ಮುಂಗಾರು ಅಂತ್ಯ: 15% ಹೆಚ್ಚು ಮಳೆ, 99% ಬಿತ್ತನೆ! ವಾಡಿಕೆಯ 85 ಸೆಂ.ಮೀ. ಬದಲು ಈ ಬಾರಿ 97 ಸೆಂ.ಮೀ. ಮಳೆ

ಸಾರಾಂಶ

ಬೆರಳೆಣಿಕೆಯ ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಒಟ್ಟಾರೆ ಈ ಬಾರಿಯ ಮುಂಗಾರಿನಲ್ಲಿ ವಾಡಿಕೆಗಿಂತ ಶೇ.15ರಷ್ಟು ಮಳೆಯಾಗಿರುವ ಪರಿಣಾಮ ಶೇ.99ರಷ್ಟು ಬಿತ್ತನೆಯಾಗಿದೆ.

ಸಿದ್ದು ಚಿಕ್ಕಬಳ್ಳೇಕೆರೆ/ವಿಶ್ವನಾಥ ಮಲೇಬೆನ್ನೂರು

  ಬೆಂಗಳೂರು : ಬೆರಳೆಣಿಕೆಯ ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಒಟ್ಟಾರೆ ಈ ಬಾರಿಯ ಮುಂಗಾರಿನಲ್ಲಿ ವಾಡಿಕೆಗಿಂತ ಶೇ.15ರಷ್ಟು ಮಳೆಯಾಗಿರುವ ಪರಿಣಾಮ ಶೇ.99ರಷ್ಟು ಬಿತ್ತನೆಯಾಗಿದೆ.

ಮುಂಗಾರು ಆರಂಭ ಈ ಸಲ ಅಷ್ಟೊಂದು ಪ್ರಬಲವಾಗಿರಲಿಲ್ಲ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಉಂಟಾಗಿತ್ತು. ಆದರೆ ನಂತರದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾದ ಕಾರಣಕ್ಕೆ ಕೆರೆ, ಜಲಾಶಯಗಳು ಭರ್ತಿಯಾಗಿ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗಲಿಲ್ಲ. ಕೋಲಾರ, ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಕಾರಣ ಬಿತ್ತನೆ ಪ್ರಮಾಣ ಸಹ ಇಳಿಕೆಯಾಗಿದೆ.

ಜೂನ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟಾರೆ ರಾಜ್ಯದಲ್ಲಿ 85.2 ಸೆಂ.ಮೀ. ನಷ್ಟು ಮಳೆಯಾಗಬೇಕು. ಆದರೆ, ಈ ಬಾರಿ 97.2 ಸೆಂ.ಮೀ. ಮಳೆಯಾಗುವ ಮೂಲಕ ಶೇ.15ರಷ್ಟು ಹೆಚ್ಚಿನ ಮಳೆಯಾಗಿದೆ. ಈ ಪೈಕಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.10ರಷ್ಟು ಹೆಚ್ಚಿನ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಶೇ.12, ಮಲೆನಾಡಿನಲ್ಲಿ ಶೇ.13 ಹಾಗೂ ಕರಾವಳಿಯಲ್ಲಿ ಶೇ.21ರಷ್ಟು ಅಧಿಕ ಮಳೆಯಾಗಿದೆ.

ಸೆಪ್ಟೆಂಬರ್‌ನಲ್ಲಿ ಕೈ ಕೊಟ್ಟ ಮಳೆ:

ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಶೇ.19ರಷ್ಟು ಮಳೆ ಕೊರತೆ ಉಂಟಾಗಿದೆ. ವಾಡಿಕೆ ಪ್ರಕಾರ ಸೆಪ್ಟೆಂಬರ್‌ನಲ್ಲಿ 15.4 ಸೆಂ.ಮೀ. ನಷ್ಟು ಮಳೆಯಾಗಬೇಕು. ಆದರೆ, 12.4 ಸೆಂ.ಮೀ ನಷ್ಟು ಮಾತ್ರ ಮಳೆಯಾಗಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶೇ.66ರಷ್ಟು ಮಳೆ ಕೊರತೆ ಉಂಟಾಗಿದೆ. ಉತ್ತರ ಒಳನಾಡಿನಲ್ಲಿ ಶೇ.27 ರಷ್ಟು ಮಳೆ ಕೊರತೆಯಾಗಿದೆ. ಮಲೆನಾಡಿನಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಕರಾವಳಿಯಲ್ಲಿ ವಾಡಿಕೆಗಿಂತ ಶೇ.43ರಷ್ಟು ಹೆಚ್ಚಿನ ಮಳೆಯಾಗಿದೆ.

ಸರಾಸರಿ ಬಿತ್ತನೆ ಹೆಚ್ಚಳ:

ಉತ್ತಮ ಮಳೆಯ ಕಾರಣ ಈ ಬಾರಿ 82.48 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಬಹುದು ಎಂದು ಕೃಷಿ ಇಲಾಖೆ ನಿರೀಕ್ಷಿಸಿತ್ತಾದರೂ, ಸೆ.27 ರವರೆಗೂ 81.33 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಬಿತ್ತನೆಯ ಸರಾಸರಿಯೂ ಹೆಚ್ಚಾಗಿರುವುದು ವಿಶೇಷವಾಗಿದೆ. ಕಳೆದ ಐದು ವರ್ಷದ ವಾಡಿಕೆ ಬಿತ್ತನೆ ವಿಸ್ತೀರ್ಣ 75.99 ಲಕ್ಷ ಹೆಕ್ಟೇರ್‌ ಆಗಿದ್ದು, ಇದಕ್ಕೆ ಹೋಲಿಸಿದರೆ ಶೇ.107ರಷ್ಟು ಈ ಬಾರಿ ಸಾಧನೆಯಾಗಿದೆ.

ಬಿತ್ತನೆಗೆ ಪ್ರಶಸ್ತವಾದ ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚಾಗಿ ಮಳೆ ಸುರಿದಿದ್ದು ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ. ದಾವಣಗೆರೆ (ಶೇ.106), ಬಾಗಲಕೋಟೆ, ಗದಗ, ಕಲಬುರಗಿ (ಶೇ.103), ಬೆಳಗಾವಿ, ಧಾರವಾಡ(ಶೇ.102), ವಿಜಯನಗರ (ಶೇ.101) ಜಿಲ್ಲೆಗಳಲ್ಲಿ ಕೃಷಿ ಇಲಾಖೆಯು ನಿರೀಕ್ಷಿಸಿದ್ದಕ್ಕಿಂತ ಅಧಿಕ ಬಿತ್ತನೆಯಾಗಿದೆ.

ಇನ್ನುಳಿದಂತೆ ಬೆಂಗಳೂರು ನಗರ, ಬೀದರ್‌, ದಕ್ಷಿಣ ಕನ್ನಡ, ಹಾಸನ, ಕೊಪ್ಪಳದಲ್ಲಿ(ಶೇ.100) ಗುರಿ ಸಾಧನೆಯಾಗಿದೆ. ಬೆಂಗಳೂರು ಗ್ರಾಮಾಂತರ, ಹಾವೇರಿ, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಶೇ.99 ರಷ್ಟು ಬಿತ್ತನೆಯಾಗಿದೆ. ಚಿತ್ರದುರ್ಗ(ಶೇ.98), ತುಮಕೂರು, ಉಡುಪಿ, ಉತ್ತರ ಕನ್ನಡ (ಶೇ.96), ಮೈಸೂರು(ಶೇ.95), ರಾಯಚೂರು(ಶೇ.94), ಮಂಡ್ಯ(ಶೇ.94), ಚಿಕ್ಕಬಳ್ಳಾಪುರ(ಶೇ.93), ಬಳ್ಳಾರಿ, ರಾಮನಗರ ಜಿಲ್ಲೆಯಲ್ಲೂ (ಶೇ.92) ಬಿತ್ತನೆ ಪರವಾಗಿಲ್ಲ. ಆದರೆ ಕೊಡಗು(ಶೇ.67), ಚಾಮರಾಜನಗರ(ಶೇ.81), ಚಿಕ್ಕಮಗಳೂರು ಜಿಲ್ಲೆಗಳಲ್ಲಿ (ಶೇ.89) ಬಿತ್ತನೆ ಪ್ರಮಾಣ ಕುಂಠಿತವಾಗಿದೆ.

ದ್ವಿದಳ ಧಾನ್ಯ ಗುರಿ ಮೀರಿ ಸಾಧನೆ:

ಭತ್ತ, ಜೋಳ, ರಾಗಿ, ಮೆಕ್ಕೆಜೋಳ ಸೇರಿದಂತೆ 36.33 ಲಕ್ಷ ಹೆಕ್ಟೇರ್‌ನಲ್ಲಿ ಏಕದಳ ಧಾನ್ಯಗಳನ್ನು ಬಿತ್ತುವ ಗುರಿ ಹೊಂದಲಾಗಿತ್ತು. ಈ ಪೈಕಿ 35.95 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಆದರೆ, ದ್ವಿದಳ ಧಾನ್ಯಗಳಾದ ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ ಧಾನ್ಯವನ್ನು 21.19 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತುವ ಗುರಿ ಪೈಕಿ 22.46 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಶೇ.106 ರಷ್ಟು ಸಾಧನೆಯಾಗಿದೆ.

ಪ್ರಸಕ್ತ ಸಾಲಿನಲ್ಲಿ ಮಘ ಮಳೆಯು ಎಡೆಬಿಡದೆ ಸುರಿದಿದ್ದು ಸಹ ಬಿತ್ತನೆ ಪ್ರಮಾಣ ಅಧಿಕವಾಗಲು ಪ್ರಮುಖ ಕಾರಣವಾಯಿತು ಎಂದು ತಜ್ಞರು ಹೇಳಿದ್ದಾರೆ.

ಎಣ್ಣೆಕಾಳು ಬಿತ್ತನೆ ಇಳಿಕೆ:

ಎಣ್ಣೆ ಕಾಳು ಧಾನ್ಯಗಳ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಶೇಂಗಾ, ಸೂರ್ಯಕಾಂತಿ, ಎಳ್ಳು ಸೇರಿದಂತೆ 9.79 ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆ ಕಾಳು ಬೆಳೆಗಳ ಬಿತ್ತನೆ ಗುರಿಯ ಪೈಕಿ 8.34 ಲಕ್ಷ ಹೆಕ್ಟೇರ್‌ನಲ್ಲಿ (ಶೇ.85) ಬಿತ್ತನೆಯಾಗಿದೆ. 15.18 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು, ಹತ್ತಿ, ತಂಬಾಕಿನಂತಹ ವಾಣಿಜ್ಯ ಬೆಳೆ ಬೆಳೆಯಬೇಕಿತ್ತಾದರೂ 14.58 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.96 ರಷ್ಟು ಗುರಿ ಸಾಧಿಸಲಾಗಿದೆ.

ಸಕಾಲಕ್ಕೆ ಮಳೆ, ಉತ್ತಮ ಬಿತ್ತನೆ

ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬಂದಿದ್ದರಿಂದ ಬಿತ್ತನೆ ಪ್ರಮಾಣ ಉತ್ತಮವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಸಲ ಬಿತ್ತನೆ ಅಧಿಕವಾಗಿದೆ. ಮುಂದಿನ ದಿನಗಳಲ್ಲೂ ಕೃಷಿಗೆ ಪೂರಕ ವಾತಾವರಣ ಉಂಟಾಗಿ ರೈತರ ಬಾಳು ಹಸನಾಗಲಿ.

-ವೈ.ಎಸ್‌.ಪಾಟೀಲ್‌, ಕೃಷಿ ಇಲಾಖೆ ಆಯುಕ್ತ

ಮಳೆ ಕೊರತೆ ಎದುರಿಸಿದ ಜಿಲ್ಲೆಗಳು

ಜಿಲ್ಲೆ ಸುರಿದ ಮಳೆ ವಾಡಿಕೆ ಮಳೆ ಶೇಕಡವಾರು (ಸೆಂ.ಮೀ.)

ಕೋಲಾರ 23.3 39.6 -41

ಕಲಬುರಗಿ 43.8 56.9 -23

ಹಾಸನ 56.1 67.4 -17

ಬೆಂಗಳೂರು ನಗರ 36.8 44.6 -17

ರಾಮನಗರ 37.7 45.2 -17

ಶಿವಮೊಗ್ಗ 139.0 162.1 -14

ಹಾವೇರಿ 46.3 49.0 -6

ಧಾರವಾಡ 49.6 51.5 -4

ಮಂಡ್ಯ 29.6 30.8 -4

ಗದಗ 33.9 35.1 -3

ದಕ್ಷಿಣ ಕನ್ನಡ 327.1 332.4 -2

ವಾಡಿಕೆಗಿಂತ ಹೆಚ್ಚು ಮಳೆಯಾದ ಜಿಲ್ಲೆಗಳು

ಜಿಲ್ಲೆ ಸುರಿದ ಮಳೆ ವಾಡಿಕೆ ಮಳೆ ಶೇಕಡಾ(ಸೆಂ.ಮೀ.)

ಚಿತ್ರದುರ್ಗ 43.5 28.9 +50

ಚಿಕ್ಕಮಗಳೂರು 219.2 149.4 +47

ಉತ್ತರ ಕನ್ನಡ 373.8 274 +36

ವಿಜಯಪುರ 50.8 38.2 +33

ವಿಜಯನಗರ 48.8 37.2 +31

ಬಳ್ಳಾರಿ 44.4 35.9 +24

ದಾವಣಗೆರೆ 47.3 38.2 +24

ಉಡುಪಿ 450 375.1 +20

ಕೊಪ್ಪಳ 43.4 37.5 +15

ಬೆಳಗಾವಿ 65 56.8 +14

ಬಾಗಲಕೋಟೆ 38.4 34.1 +13

ಚಾಮರಾಜನಗರ 38.4 34.5 +11

ಕೊಡಗು 234.1 224.2 +4

ಮೈಸೂರು 38.1 36.5 +4

ತುಮಕೂರು 28.3 27.3 +3

ಚಿಕ್ಕಬಳ್ಳಾಪುರ 42.2 41.1 +3

ಬೆಂಗಳೂರು ಗ್ರಾಮಾಂತರ 43.5 42.7 +2

ಬೀದರ್‌ 65.1 64.0 +2

ಯಾದಗಿರಿ 51.4 51.0 +1

ರಾಯಚೂರು 41.5 41.5 +0

Share this article