ಸ್ಮಾರ್ಟ್‌ಮೀಟರ್‌ ಶುಲ್ಕ ಹೆಚ್ಚಳಕ್ಕೆ ಆರ್‌ಡಿಎಸ್‌ಎಸ್‌ ನಿಯಮ ಕಾರಣ ಮೀಟರ್‌ ಶಾಕ್‌

ಸಾರಾಂಶ

ಕೇಂದ್ರದ ಆರ್‌ಡಿಎಸ್‌ಎಸ್ ಯೋಜನೆಯಡಿ ರಾಜ್ಯವು ಸೇರದ ಕಾರಣ ಸ್ಮಾರ್ಟ್‌ ಮೀಟರ್‌ಗೆ ದೊರೆಯುವ ಶೇ.15 ಸಬ್ಸಿಡಿ ಗ್ರಾಹಕರಿಗೆ ದೊರೆಯುತ್ತಿಲ್ಲ. ಜತೆಗೆ ಕೆಇಆರ್‌ಸಿ ನಿಯಮದ ಪ್ರಕಾರ ರಾಜ್ಯದಲ್ಲಿ ಗ್ರಾಹಕರೇ ಸ್ಮಾರ್ಟ್‌ ಮೀಟರ್‌ ಖರೀದಿಸಬೇಕು.

 ಬೆಂಗಳೂರು : ಕೇಂದ್ರದ ಆರ್‌ಡಿಎಸ್‌ಎಸ್ ಯೋಜನೆಯಡಿ ರಾಜ್ಯವು ಸೇರದ ಕಾರಣ ಸ್ಮಾರ್ಟ್‌ ಮೀಟರ್‌ಗೆ ದೊರೆಯುವ ಶೇ.15 ಸಬ್ಸಿಡಿ ಗ್ರಾಹಕರಿಗೆ ದೊರೆಯುತ್ತಿಲ್ಲ. ಜತೆಗೆ ಕೆಇಆರ್‌ಸಿ ನಿಯಮದ ಪ್ರಕಾರ ರಾಜ್ಯದಲ್ಲಿ ಗ್ರಾಹಕರೇ ಸ್ಮಾರ್ಟ್‌ ಮೀಟರ್‌ ಖರೀದಿಸಬೇಕು. 

ಹೀಗಾಗಿ ಸ್ಮಾರ್ಟ್ ಮೀಟರ್‌ ದರ ಹಾಗೂ ನಿರ್ವಹಣಾ ವೆಚ್ಚ ಸಂಗ್ರಹ ರಾಜ್ಯದಲ್ಲಿ ಬೇರೆ ರಾಜ್ಯಗಳಿಗಿಂತ ಭಿನ್ನವಾಗಿದೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಹೇಳಿದ್ದಾರೆ. ಸೋಮವಾರ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌.ಶಿವಶಂಕರ್‌ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಬಹುತೇಕ ರಾಜ್ಯಗಳು ಆರ್‌ಡಿಎಸ್‌ಎಸ್‌ ಅಳವಡಿಸಿಕೊಂಡಿದ್ದು, ಅದರ ಮಾರ್ಗಸೂಚಿಯನ್ವಯ ಸ್ಮಾರ್ಟ್ ಮೀಟರ್ ಮತ್ತು ಸಾಫ್ಟ್‌ವೇರ್‌ ವೆಚ್ಚವೂ ಸೇರಿಸಿ ಟೆಂಡರ್ ಕರೆದಿದ್ದವು. ಹೀಗಾಗಿ ಸ್ಮಾರ್ಟ್ ಮೀಟರ್‌ ದರ ಹಾಗೂ ನಿರ್ವಹಣಾ ವೆಚ್ಚವನ್ನು ವಿದ್ಯುತ್‌ ದರದಲ್ಲೇ ಸಂಗ್ರಹಿಸುತ್ತಿವೆ. ಆದರೆ ಆರ್‌ಡಿಎಸ್ಎಸ್‌ ಅಳವಡಿಸಿಕೊಂಡರೆ ಎಲ್ಲಾ ಗ್ರಾಹಕರ ಮೀಟರ್‌ ಸ್ಮಾರ್ಟ್‌ ಮೀಟರ್‌ ಆಗಿ ಬದಲಿಸಬೇಕು ಎಂಬ ಕಾರಣಕ್ಕೆ ರಾಜ್ಯ ಒಪ್ಪಿಲ್ಲ. ಹೀಗಾಗಿ ಸ್ಮಾರ್ಟ್‌ ಮೀಟರ್‌ ಗ್ರಾಹಕರು ಒಂದೇ ಬಾರಿಗೆ ಹಣ ನೀಡಿ ಖರೀದಿಸಬೇಕು. 

ನಿರ್ವಹಣಾ ವೆಚ್ಚವನ್ನು ಮಾತ್ರ ಮಾಸಿಕ ಪಾವತಿಸಬೇಕು ಎಂದು ಹೇಳಿದರು. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್‌, ಬೇರೆ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಸಬ್ಸಿಡಿ ಸೇರಿ 10 ವರ್ಷಗಳ ಕಾಲ ಪ್ರತಿ ಸ್ಮಾರ್ಟ್ ಮೀಟರ್‌ ಹಾಗೂ ನಿರ್ವಹಣಾ ವೆಚ್ಚ ಸೇರಿ ಪ್ರತಿ ತಿಂಗಳು ತಗಲುವ ವೆಚ್ಚ-ಮಹಾರಾಷ್ಟ್ರದಲ್ಲಿ 120.34 ರು., ಪಶ್ಚಿಮ ಬಂಗಾಳ 117.81 ರು., ಸಿಕ್ಕಿಂ ರಾಜ್ಯದಲ್ಲಿ 148.88 ರು., ಮಣಿಪುರ 130.30 ರು., ಮಧ್ಯಪ್ರದೇಶದಲ್ಲಿ 115.84 ರು. ಇದೆ.

ಆದರೆ ರಾಜ್ಯದಲ್ಲಿ ಕೆಇಆರ್‌ಸಿ ನಿಯಮದ ಅನ್ವಯ ಸ್ಮಾರ್ಟ್‌ ಮೀಟರ್‌ (ಸಿಂಗಲ್‌ ಫೇಸ್ - 4,998 ರು.) ಗ್ರಾಹಕರೇ ಭರಿಸುತ್ತಿದ್ದಾರೆ. ಇತರೆ ರಾಜ್ಯಗಳಂತೆ ಲೆಕ್ಕ ಹಾಕಿದರೆ, ಕರ್ನಾಟಕದಲ್ಲಿ ಈ ಮೊತ್ತ 10 ವರ್ಷಗಳಿಗೆ 116.65 ರು. (ಸ್ಮಾರ್ಟ್‌ ಮೀಟರ್‌ ಮತ್ತು ತಂತ್ರಜ್ಞಾನ ನಿರ್ವಹಣೆ ವೆಚ್ಚ ಸೇರಿ) ಆಗುತ್ತದೆ. ಆದರೆ ನಾವು ಪ್ರತಿ ತಿಂಗಳು 75 ರು.ಮಾತ್ರ ಸಂಗ್ರಹಿಸುತ್ತೇವೆ. ಹೀಗಾಗಿ ಇತರೆ ರಾಜ್ಯಗಳಿಗಿಂತ ದರ ಹೆಚ್ಚಾಗಿಲ್ಲ ಎಂದರು. ಪಂಕಜ್‌ ಕುಮಾರ್‌ ಪಾಂಡೆ ಮಾತನಾಡಿ, ಮಾರುಕಟ್ಟೆಯಲ್ಲಿ ಸಿಂಗಲ್‌ ಫೇಸ್‌ ಸ್ಮಾರ್ಟ್‌ ಮೀಟರ್‌ ಬೆಲೆ 4500 ರು.ಗಳಿಂದ 6,000 ರು.ನಡುವೆ ಇದೆ. ಹೀಗಾಗಿ 4,998 ರು.ಗೆ ಸಿಂಗಲ್‌ ಫೇಸ್‌ ಪೂರೈಕೆಗೆ ನೀಡಿರುವ ಟೆಂಡರ್‌ ನಿಯಮಬಾಹಿರವಲ್ಲ. ಕೆಟಿಟಿಪಿ ನಿಯಮ ಉಲ್ಲಂಘಿಸಿಲ್ಲ ಎಂದು ಹೇಳಿದರು.

ಏನಿದು ಆರ್‌ಡಿಎಸ್ಎಸ್? 2021-22ರಲ್ಲಿ ಕೇಂದ್ರವು ಪರಿಷ್ಕೃತ ವಿತರಣಾ ವಲಯ ಯೋಜನೆ (ಆರ್‌ಡಿಎಸ್‌ಎಸ್‌) ರೂಪಿಸಿತ್ತು. ಯೋಜನೆ ಒಪ್ಪಿಕೊಂಡಿದ್ದರೆ, ಎಲೆಕ್ಟ್ರಿಕಲ್ ಮೂಲ ಸೌಕರ್ಯ ಒದಗಿಸಲು ಕೇಂದ್ರ ಶೇ.60 ಅನುದಾನ ನೀಡುತ್ತಿತ್ತು. ಸ್ಮಾರ್ಟ್ ಮೀಟರ್‌ ವೆಚ್ಚದ ಶೇ.15ರಷ್ಟು ಅಂದರೆ 4,998 ರು. ಬೆಲೆಯ ಸ್ಮಾರ್ಟ್‌ ಮೀಟರ್‌ಗೆ ಸುಮಾರು 900 ರು. ನೀಡುತ್ತಿತ್ತು.

ರಾಜ್ಯದಲ್ಲೇಕೆ ದುಬಾರಿ? 

ಕೇಂದ್ರದ ಆರ್‌ಡಿಎಸ್‌ಎಸ್‌ ವ್ಯಾಪ್ತಿಗೆ ಕರ್ನಾಟಕ ಸೇರದ ಕಾರಣ ಶೇ.15 ಸಬ್ಸಿಡಿ ಇಲ್ಲ

ಆರ್‌ಡಿಎಸ್‌ಎಸ್‌ಗೆ ಒಪ್ಪಿದರೆ ರಾಜ್ಯದಲ್ಲಿ ಎಲ್ಲರಿಗೂ ಸ್ಮಾರ್ಟ್‌ಮೀಟರ್‌ ಅಳವಡಿಕೆ ಕಡ್ಡಾಯ ಅದನ್ನು ಒಪ್ಪದ ಕಾರಣ ರಾಜ್ಯದಲ್ಲಿ ಮೀಟರ್‌ ದರ, ನಿರ್ವಹಣಾ ವೆಚ್ಚ ಕಾನೂನು ಪ್ರತ್ಯೇಕ

ಹೀಗಾಗಿ ರಾಜ್ಯದಲ್ಲಿ ಗ್ರಾಹಕರೇ ಮೊತ್ತ ಪಾವತಿಸಿ ಸ್ಮಾರ್ಟ್‌ ಮೀಟರ್‌ ಖರೀದಿಸಬೇಕು ಒಂದೇ ಭಾರಿಗೆ ಸ್ಮಾರ್ಟ್‌ಮೀಟರ್‌ ಶುಲ್ಕ ವಸೂಲಿ ಕುರಿತು ಗೌರವ್ ಗುಪ್ತಾ ಸ್ಪಷ್ಟನೆ

Share this article