ರಾಜ್ಯ ಕೃಷಿ ಬೆಲೆ ಆಯೋಗಕ್ಕೆ ಅಧ್ಯಕ್ಷರೇ ಇಲ್ಲದೆ ‘ಗ್ರಹಣ’ - ಸರ್ಕಾರಕ್ಕೆ ಒಂದೂ ವರದಿ ಸಲ್ಲಿಕೆಯಿಲ್ಲ

Published : Dec 02, 2024, 09:37 AM IST
Koti Kanta Gayana vidhana soudha 07

ಸಾರಾಂಶ

ಮಹತ್ವದ ‘ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ ಎರಡು ವರ್ಷವಾದರೂ ಕಾಯಂ ಅಧ್ಯಕ್ಷರ ನೇಮಕವಾಗದೆ ‘ಗ್ರಹಣ’ ಹಿಡಿದೆ. ಇದರಿಂದಾಗಿ ಒಕ್ಕಲುತನಕ್ಕೆ ಸಂಬಂಧಿಸಿದ ಅಧ್ಯಯನ, ವರದಿ ಸಲ್ಲಿಕೆಗೆ ಭಾರಿ ಹಿನ್ನಡೆಯಾಗಿದೆ

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು : ಮಹತ್ವದ ‘ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ ಎರಡು ವರ್ಷವಾದರೂ ಕಾಯಂ ಅಧ್ಯಕ್ಷರ ನೇಮಕವಾಗದೆ ‘ಗ್ರಹಣ’ ಹಿಡಿದೆ. ಇದರಿಂದಾಗಿ ಒಕ್ಕಲುತನಕ್ಕೆ ಸಂಬಂಧಿಸಿದ ಅಧ್ಯಯನ, ವರದಿ ಸಲ್ಲಿಕೆಗೆ ಭಾರಿ ಹಿನ್ನಡೆಯಾಗಿದೆ.

ಕಳೆದ ಎರಡು ವರ್ಷಗಳಿಂದ ಈವರೆಗೆ ಕಾಯಂ ಅಧ್ಯಕ್ಷರನ್ನು ನೇಮಿಸಿ ಅಗತ್ಯ ಸಿಬ್ಬಂದಿ ಒದಗಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದರಿಂದ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿದೆ. ಸರ್ಕಾರ ತಕ್ಷಣ ಕಾಯಂ ಅಧ್ಯಕ್ಷರನ್ನು ನೇಮಿಸಿ ಅಗತ್ಯ ಸಿಬ್ಬಂದಿ ಒದಗಿಸಬೇಕು’ ಎಂಬ ಆಗ್ರಹ ರೈತರಿಂದ ವ್ಯಕ್ತವಾಗಿದೆ.

ಸೆಪ್ಟೆಂಬರ್‌ 2019 ರಿಂದ 2022 ಜುಲೈವರೆಗೂ ಹನುಮನಗೌಡ ಬೆಳಗುರ್ಕಿ ಅಧ್ಯಕ್ಷರಾಗಿದ್ದರು. ನಂತರ ನಾಲ್ಕು ತಿಂಗಳು ಅಧ್ಯಕ್ಷಗಾದಿ ಖಾಲಿ ಇತ್ತು. ಆಗ ಕೃಷಿ ಇಲಾಖೆ ಕಾರ್ಯದರ್ಶಿಯಾಗಿದ್ದ ಶಿವಯೋಗಿ ಸಿ.ಕಳಸದ್‌ ಅವರಿಗೆ ಅಧ್ಯಕ್ಷ ಹುದ್ದೆಯನ್ನು ಪ್ರಭಾರಿಯಾಗಿ ನೀಡಲಾಗಿತ್ತು. 2023ರ ಜೂನ್‌ನಿಂದ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರೇ ಆಯೋಗದ ಅಧ್ಯಕ್ಷರಾಗಿದ್ದಾರೆ. ಸಚಿವ ಸ್ಥಾನದ ಕಾರ್ಯಭಾರದ ನಡುವೆ ಆಯೋಗದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಲು ಸಾಧ್ಯವಾಗುವುದಿಲ್ಲ. ಕಾಯಂ ಅಧ್ಯಕ್ಷರಿಲ್ಲದೇ ಆಯೋಗ ಸೊರಗುತ್ತಿದೆ. ಆಯೋಗದ ವಿಶೇಷ ತಾಂತ್ರಿಕ ಸಲಹೆಗಾರ ಹುದ್ದೆಯೂ ಎಂಟು ತಿಂಗಳಿನಿಂದ ಖಾಲಿಯಾಗಿಯೇ ಇದ್ದು ಸಮಸ್ಯೆ ಪರಿಹರಿಸಬೇಕು’ ಎಂಬ ಒತ್ತಾಯ ಕೇಳಿ ಬಂದಿದೆ.

ಒಂದೂ ವರದಿ ಸಲ್ಲಿಕೆ ಇಲ್ಲ:

ಕೃಷಿ ಬೆಲೆ ಆಯೋಗ, ರಾಜ್ಯದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಉತ್ಪಾದನೆ, ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಬೆಲೆಗಳ ವಸ್ತುಸ್ಥಿತಿಯ ವಿಶ್ಲೇಷಣಾ ವರದಿ, ಇದಕ್ಕೆ ಸಂಬಂಧಿಸಿದ ಶಿಫಾರಸ್ಸುಗಳನ್ನು ಪ್ರತಿ ವರ್ಷವೂ ಸರ್ಕಾರಕ್ಕೆ ಸಲ್ಲಿಸುತ್ತಾ ಬಂದಿದೆ. ಆದರೆ 2021-22 ನೇ ಸಾಲಿನ ವರದಿ ಸಲ್ಲಿಕೆಯಾಗಿದ ಬಳಿಕ ಇಲ್ಲಿಯವರೆಗೂ ಒಂದೇ ಒಂದು ವರದಿಯೂ ಸಲ್ಲಿಕೆಯಾಗಿಲ್ಲ.

ಕೃಷಿ, ತೋಟಗಾರಿಕೆಗೆ ಸಂಬಂಧಿಸಿದಂತೆ ರಾಜ್ಯದ ಐದು ಕೃಷಿ ವಿಶ್ವವಿದ್ಯಾನಿಲಯಗಳ ಜೊತೆ ಆಯೋಗದ ಅಧ್ಯಕ್ಷರು ಸಂಪರ್ಕ ಇಟ್ಟುಕೊಂಡು ಸಲಹೆ ಪಡೆಯುವುದಲ್ಲದೇ, ವರದಿಗಳ ತಯಾರಿಕೆಗೆ ಅಗತ್ಯ ಅಂಕಿ-ಅಂಶ ಸಂಗ್ರಹಿಸುತ್ತಿದ್ದರು. ರೈತ ಮುಖಂಡರೊಂದಿಗೆ ಚರ್ಚೆ, ಕ್ಷೇತ್ರ ಭೇಟಿ ಸೇರಿದಂತೆ ಹಲವು ಕಾರ್ಯ ಕೈಗೊಳ್ಳುತ್ತಿದ್ದರು. ಆದರೆ ಕಾಯಂ ಅಧ್ಯಕ್ಷರು ಇಲ್ಲದಿರುವುದರಿಂದ ಈ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದೆ.

ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ) ನೀಡುವ ಸಂಬಂಧ ಪ್ರತಿ ವರ್ಷ ವಿವಿಧ ಬೆಳೆಗಳ ಉತ್ಪಾದನಾ ವೆಚ್ಚವನ್ನು ಸರ್ಕಾರಕ್ಕೆ ಕಳುಹಿಸಬೇಕು. ಸಚಿವರೇ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿರುವುದರಿಂದ ಎರಡು ಕಾರ್ಯವನ್ನೂ ತೂಗಿಸಿಕೊಂಡು ಹೋಗುವುದು ಕಷ್ಟವಾಗುತ್ತದೆ. ಬೇರೊಬ್ಬರನ್ನು ತಕ್ಷಣ ಅಧ್ಯಕ್ಷರನ್ನಾಗಿ ನೇಮಿಸಬೇಕು.

-ಹನುಮನಗೌಡ ಬೆಳಗುರ್ಕಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

ದೇಶದಲ್ಲೇ ಮಾದರಿಯಾಗಿ ರಚನೆಯಾದ ಕೃಷಿ ಬೆಲೆ ಆಯೋಗಕ್ಕೆ ರಾಜ್ಯ ಸರ್ಕಾರ ತಕ್ಷಣ ಅಧ್ಯಕ್ಷರನ್ನು ನೇಮಿಸಿ ಶಕ್ತಿ ತುಂಬಬೇಕು. ಬೆಂಬಲ ಬೆಲೆಗೆ ಕಾಯ್ದೆ ತರಬೇಕು ಎಂದು 2018ರಲ್ಲೇ ನಾನು ವರದಿ ನೀಡಿದ್ದೆ. ಇದನ್ನು ಜಾರಿಗೊಳಿಸಿದರೆ ದೇಶಕ್ಕೇ ಕರ್ನಾಟಕ ಮಾದರಿಯಾಗಲಿದೆ.

-ಡಾ.ಟಿ.ಎನ್‌.ಪ್ರಕಾಶ್‌ ಕಮ್ಮರಡಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

ಆಯೋಗದ ಕಾರ್ಯವೇನು?

ಕರ್ನಾಟಕ ಕೃಷಿ ಬೆಲೆ ಆಯೋಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪಾದನೆಗೆ ತಗುಲುವ ವೆಚ್ಚವೆಷ್ಟು, ಬೆಳೆಗಳಿಗೆ ಎಷ್ಟು ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ) ನಿಗದಿಪಡಿಸಬೇಕು, ಅತಿವೃಷ್ಟಿ-ಅನಾವೃಷ್ಟಿ ಸಂದರ್ಭದಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳೇನು, ಆಹಾರ ಪದಾರ್ಥಗಳ ಬೆಲೆ ಇಳಿಕೆಯಾದಾಗ ಮಾರುಕಟ್ಟೆ ಮಧ್ಯಪ್ರವೇಶ, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡುವುದು ಮತ್ತು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಆಯೋಗ ಕೈಗೊಳ್ಳಲಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕನ್ನಡ ಕ್ಯಾಲಿಗ್ರಫಿಗೆ ಲಭಿಸಿದ ಅಂತಾರಾಷ್ಟ್ರೀಯ ಪ್ರಶಸ್ತಿ
569 ಲೈಸೆನ್ಸ್‌ ಇ-ಹರಾಜಿಗೆ ಮುಂದಾದ ಅಬಕಾರಿ ಇಲಾಖೆ