ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿಗೆ ಪರ್ಯಾಯವಾಗಿ ನೀಡಲಾಗುತ್ತಿದ್ದ ಹಣದ ಬದಲು ಅಕ್ಕಿಯನ್ನೇ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ
ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿಗೆ ಪರ್ಯಾಯವಾಗಿ ನೀಡಲಾಗುತ್ತಿದ್ದ ಹಣದ ಬದಲು ಅಕ್ಕಿಯನ್ನೇ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಫೆಬ್ರವರಿ ತಿಂಗಳಿಂದಲೇ ಅನ್ವಯವಾಗುವಂತೆ ಪ್ರತಿಯೊಬ್ಬ ಬಿಪಿಎಲ್ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಆದೇಶ ಹೊರಡಿಸಿದೆ.
ಅನ್ನಭಾಗ್ಯ ಅಕ್ಕಿ ಹಣ ಪಾವತಿಯಾಗದ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ವ್ಯಕ್ತವಾದ ಬೆನ್ನಲ್ಲೇ ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರ್ಕಾರದಿಂದ ಅಕ್ಕಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ಹೆಚ್ಚುವರಿ 5 ಕೆ.ಜಿ. ಅಕ್ಕಿಗೆ ಬದಲಿಗೆ 170 ರು. ನೀಡಲಾಗುತ್ತಿತ್ತು. ಇದೀಗ ಹಣದ ಬದಲು 5 ಕೆ.ಜಿ. ಹೆಚ್ಚುವರಿ ಅಕ್ಕಿ ಸೇರಿ ತಲಾ 10 ಕೆ.ಜಿ. ಅಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಚುನಾವಣೆಗೆ ಮೊದಲು ತಲಾ 10 ಕೆ.ಜಿ. ಅಕ್ಕಿ ಪೂರೈಸುವುದಾಗಿ ಹೇಳಿದ್ದೆವು. ಅಧಿಕಾರಕ್ಕೆ ಬಂದ ಬಳಿಕ ಅಗತ್ಯ ಅಕ್ಕಿ ಲಭ್ಯವಾಗದ ಕಾರಣ 5 ಕೆ.ಜಿ. ಅಕ್ಕಿ ಹಾಗೂ ಉಳಿದ 5 ಕೆ.ಜಿ. ಅಕ್ಕಿಗೆ ಬದಲಾಗಿ ಪ್ರತಿಯೊಬ್ಬರಿಗೆ ಮಾಸಿಕ 170 ರು. ಹಣ ಪಾವತಿ ಮಾಡಲಾಗುತ್ತಿತ್ತು. ಇದೀಗ ನಮಗೆ ಅಗತ್ಯವಿರುವ ಹೆಚ್ಚುವರಿ 5 ಕೆ.ಜಿ. ಅಕ್ಕಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಪ್ರತಿ ತಿಂಗಳಿಗೆ 2.29 ಲಕ್ಷ ಮೆಟ್ರಿಕ್ ಟನ್ ಹಾಗೂ ವರ್ಷಕ್ಕೆ 27.48 ಲಕ್ಷ ಮೆಟ್ರಿಕ್ ಟನ್‌ನಷ್ಟು ಅಕ್ಕಿ ಒದಗಿಸಬೇಕೆಂಬ ರಾಜ್ಯ ಸರ್ಕಾರದ ಅಧಿಕಾರಿಗಳ ಪತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಂದಿಸಿದ್ದಾರೆ. ಹೀಗಾಗಿ ಹಣದ ಬದಲು ಅಕ್ಕಿಯನ್ನೇ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
\Bವಾರದಲ್ಲಿ 3 ತಿಂಗಳ ಹಣ ಬಿಡುಗಡೆ:\B
ನವೆಂಬರ್‌ವರೆಗೂ (ಅಕ್ಟೋಬರ್ ಬಾಬ್ತು) ತಲಾ 170 ರು.ನಂತೆ ಹಣ ನೀಡಿದ್ದೇವೆ. ಕೇಂದ್ರ ಸರ್ಕಾರ ಮೊದಲು ಒಂದು ಕೆ.ಜಿ.ಗೆ 28 ರು. ನಂತೆ ದರ ನಿಗದಿ ಮಾಡಿತ್ತು. ಇದೀಗ ಜನವರಿಯಿಂದ ಪ್ರತಿ ಕೆ.ಜಿ.ಗೆ 22.50 ರು.ನಂತೆ ನೀಡಲು ತೀರ್ಮಾನಿಸಿದೆ. ಹೀಗಾಗಿ ಡಿಬಿಟಿ ಮೂಲಕ ಎಷ್ಟು ಹಣ ನೀಡಬೇಕು ಎಂಬ ಗೊಂದಲ ಉಂಟಾಗಿತ್ತು.
ಈಗ ಫೆಬ್ರವರಿಯಿಂದ ಹಣದ ಬದಲು ಅಕ್ಕಿ ನೀಡಲು ತೀರ್ಮಾನಿಸಿದ್ದೇವೆ. ಹೀಗಾಗಿ ನವೆಂಬರ್, ಡಿಸೆಂಬರ್ ಹಾಗೂ ಜನವರಿ ಹಣವನ್ನು ಡಿಬಿಟಿ ಮೂಲಕ ಅರ್ಹ ಪಡಿತರದಾರರಿಗೆ ಒಂದು ವಾರದ ಒಳಗಾಗಿ ಹಾಕುತ್ತೇವೆ ಎಂದು ಮುನಿಯಪ್ಪ ಸ್ಪಷ್ಟಪಡಿಸಿದರು.
10,452 ಕೋಟಿ ರು. ಡಿಬಿಟಿ:
ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ ಪ್ರಾರಂಭವಾದ ದಿನದಿಂದ (2023-ಜುಲೈ) 2024ರ ಅಕ್ಟೋಬರ್‌ವರೆಗೆ ಬರೋಬ್ಬರಿ 10,452 ಕೋಟಿ ರು. ಡಿಬಿಟಿ ಮೂಲಕ ಅರ್ಹ ಪಡಿತರದಾರರಿಗೆ ನೀಡಿದ್ದೇವೆ ಎಂದು ಹೇಳಿದರು.
ಅನ್ನ ಸುವಿಧಾ ಜಾರಿ:
2024-25ನೇ ಸಾಲಿನ ಬಜೆಟ್ ಘೋಷಣೆಯಂತೆ ಅನ್ನ ಸುವಿಧಾ ಯೋಜನೆ ಜಾರಿಗೊಳಿಸಲಾಗುತ್ತಿದೆ. 80 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಪಡಿತರ ವಿತರಣೆಯನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್,ನಿಗಮದ ನಿರ್ದೇಶಕ ಚಂದ್ರಕಾಂತ್ ಹಾಜರಿದ್ದರು.
ಅಕ್ಕಿ ವಿತರಿಸಿದರೆ ತಿಂಗಳಿಗೆ
160 ಕೋಟಿ ರು. ಉಳಿತಾಯ
ಈ ಮೊದಲು ಕೇಂದ್ರ ಸರ್ಕಾರ ಪ್ರತಿ ಕೆ.ಜಿ.ಗೆ 28 ರು.ನಂತೆ ದರ ನಿಗದಿ ಮಾಡಿತ್ತು. ಸಾಗಣೆ ವೆಚ್ಚ, ಕಮಿಷನ್ ಎಲ್ಲವನ್ನೂ ಪರಿಗಣಿಸಿ ಸರ್ಕಾರ ಪ್ರತಿ ಕೆ.ಜಿ.ಗೆ 34 ರು.ಗಳಂತೆ ಅಕ್ಕಿ ಬದಲಿಗೆ ಹಣವನ್ನು ಪಡಿತರದಾರರಿಗೆ ನೀಡುತ್ತಿತ್ತು. ಇದೀಗ ಕೇಂದ್ರ ಸರ್ಕಾರ ಪ್ರತಿ ಕೆ.ಜಿ.ಗೆ 22.50 ರು. ನಂತೆ ಅಕ್ಕಿ ನೀಡಲು ಒಪ್ಪಿದೆ. ಹೀಗಾಗಿ ಸಾಗಣೆ ವೆಚ್ಚ ಸೇರಿ 25 ರು. ಮಾತ್ರ ತಗುಲಲಿದ್ದು, ತಿಂಗಳಿಗೆ ರಾಜ್ಯ ಸರ್ಕಾರಕ್ಕೆ 160 ಕೋಟಿ ರು. ಉಳಿತಾಯವಾಗಲಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಅನರ್ಹ ಕಾರ್ಡ್‌ದಾರರ ಮೇಲೆ ದಂಡ
ಪ್ರಯೋಗ: ಮುನಿಯಪ್ಪ ಎಚ್ಚರಿಕೆ
ಅನರ್ಹ ಬಿಪಿಎಲ್ ಕಾರ್ಡ್‌ದಾರರು ತಮ್ಮ ಪಡಿತರ ಚೀಟಿ ವಾಪಸ್ ಮಾಡಬೇಕು. ಇಲ್ಲದಿದ್ದರೆ ಪಂಚಾಯಿತಿಮಟ್ಟದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಅಭಿಯಾನ ನಡೆಸಿ ತಪ್ಪಿತಸ್ಥರ ಮೇಲೆ ದಂಡ ಪ್ರಯೋಗ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಎಚ್ಚರಿಸಿದ್ದಾರೆ.
ಈಗಾಗಲೇ ಅನರ್ಹರು ತಮ್ಮ ಬಿಪಿಎಲ್ ಕಾರ್ಡು ವಾಪಸು ಮಾಡುವಂತೆ ಮನವಿ ಮಾಡಿದ್ದೇವೆ. ಈ ಬಗ್ಗೆ ಒಂದು ವಾರದ ಒಳಗಾಗಿ ಜಾಹೀರಾತು ಪ್ರಕಟಿಸುತ್ತೇವೆ. ಬಳಿಕವೂ ಎಚ್ಚೆತ್ತುಕೊಳ್ಳದಿದ್ದರೆ ದಂಡ ಪ್ರಯೋಗ ಮಾಡುತ್ತೇವೆ. ಪಡಿತರ ವಿತರಣೆ ಸಮರ್ಪಕವಾಗಿರಬೇಕು, ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ರದ್ದುಗೊಳಿಸಬೇಕು, ಸಗಟು ಮಳಿಗೆ ಮತ್ತು ನ್ಯಾಯಬೆಲೆ ಅಂಗಡಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು ಎಂಬುದು ನಮ್ಮ ಪ್ರಮುಖ ಉದ್ದೇಶ ಎಂದರು.
ಪಡಿತರ ಚೀಟಿದಾರರ ವಿವರ
ಕಾರ್ಡ್- ಕುಟುಂಬಗಳ ಸಂಖ್ಯೆ- ಸದಸ್ಯರ ಸಂಖ್ಯೆ
ಬಿಪಿಎಲ್, ಅಂತ್ಯೋದಯ (ಆದ್ಯತಾ ಕುಟುಂಬ) - 1.28 ಕೋಟಿ ರು. - 4.50 ಕೋಟಿ
ಎಪಿಎಲ್ ಕುಟುಂಬ- 25.29 ಲಕ್ಷ - 86.68 ಲಕ್ಷ
ಒಟ್ಟು- 1.53 ಕೋಟಿ - 5.36 ಕೋಟಿ.
ಈ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ದೂರುಗಳು ಬಂದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸಮರ್ಪಕವಾಗಿ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕನಿಷ್ಠ ಬೆಂಬಲ ಬೆಲೆ ಯೋಜನೆ:
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ ಮತ್ತು ಭತ್ತ ಖರೀದಿಸಲು 366 ಖರೀದಿ ಕೇಂದ್ರ ತೆರೆಯಲಾಗಿದೆ. 2024 ಡಿಸೆಂಬರ್ 1 ರಿಂದ ರೈತರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 2025ರ ಮಾ.31ರವರೆಗೆ ನೋಂದಣಿಗೆ ಅವಕಾಶವಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಬಂಧಪಟ್ಟ ಕಚೇರಿಗಳಿಗೆ ರೈತರು ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದರು.