ವಿಧಾನಸೌಧದಲ್ಲಿ ಪಶ್ಚಿಮದ್ವಾರದಲ್ಲಿ ನಾಡದೇವಿ ಪ್ರತಿಮೆ ಅನಾವರಣ - 25 ಅಡಿ ಎತ್ತರ, 20 ಟನ್‌ ತೂಕ

ಸಾರಾಂಶ

ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದ ನಾಡದೇವಿ ಭುವನೇಶ್ವರಿಯ ಬೃಹತ್‌ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಸೋಮವಾರ ಅದ್ದೂರಿಯಾಗಿ ನೆರವೇರಿತು.

 ಬೆಂಗಳೂರು : ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದ ನಾಡದೇವಿ ಭುವನೇಶ್ವರಿಯ ಬೃಹತ್‌ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಸೋಮವಾರ ಅದ್ದೂರಿಯಾಗಿ ನೆರವೇರಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಲಾಗಿರುವ 25 ಅಡಿ ಎತ್ತರದ ನಾಡದೇವಿ ಭುವನೇಶ್ವರಿಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಕ್ತಿಕೇಂದ್ರದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಅನಾವರಣಗೊಂಡು ಸ್ಥಿರವಾಗಿ ಸ್ಥಾಪನೆಯಾಗಿರುವುದು ಎಲ್ಲ ಕನ್ನಡಿಗರಿಗೆ ಹೆಮ್ಮೆಯ ದಿನ. ಜೂನ್‌ ತಿಂಗಳಲ್ಲಿ ಶಂಕುಸ್ಥಾಪನೆ ಮಾಡಿ, ನ.1ರಂದು ಪ್ರತಿಮೆ ಅನಾವರಣ ಮಾಡುವ ಗುರಿ ಇತ್ತು. ಆದರೆ ನಿಗದಿತ ಅವಧಿಯೊಳಗೆ ಪ್ರತಿಮೆ ಪೂರ್ಣವಾಗಿರಲಿಲ್ಲ. ಹಾಗಾಗಿ ಈಗ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ ಎಂದರು.

ಕನ್ನಡ ಭಾಷೆ, ಸಂಸ್ಕೃತಿ, ಕಲೆಯ ಕುರಿತು ರಾಜ್ಯದ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕರ್ನಾಟಕ ಎನ್ನುವುದು ನಮ್ಮ ನಿಮ್ಮೆಲ್ಲರ ಅಭಿಮಾನವಾಗಬೇಕು. ಆಗ ಮಾತ್ರ ಕನ್ನಡ ಸಾರ್ವಭೌಮ‌ಭಾಷೆಯಾಗುತ್ತದೆ. ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡವನ್ನು ಬಳಸಬೇಕು, ಬೆಳೆಸಬೇಕು, ಬೆಳಗಬೇಕು. ನಾವು ನಮ್ಮ ಸಹೋದರ ಮತ್ತು ಇತರೆ ಭಾಷಿಕರ ಜೊತೆ ಕನ್ನಡದಲ್ಲಿ ಮಾತನಾಡುವ, ವ್ಯವಹರಿಸುವ ಸಂಸ್ಕೃತಿಯನ್ನು ಪಾಲಿಸಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿದ್ದ ಮೇಲೆ ಯಾವುದೇ ಭಾಷಿಕರು ಕನ್ನಡ ಕಲಿಯಬೇಕು. ಇತರೆ ಭಾಷೆಯಲ್ಲಿ ತಪ್ಪು ತಪ್ಪಾಗಿ ಮಾತನಾಡುವುದಕ್ಕಿಂತ ನಮ್ಮದೇ ಭಾಷೆಯಲ್ಲಿ ಮಾತಾಡಬೇಕು. ಕನ್ನಡ ಕಲಿಯುವುದು ಅನಿವಾರ್ಯ ಎಂಬಂತಹ ವಾತಾವರಣ ನಿರ್ಮಾಣ ಮಾಡಬೇಕು. ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ, ಇತಿಹಾಸ, ಪ್ರತಿಯೊಬ್ಬರಿಗೂ ಗೊತ್ತಾಗಬೇಕು. ಈ ನಿಟ್ಟಿನಲ್ಲಿ ಕನ್ನಡಿಗರು ಮಾತೃಭಾಷೆಗೆ ಪ್ರಧಾನ ಸ್ಥಾನ ನೀಡಬೇಕೆಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಬೇರೆ ಯಾವ ರಾಜ್ಯದಲ್ಲೂ ಪ್ರತ್ಯೇಕ ಧ್ವಜ, ನಾಡಗೀತೆ ಇಲ್ಲ. ಕರ್ನಾಟಕದಲ್ಲಿ ಮಾತ್ರ ಕನ್ನಡ ಧ್ವಜ, ನಾಡಗೀತೆ ಇದೆ. ಈ ಕುರಿತು ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಇದು ನಮ್ಮ ಹೆಮ್ಮೆ ಎಂದು ಹೇಳಿದರು.

ರಾಜ್ಯೋತ್ಸವದ ದಿನ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು, ಕಾರ್ಖಾನೆ, ಕಂಪನಿಗಳು, ಸಂಘ-ಸಂಸ್ಥೆಗಳಲ್ಲಿ ಕನ್ನಡ ಧ್ವಜ ಹಾರಿಸಬೇಕು. ಅಗತ್ಯವಿದ್ದರೆ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲ್ಲವೇ ಬಿಬಿಎಂಪಿ ಮೂಲಕ ಕನ್ನಡ ಧ್ವಜ ಕೊಡಲು ಪ್ರಯತ್ನಿಸುತ್ತೇವೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಮಾತನಾಡಿ, ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ವರ್ಷವಿಡೀ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಅದರಂತೆ ಭುವನೇಶ್ವರಿ ತಾಯಿ ಪ್ರತಿಮೆ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಭುವನೇಶ್ವರಿ ತಾಯಿ ನಾಡಿನ ಪ್ರತೀಕ. ನಿಜಕ್ಕೂ ಇದು ಐತಿಹಾಸಿಕ ಕ್ಷಣ. ನಾನು ಸಚಿವನಾದ ಬಳಿಕ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಸಾಧ್ಯವಾಗಿದ್ದು ನನ್ನ ಪುಣ್ಯ. ನಮ್ಮ ಸರ್ಕಾರ ಎಂದೆಂದಿಗೂ ಕನ್ನಡಿಗರ ಪರ ಇರುವ ಸರ್ಕಾರ. ಕನ್ನಡದ ಭಾಷೆ, ನೆಲ, ಜಲ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರು.

ಸನ್ಮಾನ: ಇದೇ ವೇಳೆ ಭುವನೇಶ್ವರಿ ಕಂಚಿನ ಪ್ರತಿಮೆ ನಿರ್ಮಿಸಿದ ಕಲಾವಿದ ಗೊಂಬೆಮನೆ ಶ್ರೀಧರಮೂರ್ತಿ, ಅನಂತ ಸಿತಾರ, ಸಿವಿಲ್‌ ಗುತ್ತಿಗೆದಾರ ಶಿವರಾಜ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು. ಹಾಗೆಯೇ ರಥಯಾತ್ರೆಯ ಸಚಿತ್ರ ಪುಸ್ತಕ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌, ಸಚಿವರಾದ ರಾಮಲಿಂಗಾರೆಡ್ಡಿ, ಬೈರತಿ ಸುರೇಶ್‌, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಎಚ್‌.ಎಂ.ರೇವಣ್ಣ, ವಿಧಾನ ಪರಿಷತ್ತು ಮುಖ್ಯ ಸಚೇತಕ ಸಲೀಂ ಅಹ್ಮದ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಶಾಸಕ ರಿಜ್ವಾನ್‌ ಅರ್ಷದ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕಸಾಪ ಅಧ್ಯಕ್ಷ ಡಾ.ಮಹೇಶ್‌ಜೋಶಿ ಸೇರಿದಂತೆ ಮತ್ತಿತರರು ಇದ್ದರು.

ಕಂಚಿನ ಪ್ರತಿಮೆ ವಿಶೇಷ

ಭುವನೇಶ್ವರಿ ದೇವಿಯ ಪ್ರತಿಮೆ 25 ಅಡಿ ಎತ್ತರವಿದ್ದು, ಒಟ್ಟಾರೆ ನೆಲಮಟ್ಟದಿಂದ 43.06 ಅಡಿ ಎತ್ತರವಿದೆ. ಪ್ರತಿಮೆಯ ತೂಕ 20 ಟನ್‌, ಕರ್ನಾಟಕ ನಕ್ಷೆಯ ತೂಕ 11.50 ಟನ್‌ ಹೀಗೆ ಒಟ್ಟು ತೂಕ 31.50 ಟನ್‌. ಉದ್ಯಾನ ಸೇರಿ ಭುವನೇಶ್ವರಿ ಪ್ರತಿಮೆಯ ಒಟ್ಟು ವಿಸ್ತೀರ್ಣ 4500 ಚ.ಮೀಟರ್‌. ಕಲ್ಲು ಕಟ್ಟಡದ ಪೀಠ ಹೊಯ್ಸಳ ಶೈಲಿಯಲ್ಲಿದೆ. ಪ್ರದಕ್ಷಿಣ ಪಥದ ಸುತ್ತ ಕರ್ಣಕೂಟ ಮತ್ತು ಅಲಂಕಾರಿಕ ಕಲ್ಲಿನ ಕೈಪಿಡಿ ನಿರ್ಮಿಸಲಾಗಿದೆ. ಭುವನೇಶ್ವರಿ ದೇವಿ ನಿರ್ಮಾಣ ಮತ್ತು ಪ್ರತಿಷ್ಠಾಪನೆಗಾಗಿ 21.24 ಕೋಟಿ ರು.ವೆಚ್ಚ ಮಾಡಲಾಗಿದೆ.

ನಾಡದೇವಿ ಪ್ರತಿಮೆ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬುಶಿಲ್ಪವಿದ್ದು, ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದೆ. ಹಿಂಬದಿಯಲ್ಲಿ ನಾಡಗೀತೆ ಕೆತ್ತಲಾಗಿದೆ. ಕರ್ನಾಟಕದ ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಹೊಯ್ಸಳ, ಚಾಲುಕ್ಯ, ಕದಂಬ ಹಾಗೂ ಆಧುನಿಕ ನೈಜಶಿಲ್ಪಗಳನ್ನು ಅಳವಡಿಸಿ ಪ್ರತಿಮೆ ನಿರ್ಮಿಸಲಾಗಿದೆ. ಇದರಲ್ಲಿ ರಾಜಲಾಂಛನಗಳಾದ ಹೊಯ್ಸಳ ಲಾಂಛನ, ವೈಜಯಂತಿಮಾಲೆ, ಕಂಠಿಹಾರ, ಗಂಡ-ಬೇರುಂಡ ನಿರ್ಮಾಣ ಮಾಡಲಾಗಿದೆ.

Share this article