ಮಹಮ್ಮದ ರಫೀಕ್ ಬೀಳಗಿ
ಹುಬ್ಬಳ್ಳಿಶುಭ ಕಾರ್ಯಗಳಲ್ಲಿ ಅಗ್ರಗಣ್ಯ ಸ್ಥಾನ ಪಡೆದ ವೀಳ್ಯದೆಲೆ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ತಲಬುದಾರರ ಬಾಯಿ ಸುಡುತ್ತಿದೆ!
ಕಳೆದ ಕೆಲದಿನಗಳಿಂದ ವೀಳ್ಯದೆಲೆ ಬೆಲೆ ಭಾರಿ ಏರಿಕೆ ಕಾಣುತ್ತಿದೆ. ಪ್ರತಿ ಪೆಂಡಿಗೆ ₹18ರಿಂದ ಸಾವಿರದಿಂದ ₹22 ಸಾವಿರಕ್ಕೆ ಮಾರಾಟವಾಗುತ್ತಿದೆ. ಇದು ಚಳಿಗಾಲದ ಸಮಯವಾಗಿರುವುದರಿಂದ ಇಳುವರಿ ಅರ್ಧಕರ್ಧ ಕುಸಿದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಗಗನಮುಖಿಯಾಗಿದೆ. ಈ ವರ್ಷ ಸುರಿದ ಅಕಾಲಿಕ ಮಳೆಯಿಂದಲೂ ವೀಳ್ಯದೆಲೆ ಇಳುವರಿ ಮೇಲೆ ಪರಿಣಾಮ ಬೀರಿದೆ. ಪ್ರತಿಬಾರಿ ಬರದಿಂದ ಬೆಳೆ ಕುಂಠಿತವಾಗುತ್ತಿದ್ದರೆ ಈ ಬಾರಿ ಅಧಿಕ ಮಳೆ ಬೆಳೆ ಮೇಲೆ ಪರಿಣಾಮ ಬೀರಿದೆ. ಹವಾಮಾನ ವೈಪರೀತ್ಯ, ಬೂದುರೋಗ ಬಾಧೆ ಕಾಣಿಸಿಕೊಂಡಿದೆ. ಆಗಾಗ ಇಬ್ಬನಿ ಬೀಳುತ್ತಿರುವುದರಿಂದ ಬಳ್ಳಿಯ ಎಲೆಗಳು ಉದುರತೊಡಗಿವೆ. ಹೀಗಾಗಿ ಇಳುವರಿ ಕೂಡ ಭಾರಿ ಕುಸಿತ ಕಂಡಿದೆ ಎನ್ನುತ್ತಾರೆ ರಾಣಿಬೆನ್ನೂರಿನ ವೀಳ್ಯದೆಲೆ ಬೆಳೆಗಾರ ಸಂತೋಷ ಉಪ್ಪಿನ.ಕೆಲವೆಡೆ ಬೂದು ರೋಗ ಕಂಡುಬಂದಿದ್ದರಿಂದ ಅರ್ಧದಷ್ಟೂ ಇಳುವರಿ ಬಂದಿಲ್ಲ. ಬೆಳೆಗೆ ಆಗಾಗ ಕಾಡುವ ಬೂಸ್ಟ್ ರೋಗ, ಎಲೆಚುಕ್ಕೆ ರೋಗ ಸಹ ಇಳುವರಿ ಕುಂಠಿತಕ್ಕೆ ಕಾರಣವಾಗಿದೆ. ವೀಳ್ಯದೆಲೆ ಹೆಚ್ಚು ನಿರ್ವಹಣೆ ಬಯಸುವ ಬೆಳೆಯಾಗಿದೆ. ಆದರೆ, ಎಲ್ಲೆಡೆ ಕಾರ್ಮಿಕರ ಕೊರತೆ ಕೃಷಿಕರನ್ನು ಕಾಡುತ್ತಿದೆ. ಇದರಿಂದ ವೀಳ್ಯದೆಲೆ ಬೆಳೆ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಇಳಿಯುತ್ತಿದೆ. ಹೀಗಾಗಿ, ಈ ಹಿಂದೆ 15ರಿಂದ 20 ಪೆಂಡಿ ಎಲೆಯನ್ನು ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದ ರೈತರು ಈಗ 2 ಪೆಂಡಿ ಎಲೆ ತಂದರೆ ಹೆಚ್ಚು ಎಂಬಂತಾಗಿದೆ.
ವೀಳ್ಯದೆಲೆ ಬಳ್ಳಿಯನ್ನು ಪ್ರತಿ ವರ್ಷ ಚಳಿಗಾಲದ ಸಮಯದಲ್ಲಿ ಭೂಮಿಯೊಳಗೆ ಅಗೆಯಬೇಕು. ಇಂದಿನ ದಿನಗಳಲ್ಲಿ ಬಳ್ಳಿ ಅಗೆಯುವವರು ಸಿಗುತ್ತಿಲ್ಲ. ಹಲವಾರು ಸಮಸ್ಯೆಗಳಿಂದ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಬೆಳೆ ಇಲ್ಲದೆ ಬೆಲೆ ಹೆಚ್ಚಳವಾಗಿದೆ ಎನ್ನುತ್ತಾರೆ ಬೆಳೆಗಾರರು.ಪ್ರಸ್ತುತದಲ್ಲಿ ಒಂದು ಪೆಂಡಿ ₹18ರಿಂದ ₹22 ಸಾವಿರದವರೆಗೂ ಮಾರುಕಟ್ಟೆಯಲ್ಲಿ ಬೆಲೆ ಇದೆ. ಬೆಳೆಗಾರರಿಗೆ ಒಂದು ಎಲೆಗೆ ಒಂದೂವರೆಯಿಂದ ಎರಡು ರೂಪಾಯಿ ಸಿಕ್ಕರೆ ಚಿಲ್ಲರೆಯಾಗಿ ಒಂದು ಎಲೆ ಮೂರರಿಂದ ನಾಲ್ಕು ರುಪಾಯಿಗೆ ಮಾರಾಟವಾಗುತ್ತಿದೆ. ಉತ್ತಮ ಬೆಲೆ ಇದ್ದರೂ ಬೆಳೆ ನಿರ್ವಹಣೆ, ಕಾರ್ಮಿಕರ ಕೂಲಿ, ಗೊಬ್ಬರ, ಸಾಗಾಣಿಕೆ ಖರ್ಚು ತೆಗೆದರೆ ರೈತರಿಗೆ ಉಳಿಯುವುದು ಕೇವಲ ₹3ರಿಂದ ₹4 ಸಾವಿರ ಮಾತ್ರ.ಎಲೆ ಮಾರುತ್ತಿಲ್ಲ:
ಒಂದು ಎಲೆ ಎರಡೂವರೆಯಿಂದ ಮೂರು ರೂಪಾಯಿಗೆ ಮಾರಬೇಕು. ಆದರೆ ಜನ ಎಲೆ ಖರೀದಿಗೆ ಹಿಂದೇಟು ಹಾಕುತ್ತಾರೆ. ಎಲೆ ಮಾರುಕಟ್ಟೆಯಿಂದ ತಂದ ಮೇಲೆ ಅದು ಒಣಗಿದರೆ ನಮಗೆ ಹಾನಿಯಾಗುತ್ತದೆ. ಹೀಗಾಗಿ ಬೆಲೆ ಕಡಿಮೆ ಆಗುವ ವರೆಗೆ ಎಲೆ ಮಾರುವುದನ್ನೇ ನಿಲ್ಲಿಸಿದ್ದೇವೆ ಎನ್ನುತ್ತಾರೆ ಅಂಗಡಿಕಾರರೊಬ್ಬರು.ಚಳಿಗಾಲದ ಸಮಯ ಮತ್ತು ಈ ಸಮಯದಲ್ಲಿ ಗುಣಮಟ್ಟದ ಇಳುವರಿ ಬಾರದಿರುವುದು, ಜತೆಗೆ ಮಂಗಳ ಕಾರ್ಯಗಳು ಹೆಚ್ಚಾಗಿರುವುದರಿಂದ ಬೆಲೆ ಏರಿಕೆಯಾಗಿದೆ. ಇದು ಇನ್ನೂ ಮೂರ್ನಾಲ್ಕು ತಿಂಗಳು ಹೀಗೆ ಇರುವ ಸಾಧ್ಯತೆ ಇದೆ ಎಂದು ನಿವೃತ್ತ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸುರೇಶ ಕುಂಬಾರ ಹೇಳಿದರು.
ಪ್ರತಿವರ್ಷ ಈ ಸಮಯದಲ್ಲಿ ಸ್ವಾಭಾವಿಕವಾಗಿ ಇಳುವರಿ ಕಡಿಮೆ ಇರುತ್ತದೆ. ಹೀಗಾಗಿ ಬೆಲೆ ಹೆಚ್ಚಾಗುತ್ತದೆ. ಕೆಲವೆಡೆ ಬೆಳೆಗೆ ರೋಗ ಕಾಣಿಸಿಕೊಂಡಿರುವುದರಿಂದಲೂ ದರ ಹೆಚ್ಚಿದೆ ಎಂದು ಲಕ್ಷ್ಮೇಶ್ವರದ ವೀಳ್ಯದೆಲೆ ಬೆಳೆಗಾರ ಮಲ್ಲನಗೌಡ ಪಾಟೀಲ ತಿಳಿಸಿದರು.ಕೆಲದಿನಗಳಿಂದ ಮಾರುಕಟ್ಟೆಗೆ ಗುಣಮಟ್ಟದ ಎಲೆ ಬರುತ್ತಿಲ್ಲ. ಕಡಿಮೆ ಪ್ರಮಾಣದಲ್ಲಿ ಬರುತ್ತಿರುವುದರಿಂದ ಮತ್ತು ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಹೆಚ್ಚಳವಾಗಿದೆ ಎಂದು ವೀಳ್ಯದೆಲೆ ವರ್ತಕ ಮಹ್ಮದ್ ಇಸಾಕ್ ಶಮ್ನಾನವರ ಹೇಳಿದರು.