ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ತನಿಖೆ ನಡೆಸಿದ ಮೈಸೂರಿನ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಕ್ಲೀನ್‌ಚಿಟ್ ನೀಡಿದ್ದಾರೆ.
ಮೈಸೂರು : ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ತನಿಖೆ ನಡೆಸಿದ ಮೈಸೂರಿನ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಕ್ಲೀನ್‌ಚಿಟ್ ನೀಡಿದ್ದಾರೆ.
ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 2ನೇ ಆರೋಪಿಯಾಗಿರುವ ಸಿಎಂ ಪತ್ನಿ ಬಿ.ಎಂ. ಪಾರ್ವತಿ, 3ನೇ ಆರೋಪಿಯಾಗಿರುವ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನಸ್ವಾಮಿ ಮತ್ತು 4ನೇ ಆರೋಪಿ ಆಗಿರುವ ಭೂಮಿ ಮಾರಾಟ ಮಾಡಿದ್ದ ಜೆ. ದೇವರಾಜು ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿಲ್ಲ ಎಂದು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ ಅವರು ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಅಂತಿಮ ತನಿಖಾ ವರದಿಯನ್ನು ಲೋಕಾಯುಕ್ತ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಈ ಕುರಿತು ಸ್ನೇಹಮಯಿ ಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಾಯುಕ್ತ ನೋಟಿಸ್ ನೀಡಿರುವುದು ನಿರೀಕ್ಷಿತ. ಈ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿಗಳು ಎ1 ಆರೋಪಿಯಾಗಿದ್ದಾರೆ. ಹೀಗಾಗಿ, ಸಿಎಂ ಕೈಕೆಳಗಿರುವ ಸರ್ಕಾರಿ ಅಧಿಕಾರಿ ಸಹಜವಾಗಿಯೇ ಅವರ ರಕ್ಷಣೆಗೆ ಮುಂದಾಗಿರುವುದು ಸಾಬೀತಾಗಿದೆ. ಲೋಕಾಯುಕ್ತ ಅಧಿಕಾರಿಗಳು ಅವರ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಭ್ರಷ್ಟರ ರಕ್ಷಣೆಗೆ ಮುಂದಾಗಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ಅವರು ಎ1 ಆರೋಪಿಯಾಗಿದ್ದ ಕಾರಣ ಈ ಪ್ರಕರಣ ಭಾರೀ ರಾಜಕೀಯ ಮೇಲಾಟಕ್ಕೆ ಕಾರಣವಾಗಿತ್ತು. ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಪ್ರಮುಖ ಪ್ರತಿಪಕ್ಷ ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿದ್ದಲ್ಲದೆ, ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿ ಒತ್ತಡ ಹೇರಿದ್ದವು. ಒತ್ತಡ ಹೆಚ್ಚುತ್ತಿದ್ದಂತೆಯೇ ಕೊನೆಗೆ ಸಿಎಂ ಸಿದ್ದರಾಮಯ್ಯ ಅವರು ಮುಡಾದಿಂದ ಪಡೆದಿದ್ದ 14 ಸೈಟುಗಳನ್ನು ವಾಪಸ್ ಮಾಡಿ ಪ್ರಕರಣದಿಂದ ಹೊರಬರುವ ಪ್ರಯತ್ನ ಮಾಡಿದ್ದರು. ತನಿಖೆ ನಡೆಸಿದ ಲೋಕಾಯುಕ್ತ ಈಗ ಕ್ಲೀನ್‌ಚಿಟ್ ನೀಡಿದ್ದರಿಂದಾಗಿ ಸಿಎಂ ಸಿದ್ದರಾಮಯ್ಯ ನಿರಾಳರಾಗಿದ್ದಾರೆ. ಏನಿದು ಪ್ರಕರಣ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಒಡೆತನದ್ದು ಎನ್ನಲಾದ ಕೃಷಿ ಭೂಮಿಯನ್ನು ಮುಡಾ ವಶಪಡಿಸಿಕೊಂಡು ಅದಕ್ಕೆ ಪರ್ಯಾಯವಾಗಿ 14 ನಿವೇಶನಗಳನ್ನು ಪ್ರಮುಖ ಜಾಗದಲ್ಲಿ ಹಂಚಿಕೆ ಮಾಡಿದೆ ಎಂಬುದು ವಿವಾದದ ಕೇಂದ್ರ ಬಿಂದು. ಪರಿಹಾರ ರೂಪದಲ್ಲಿ ನೀಡಲಾದ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಅಕ್ರಮದಿಂದ ಕೂಡಿದೆ. ಇಡೀ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಭಾವ ಬೀರಿರುವುದು ಕಂಡು ಬಂದಿದೆ ಎಂದು 3 ಖಾಸಗಿ ದೂರುಗಳು ರಾಜ್ಯಪಾಲರಿಗೆ ಸಲ್ಲಿಕೆಯಾಗಿದ್ದವು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ತನಿಖೆಗೆ ಅನುಮತಿ ನೀಡಿದ್ದರು. ತನಿಖೆ ಆದೇಶ ರದ್ದುಪಡಿಸಲು ಕೋರಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ತನಿಖೆಗೆ ಹೈಕೋರ್ಟ್ ಸಮ್ಮತಿ ಸೂಚಿಸಿತ್ತು.
ತದನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸೂಚನೆ ಮೇರೆಗೆ ಲೋಕಾಯುಕ್ತ ಮೈಸೂರು ಠಾಣೆಯಲ್ಲಿ ಕೇಸ್ ನಂಬರ್ 11/2024 ಅಡಿ ಎಫ್ಐಆರ್ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಎ1 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎ2 ಆಗಿ ಸಿಎಂ ಪತ್ನಿ ಬಿ.ಎಂ. ಪಾರ್ವತಿ, ಎ3 ಆಗಿ ಸಿಎಂ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನಸ್ವಾಮಿ, ಎ4 ಆಗಿ ಭೂಮಿ ಮಾರಾಟ ಮಾಡಿದ ಜೆ. ದೇವರಾಜು ಆರೋಪಿಗಳಾಗಿದ್ದರು. ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ದೂರಿನ ಅನ್ವಯ ಎಫ್ಐಆರ್ ದಾಖಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತ್ತು. ಅದರಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಮೈಸೂರು ತಾಲೂಕು ಕೆಸರೆ ಗ್ರಾಮದ ಸರ್ವೇ ನಂ.462, 464 ಸಂಬಂಧ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಭಾರತೀಯ ದಂಡ ಸಂಹಿತೆ ಕಲಂ 120ಬಿ, 166, 403, 406, 420, 426, 465, 468, 340, 351, ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ 1988ರ ಕಲಂ 3, 53, ಬೇನಾಮಿ ಆಸ್ತಿ ವಹಿವಾಟು ತಡೆ ಕಾಯಿದೆ 1988ರ ಕಲಂ 3, 53 ಮತ್ತು 54 ಹಾಗೂ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯಿದೆ 2011ರ ಕಲಂ 3 ಮತ್ತು 4 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ನೇಹಮಯಿ ಕೃಷ್ಣಗೆ ಲೋಕಾಯುಕ್ತ ನೋಟಿಸ್
ಮುಡಾ ಹಗರಣ ಪ್ರಕರಣ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣಗೆ ಲೋಕಾಯುಕ್ತ ನೋಟಿಸ್ ನೀಡಿದೆ. ನಾನು ಮಾಡಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರ ಇಲ್ಲವೆಂದು ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ. ಹಾಗಾದರೆ ನಾನು ಕಸ ಕೊಟ್ಟಿದ್ದೀನಾ ಎಂದು ಪ್ರಶ್ನಿಸಿದರು. ಲೋಕಾಯುಕ್ತ ಅಧಿಕಾರಿಗಳು ನನಗೆ ಮಾತ್ರ ಮೋಸ ಮಾಡಿಲ್ಲ. ದೇಶದ ನ್ಯಾಯಾಲಯಕ್ಕೇ ಮೋಸ ಮಾಡಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮುಂದುವರೆಸುತ್ತೇನೆ. ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್ ಅನ್ನು ಸಂಪೂರ್ಣವಾಗಿ ನೋಡಿದ ಬಳಿಕ ಮುಂದೇನು ಮಾಡಬೇಕೆಂದು ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ನಾನು ನೀಡಿರುವ ಸಾಕ್ಷ್ಯಾಧಾರಗಳು ತನಿಖೆಗೆ ಯೋಗ್ಯವಾಗಿಲ್ಲ ಎಂದಿರುವ ಲೋಕಾಯುಕ್ತ ಅಧಿಕಾರಿಗೆ ತನಿಖಾಧಿಕಾರಿಯಾಗಿ ತನಿಖೆ ನಡೆಸುವ ಯೋಗ್ಯತೆಯೇ ಇಲ್ಲ. ಲೋಕಾಯುಕ್ತ ನೋಟಿಸ್ ನೀಡಿರುವುದರಿಂದ ನಾನು ಎದೆಗುಂದುವುದಿಲ್ಲ. ನನ್ನ ಹೋರಾಟ ಹತ್ತಿಕ್ಕುವುದಕ್ಕಿಂತ ಆರೋಪಿಗಳ ರಕ್ಷಣೆ ಮಾಡುವುದೇ ಲೋಕಾಯುಕ್ತ ಅಧಿಕಾರಿಗಳ ಉದ್ದೇಶವಾಗಿದೆ. ನನ್ನ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ನಾನು ಕಾನೂನು ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಸ್ಪಷ್ಟಪಡಿಸಿದರು.