ಕರ್ನಾಟಕ ಬಜೆಟ್ 2025 : ರೈತರ ಬಾಳು ಹಸನು ಮಾಡಲು ಸಿದ್ಧು ಸಂಕಲ್ಪ - 7145 ಕೋಟಿ ಅನುದಾನ

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ ಬಜೆಟ್‌ನಲ್ಲಿ ಒಟ್ಟಾರೆ 7145 ಕೋಟಿ ರು. ಮೀಸಲಿಡಲಾಗಿದೆ.

 ಬೆಂಗಳೂರು : ಕೃಷಿ ಯಾಂತ್ರೀಕರಣಕ್ಕೆ 50 ಸಾವಿರ ರೈತರಿಗೆ 428 ಕೋಟಿ ರು. ಅನುದಾನ, 1.81 ಲಕ್ಷ ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕ ಅಳವಡಿಸಿಕೊಳ್ಳಲು 440 ಕೋಟಿ ರು. ಸಹಾಯಧನ, 12 ಸಾವಿರ ಕೃಷಿ ಹೊಂಡ ನಿರ್ಮಾಣ, 20 ಕೋಟಿ ರು. ವೆಚ್ಚದಲ್ಲಿ ‘ಸಾವಯವ ಮತ್ತು ಸಿರಿಧಾನ್ಯಗಳ ಹಬ್’ ಮತ್ತು 5 ಸಾವಿರ ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ ಬಜೆಟ್‌ನಲ್ಲಿ ಒಟ್ಟಾರೆ 7145 ಕೋಟಿ ರು. ಮೀಸಲಿಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ ನೀಡಲು 428 ಕೋಟಿ ರು. ಅನುದಾನ ಮೀಸಲಿಡಲಾಗಿದೆ. ಕೃಷಿಯಲ್ಲಿ ನೀರನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಮಳೆಯಾಶ್ರಿತ ಪ್ರದೇಶದಲ್ಲಿ ಉತ್ಪಾದನೆ ಹೆಚ್ಚಿಸಲು ಸುಮಾರು 1.81 ಲಕ್ಷ ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 440 ಕೋಟಿ ರು. ಸಹಾಯಧನ ನೀಡಲು ನಿರ್ಧರಿಸಲಾಗಿದೆ. ಕೃಷಿಯನ್ನು ಲಾಭದಾಯಕವಾಗಿಸಲು ರೈತ ಸಮೃದ್ಧಿ ಯೋಜನೆಯಡಿ 10 ಹವಾಮಾನ ವಲಯಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಪ್ರಾತ್ಯಕ್ಷಿಕೆ ತಾಕುಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.

ತೊಗರಿ ಬೆಳೆಯಲ್ಲಿ ನೂತನ ತಾಂತ್ರಿಕತೆಗಳ ಅಳವಡಿಕೆ. ಕ್ಷೇತ್ರ ವಿಸ್ತರಣೆ,ಪ್ರೋತ್ಸಾಹ ಮತ್ತಿತರ ಕಾರ್ಯಕ್ಕಾಗಿ 88 ಕೋಟಿ ರು. ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ಈಗಾಗಲೇ 6 ಸಾವಿರ ಕಿರು ಆಹಾರ ಸಂಸ್ಕರಣಾ ಘಟಕ, 14 ಸಾಮಾನ್ಯ ಇನ್‌ಕ್ಯೂಬೇಷನ್ ಕೇಂದ್ರ ಸ್ಥಾಪಿಸಿದ್ದು ಪ್ರಸಕ್ತ ಸಾಲಿನಲ್ಲಿ 5 ಸಾವಿರ ಕಿರು ಸಂಸ್ಕರಣಾ ಘಟಕ, 12 ಸಾವಿರ ಕೃಷಿ ಹೊಂಡ ಸ್ಥಾಪಿಸಲು ನಿರ್ಧರಿಸಲಾಗಿದೆ.

ಡಿಜಿಟಲ್‌ ಕೃಷಿ ಸೇವಾ ಕೇಂದ್ರ ಸ್ಥಾಪನೆ: ಡಿಜಿಟಲ್‌, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಲು ಡಿಜಿಟಲ್‌ ಕೃಷಿ ಸೇವೆಗಳ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಉತ್ಪಾದಕತೆ ಹೆಚ್ಚಿಸಲು ರಾಜ್ಯದಲ್ಲಿನ ಹವಾಮಾನ ವಲಯಗಳನ್ನು ಮರು ವ್ಯಾಖ್ಯಾನಗೊಳಿಸಲು ತಜ್ಞರ ಸಮಿತಿ ರಚಿಸಲು ಸರ್ಕಾರ ಮುಂದಾಗಿದೆ. ರಾಜ್ಯದ ಸಾಗುವಳಿಯ ಶೇ.64ರಷ್ಟು ಭೂಮಿ ಮಳೆಯಾಶ್ರಿತ ಪ್ರದೇಶ ಆಗಿರುವುದರಿಂದ ರೈತರ ಜೀವನೋಪಾಯ ಸುಧಾರಿಸಲು ‘ಸಮಗ್ರ ಮಳೆಯಾಶ್ರಿತ ಕೃಷಿ ನೀತಿ’ ಅನುಷ್ಠಾನಗೊಳಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಮಣ್ಣು ಪರೀಕ್ಷೆ, ರಸಗೊಬ್ಬರ, ಬಿತ್ತನೆ ಬೀಜ ಮತ್ತಿತರ ವಸ್ತುಗಳ ಗುಣಮಟ್ಟ ಪರೀಕ್ಷಿಸುವ 58 ಪ್ರಯೋಗಾಲಯಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬಲವರ್ಧನೆಗೊಳಿಸಲಾಗುವುದು, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲೂಕನ್ನಾಗಿ ಪರಿವರ್ತಿಸಿ, ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಪ್ರಮಾಣೀಕರಣ ಕಲ್ಪಿಸಲು ನಿರ್ಧರಿಸಲಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಮತ್ತು ಮಂಡ್ಯ ಜಿಲ್ಲೆಯ 3 ಸಾವಿರ ಹೆಕ್ಟೇರ್‌ನಲ್ಲಿ ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ ಮಣ್ಣು, ನೀರು, ತ್ಯಾಜ್ಯ ನಿರ್ವಹಣೆ ಬಗ್ಗೆ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ.

ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ 11 ಲಕ್ಷ ಹೆಕ್ಟೇರ್‌ನಲ್ಲಿ ಭೂಸಂಪನ್ಮೂಲ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಮೂಲ ಸೌಕರ್ಯಕ್ಕೆ 25 ಕೋಟಿ ರು. ಅನುದಾನ ಘೋಷಣೆ ಮಾಡಲಾಗಿದೆ. ಬರ ಮತ್ತು ರೋಗ ನಿಯಂತ್ರಣ ಬಗ್ಗೆ ಸಂಶೋಧನೆ ಕೈಗೊಳ್ಳಲು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ಫೀನೋಟೈಪಿಂಗ್‌ ಸೌಲಭ್ಯ ಸ್ಥಾಪಿಸಲಾಗುವುದು. ಸಾವಯವ ಮತ್ತು ಸಿರಿಧಾನ್ಯಗಳಿಗೆ ಮಾರುಕಟ್ಟೆ ಕಲ್ಪಿಸಲು 20 ಕೋಟಿ ರು. ವೆಚ್ಚದಲ್ಲಿ ‘ಸಾವಯವ ಮತ್ತು ಸಿರಿಧಾನ್ಯಗಳ ಹಬ್’ ಸ್ಥಾಪಿಸಲಾಗುವುದು. ವಿಜಯಪುರದ ಮುದ್ದೇಬಿಹಾಳ ತಾಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪಿಸಲು ತಜ್ಞರಿಂದ ಕಾರ್ಯಸಾಧ್ಯತಾ ವರದಿ ಪಡೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಸಮಗ್ರ ಮಳೆ ಆಶ್ರಿತ ಕೃಷಿ ನೀತಿ ಸ್ವಾಗತಾರ್ಹ

ರಾಜ್ಯದ ಸಾಗುವಳಿ ಪ್ರದೇಶದ ಶೇ.64 ರಷ್ಟು ಮಳೆಯಾಶ್ರಿತ ಪ್ರದೇಶವಾಗಿದ್ದು, ಈ ರೈತರ ಜೀವನೋಪಾಯ ಸುಧಾರಿಸಲು ಸಮಗ್ರ ಮಳೆ ಆಶ್ರಿತ ಕೃಷಿ ನೀತಿ ಅನುಷ್ಠಾನಗೊಳಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದು ಅತ್ಯಂತ ಸ್ವಾಗತಾರ್ಹ. ಆದರೆ, ಕೃಷಿ ಮತ್ತು ಸಂಬಂಧಿಸಿದ ವಲಯಗಳಿಗೆ ನೀಡಿರುವ ಅನುದಾನ ಅತ್ಯಲ್ಪ. ಕಳೆದ ಸಾಲಿನಂತೆ ಈ ಸಾಲಿನಲ್ಲೂ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ನೀರಾವರಿಯನ್ನು ಸೇರಿಸಿದರೂ ಒಟ್ಟು ಪ್ರಮಾಣ ಶೇ.8 ಮೀರುವುದಿಲ್ಲ. ಆದರೆ ರೈತ ಕಲ್ಯಾಣ ಯೋಜನೆಗೆ ವಿವಿಧ ಇಲಾಖೆಗಳಿಗೆ 51 ಸಾವಿರ ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ ಎಂದಿರುವುದು ಆಶಾಕಿರಣ ಮೂಡಿಸಿದೆ.

- ಪ್ರಕಾಶ್‌ ಕಮ್ಮರಡಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

ಎಲೆ ಚುಕ್ಕಿ ರೋಗ ನಿಯಂತ್ರಿಸಲು 62 ಕೋಟಿ ರು. ಅನುದಾನ 

ಮಲೆನಾಡು ಜಿಲ್ಲೆಗಳಲ್ಲಿ ಎಲೆ ಚುಕ್ಕಿ ರೋಗದ ಹಾವಳಿಯಿಂದ 2 ಲಕ್ಷಕ್ಕೂ ಅಧಿಕ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು ರೋಗ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ 62 ಕೋಟಿ ರು. ಅನುದಾನ ಘೋಷಿಸಿದ್ದಾರೆ. ರಾಜ್ಯದ ಹಲವೆಡೆ ತೆಂಗಿನ ಮರಗಳು ಕಪ್ಪು ತಲೆ ಹುಳುವಿನ ಬಾಧೆಯಿಂದ ಬಳಲುತ್ತಿರುವುದನ್ನೂ ಮನಗಂಡ ಅವರು, ರೋಗದ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ, ಇದರ ಆಧಾರದಲ್ಲಿ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ರಾಜ್ಯದ 20 ಜಿಐ ಟ್ಯಾಗ್ ಹೊಂದಿರುವ ಬೆಳೆ ಹಾಗೂ ಇತರೆ ದೇಸಿ ತಳಿಗಳು ನಶಿಸಿ ಹೋಗುವುದನ್ನು ತಪ್ಪಿಸಲು ದೇಶಿ ತಳಿಗಳ ಬೀಜ ಬ್ಯಾಂಕ್ ಸ್ಥಾಪನೆ, ಬ್ಯಾಡಗಿ ಮೆಣಸಿನಕಾಯಿ ತಳಿಯ ಸಂರಕ್ಷಣೆ, ಎಲೆ ಮುರುಟು ರೋಗ, ತ್ರಿಪ್ಸ್ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ತೋಟಗಾರಿಕಾ ಇಲಾಖೆಯ ಅಧೀನದ ಆಯ್ದ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಸಾರ್ವಜನಿಕ-ಖಾಸಗಿ ಸಹಯೋಗದೊಂದಿಗೆ ಹೂ-ಕೃಷಿ, ಅಲಂಕಾರಿಕ, ಔಷಧೀಯ ಸಸ್ಯಗಳನ್ನು ಬೆಳೆಸಲು ಹಾಗೂ ತೋಟಗಾರಿಕಾ ಪ್ರವಾಸೋದ್ಯಮ ಉತ್ತೇಜಿಸಲು ಕಾರ್ಯಕ್ರಮ ರೂಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಡಂಬಳದಲ್ಲಿ ತೋಟಗಾರಿಕೆ ಕಾಲೇಜು: ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪಿಸಲು ತಜ್ಞರಿಂದ ಕಾರ್ಯಸಾಧ್ಯತಾ ವರದಿ ಪಡೆಯುವುದು, ತೋಟಗಾರಿಕಾ ಬೆಳೆಗಳ ಹನಿ ನೀರಾವರಿ ಕಾರ್ಯಕ್ರಮದಡಿ ಸುಮಾರು 52 ಸಾವಿರ ಫಲಾನುಭವಿಗಳಿಗೆ 426 ಕೋಟಿ ರು. ಸಹಾಯ ಧನ ನೀಡಿಕೆ, ಬೆಳೆ ಪದ್ಧತಿ, ಸಂಸ್ಕರಣೆ, ಮೌಲ್ಯವರ್ಧನೆಯಲ್ಲಿ ಬಳಸುವ ಆಧುನಿಕ ತಂತ್ರಜ್ಞಾನಗಳನ್ನು ಬೆಳೆಗಾರರಿಗೆ ತಲುಪಿಸಲು ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ-2 ಜಾರಿಗೊಳಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 95 ಕೋಟಿ ರು. ಮೀಸಲಿಡಲಾಗಿದೆ.

ತೋಟಗಾರಿಕಾ ಬೆಳೆಗಳ ವಿಸ್ತೀರ್ಣ, ಉತ್ಪಾದನೆ, ಆರೋಗ್ಯ, ಮಾರುಕಟ್ಟೆ ಮತ್ತಿತರ ವಿಷಯಗಳ ಬಗ್ಗೆ ನೈಜ ಸಮಯದ ಆಧಾರದಲ್ಲಿ ರೈತರಿಗೆ ಮಾಹಿತಿ ಒದಗಿಸಲು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಟೆಕ್ನಾಲಜಿ ಮತ್ತು ಖಾಸಗಿ ಸಹಯೋಗದಲ್ಲಿ ಜ್ಞಾನ ಕೋಶ ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

ಅನುದಾನದ ಕೊರತೆ ಆಗಿದೆ

ರೈತರ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿಗೆ ತೋಟಗಾರಿಕೆ ಪಾಲು ಅಗ್ರಗಣ್ಯವಾಗಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕಾ ಪ್ರವಾಸೋದ್ಯಮ ಉತ್ತೇಜಿಸಲು ಕಾರ್ಯಕ್ರಮ ರೂಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದು ಇದೊಂದು ಉತ್ತಮ ಚಿಂತನೆ. ರೈತರ ಪ್ರಗತಿ ಜೊತೆಗೆ ಗ್ರಾಮೀಣಾಭಿವೃದ್ಧಿಯನ್ನೂ ಒಟ್ಟಿಗೆ ಹೆಸರಿಸಿ ಬಜೆಟ್‌ ಮಂಡಿಸಿರುವುದು ಸ್ವಾಗತಾರ್ಹ. ಸ್ವಾತಂತ್ರ್ಯಾ ನಂತರ ಕೃಷಿ 6 ಪಟ್ಟು ಅಭಿವೃದ್ಧಿ ಕಂಡರೆ, ತೋಟಗಾರಿಕೆಯು 9 ಪಟ್ಟಿಗಿಂತಲೂ ಅಧಿಕ ಬೆಳವಣಿಗೆ ದಾಖಲಿಸಿದೆ. ಆದರೆ ತೋಟಗಾರಿಕೆಗೆ ನೀಡುತ್ತಿರುವ ಮಹತ್ವ ಕಡಿಮೆಯಾಗುತ್ತಾ ಬಂದಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ತೋಟಗಾರಿಕಾ ಇಲಾಖೆಗೆ ಅನುದಾನದ ಕೊರತೆ ಉಂಟಾಗಿದೆ.

-ಡಾ.ಬಿ.ನಾರಾಯಣಸ್ವಾಮಿ, ಐಸಿಎಆರ್‌ ನಿವೃತ್ತ ಪ್ರಧಾನ ವಿಜ್ಞಾನಿ

Share this article