ಸೆಕ್ಯುರಿಟಿ ಏಜೆನ್ಸಿ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ಮತ್ತೆ ಸೆಕ್ಯುರಿಟಿ ಏಜೆನ್ಸಿ ಮೂಲಕವೇ ಶಿಕ್ಷಕರನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ತೀವ್ರ ವಿರೋಧಕ್ಕೆ ಎಡೆ ಮಾಡಿಕೊಟ್ಟಿದೆ.
ಬೆಂಗಳೂರು : ಸೆಕ್ಯುರಿಟಿ ಏಜೆನ್ಸಿ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ಮತ್ತೆ ಸೆಕ್ಯುರಿಟಿ ಏಜೆನ್ಸಿ ಮೂಲಕವೇ ಶಿಕ್ಷಕರನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ತೀವ್ರ ವಿರೋಧಕ್ಕೆ ಎಡೆ ಮಾಡಿಕೊಟ್ಟಿದೆ.
ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಭದ್ರತಾ ಸೇವೆ ಒದಗಿಸುವ ಸಂಸ್ಥೆಯ ಮೂಲಕ ಪಾಲಿಕೆಯ ಶಾಲಾ-ಕಾಲೇಜುಗಳಿಗೆ ಹೊರ ಗುತ್ತಿಗೆಯ ಆಧಾರದಡಿ 700 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಹೊರಟಿರುವುದು ವಿವಾದದ ಕೇಂದ್ರ ಬಿಂದು.
ಸೆಕ್ಯುರಿಟಿ ಸಂಸ್ಥೆ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಕಳೆದ ಡಿಸೆಂಬರ್‌ನಲ್ಲಿ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಸೆಕ್ಯುರಿಟಿ ಸಂಸ್ಥೆಗೆ ಶಿಕ್ಷಕರ ನಿಯೋಜನೆಯ ಗುತ್ತಿಗೆ ರದ್ದುಪಡಿಸಲಾಗುವುದು ಎಂದು ಹೇಳಿದ್ದರು. ಆದರೆ, ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೂ ಮುನ್ನ ಅಂದರೆ ಮಾರ್ಚ್ 7 ರಂದೇ ಮೂರು ಏಜೆನ್ಸಿಗಳಿಗೆ ಹೊರ ಗುತ್ತಿಗೆಯಡಿ ಶಿಕ್ಷಕರ ನಿಯೋಜನೆಗೆ ಕಾರ್ಯಾದೇಶ ನೀಡಲಾಗಿದೆ. ಮೂರೂ ಏಜೆನ್ಸಿಗಳು ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಿವೆ. ತಮ್ಮ ಕಚೇರಿ ವಿಳಾಸ ನೀಡಿ ಆಸಕ್ತರು ಬಂದು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಎಂಬ ವಾಟ್ಸಾಪ್ ಸಂದೇಶವನ್ನು ಆಕಾಂಕ್ಷಿಗಳಿಗೆ ಕಳುಹಿಸಿವೆ.
ಬಡ ಮಕ್ಕಳ ಶಾಲೆಗಳಿವು:
ಬಿಬಿಎಂಪಿ ಶಾಲೆಯಲ್ಲಿ ಬಹುತೇಕ ಬಡವರ ಮಕ್ಕಳೇ ವ್ಯಾಸಂಗ ಮಾಡುತ್ತಾರೆ. ಈ ಮಕ್ಕಳ ಶಿಕ್ಷಣಕ್ಕಾಗಿ ನುರಿತ ಹಾಗೂ ಅನುಭವವುಳ್ಳ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕಾದಲ್ಲಿ ಶಿಕ್ಷಣದ ವಿಷಯದಲ್ಲಿ ಅನುಭವ ಇರುವಂತಹ ಏಜೆನ್ಸಿಗೆ ಹೊಣೆ ನೀಡಬೇಕು. ಆದರೆ, ಸೆಕ್ಯುರಿಟಿಗಳನ್ನು ನೇಮಕ ಮಾಡಿಕೊಳ್ಳುವ ಸಂಸ್ಥೆಗೆ ಶಿಕ್ಷಕರ ನೇಮಕದ ಜವಾಬ್ದಾರಿ ಹೊರಿಸಿದರೆ ಅದರಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಲಿದೆಯೇ ಎಂಬುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ.
ಹಾಲಿ ಶಿಕ್ಷಕರಿಗೆ ಕೊಕ್:
ಬಿಬಿಎಂಪಿಯಲ್ಲಿ ಹಾಲಿ 700 ಶಿಕ್ಷಕರು ಹೊರಗುತ್ತಿಗೆಯಡಿ ಕರ್ತವ್ಯ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರನ್ನು ಸೇವೆಯಿಂದ ಹೊರಗೆ ಕಳುಹಿಸಲು ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಲ್ಲಿ ಬಹುತೇಕರು ಅನುಭವವುಳ್ಳವರಾಗಿದ್ದಾರೆ. ಕೆಲವರು ಮಾತ್ರ ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂಬ ಮಾತಿದೆ. ಅಂತಹವರನ್ನು ಸೇವೆಯಿಂದ ತೆಗೆಯಬಹುದಾಗಿತ್ತು. ಆದರೆ, ಉತ್ತಮ ಫಲಿತಾಂಶ ಬಂದಿಲ್ಲ ಎಂಬ ಕಾರಣಕ್ಕೆ ಹಾಲಿ ಇರುವವರನ್ನೆಲ್ಲಾ ಕೆಲಸದಿಂದ ತೆಗೆದುಹಾಕಿ ಹೊಸಬರನ್ನು ನೇಮಕ ಮಾಡಿಕೊಳ್ಳಲು ಮೂರು ಸೆಕ್ಯುರಿಟಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಈ ಏಜೆನ್ಸಿಗಳಿಗೆ ಶಿಕ್ಷಣ ಕ್ಷೇತ್ರದ ಅರಿವು ಇದೆಯೇ? ನೇಮಕಗೊಂಡ ಶಿಕ್ಷಕರು ಹೇಗೆ ಮಕ್ಕಳಿಗೆ ಪಾಠ ಕಲಿಸುತ್ತಿದ್ದಾರೆ ಎಂಬ ಮಾಪನವನ್ನು ಹೇಗೆ ಮಾಡಲಾಗುತ್ತದೆ ಎಂಬುದಕ್ಕೆ ಬಿಬಿಎಂಪಿ ಬಳಿ ಉತ್ತರವಿಲ್ಲ.
ಈ ಹಿಂದೆ ಸೆಕ್ಯುರಿಟಿ ಏಜೆನ್ಸಿಗೆ ಗುತ್ತಿಗೆ ನೀಡುವುದಿಲ್ಲ. ಶಿಕ್ಷಣ ಇಲಾಖೆ ಮುಖಾಂತರವೇ ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ಅದರೆ, ಮತ್ತೆ ತರಾತುರಿಯಲ್ಲಿ ಸೆಕ್ಯುರಿಟಿ ಏಜೆನ್ಸಿ ಮೂಲಕ ನೇಮಕಕ್ಕೆ ಅನುಮತಿ ನೀಡಲಾಗಿದೆ.
ಬಿಬಿಎಂಪಿ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿರುವುದರಿಂದ ಹೊರ ಗುತ್ತಿಗೆಯಡಿ ಶಿಕ್ಷಕರ ನಿಯೋಜನೆಗೆ ಏಜೆನ್ಸಿಗಳಿಗೆ ಸೂಚಿಸಲಾಗಿದ್ದು, ಸದ್ಯ ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರನ್ನು ಈ ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ.
- ಪಿ.ಎಸ್.ರಮೇಶ್, ಸಹಾಯಕ ಆಯುಕ್ತ, ಬಿಬಿಎಂಪಿ ಶಿಕ್ಷಣ ವಿಭಾಗ
ಈ ಹಿಂದೆ ಇದೇ ವಿಷಯವನ್ನು ಉಪಮುಖ್ಯಮಂತ್ರಿಗಳು, ಬಿಬಿಎಂಪಿ ಮುಖ್ಯ ಆಯುಕ್ತರ ಗಮನಕ್ಕೆ ತಂದ ಬಳಿಕ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತ ಮಾಡಲಾಗಿತ್ತು. ಈಗ ಮತ್ತೆ ಅದೇ ಹುಚ್ಚುತನದ ಪ್ರಯತ್ನ ಮಾಡಿ ಶಿಕ್ಷಕರನ್ನು ಹೊರಗುತ್ತಿಗೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಮೂರು ಸೆಕ್ಯುರಿಟಿ ಏಜೆನ್ಸಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ಶಿಕ್ಷಕರ ನೇಮಕಾತಿಯನ್ನು ಸೆಕ್ಯುರಿಟಿ ಏಜೆನ್ಸಿಗೆ ನೀಡಿದರೆ ಶಿಕ್ಷಣ ಕ್ಷೇತ್ರದ ಸ್ಥಿತಿ ಎಲ್ಲಿಗೆ ತಲುಪಿದಂತಾಗುತ್ತದೆ.
-ಎಸ್.ಸುರೇಶ್‌ಕುಮಾರ್, ಮಾಜಿ ಶಿಕ್ಷಣ ಸಚಿವ
ಸ್ಕ್ರೀನಿಂಗ್ ಕಮಿಟಿ ರಚನೆ
ಪ್ರಸ್ತುತ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಮುಂದುವರೆಸಲಾಗುವುದು. ಹೊಸದಾಗಿ ನೇಮಕ ಮಾಡಿಕೊಳ್ಳುವ ಶಿಕ್ಷಕರ ನೇಮಕಕ್ಕೆ ಬಿಬಿಎಂಪಿಯ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರ ಅಧ್ಯಕ್ಷತೆಯಲ್ಲಿ ಸ್ಕ್ರೀನಿಂಗ್ ಕಮಿಟಿ ರಚಿಸಲಾಗಿದೆ. ಶಿಕ್ಷಕರ ಅರ್ಹತೆಯನ್ನು ಈ ಸ್ಕ್ರೀನಿಂಗ್ ಸಮಿತಿ ಪರಿಶೀಲಿಸಲಿದೆ. ಅರ್ಹತೆ ಹೊಂದಿದ ಶಿಕ್ಷಕರನ್ನು ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಗುತ್ತಿಗೆ ಪಡೆದ ಸಂಸ್ಥೆಗಳು
ವಲಯ ಏಜೆನ್ಸಿ
ದಕ್ಷಿಣ ಮತ್ತು ಆರ್.ಆರ್ ನಗರ ಅಪ್ಪು ಡಿಟೆಕ್ಟಿವ್ ಆಂಡ್ ಸೆಕ್ಯೂರಿಟಿ ಸರ್ವೀಸ್
ಪೂರ್ವ ಡಿಟೆಕ್ಟವೆಲ್ ಅಂಡ್ ಸೆಕ್ಯುರಿಟಿ ಸರ್ವಿಸಸ್ ಪ್ರೈ ಲಿ
ಪಶ್ಚಿಮ ಶಾರ್ಪ್ ವಾಚ್ ಇನ್‌ವೆಸ್ಟಿಂಗ್ ಸೆಕ್ಯುರಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್