ರಾಜ್ಯದ 13 ನದಿಗಳ ನೀರು ಗೃಹಬಳಕೆಗೂ ಯೋಗ್ಯವಲ್ಲ - ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ

Published : Dec 21, 2024, 10:24 AM IST
rivers

ಸಾರಾಂಶ

ರಾಜ್ಯದ ನಗರ ಪ್ರದೇಶವಲ್ಲದೆ ಗ್ರಾಮೀಣ ಭಾಗದಲ್ಲೂ ನದಿಗಳು ಕಲುಷಿತಗೊಂಡಿದ್ದು, ಅವುಗಳ ನೀರು ಬಳಕೆಗೂ ಮುನ್ನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗಿರೀಶ್‌ ಗರಗ

 ಬೆಳಗಾವಿ : ರಾಜ್ಯದ ನಗರ ಪ್ರದೇಶವಲ್ಲದೆ ಗ್ರಾಮೀಣ ಭಾಗದಲ್ಲೂ ನದಿಗಳು ಕಲುಷಿತಗೊಂಡಿದ್ದು, ಅವುಗಳ ನೀರು ಬಳಕೆಗೂ ಮುನ್ನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ 13 ನದಿಗಳ ನೀರು ಕಲುಷಿತಗೊಂಡಿದ್ದು, ಆ ನೀರನ್ನು ಶುದ್ಧೀಕರಿಸದ ಹೊರತು ಗೃಹಬಳಕೆಗೂ ಸಾಧ್ಯವಿಲ್ಲದಂತಾಗಿದೆ ಎಂಬ ಆತಂಕಕಾರಿ ಮಾಹಿತಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹೊರಬಿದ್ದಿದೆ.

ರಾಜ್ಯದಲ್ಲಿ ಕಾವೇರಿ, ಕೃಷ್ಣ ಸೇರಿ 7 ಪ್ರಮುಖ ನದಿಗಳು, ಅವುಗಳನ್ನು ಸಂಧಿಸುವ 20ಕ್ಕೂ ಹೆಚ್ಚಿನ ಉಪ ನದಿಗಳಿವೆ. ಆ ಪೈಕಿ ಶೇ. 80ಕ್ಕೂ ಹೆಚ್ಚಿನ ನದಿಗಳು ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟುತ್ತವೆ. ಈ ನದಿಗಳಲ್ಲಿ ಸುಮಾರು 3,700 ಟಿಎಂಸಿಗೂ ಹೆಚ್ಚಿನ ನೀರು ಹರಿಯುತ್ತವೆ. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿಯಂತೆ ಈ ನದಿಗಳ ಪೈಕಿ 13 ನದಿಗಳು ಕಲುಷಿತವಾಗಿದೆ. ಪ್ರಮುಖವಾಗಿ ಕೈಗಾರಿಕೆ ಹಾಗೂ ಗೃಹ ಬಳಕೆ ತ್ಯಾಜ್ಯ ನೀರು ನದಿಗಳಿಗೆ ಸೇರ್ಪಡೆಯಾಗುವ ಮೂಲಕ ನದಿಗಳ ನೀರು ಕಲುಷಿತವಾಗಿ ಬಳಕೆಗೆ ಯೋಗ್ಯವಲ್ಲದಂತಾಗಿದೆ.

ಅರ್ಕಾವತಿ ಹೆಚ್ಚು ಕಲುಷಿತ: ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ನಡೆಸಿ ಗುರುತಿಸಿರುವಂತೆ ಅರ್ಕಾವತಿ ನದಿ ಅತಿಹೆಚ್ಚು ಕಲುಷಿತಗೊಂಡಿದೆ. ಕುಡಿಯಲು ಬಳಸುವ ನೀರಿನ ಪೈಕಿ ಪ್ರತಿ ಲೀಟರ್‌ ನೀರಿನಲ್ಲಿ ಬಯೋಕೆಮಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌ (ಬಿಒಡಿ) ಪ್ರಮಾಣ 5 ಮಿಲಿ ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಆದರೆ, ಅರ್ಕಾವತಿ ನದಿಯ ಕೆಲ ಭಾಗದಲ್ಲಿ ಬಿಒಡಿ ಪ್ರಮಾಣ ಪ್ರತಿ ಲೀ.ನಲ್ಲಿ 30 ಮಿಲಿ ಗ್ರಾಂಗಿಂತ ಹೆಚ್ಚಿದೆ. ಅದೇ ಭದ್ರಾ, ತುಂಗಭದ್ರಾ, ಶಿಂಷಾ ನದಿಗಳಲ್ಲಿ ಬಿಒಡಿ ಪ್ರಮಾಣ ಪ್ರತಿ ಲೀ.ನಲ್ಲಿ 6ರಿಂದ 10 ಮಿಲಿ ಗ್ರಾಂನಷ್ಟಿದ್ದು, ಉಳಿದ 8 ನದಿಗಳಲ್ಲಿ ಬಿಒಡಿ ಪ್ರಮಾಣ ಪ್ರತಿ ಲೀ.ನಲ್ಲಿ 6 ಮಿಲಿ ಗ್ರಾಂನ ಆಸುಪಾಸಿನಲ್ಲಿದೆ.

693.75 ಕಿ.ಮೀ. ಮಲಿನಯುಕ್ತ ಪ್ರದೇಶ: ಮಾಲಿನ್ಯ ನಿಯಂತ್ರಣ ಮಂಡಳಿಗಳ ಅಧ್ಯಯನದಂತೆ ರಾಜ್ಯದ 12 ನದಿಗಳ 693.75 ಕಿ.ಮೀ. ಉದ್ದದ ನದಿ ಪ್ರದೇಶ ಮಲಿನಯುಕ್ತವಾಗಿದೆ. ಒಟ್ಟಾರೆ 112 ಕಲ್ಮಷಯುಕ್ತ ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲದೆ, ಆ ಕಲ್ಮಷಯುಕ್ತ ಪ್ರದೇಶಕ್ಕೆ ತ್ಯಾಜ್ಯ ನೀರು ಸೇರ್ಪಡೆ ಮಾಡುವುದನ್ನು ತಡೆದು, ನೀರಿನ ಕಲುಷಿತ ಪ್ರಮಾಣ ಕಡಿಮೆ ಮಾಡಲು ಪ್ರತಿದಿನ 817 ಮಿಲಿಯನ್ ಲೀಟರ್‌ (ಎಂಎಲ್‌ಡಿ) ಶುದ್ಧೀಕರಿಸಬೇಕಿದೆ. ಅದರಂತೆ ಈಗಾಗಲೇ 657.69 ಎಂಎಲ್‌ಡಿ ನೀರು ಶುದ್ಧೀಕರಿಸಲು 40 ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ಥಾಪಿಸಲಾಗಿದ್ದು, 195.75 ಎಂಎಲ್‌ಡಿ ನೀರು ಶುದ್ಧೀಕರಣ ಸಾಮರ್ಥ್ಯದ 16 ಎಸ್‌ಟಿಪಿ ಸ್ಥಾಪನೆ ಕಾರ್ಯ ಚಾಲನೆಯಲ್ಲಿದೆ. ಅದರ ಜತೆಗೆ ಇನ್ನೂ 53.28 ಎಂಎಲ್‌ಡಿ ನೀರು ಶುದ್ಧೀಕರಣದ 15 ಎಸ್‌ಟಿಪಿ ಸ್ಥಾಪನೆಗೆ ಸಂಬಂಧಿಸಿದ ಪೂರ್ವ ಸಿದ್ಧತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ದಕ್ಷಿಣ ಪಿನಾಕಿನಿ ನದಿಯೂ ಅಶುದ್ಧ: 12 ನದಿಗಳಷ್ಟೇ ಅಲ್ಲದೆ, ಕಳೆದೆರಡು ವರ್ಷಗಳ ಹಿಂದೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದಕ್ಷಿಣ ಪಿನಾಕಿನಿ, ಅಘನಾಶಿನಿ, ಶರಾವತಿ ಮತ್ತು ಗಂಗಾವಳಿ ನದಿಗಳೂ ಅಶುದ್ಧವಾಗಿದ್ದು, ಅದರ ಶುದ್ಧೀಕರಣ ಹಾಗೂ ತ್ಯಾಜ್ಯ ನೀರು ಸೇರ್ಪಡೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೇಂದ್ರದ ವರದಿಯನ್ನು ಮತ್ತು ನದಿಗಳ ನೀರನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸಿ ಅಘನಾಶಿನಿ, ಶರಾವತಿ ಮತ್ತು ಗಂಗಾವಳಿ ನದಿಗಳು ಅಶುದ್ಧವಾಗಿಲ್ಲ ಎಂಬುದನ್ನು ಪತ್ತೆ ಮಾಡಿ ಮಾಲಿನ್ಯ ನದಿಗಳ ಪಟ್ಟಿಯಿಂದ ಹೊರಗಿಡುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ದಕ್ಷಿಣ ಪಿನಾಕಿನಿ ನದಿ ನೀರು ಅಶುದ್ಧವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ನದಿ ನೀರು ಶುದ್ಧೀಕರಣಕ್ಕೆ ಸಂಬಂಧಿಸಿ ಕ್ರಿಯಾಯೋಜನೆ ರೂಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಅಶುದ್ಧ ನದಿಗಳು

* ಕೃಷ್ಣ, ಕಾವೇರಿ, ತುಂಗಭದ್ರಾ, ಭೀಮಾ, ಭದ್ರಾ, ತುಂಗಾ, ಕಬಿನಿ, ಕಾಗಿನಿ, ಶಿಂಷಾ, ಅರ್ಕಾವತಿ, ಲಕ್ಷ್ಮಣತೀರ್ಥ, ನೇತ್ರಾವತಿ, ದಕ್ಷಿಣ ಪಿನಾಕಿನಿ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ