ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿವಾರು ಸಮೀಕ್ಷಾ ವರದಿಯ ಭವಿಷ್ಯದ ಕುರಿತು ತೀವ್ರ ಕುತೂಹಲ ಮೂಡಿದೆ.
ಬೆಂಗಳೂರು : ರಾಜ್ಯದಲ್ಲಿ ಜಾತಿವಾರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಕುರಿತು ತೀವ್ರ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿಗಣತಿಯೂ ನಡೆಸುವುದಾಗಿ ಘೋಷಿಸಿದ್ದು, ಇದು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿವಾರು ಸಮೀಕ್ಷಾ ವರದಿಯ ಭವಿಷ್ಯದ ಕುರಿತು ತೀವ್ರ ಕುತೂಹಲ ಮೂಡಿದೆ.
ಮೇ 9 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರದ ನಿರ್ಧಾರದಿಂದ ರಾಜ್ಯದ ಸಮೀಕ್ಷಾ ವರದಿ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಚರ್ಚೆಯಾಗಲಿದೆ.
ಕೇಂದ್ರ ಸರ್ಕಾರ ಜಾತಿಗಣತಿ ನಡೆಸಿದರೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ವರದಿ ಅನುಷ್ಠಾನ ಮಾಡಲು ಅಧಿಕಾರ ಹೊಂದಿರುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯದೊಂದಿಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.
ಜತೆಗೆ ಕೇಂದ್ರ ಸರ್ಕಾರ ಕೇವಲ ಘೋಷಣೆ ಮಾಡಿದ್ದು, ರಾಜ್ಯ ಸರ್ಕಾರ ಹತ್ತು ವರ್ಷಗಳ ಹಿಂದೆಯೇ ಪ್ರಕ್ರಿಯೆಗೆ ಚಾಲನೆ ನೀಡಿ ಮನೆ-ಮನೆ ಸಮೀಕ್ಷೆ ನಡೆಸಿ ವರದಿಯನ್ನೂ ಸಿದ್ಧಪಡಿಸಿದೆ. ಅಲ್ಲದೆ, ಸಚಿವ ಸಂಪುಟ ಸಭೆಯಲ್ಲೂ ವರದಿ ಮಂಡನೆಯಾಗಿದೆ. ರಾಜ್ಯ ಸರ್ಕಾರ ಈ ಹಂತದಲ್ಲಿ ಏಕಾಏಕಿ ತಟಸ್ಥವಾಗುವುದು ಬೇಡ. ಸಚಿವ ಸಂಪುಟ ಸಭೆ ಮೂಲಕ ಪ್ರಕ್ರಿಯೆ ಮುಂದುವರೆಸಬೇಕು ಎಂದು ತೀರ್ಮಾನಿಸುವ ಸಾಧ್ಯತೆ ಇದೆ.
ಇದೇ ವೇಳೆ ಕೇಂದ್ರ ಸರ್ಕಾರ ಕೇವಲ ಜಾತಿಗಣತಿ ಮಾಡದೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಬೇಕು. ಆಗ ಮಾತ್ರ ಬಡವರು ಹಾಗೂ ಅವಕಾಶ ವಂಚಿತರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರಕ್ಕೆ ಒತ್ತಾಯ ಮಾಡಲು ಸಚಿವ ಸಂಪುಟ ತೀರ್ಮಾನಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರ ಸದ್ಯಕ್ಕೆ ನಿರಾಳ?:
ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗಿ ಜಾತಿವಾರು ಅಂಕಿ-ಅಂಶ ಬಹಿರಂಗವಾದ ಬೆನ್ನಲ್ಲೇ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದವರು ಸಿಡಿದೆದ್ದಿದ್ದರು. ಸ್ವತಃ ಕಾಂಗ್ರೆಸ್ ಪಕ್ಷದ ಒಕ್ಕಲಿಗ, ಲಿಂಗಾಯತ ನಾಯಕರೇ ವರದಿ ಬಗ್ಗೆ ಅಪಸ್ವರ ಎತ್ತಿದ್ದರು. ಲಿಂಗಾಯತ ಸಮುದಾಯದವರು ಪ್ರತ್ಯೇಕ ಜಾತಿಗಣತಿ ವರದಿ ಸಿದ್ಧಪಡಿಸಲೂ ಮುಂದಾಗಿದ್ದರು. ಮತ್ತೊಂದೆಡೆ ಕುರುಬ ಸೇರಿ ಇತರೆ ಹಿಂದುಳಿದ ವರ್ಗಗಳು ವರದಿ ಅನುಷ್ಠಾನ ಮಾಡಲೇಬೇಕು ಎಂಬ ಒತ್ತಡ ಹೇರಿದ್ದವು.
ಇದಲ್ಲದೆ, ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದ ಬಿಜೆಪಿ ನಾಯಕರು, ಜಾತಿಗಣತಿ ಮೂಲಕ ರಾಜ್ಯ ಸರ್ಕಾರ ಜಾತಿಗಳನ್ನು ಒಡೆಯುತ್ತಿದೆ. ಒಂದು ಧರ್ಮದ ಓಲೈಕೆ ಮಾಡಿ ಹಿಂದೂಗಳ ಒಗ್ಗಟ್ಟು ಒಡೆಯುತ್ತಿದೆ ಎಂದೆಲ್ಲಾ ಆರೋಪ ಮಾಡಿದ್ದರು. ರಾಜ್ಯ ಬಿಜೆಪಿ ಪ್ರತಿಪಾದನೆಗೆ ವಿರೋಧ ಎಂಬಂತೆ ಕೇಂದ್ರವೇ ಜಾತಿಗಣತಿ ವರದಿ ಜಾರಿಗೆ ಮುಂದಾಗಿದೆ. ಹೀಗಾಗಿ ರಾಜ್ಯದ ಜಾತಿಗಣತಿಯನ್ನು ವಿರೋಧ ಮಾಡುತ್ತಿದ್ದವರ ಧ್ವನಿ ಕಡಿಮೆಯಾಗಲಿದೆ. ಮತ್ತೊಂದೆಡೆ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿ ಆಧರಿಸಿ ತಕ್ಷಣ ಮೀಸಲಾತಿ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡುವ ಒತ್ತಡದಿಂದ ಪಾರದಂತಾಗಿದೆ. ಸಾವಧಾನವಾಗಿ ಕೇಂದ್ರದ ನಡೆ ಗಮನಿಸಿ ಮುಂದುವರೆಯಲು ಅವಕಾಶ ದೊರೆತಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾನ್ಯತೆ ಬಗ್ಗೆ ಕುತೂಹಲ:
ಕನ್ನಡಪ್ರಭ ಜತೆ ಮಾತನಾಡಿದ ಹಿರಿಯ ವಕೀಲ ಗುರುಮಠ್, ಸಂವಿಧಾನದ ಏಳನೇ ಪರಿಚ್ಛೇದದ ಪ್ರಕಾರ ಮೀಸಲಾತಿಯಲ್ಲಿ ಬದಲಾವಣೆ ಮಾಡಬೇಕಾದರೆ ಕೇಂದ್ರ ಸರ್ಕಾರ ಮಾಡಬೇಕು. ಹೀಗಾಗಿ ಕೇಂದ್ರ ಸರ್ಕಾರ ಜಾತಿಗಣತಿ ವರದಿ ಮಾಡಿದರೆ ರಾಜ್ಯ ಸರ್ಕಾರ ಮಾಡಿರುವ ವರದಿಯು ಮಾನ್ಯತೆ ಕಳೆದುಕೊಳ್ಳಲಿದೆ ಎಂದಿದ್ದಾರೆ.
ಆದರೆ ರಾಜ್ಯಕ್ಕೆ ಸಂಬಂಧಿಸಿ ತೀರ್ಮಾನಗಳಿಗೆ ರಾಜ್ಯದ ವರದಿ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುತ್ತದೆ. ಇನ್ನು ಕೇಂದ್ರ ಸರ್ಕಾರ ಇನ್ನೂ ಜಾತಿಗಣತಿ ಮಾಡಿಲ್ಲ. ಮಾಡಿದರೂ ಯಾವ ರೀತಿ ಮಾಡುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿರುವ ವರದಿಯನ್ನು ತಳ್ಳಿ ಹಾಕಲು ಆಗುವುದಿಲ್ಲ ಎಂದು ಮತ್ತೊಬ್ಬ ವಕೀಲರು ಹೇಳುತ್ತಾರೆ.
ಮೇ 9ರಂದು ಮತ್ತೆ ವರದಿ ಬಗ್ಗೆ ಚರ್ಚೆ
ಹಿಂದುಳಿದ ವರ್ಗಗಳ ಆಯೋಗದ ವರದಿ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದೆ. ಮೇ 9 ರಂದು ಸಚಿವರು ಮತ್ತೊಂದು ಸುತ್ತು ಚರ್ಚೆ ನಡೆಸಲಿದ್ದಾರೆ. ಅಂತಿಮವಾಗಿ ಎಲ್ಲರೂ ಒಪ್ಪಿದರೆ ಆಯೋಗದ ವರದಿಯ ಶಿಫಾರಸು ಅನ್ವಯ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರಕ್ಕೇ ಶಿಫಾರಸು ಮಾಡುತ್ತೇವೆ.
- ಶಿವರಾಜ್ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು