ಬೆಂಗಳೂರು-ಮೈಸೂರು ನಡುವೆ ನೈಸ್ ಕಂಪನಿಯಿಂದ ನಿರ್ಮಿಸಲು ಉದ್ದೇಶಿಸಿದ್ದ 111 ಕಿ.ಮೀ. ಎಕ್ಸ್‌ಪ್ರೆಸ್ ವೇ ರಸ್ತೆ ನಿರ್ಮಾಣ ಅಗತ್ಯವಿದೆಯೇ? ಎಂಬ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯ ಸಚಿವ ಸಂಪುಟ ಉಪಮಿತಿಯು ಶುಕ್ರವಾರ ಗಂಭೀರವಾಗಿ ಚರ್ಚೆ ನಡೆಸಿದೆ.
ಬೆಂಗಳೂರು : ಬೆಂಗಳೂರು-ಮೈಸೂರು ನಡುವೆ ನೈಸ್ ಕಂಪನಿಯಿಂದ ನಿರ್ಮಿಸಲು ಉದ್ದೇಶಿಸಿದ್ದ 111 ಕಿ.ಮೀ. ಎಕ್ಸ್‌ಪ್ರೆಸ್ ವೇ ರಸ್ತೆ ನಿರ್ಮಾಣ ಅಗತ್ಯವಿದೆಯೇ? ಎಂಬ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯ ಸಚಿವ ಸಂಪುಟ ಉಪಮಿತಿಯು ಶುಕ್ರವಾರ ಗಂಭೀರವಾಗಿ ಚರ್ಚೆ ನಡೆಸಿದೆ.
ಈಗಾಗಲೇ ಮೈಸೂರು-ಬೆಂಗಳೂರು ನಡುವೆ 6 ಪಥದ ಮುಖ್ಯ ರಸ್ತೆ (ಸರ್ವಿಸ್ ರಸ್ತೆ ಸೇರಿ ದಶಪಥ) ನಿರ್ಮಾಣ ಆಗಿರುವ ಹಿನ್ನೆಲೆಯಲ್ಲಿ ನೈಸ್ ಎಕ್ಸ್‌ಪ್ರೆಸ್ ವೇ ನಿರ್ಮಿಸುವ ಅಗತ್ಯವೇನಿದೆ? ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನೈಸ್ ಸಂಸ್ಥೆ ಮೂಲಕ ಬೆಂಗಳೂರು-ಮೈಸೂರು ನಡುವೆ ಎಕ್ಸ್‌ಪ್ರೆಸ್ ವೇ ರಸ್ತೆ ಸೇರಿದಂತೆ ವಿವಿಧ ಯೋಜನೆ ನಿರ್ಮಿಸುವ ಪ್ರಸ್ತಾವನೆ ಒಳಗೊಂಡಿರುವ ‘ಬೆಂಗಳೂರು-ಮೈಸೂರು ಮೂಲಸೌಲಭ್ಯ ಕಾರಿಡಾರ್ ಯೋಜನೆ’ (ಬಿಎಂಐಸಿಪಿ) ಪ್ರಗತಿ ಪರಿಶೀಲನೆ ನಡೆಸಿ ಯೋಜನೆ ಮುಂದುವರಿಸಬೇಕೆ? ಅಥವಾ ಬೇಡವೇ? ಎಂಬ ಬಗ್ಗೆ ಶಿಫಾರಸು ಮಾಡಲು ಒಟ್ಟು ಏಳು ಮಂದಿ ಸದಸ್ಯರ ಸಚಿವ ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ.
ಈ ಉಪಸಮಿತಿಯು ಶುಕ್ರವಾರ ಮೊದಲ ಸಭೆ ನಡೆಸಿದ್ದು, ಸಮಿತಿ ಸದಸ್ಯರಾದ ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ, ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಸದಸ್ಯರು ಭಾಗವಹಿಸಿದ್ದರು.
ಸಭೆಯಲ್ಲಿ ಪರಮೇಶ್ವರ್ ಅವರು ಯೋಜನೆಯ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. 1997ರಲ್ಲಿ ನೈಸ್ ಕಂಪೆನಿ ಮೂಲಕ ಬೆಂಗಳೂರು ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ ಮಾಡಲು ತೀರ್ಮಾನಿಸಲಾಗಿತ್ತು. ಇದರಡಿ 111 ಕಿ.ಮೀ. ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ, 41 ಕಿ.ಮೀ. ಫೆರಿಫೆರಲ್ ರಸ್ತೆ, 9.8 ಕಿ.ಮೀ. ಲಿಂಕ್ ರಸ್ತೆ ಹಾಗೂ ಎಕ್ಸ್‌ಪ್ರೆಸ್ ವೇಯಲ್ಲಿ 5 ಟೌನ್‌ಶಿಪ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ನೈಸ್ ಬಗ್ಗೆ ತುಂಬಾ ದೂರುಗಳು ಬಂದಿದ್ದು ಭೂವ್ಯಾಜ್ಯಗಳ ಸಂಬಂಧ 374 ಪ್ರಕರಣ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇವೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.
ಯೋಜನೆ ಅಗತ್ಯವಿದೆಯೇ?: ಪರಂ
ಈ ವೇಳೆ ಸಭೆಯಲ್ಲಿ ಎಕ್ಸ್‌ಪ್ರೆಸ್ ವೇ ರಸ್ತೆ ನಿರ್ಮಾಣದ ಬಗ್ಗೆ ಪ್ರಶ್ನಿಸಿದ ಪರಮೇಶ್ವರ್, ಈಗಾಗಲೇ ಮೈಸೂರು-ಬೆಂಗಳೂರು ನಡುವೆ ಆರು ರಸ್ತೆ ನಿರ್ಮಾಣ ಆಗಿದೆ. ಹೀಗಿರುವಾಗ ಮತ್ತೆ ಎಕ್ಸ್‌ಪ್ರೆಸ್ ವೇ ನಿರ್ಮಾಣ ಅಗತ್ಯವಿದೆಯೇ? 25 ವರ್ಷಗಳ ಬಳಿಕ ಈ ಯೋಜನೆ ಮುಂದುವರೆಸುವ ಅನಿವಾರ್ಯತೆ ಏನಿದೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು ಎಂದು ತಿಳಿದುಬಂದಿದೆ.
ಜತೆಗೆ ಒಂದು ವೇಳೆ ಬಿಎಂಐಸಿಪಿ ಅಡಿ ಉಳಿದ ಯೋಜನೆ ಕೈಗೊತ್ತಿಕೊಳ್ಳಲು ಭೂಸ್ವಾಧೀನ ಮುಂದುವರೆಸಿದರೆ ರೈತರಿಗೆ 2013 ಕಾಯ್ದೆ ಪ್ರಕಾರ ಪರಿಹಾರ ನೀಡಬೇಕೆ? ಅಥವಾ ಹಿಂದಿನ ನಿಯಮಗಳ ಪ್ರಕಾರ ನೀಡಬೇಕೆ? ಎಂಬ ಬಗ್ಗೆ ವರದಿ ನೀಡಿ. ಜತೆಗೆ ಪರಿಹಾರವನ್ನು ನೈಸ್ ಸಂಸ್ಥೆ ನೀಡಬೇಕೆ ಅಥವಾ ಸರ್ಕಾರ ನೀಡಬೇಕೆ ಎಂಬ ಬಗ್ಗೆ ವಿವರಣೆ ನೀಡಿ ಎಂದು ಕೋರಿದ್ಧಾರೆ.
ಈ ವೇಳೆ ನೈಸ್ ಸಂಸ್ಥೆಯು ಪರಿಹಾರ ನೀಡಲು ಸಿದ್ಧವಿಲ್ಲ ಎಂಬ ಬಗ್ಗೆ ಚರ್ಚೆಯಾಗಿದ್ದು, ಹಾಗಾದರೆ ಯೋಜನೆಯ ಪ್ರಸ್ತುತತೆ ಬಗ್ಗೆ ವಿವರವಾಗಿ ಮುಂದಿನ ಸಭೆಯಲ್ಲಿ ವರದಿ ಮಂಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.