ಮಳೆಗೂ ಮೊದಲೇ ಈ ಸಲ ಅಗತ್ಯಕ್ಕಿಂತ ಹೆಚ್ಚು ಬೀಜ ಸ್ಟಾಕ್‌!

Published : May 11, 2024, 07:28 AM IST
Delhi Border Farmers Protest Kisan Andolan

ಸಾರಾಂಶ

ಕೆಲ ದಿನಗಳಿಂದ ಬಿಸಿಲ ಬೇಗೆಗೆ ಬೆಂಡಾಗಿದ್ದ ಭುವಿಗೆ ವರುಣನ ಆಗಮನ ರೈತರಲ್ಲಿ ಒಂದಷ್ಟು ಸಮಾಧಾನ ತಂದಿದ್ದು, ಬಿತ್ತನೆಗೆ ಮುಂದಾಗಿದ್ದಾರೆ. ಆದ್ದರಿಂದ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಲು ಕ್ರಮ ಕೈಗೊಂಡಿರುವುದಾಗಿ ಕೃಷಿ ಇಲಾಖೆ ಹೇಳಿಕೊಂಡಿದೆ.

ಸಿದ್ದು ಚಿಕ್ಕಬಳ್ಳೇಕೆರೆ 

 ಬೆಂಗಳೂರು  :  ಕೆಲ ದಿನಗಳಿಂದ ಬಿಸಿಲ ಬೇಗೆಗೆ ಬೆಂಡಾಗಿದ್ದ ಭುವಿಗೆ ವರುಣನ ಆಗಮನ ರೈತರಲ್ಲಿ ಒಂದಷ್ಟು ಸಮಾಧಾನ ತಂದಿದ್ದು, ಬಿತ್ತನೆಗೆ ಮುಂದಾಗಿದ್ದಾರೆ. ಆದ್ದರಿಂದ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಲು ಕ್ರಮ ಕೈಗೊಂಡಿರುವುದಾಗಿ ಕೃಷಿ ಇಲಾಖೆ ಹೇಳಿಕೊಂಡಿದೆ.

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟಾರೆ 114.49 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಅಂದಾಜಿದ್ದು, ಈ ಪೈಕಿ ಮುಂಗಾರು ಹಂಗಾಮಿನ 82.48 ಲಕ್ಷ ಹೆಕ್ಟೇರ್‌ ಬಿತ್ತನೆಗೆ ಅಗತ್ಯವಾದ 26.80 ಲಕ್ಷ ಮೆಟ್ರಿಕ್‌ ರಸಗೊಬ್ಬರ ಈಗಾಗಲೇ ದಾಸ್ತಾನಿದೆ. 14 ವಿಧದ ಬಿತ್ತನೆ ಬೀಜಗಳ ವಿತರಣೆಗೂ ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ ಎಂಬ ಮುನ್ನೆಚ್ಚರಿಕೆಯಿಂದಾಗಿ ಫೆಬ್ರವರಿಯಲ್ಲೇ ಬಿತ್ತನೆ ಬೀಜ ಖರೀದಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು ಎಂದು ಇಲಾಖೆ ಮೂಲಗಳು ತಿಳಿಸಿವೆ.

2024-25ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟಾರೆ 114.49 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈ ಪೈಕಿ ಮುಂಗಾರು ಹಂಗಾಮಿನಲ್ಲಿ 15.40 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆ ಜೋಳ, 15 ಲಕ್ಷ ಹೆಕ್ಟೇರ್‌ ತೊಗರಿ, 10.60 ಲಕ್ಷ ಹೆಕ್ಟೇರ್‌ ಭತ್ತ, 7.30 ಲಕ್ಷ ಹೆಕ್ಟೇರ್‌ ರಾಗಿ ಸೇರಿದಂತೆ ಒಟ್ಟಾರೆ 82.48 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

 8.90 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜ 

ಭತ್ತ, ಶೇಂಗಾ, ಮೆಕ್ಕೆಜೋಳ, ರಾಗಿ, ತೊಗರಿ, ಉದ್ದು, ಅಲಸಂದೆ ಸೇರಿದಂತೆ 14 ವಿಧದ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದ್ದು, ಒಟ್ಟಾರೆ ಮುಂಗಾರು ಹಂಗಾಮಿಗೆ 5.53 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜದ ಅಗತ್ಯವಿದೆ. ನಮ್ಮಲ್ಲಿ 8.90 ಲಕ್ಷ ಟನ್‌ ಬಿತ್ತನೆ ಬೀಜ ದಾಸ್ತಾನಿದ್ದು, ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

75 ಸಾವಿರ ಕ್ವಿಂಟಲ್‌ ಬೀಜದ ಭತ್ತ ಅವಶ್ಯಕತೆಯಿದ್ದು, ನಮ್ಮಲ್ಲಿ 1.05 ಲಕ್ಷ ಕ್ವಿಂಟಲ್‌ ದಾಸ್ತಾನಿದೆ. 25,500 ಕ್ವಿಂಟಲ್‌ ಬಿತ್ತನೆ ರಾಗಿ ಬೇಕಾಗಲಿದ್ದು, 49,485 ಕ್ವಿಂಟಲ್‌ ದಾಸ್ತಾನಿದೆ. ಒಂದು ಲಕ್ಷ ಕ್ವಿಂಟಲ್‌ ಮೆಕ್ಕೆಜೋಳದ ಅಗತ್ಯವಿದ್ದು 1.68 ಲಕ್ಷ ಕ್ವಿಂಟಲ್‌ ದಾಸ್ತಾನಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

 15 ಲಕ್ಷ ಟನ್‌ ರಸಗೊಬ್ಬರ ದಾಸ್ತಾನು 

39 ಲಕ್ಷ ಕ್ವಿಂಟಲ್‌ ಡಿಎಪಿ, 13 ಲಕ್ಷ ಕ್ವಿಂಟಲ್‌ ಎಂಓಪಿ, 99 ಲಕ್ಷ ಕ್ವಿಂಟಲ್‌ ಕಾಂಪ್ಲೆಕ್ಸ್‌, 10.75 ಲಕ್ಷ ಕ್ವಿಂಟಲ್‌ ಯೂರಿಯಾ, 95 ಸಾವಿರ ಕ್ವಿಂಟಲ್‌ ಎಸ್‌ಎಸ್‌ಪಿ ಸೇರಿದಂತೆ ಮುಂಗಾರು ಹಂಗಾಮಿಗೆ ಒಟ್ಟಾರೆ 26.80 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರದ ಅಗತ್ಯವಿದೆ. ಕಳೆದ ಸಾಲಿನಲ್ಲಿ ಹಿಂಗಾರಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬಿತ್ತನೆ ಕುಂಠಿತವಾಗಿದ್ದರಿಂದ 13.13 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಹಾಗೆಯೇ ಉಳಿದುಕೊಂಡಿದೆ. ಜೊತೆಗೆ ಕೇಂದ್ರವು ಏಪ್ರಿಲ್‌ನಲ್ಲಿ ರಸಗೊಬ್ಬರ ಸರಬರಾಜು ಮಾಡಿದ್ದು, ಪ್ರಸಕ್ತ 15 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರದ ದಾಸ್ತಾನಿದೆ. ಮುಂಗಾರು ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರದಲ್ಲಿ ಈಗಾಗಲೇ ಶೇ.55ರಷ್ಟು ದಾಸ್ತಾನಿರುವುದು ವಿಶೇಷವಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ