗಳಲ್ಲಿ ಗರಿಷ್ಠ ಬೇಡಿಕೆ 18 ಸಾವಿರ ಮೆ.ವ್ಯಾಟ್ ದಾಟಿದೆ. ಏಪ್ರಿಲ್‌ ತಿಂಗಳ ವೇಳೆಗೆ 18,500 ರಿಂದ 19,000 ಮೆ.ವ್ಯಾಟ್‌ವರೆಗೂ ಏರಿಕೆಯಾಗುವ ಸಾಧ್ಯತೆಯಿದ್ದು ಬೇಡಿಕೆಗೆ ತಕ್ಕಂತೆ ಪೂರೈಕೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್‌ ಗುಪ್ತ ಹೇಳಿದ್ದಾರೆ.

ಕಳೆದ ವರ್ಷಕ್ಕಿಂತ ವಿದ್ಯುತ್‌ ಬೇಡಿಕೆ ಪ್ರಸ್ತುತ ಏಪ್ರಿಲ್‌ನಲ್ಲಿ 8.1ರಷ್ಟು ಹೆಚ್ಚಳವಾಗಲಿದೆ. ಕನಿಷ್ಠ 2 ಸಾವಿರ ಮೆ.ವ್ಯಾಟ್‌ನಷ್ಟು ಹೆಚ್ಚು ಬೇಡಿಕೆ ಅಂದಾಜಿಸಿಯೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೂ ವಿದ್ಯುತ್‌ ಅನ್ನು ಮಿತವ್ಯಯದಿಂದ ಬಳಕೆ ಮಾಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಸೋಮವಾರ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ ಹಾಗೂ ಬೆಸ್ಕಾ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌.ಶಿವಶಂಕರ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಗೌರವ್‌ ಗುಪ್ತ ಮಾತನಾಡಿದರು.

ಫೆಬ್ರವರಿಯಲ್ಲಿ ವಿದ್ಯುತ್ ಬೇಡಿಕೆ ಗರಿಷ್ಠ ಬೇಡಿಕೆ ಅವಧಿಯಲ್ಲಿ 18,350 ಮೆಗಾ ವ್ಯಾಟ್ ತಲುಪಿದ್ದರೆ, ಮಾರ್ಚ್ ತಿಂಗಳಲ್ಲಿ 18,395 ಮೆಗಾ ವ್ಯಾಟ್‌ಗೆ ಏರಿಕೆಯಾಗಿದೆ. ಮಾ.7ರಂದು ಗರಿಷ್ಠ ವಿದ್ಯುತ್ ಬೇಡಿಕೆ 18,395 ಮೆಗಾ ವ್ಯಾಟ್ ತಲುಪಿತ್ತು. ಹೆಚ್ಚಾಗುತ್ತಿರುವ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಜಲ ವಿದ್ಯುತ್‌ ಮತ್ತು ಉಷ್ಣ ವಿದ್ಯುತ್‌ ಅನ್ನು ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಮಾಡಿದ್ದೇವೆ. ವಿದ್ಯುತ್‌ ಸ್ಟೋರೇಜ್‌ ಸಾಮರ್ಥ್ಯ ಹೆಚ್ಚಳ, ಬೇರೆ ರಾಜ್ಯಗಳಿಂದ ಬ್ಯಾಂಕಿಂಗ್‌ ಹಾಗೂ ವಿದ್ಯುತ್‌ ಖರೀದಿ ಸೇರಿ ಎಲ್ಲಾ ಕ್ರಮಗಳ ಮೂಲಕ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಕೋವಿಡ್‌ ಬಳಿಕ ವಿದ್ಯುತ್‌ ಬೇಡಿಕೆ ಹೆಚ್ಚಳ:

ಕೋವಿಡ್ ಬಳಿಕ ವಿದ್ಯುತ್ ಬೇಡಿಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಗರಿಷ್ಠ ವಿದ್ಯುತ್ ಬೇಡಿಕೆ 2020-21ನೇ ಸಾಲಿನಲ್ಲಿ 14,367 ಮೆಗಾವ್ಯಾಟ್ ಇದ್ದರೆ, 2021-22ರಲ್ಲಿ 14,818 ಮೆ.ವ್ಯಾ, 2022-23ರಲ್ಲಿ 15,828 ಮೆ.ವ್ಯಾ. ಇದ್ದರೆ, 2023-24ರಲ್ಲಿ 17,220 ಮೆ.ವ್ಯಾ. ಇತ್ತು. ಈ ಬಾರಿ 18,385 ಮೆ.ವ್ಯಾ.ಗೆ ಏರಿಕೆಯಾಗಿದೆ. ಅದೇ ರೀತಿ ಪ್ರಸ್ತುತ ಗರಿಷ್ಠ ವಿದ್ಯುತ್ ಬಳಕೆ 357 ಮಿಲಿಯನ್ ಯುನಿಟ್ ಇದೆ ಎಂದು ಮಾಹಿತಿ ನೀಡಿದರು.

ಗರಿಷ್ಠ ಬೇಡಿಕೆ ಅವಧಿಯಲ್ಲಿ 2024ರ ಏಪ್ರಿಲ್ ತಿಂಗಳಲ್ಲಿ 16,985 ಮೆ.ವ್ಯಾ. ಬೇಡಿಕೆ ಬಂದಿದ್ದು, ಈ ವರ್ಷ 18,294 ಮೆ.ವ್ಯಾ. ತಲುಪುವ ಅಂದಾಜಿದೆ. ಅಂದರೆ ವಿದ್ಯುತ್ ಬೇಡಿಕೆಯಲ್ಲಿ ಶೇ.8.1ರಷ್ಟು ಹೆಚ್ಚಳವಾಗಲಿದೆ. ಅದೇ ರೀತಿ 2024ರ ಮೇ ತಿಂಗಳಲ್ಲಿ 16,826 ಮೆ.ವ್ಯಾ. ಬೇಡಿಕೆ ಬಂದಿದ್ದು, ಈ ಬಾರಿ 17,122 ಮೆ.ವ್ಯಾ.ಗೆ ಏರಿಕೆಯಾಗುವ (ಶೇ.1.8ರಷ್ಟು ಹೆಚ್ಚಳ) ಅಂದಾಜು ಮಾಡಲಾಗಿದೆ. ಅಲ್ಲದೆ, ವಿದ್ಯುತ್ ಬಳಕೆ ಪ್ರಮಾಣ ಏಪ್ರಿಲ್ ತಿಂಗಳಲ್ಲಿ 352 ಮಿಲಿಯನ್ ಯುನಿಟ್ ಮತ್ತು ಮೇ ತಿಂಗಳಲ್ಲಿ 331 ಮಿಲಿಯನ್ ಯುನಿಟ್ ತಲುಪುವ ನಿರೀಕ್ಷೆಯಿದೆ ಎಂದು ಗೌರವ ಗುಪ್ತ ವಿವರಿಸಿದರು.

ಹೊರಗಿನಿಂದ 1000 ಮೆ.ವ್ಯಾ.ವಿದ್ಯುತ್‌: ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್‌ ಪಾಂಡೆ ಮಾತನಾಡಿ, ರಾಜ್ಯದಲ್ಲಿ ಏರಿಕೆಯಾಗಿರುವ ವಿದ್ಯುತ್ ಬೇಡಿಕೆ ಪೂರೈಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. 2024ರ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಬೇಡಿಕೆಗೆ ಅನುಗುಣವಾಗಿ ಉತ್ತರ ಪ್ರದೇಶದಿಂದ 100 ರಿಂದ 1,400 (ಗರಿಷ್ಠ ಬೇಡಿಕೆ ಅವಧಿಯಲ್ಲಿ) ಮೆಗಾವ್ಯಾಟ್ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆಯಲಾಗುತ್ತಿದೆ. ಅದೇ ರೀತಿ ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ ಪಂಜಾಬ್‌ನಿಂದ 200 ರಿಂದ 531 ಮೆಗಾ ವ್ಯಾಟ್ ವಿದ್ಯುತ್‌ ಅನ್ನು ವಿನಿಮಯ ಆಧಾರದ ಮೇಲೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಜತೆಗೆ ಮಾ.1 ರಿಂದ 15ರವರೆಗೆ ಕೂಡ್ಲಗಿಯಲ್ಲಿರುವ ಎನ್‌ಟಿಪಿಸಿಯಿಂದ 310 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಪಡೆಯಲಾಗುತ್ತಿತ್ತು. ಮಾ.15ರಿಂದ ಇನ್ನೂ ಹೆಚ್ಚುವರಿಯಾಗಿ 100 ಮೆಗಾ ವ್ಯಾಟ್‌ (ಒಟ್ಟು 410 ಮೆ.ವ್ಯಾ.) ವಿದ್ಯುತ್ ಪಡೆಯಲಾಗಿದೆ. ಜತೆಗೆ ಮಾರ್ಚ್ ತಿಂಗಳಿನಿಂದ ಮೇ ಅಂತ್ಯದವರೆಗೆ ಇಂಧನ ಸುರಕ್ಷತೆ ನೀತಿಯಡಿ ಇತರೆ ರಾಜ್ಯಗಳಿಂದ ಮಾಸಿಕ 1000 ಮೆಗಾ ವ್ಯಾಟ್‌ ವಿದ್ಯುತ್ ಪಡೆಯಲು ಪಿಸಿಕೆಎಲ್ ಒಪ್ಪಂದ ಮಾಡಿಕೊಂಡಿದೆ ಎಂದು ವಿವರಣೆ ನೀಡಿದರು.

ರೈತರಿಗೆ 7 ಗಂಟೆ ವಿದ್ಯುತ್‌: ರೈತರಿಗೆ ದಿನದ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗಿದೆ. ಅನೇಕ ಕಡೆ ರೈತರ ಕೃಷಿಪಂಪ್ ಸೆಟ್ ಗಳಿಗೆ ಸೋಲಾರ್ ವಿದ್ಯುತ್ ಒದಗಿಸಲಾಗುತ್ತಿದೆ. ಕೆಲವೆಡೆ 7 ಗಂಟೆ ತ್ರಿ ಫೇಸ್ ವಿದ್ಯುತ್ ಪೂರೈಸಲು ಸಮಸ್ಯೆಯಾಗದಂತೆ ಬೆಳಗ್ಗೆ ಮತ್ತು ಸಂಜೆ ವೇಳೆ ವಿದ್ಯುತ್ ಪೂರೈಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ (ತೋಟದ ಮನೆಗಳು ಸೇರಿ) ನೋಡಿಕೊಳ್ಳಲು ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯವರೆಗೆ ಸಿಂಗಲ್ ಫೇಸ್ ವಿದ್ಯುತ್ ಒದಗಿಸಲಾಗುತ್ತಿದೆ ಪಂಕಜ್‌ಕುಮಾರ್‌ ಪಾಂಡೆ ಹೇಳಿದರು.

Share this article