ರಾಷ್ಟ್ರ ಮಟ್ಟದ ವಿಚಾರ ಸಂಕಿರಣ : ರಂಗಭೂಮಿ ಶಿಕ್ಷಣಕ್ಕೆ ಮಕ್ಕಳ ಆಯ್ಕೆಯೇ ಸವಾಲು - ಉಮೇಶ್‌

Published : Dec 28, 2024, 10:29 AM IST
Film theater

ಸಾರಾಂಶ

ರಂಗಭೂಮಿ ಶಿಕ್ಷಣಕ್ಕೆ ಮಕ್ಕಳನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸ ಎಂದು ಹಿರಿಯ ರಂಗಕರ್ಮಿ ಪ್ರೊ.ಎಚ್‌.ಎಸ್‌.ಉಮೇಶ್‌ ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯ :  ರಂಗಭೂಮಿ ಶಿಕ್ಷಣಕ್ಕೆ ಮಕ್ಕಳನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸ ಎಂದು ಹಿರಿಯ ರಂಗಕರ್ಮಿ ಪ್ರೊ.ಎಚ್‌.ಎಸ್‌.ಉಮೇಶ್‌ ಅಭಿಪ್ರಾಯಪಟ್ಟಿದ್ದಾರೆ. 

ಶಿಕ್ಷಣದಲ್ಲಿ ರಂಗಭೂಮಿ ಮತ್ತದರ ಆಯಾಮಗಳ ಕುರಿತು ಮೂರು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಬಳಿ ಇರುವ ನಿರ್ದಿಗಂತದಲ್ಲಿ ಆರಂಭಗೊಂಡಿದ್ದು, ಮೊದಲನೇಯ ದಿನ ಶಿಕ್ಷಣದಲ್ಲಿ ರಂಗಭೂಮಿ ಅನುಸಂಧಾನ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ರಂಗಭೂಮಿ ಬಗ್ಗೆ ಮಾತನಾಡುವಾಗ ನಾವು ಯಾವ ವಯೋಮಾನದ ಮಕ್ಕಳನ್ನು ಗುರುತಿಸಬೇಕು. 5 ರಿಂದ 10 ವರ್ಷದವರೆಗಿರಬೇಕಾ ಅಥವಾ 18 ವರ್ಷದವರೆಗಿನವರನ್ನು ಒಳಗೊಳ್ಳಬೇಕಾ ಎಂಬುದನ್ನು ನಿರ್ದಿಷ್ಟವಾಗಿ ಗುರುತಿಸಬೇಕು. ಅಲ್ಲಿಯೂ ಸಾಕಷ್ಟು ಸವಾಲುಗಳಿವೆ ಎಂದು ಹೇಳಿದರು.

ರಂಗಭೂಮಿಯು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ತಂಡದೊಳಗೆ ಕೆಲಸ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುತ್ತದೆ. ತರಗತಿಗಳಲ್ಲಿ ನಾಟಕ ಚಟುವಟಿಕೆಗಳು, ಆಟಗಳು ಮತ್ತು ತಂತ್ರಗಳ ಬಳಕೆ ಒಳಗೊಂಡಿರುತ್ತದೆ. ಪರಸ್ಪರ ಸಹಾನುಭೂತಿ ಮತ್ತು ತಿಳುವಳಿಕೆ ಬೆಳೆಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ರಂಗಭೂಮಿ ಚಟುವಟಿಕೆಗಳಲ್ಲಿ ಭಾಗವಹಿಸುವವರು ಒಟ್ಟಾಗಿ ಕೆಲಸ ಮಾಡುವುದು ಮತ್ತು ಅವರ ಗುರಿಗಳನ್ನು ಸಾಧಿಸಲು ಪರಿಣಾಮಕಾರಿಯಾಗಿ ಸಂವಹನ ಮಾಡುವುದು ಅವಶ್ಯಕವಾಗಿದೆ ಎಂದು ನುಡಿದರು.

ರಂಗಭೂಮಿ ಶಿಕ್ಷಣದ ಮೂಲಕ ಮಕ್ಕಳ ವ್ಯಕ್ತಿತ್ವ ಹೇಗೆ ಬೆಳೆಸಬಹುದು. ಅವರ ಚಿಂತನೆ, ಆಲೋಚನೆ, ಕಲ್ಪನೆಗಳನ್ನು ಹೇಗೆ ಬೆಳೆಸಬಹುದು. ಶಿಕ್ಷಣದ ಜೊತೆಗೆ ರಂಗಭೂಮಿಯನ್ನು ಹೇಗೆ ಅನುಸಂಧಾನಗೊಳಿಸಬೇಕು. ರಂಗಭೂಮಿಯ ಸಾಧನಗಳನ್ನು ಶಿಕ್ಷಣದ ಭಾಗವಾಗಿಟ್ಟುಕೊಂಡು ಹೇಗೆಲ್ಲಾ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆ ಚಿಂತನೆಗಳು, ಚರ್ಚೆಗಳು ನಡೆಯಬೇಕು ಎಂದು ಹೇಳಿದರು.

ಶಿಕ್ಷಣದಲ್ಲಿ ನಾಟಕವು ವಿದ್ಯಾರ್ಥಿಗಳಿಗೆ ತಮ್ಮ ಭಾವನೆಗಳನ್ನು ನಿಭಾಯಿಸಲು, ಸಕಾರಾತ್ಮಕ ಸಂಬಂಧಗಳನ್ನು ಸ್ಥಾಪಿಸಲು ಮತ್ತು ಸಕಾರಾತ್ಮಕ ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಒಂದು ಮಾರ್ಗವನ್ನು ಒದಗಿಸುತ್ತದೆ. ಶಿಕ್ಷಣದಲ್ಲಿ ನಾಟಕವು ಕೇವಲ ಪ್ರದರ್ಶನ ಕಲೆಗಳಿಗೆ ಸೀಮಿತವಾಗಿಲ್ಲ. ಇದು ಇತರೆ ವಿಷಯಗಳಲ್ಲಿ ಕಲಿಕೆಯನ್ನು ಹೆಚ್ಚಿಸಬಹುದು ಎಂದು ಅಭಿಪ್ರಾಯಪಟ್ಟರು.

ಚಳವಳಿ ರಂಗಭೂಮಿ ವಿಷಯ ಕುರಿತು ಮುಂಬೈ ಡ್ರಾಮಾ ಸ್ಕೂಲ್‌ ಸಹ ಸಂಸ್ಥಾಪಕ ಜೆಹಾನ್‌ ಮಾಣಿಕ್‌ ಷಾ, ಶಾಲಾ ಕೊಠಡಿಗಳಲ್ಲಿ ರಂಗಭೂಮಿಯ ಸ್ವರೂಪ ಕುರಿತು ಕೊಚ್ಚಿನ್‌ ಲೋಕಧರ್ಮಿ ಥಿಯೇಟರ್‌ ಕಲಾ ನಿರ್ದೇಶಕ ಡಾ.ಚಂದ್ರದಾಸನ್‌ ಹಾಗೂ ಇತರರು ವಿವಿಧ ವಿಷಯಗಳ ಕುರಿತು ವಿಚಾರ ಮಂಡಿಸಿದರು.

ಶಿಕ್ಷಣದಲ್ಲಿ ರಂಗಭೂಮಿ ಹೇಗಿರಬೇಕೆಂಬ ಹುಡುಕಾಟದಲ್ಲಿದ್ದೇವೆ: ಪ್ರಕಾಶ್‌ ರಾಜ್

ಇದಕ್ಕೆ ಪೂರಕವಾಗಿ ಆಶಯ ಭಾಷಣ ಮಾಡಿದ ನಟ ಹಾಗೂ ನಿರ್ದಿಗಂತ ಸಂಸ್ಥಾಪಕ ಪ್ರಕಾಶ್‌ ರಾಜ್ ಅವರು, ಶಿಕ್ಷಣದಲ್ಲಿ ರಂಗಭೂಮಿ ಹೇಗಿರಬೇಕು ಎಂಬ ಬಗ್ಗೆ ಒಟ್ಟಾರೆ ರೂಪುರೇಷೆ ಇನ್ನೂ ಆಗಿಲ್ಲ. ನಾವೂ ಕೂಡ ಅದರ ಹುಡುಕಾಟದಲ್ಲಿದ್ದೇನೆ. ಎಲ್ಲರೂ ಸೇರಿ ಒಟ್ಟಿಗೆ ಹುಡುಕಿದಾಗ ಇದಕ್ಕೊಂದು ನಿರ್ದಿಷ್ಟ ಮಾರ್ಗ ಸಿಗುತ್ತದೆ. ನಂತರ ಅವುಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಆಲೋಚಿಸಬಹುದು ಎಂದು ಅಭಿಪ್ರಾಯಪಟ್ಟರು. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕಾಸರಗೋಡು ಕನ್ನಡಿಗರ ಮೇಲೆ ನಾವು ಮಲಯಾಳಂ ಹೇರುತ್ತಿಲ್ಲ : ಕೇರಳ ಸಿಎಂ
2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ