ನಮ್ಮ ಮೆಟ್ರೋ 3ನೇ ಹಂತದ ಯೋಜನೆಯಲ್ಲಿ 40.56 ಕಿಮೀ ಎತ್ತರಿಸಿದ ಡಬಲ್‌ಡೆಕ್ಕರ್ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಿರ್ದೇಶಕ ಮಂಡಳಿ ಒಪ್ಪಿಗೆ ಸೂಚಿಸಿದೆ
ಮಯೂರ್ ಹೆಗಡೆ
ಬೆಂಗಳೂರು : ನಮ್ಮ ಮೆಟ್ರೋ 3ನೇ ಹಂತದ ಯೋಜನೆಯಲ್ಲಿ 40.56 ಕಿಮೀ ಎತ್ತರಿಸಿದ ಡಬಲ್‌ಡೆಕ್ಕರ್ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಿರ್ದೇಶಕ ಮಂಡಳಿ ಒಪ್ಪಿಗೆ ಸೂಚಿಸಿದೆ. ಇದಕ್ಕೆ ತಗಲುವ ಹೆಚ್ಚುವರಿ ₹8,916 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರದಿಂದಲೇ ಭರಿಸುವಂತೆ ಪ್ರಸ್ತಾವನೆ ನೀಡಲು ನಿರ್ಧರಿಸಿದೆ.
ಈಗಾಗಲೆ 2ನೇ ಹಂತದ ಆರ್.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ - ರಾಗಿಗುಡ್ಡದವರೆಗೆ ಬೆಂಗಳೂರಿನ ಮೊದಲ 3ಕಿಮೀ ಡಬಲ್ ಡೆಕ್ಕರ್ ನಿರ್ಮಾಣ ಆಗಿದ್ದು, (₹450ಕೋಟಿ ವೆಚ್ಚ) ಒಂದು ಪಾರ್ಶ್ವದಲ್ಲಿ ಸಂಚಾರ ನಡೆಯುತ್ತಿದೆ. ಈಗ ಇದೇ ಮಾದರಿಯನ್ನು 3ನೇ ಹಂತದ ಮೆಟ್ರೋ ಮಾರ್ಗದಲ್ಲೂ ಅನುಸರಿಸಲು ನಿರ್ಣಯವಾಗಿದೆ.
2024ರ ಆಗಸ್ಟ್‌ನಲ್ಲಿ ಮೆಟ್ರೋದ ಮೂರನೇ ಹಂತವಾದ ಜೆ.ಪಿ. ನಗರ 4ನೇ ಹಂತ - ಕೆಂಪಾಪುರ (32.15ಕಿಮೀ) ಮತ್ತು ಹೊಸಹಳ್ಳಿ- ಕಡಬಗೆರೆ ಮಾರ್ಗ (12.50ಕಿಮೀ) ಸೇರಿ ಒಟ್ಟೂ 44.65 ಕಿಮೀ ಉದ್ದದ ₹ 15,611 ಕೋಟಿ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಈಗಾಗಲೇ ಈ ಮಾರ್ಗದ ಭೂಸ್ವಾದೀನ ಪ್ರಕ್ರಿಯೆಯೂ ನಡೆಯುತ್ತಿದೆ. ಆದರೆ, ಡಿಪಿಆರ್‌ನ್ನು ಕೇಂದ್ರಕ್ಕೆ ಕಳಿಸುವ ಸಂದರ್ಭದಲ್ಲಿ ಡಬಲ್ ಡೆಕ್ಕರ್ ನಿರ್ಮಿಸುವ ಪ್ರಸ್ತಾವನೆ ಒಳಗೊಂಡಿರಲಿಲ್ಲ. ಬಳಿಕ ರಾಜ್ಯ ಸರ್ಕಾರ ಇಲ್ಲಿ ಡಬಲ್ ಡೆಕ್ಕರ್ ನಿರ್ಮಿಸುವ ಯೋಜನೆ ರೂಪಿಸಿತು.
ಡಬಲ್ ಡೆಕ್ಕರ್ ನಿರ್ಮಾಣದ ಕಾರ್ಯಸಾಧ್ಯತಾ ವರದಿ ನೀಡಲು ಬಿಎಂಆರ್‌ಸಿಎಲ್, ಹೈದರಾಬಾದ್ ಮೂಲದ ಮೂಲಸೌಕರ್ಯ ಸಲಹಾ ಸಂಸ್ಥೆ ‘ಆರ್‌ವೀ ಅಸೋಸಿಯೇಟ್ಸ್ ಆರ್ಕಿಟೆಕ್ಟ್ ಎಂಜಿನಿಯರ್ಸ್ ಮತ್ತು ಕನ್ಸಲ್ಟೆಂಟ್ಸ್ ಪ್ರೈವೆಟ್ ಲಿಮಿಟೆಡ್’ ಕಂಪನಿಗೆ ಹೊಣೆ ವಹಿಸಿತ್ತು. ಈ ಸಂಸ್ಥೆ ವರದಿ ನೀಡಿದ್ದು, ಬಿಎಂಆರ್‌ಸಿಎಲ್ ಇದರ ಸಾಧಕ - ಬಾಧಕ ಪರಿಶೀಲಿಸಿ ಇದೀಗ ತನ್ನ ಒಪ್ಪಿಗೆ ನೀಡಿದೆ.
ಸುಮನಹಳ್ಳಿ ಕ್ರಾಸ್‌ನಿಂದ ಕಡಬಗೆರೆ, ಕೆಂಪಾಪುರದವರೆಗೆ ಹಾಗೂ ಜೆ.ಪಿ.ನಗರ ಸ್ಟೇಷನ್‌ನಿಂದ ಬಿಡಿಎ ಕಾಂಪ್ಲೆಕ್ಸ್, ನಾಗರಬಾವಿ ಸ್ಟೇಷನ್‌ವರೆಗೆ ಡಬಲ್ ಡೆಕ್ಕರ್‌ಗೆ ಅಧ್ಯಯನ ನಡೆಸಲಾಗಿದೆ. ಜತೆಗೆ ಈ ಮಾರ್ಗದಲ್ಲಿ ನಿಲ್ದಾಣಗಳು, ರ್‍ಯಾಂಪುಗಳ ನಿರ್ಮಾಣ, ಅವುಗಳ ವಿನ್ಯಾಸದ ಬಗ್ಗೆ ಅಧ್ಯಯನ ಮಾಡಲಾಗಿದೆ. ಪೀಣ್ಯ ಹಾಗೂ ಸುಮನಹಳ್ಳಿ ಬಳಿ ಡಿಪೋ, ಸ್ಕೈವಾಕ್, ಬಹುಮಾದರಿಯ ಸಾರಿಗೆ ವ್ಯವಸ್ಥೆ ನಿರ್ಮಾಣವನ್ನು ಯಾವ ರೀತಿ ನಿರ್ಮಿಸಬೇಕು ಎಂಬುದರ ಬಗ್ಗೆ ಬಿಎಂಆರ್‌ಸಿಎಲ್ ಸಲಹಾ ವರದಿ ಪಡೆದಿದೆ.
ಮೂಲಗಳ ಪ್ರಕಾರ ಡಬಲ್‌ಡೆಕ್ಕರ್ ಸಿವಿಲ್ ಕಾಮಗಾರಿಗೆ ₹6,368 ಕೋಟಿ ಹಾಗೂ ಭೂಸ್ವಾಧೀನಕ್ಕೆ ₹ 2,548 ಕೋಟಿ ಸೇರಿ ಒಟ್ಟಾರೆ ₹ 8,916 ಕೋಟಿ ವೆಚ್ಚ ಆಗಲಿದೆ. ಇನ್ನೆರಡು ವಾರದಲ್ಲಿ ಈ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸುವಂತೆ ಬಿಎಂಆರ್‌ಸಿಎಲ್ ಮಂಡಳಿ ಕೋರಲು ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸಂಚಾರ ದಟ್ಟಣೆ, ಭೂಸ್ವಾಧೀನ ಸಮಸ್ಯೆಗೆ ಡಬಲ್ ಡೆಕ್ಕರ್ ಪರಿಹಾರ
ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ ನಿರ್ಮಾಣ, ಅಗಲೀಕರಣಕ್ಕೆ ಭೂಸ್ವಾಧೀನ ಸಮಸ್ಯೆ, ಕಡಿಮೆ ಖರ್ಚು ಸೇರಿ ಇತರೆ ಕಾರಣದಿಂದ ಭವಿಷ್ಯದ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಮಾದರಿ ಅನುಸರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಂದರೆ ತಳರಸ್ತೆಯಿಂದ ಮೇಲೆ ಎರಡು ಹಂತದಲ್ಲಿ ಎತ್ತರಿಸಿದ ರಸ್ತೆ ಮಾರ್ಗ ಹಾಗೂ ಅದರ ಮೇಲೆ ಮೆಟ್ರೋ ರೈಲು ಮಾರ್ಗ ಆಗಲಿದೆ. ಫೆಬ್ರವರಿಯಲ್ಲಿ ಸರ್ಕಾರ ಕಳೆದ ಬಜೆಟ್‌ನಲ್ಲಿ ಡಬಲ್ ಡೆಕ್ಕರ್‌ಗೆ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು.
ಡಬಲ್ ಡೆಕ್ಕರ್ ಸ್ವಾಗತಾರ್ಹ. ಆದರೆ, ಇದನ್ನು ಮೂಲ ವಿಸ್ತ್ರತ ಯೋಜನಾ ವರದಿಯಲ್ಲೇ ಉಲ್ಲೇಖಿಸಿ ಕೇಂದ್ರಕ್ಕೆ ಸಲ್ಲಿಸಬೇಕಿತ್ತು. ಪದೇ ಪದೇ ಯೋಜನೆ ಬದಲಿಸುವುದು ಸೂಕ್ತವಲ್ಲ. ಇದರಿಂದ ವಿಳಂಬವೂ ಆಗುತ್ತದೆ. ಜತೆಗೆ ಭವಿಷ್ಯದ ಎಲ್ಲ ಮೆಟ್ರೋ ಯೋಜನೆಯಲ್ಲಿ ಡಬಲ್ ಡೆಕ್ಕರ್ ಅಳವಡಿಸಬೇಕು.
-ಪ್ರಕಾಶ್ ಮಂಡೋತ್, ಬೆಂಗಳೂರು ಮೆಟ್ರೋ, ಸಬ್‌ಅರ್ಬನ್ ರೈಲು ಪ್ರಯಾಣಿಕರ ಸಂಘದ ಅಧ್ಯಕ್ಷರು