ಕನ್ನಡಪ್ರಭ ವಾರ್ತೆ, ಕಡೂರು
ಭಧ್ರಾ ಮೇಲ್ದಂಡೆ ಯೋಜನೆಗೆ ಅಗತ್ಯವಾದ ರೈತರನ್ನು ವಿಶ್ವಾಸಕ್ಕೆ ಪಡೆದು ವಸ್ತುಸ್ಥಿತಿ ವಿವರಿಸಿ ಜಮೀನು ವಶಕ್ಕೆ ಪಡೆಯಲು ಮುಂದಾಗಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳಿಗೆ ಸೂಚಿಸಿದರು. ಶುಕ್ರವಾರ ಕಡೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭೂ ಪರಿಹಾರ ನೀಡಲು ಹಿಂದಿನ ಮೂರು ವರ್ಷಗಳ ವಹಿವಾಟು ಪರಿಗಣಿಸುವ ಸಮಯದಲ್ಲಿ ಕೊರೊನಾ ಸಮಯವನ್ನು ಬಿಟ್ಟು ಅದರ ಹಿಂದಿನ ವರ್ಷಗಳ ವಹಿವಾಟು ಪರಿಗಣಿಸಬೇಕು. ಇಲ್ಲದಿದ್ದರೆ ರೈತರಿಗೆ ಅನ್ಯಾಯವಾಗುವ ಸಂಭವವಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಬೇಕು. ಒಟ್ಟಾರೆ ರೈತರಿಗೆ ಅನುಕೂಲವಾಗಬೇಕು ಎಂದರು.ಕುಡಿಯುವ ನೀರಿನ ತೊಂದರೆ ಎದುರಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ತೊಂದರೆ ಎದುರಾಗುವ ಕಡೆ ಖಾಸಗಿ ಬೋರ್ವೆಲ್ ಗಳಿಂದ ಹಣ ನೀಡಿ ನೀರು ಪಡೆಯುವುದನ್ನೆ ನಂಬಿಕೊಳ್ಳಬೇಡಿ. ರೈತರು ಬೆಳೆ ಉಳಿಸಿಕೊಳ್ಳುವುದನ್ನು ಬಿಟ್ಟು ನೀರು ನೀಡುವ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ ಹೊಸ ಬೋರ್ ವೆಲ್ ಕೊರೆಸಲು ಆಧ್ಯತೆ ನೀಡಬೇಕು ಎಂದರು.
ತ್ಯಾಜ್ಯ ವಿಲೇವಾರಿಯಲ್ಲಿ ಎಚ್ಚರಿಕೆ ವಹಿಸಿ ಅಂತರ್ಜಲಕ್ಕೆ ತ್ಯಾಜ್ಯದಿಂದ ತೊಂದರೆಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಮುಂದಾಗಬೇಕು ಎಂದು ಇಒ ಪ್ರವೀಣ್ ಅವರಿಗೆ ಸೂಚಿಸಿದರು.ನರೇಗಾ ಕಾಮಗಾರಿಗೆ 70 ಕೋಟಿ ಬೇಡಿಕೆ ಸಲ್ಲಿಸಲಾಗಿತ್ತು. ಬರ ಪರಿಸ್ಥಿತಿ ಇರುವ ಕಾರಣ 120 ಕೋಟಿ ರು.ಗೆ ಮಂಜೂರಾತಿ ಪಡೆಯಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಮಾಹಿತಿ ನೀಡಿದರು.
ಮತಿಘಟ್ಟ ಮತ್ತು ಯಳ್ಳಂಬಳಸೆಯ 82 ಜನರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಇದರಿಂದ ಭಧ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳಿಗೆ ತೊಂದರೆಯಾಗಿದೆ. ಈ ಕುರಿತು ಸಭೆ ಏರ್ಪಾಡಾಗಿದ್ದು, ಅಲ್ಲಿ ಭೂಪರಿಹಾರದ ಬಗ್ಗೆ ಚರ್ಚೆಯಾಗಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾಹಿತಿ ನೀಡಿದರು.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರೈಲ್ವೆ, ಬಿಎಸ್ಎನ್ನೆಲ್, ರಾಷ್ಟ್ರೀಕೃತ ಬ್ಯಾಂಕ್ ಗಳಅಧಿಕಾರಿಗಳ ಬಳಿ ಯೋಜನೆಗಳು ಹಾಗೂ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು.
- ಬಾಕ್ಸ್ ಸುದ್ದಿ --ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲೆ ಹೆಚ್ಚು ಪ್ರಕರಣಗಳಿವೆ. ಇದಕ್ಕೆ ಸಂಬಂಧಿಸಿ ದಂತೆ ಎರಡೂ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿ ಫಾರೆಸ್ಟ್ ಸೆಟಲ್ಮೆಂಟ್ ಆಫೀಸರ್ ಗಳನ್ನು ನಿಯೋಜಿಸಿದರೆ ಬಹುಪಾಲು ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯ. ಶಾಸಕ ಕೆ.ಎಸ್.ಆನಂದ್ ಅವರದೇ ಸರ್ಕಾರವಿದೆ. ಅವರು ಇದರತ್ತ ಆಸಕ್ತಿ ವಹಿಸಿ ಹೆಚ್ಚುವರಿ ಅಧಿಕಾರಿಗಳನ್ನು ಹಾಕಿಸಿಕೊಟ್ಟರೆ ಅವರಿಗೆ ನಾವು ಅಭಾರಿಯಾಗಿರುತ್ತೇವೆ ಎಂದು ಸಂಸದರು ಮನವಿ ಮಾಡಿದರು.
ಕಡೂರು ರೈಲ್ವೆ ನಿಲ್ದಾಣ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ವೃದ್ಧರು ಮಹಿಳೆಯರು ನಿಲ್ದಾಣ ಪ್ರವೇಶಿಸಲು ಹರಸಾಹಸ ಪಡುವಂತಾಗಿದೆ. ಹೀಗಾಗಿ ನಿಲ್ದಾಣವನ್ನು ಮೊದಲಿದ್ದ ಜಾಗದಲ್ಲೆ ನಿರ್ಮಾಣ ಮಾಡಿಕೊಡಲು ಪೂರಕವಾಗಿ ಸಹಕರಿಸಬೇಕೆಂದು ಶಾಸಕ ಕೆ.ಎಸ್.ಆನಂದ್ ಸಂಸದರಿಗೆ ಪ್ರತಿಮನವಿ ಮಾಡಿದರು. ಕೂಡಲೇ ಈ ಕುರಿತು ಪ್ರಸ್ತಾವನೆ ಕಳುಹಿಸಿ. ಖಂಡಿತವಾಗಿ ಈ ಕಾರ್ಯಕ್ಕೆ ನನ್ನ ಸಹಮತವೂ ಇದೆ ಎಂದು ಸಂಸದರು ತಿಳಿಸಿದರು.15ಕೆಕೆಡಿಯು3..ಸಂಸದ ಪ್ರಜ್ವಲ್ ರೇವಣ್ಣ ಕಡೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.