ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಬದಿ, ಪುಟ್ಪಾತ್, ಪಾರ್ಕ್ ಸೇರಿದಂತೆ ಮೊದಲಾದ ಸ್ಥಳದಲ್ಲಿ ಬೀದಿ ನಾಯಿಗಳಿಗೆ ಅವೈಜ್ಞಾನಿಕವಾಗಿ ಆಹಾರ ಹಾಕುವ ಕ್ರಮದಿಂದ ಇಲಿ, ಹೆಗ್ಗಣಗಳ ಕಾಟಕ್ಕೆ ನಗರದ ನಾಗರಿಕರು ಬೇಸತ್ತು ಹೋಗುವಂತಾಗಿದೆ.
ಬಿಬಿಎಂಪಿಯ ವ್ಯಾಪ್ತಿಯಲ್ಲಿ 2.80 ಲಕ್ಷ ಬೀದಿ ನಾಯಿಗಳಿದ್ದು, ಈ ಬೀದಿ ನಾಯಿಗಳಿಗೆ ಸಾರ್ವಜನಿಕರು, ಪ್ರಾಣಿ ಪ್ರಿಯರು, ಹೋಟೆಲ್ ಮಾಲೀಕರು ಹಾಕುವ ಆಹಾರ ಹಾಗೂ ಕಸ ರಾಶಿಯಲ್ಲಿ ದೊರೆಯುವ ಆಹಾರದಿಂದ ಜೀವಿಸುತ್ತಿವೆ. ಯಾವುದೇ ವ್ಯವಸ್ಥಿತವಾಗಿ ಕ್ರಮ ಇಲ್ಲದೇ ಎಲ್ಲೆಂದರಲ್ಲಿ ಆಹಾರ ಹಾಕಲಾಗುತ್ತಿದೆ. ಇದರಿಂದ ಇಲಿ ಹಾಗೂ ಹೆಗ್ಗಣಗಳ ಕಾಟ ಹೆಚ್ಚಾಗುತ್ತಿದೆ. ಈ ಇಲಿ ಮತ್ತು ಹೆಗ್ಗಣಗಳೂ ಸಹ ಬೀದಿ ನಾಯಿಗಳ ಆಹಾರದ ಒಂದು ಭಾಗವಾಗಿದೆ. ಇಲಿ, ಹೆಗ್ಗಣಗಳು ಚರಂಡಿ, ಪಾರ್ಕ್‌ಗಳಲ್ಲಿ ಬಿಲ ತೋಡಿ ದುರಸ್ತಿ ಪಡಿಸುತ್ತಿವೆ.
ಅಷ್ಟೇ ಅಲ್ಲದೇ ಮನೆ ಮುಂದೆ ನಿಲ್ಲಿಸಲಾಗುವ ಕಾರು, ಬೈಕ್, ಆಟೋ ಸೇರಿದಂತೆ ಮೊದಲಾದ ವಾಹನದ ವೈರಿಂಗ್, ಸೀಟ್ ಕಿತ್ತು ಹಾಕುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಕಾಟದೊಂದಿಗೆ ಇಲಿ ಜ್ವರದ ಭೀತಿ
ಇಲಿ ಮತ್ತು ಹೆಗ್ಗಣದಿಂದ ಕೇವಲ ಸಮಸ್ಯೆ ಮಾತ್ರವಲ್ಲ. ಲೆಪ್ಟೊಸ್ಪೈರೋಸಿಸ್ (ಇಲಿ ಜ್ವರ) ಸಹ ಮನುಷ್ಯರಿಗೆ ಹರಡುವ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಜನವರಿಯಿಂದ ಈವರೆಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸುಮಾರು 400ಕ್ಕೂ ಅಧಿಕ ಮಂದಿಯಲ್ಲಿ ಇಲಿ ಜ್ವರ ದೃಢಪಟ್ಟಿದೆ.
ಆಹಾರ ವಿತರಣೆಗೆ ಮಾರ್ಗಸೂಚಿ ಇಲ್ಲ
ಬಿಬಿಎಂಪಿಯ ವ್ಯಾಪ್ತಿಯಲ್ಲಿ ಸುಮಾರು 500ಕ್ಕೂ ಅಧಿಕ ಪ್ರಾಣಿ ಪ್ರಿಯರು ಪ್ರತಿ ದಿನ ಸುಮಾರು 25 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿಗೆ ಆಹಾರ ನೀಡಲಾಗುತ್ತಿದೆ. ಇಲ್ಲದೇ ಹೋಟೆಲ್, ರೆಸ್ಟೋರೆಂಟ್, ಹಾಸ್ಟೆಲ್, ಪಿಜಿಗಳಲ್ಲಿ ಉಳಿದ ಆಹಾರವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಬೀದಿ ನಾಯಿಗಳಿಗೆ ಆರೋಗ್ಯದ ದೃಷ್ಟಿಯಿಂದ ಯಾವ ರೀತಿಯ ಆಹಾರ ನೀಡಬೇಕು. ಆಹಾರ ಹಾಕುವಾಗ ವೈಜ್ಞಾನಿಕವಾಗಿ ಅನುಸರಿಸಬೇಕಾದ ಕ್ರಮದ ಬಗ್ಗೆ ಯಾವುದೇ ಮಾರ್ಗಸೂಚಿ ಇಲ್ಲ.