ಕನ್ನಡಪ್ರಭವಾರ್ತೆ ಚಿತ್ರದುರ್ಗ
ಭದ್ರಾ ಮೇಲ್ದಂಡೆ ಯೋಜನೆಯನ್ನು ನಾಲ್ಕು ವರ್ಷದ ಒಳಗೆ ಪೂರ್ಣಗೊಳಿಸಿ ನೀರು ಹಾಯಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ಇಲ್ಲಿನ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಯೋಜನೆಗೆ 5300 ಕೋಟಿ ರುಪಾಯಿ ಅನುದಾನದ ನೆರವು ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಿ ಮೋಸ ಮಾಡಿದೆ. ಈ ಭಾಗದ ಜನರ ವಂಚಿಸಿದ ಪ್ರದಾನಿ ಮೋದಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ವಿನಂತಿಸಿದರು.
ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನ ಆಶೀರ್ವಾದ ಮಾಡಿದ್ದರಿಂದ 136 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ. ಎಂಟು ತಿಂಗಳಲ್ಲಿ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ. ಅದಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿ.ಎನ್. ಚಂದ್ರಪ್ಪನವರನ್ನು ಬಹುಮತಗಳಿಂದ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದು ಜನತೆಯಲ್ಲಿ ಸಿದ್ದರಾಮಯ್ಯ ವಿನಂತಿಸಿದರು.ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ. ಸಂವಿಧಾನ ಅಪಾಯದಲ್ಲಿದೆ. ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆಂದರೆ ಅದಕ್ಕೆ ಸಂವಿಧಾನ ಕಾರಣ. ಸಂವಿಧಾನ ಬದಲಾವಣೆಯಾದರೆ ನಾವು-ನೀವುಗಳೆಲ್ಲಾ ನಾಶವಾಗುತ್ತೇವೆ. ಹಾಗಾಗಿ ಪ್ರತಿ ಮನೆ ಮನೆಗೆ ಹೋಗಿ ಜನತೆಯನ್ನು ಜಾಗೃತಿಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. 165 ಭರವಸೆಗಳಲ್ಲಿ 158 ನ್ನು ಈಡೇರಿಸಿ ಕೊಟ್ಟು ಮಾತು ಉಳಿಸಿಕೊಂಡಿದ್ದೇವೆ. ಇಲ್ಲಿಯವರೆಗೂ ಲೂಟಿ ಹೊಡೆದ ಕಾರಜೋಳರನ್ನು ಬಿಜೆಪಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕೇಂದ್ರ ಮಂತ್ರಿಯಾಗಿದ್ದ ಎ.ನಾರಾಯಣಸ್ವಾಮಿ ಕ್ಷೇತ್ರಕ್ಕೆ ಮಾಡಿದ್ದೇನು? ಐದು ಗ್ಯಾರೆಂಟಿ ಯೋಜನೆಗಳಿಗಾಗಿ 36 ಸಾವಿರ ಕೋಟಿ ರು.ಗಳನ್ನು ಬಡವರಿಗಾಗಿ ಖರ್ಚು ಮಾಡಿದ್ದೇವೆ ಎಂದರು.
ಬಸವಾದಿ ಶರಣರ ಆದರ್ಶ ತತ್ವ, ಸಿದ್ದಾಂತಗಳ ಮೇಲೆ ನಂಬಿಕೆಯಿಟ್ಟು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇನೆ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಜಾನುವಾರುಗಳಿಗೆ ಮೇವು ನೀರಿಗೆ ಅಭಾವವಿದೆ. ಹಣ ಮಂಜೂರು ಮಾಡುವಂತೆ ಆರು ತಿಂಗಳಲ್ಲಿ ಮೂರು ಬಾರಿ ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ನಾನೆ ಖುದ್ದು ದೇಶದ ಪ್ರಧಾನಿ ಮೋದಿ ಹಾಗೂ ಅಮಿತ್‍ಷಾರವರನ್ನು ಭೇಟಿ ಮಾಡಿದ್ದೇನೆ. ಇದುವರೆವಿಗೂ ನಯಾಪೈಸೆ ನೀಡಿಲ್ಲ. ಶಬರಿಯಂತೆ ಕಾಯುತ್ತಿದ್ದೇನೆ ಎಂದರು.ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಹಣ ನೀಡಿದ್ದೇನೆ. ಕೂಡ್ಲಿಗಿ, ಮೊಳಕಾಲ್ಮುರು, ಪಾವಗಡ, ಚಳ್ಳಕೆರೆ ತಾಲೂಕುಗಳಿಗೆ ನೀರು ಕೊಡಲು ಪ್ರಾಜೆಕ್ಟ್ ತಯಾರಿಸಿ ಚಾಲನೆ ಕೊಟ್ಟಿದ್ದೇನೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರ ಬೆಳೆ ಹಾನಿಯಾಗಿದೆ. 33 ಲಕ್ಷದ 25 ಸಾವಿರ ರೈತರಿಗೆ ಇನ್‍ಪುಟ್ ಸಬ್ಸಿಡಿ ಕೊಟ್ಟಿದ್ದೇನೆ. ಬಿಜೆಪಿಯ ಅನ್ಯಾಯ ಪ್ರಶ್ನಿಸಿದರೆ ನನ್ನನ್ನು ಶ್ರೀರಾಮನ ವಿರೋಧಿ ಎನ್ನುತ್ತಾರೆ. ನಾನು ಕೂಡ ಎರಡು ರಾಮನ ದೇವಸ್ಥಾನ ಕಟ್ಟಿಸಿದ್ದೇನೆ. ಭಾವನಾತ್ಮಕ ವಿಚಾರಗಳಿಂದ ದೇಶದ ಜನರ ಭಾವನೆ ಕೆರಳಿಸುತ್ತಿರುವ ಬಿಜೆಪಿಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಅಧಿಕಾರದಿಂದ ಕೆಳಗಿಳಿಸುವ ಜವಾಬ್ದಾರಿ ಮತದಾರರ ಮೇಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ರಾಜಕಾರಣದಲ್ಲಿ ಹಣ ಅಧಿಕಾರಕ್ಕಾಗಿ ಬರುವವರು ಜಾಸ್ತಿಯಿದ್ದಾರೆ. ಕಾಂಗ್ರೆಸ್‍ನಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯ. ಅಪ್ಪರ್ ಭದ್ರಾ ಯೋಜನೆ ಕೆಲಸ ಆರಂಭವಾಗಿದೆ. 8.5 ಟಿಎಂಸಿಗೂ ಹೆಚ್ಚು ನೀರು ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಹರಿದು ಬಂದಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ಗ್ಯಾರೆಂಟಿಗಳನ್ನು ನೀಡುತ್ತದೆ ಎಂದು ಹೇಳಿದರು.ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಈ ಬಾರಿಯ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕೋಮುವಾದಿ ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿದರೆ ದೇಶಕ್ಕೆ ದೊಡ್ಡ ಗಂಡಾಂತರವಿದೆ. ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಎನ್.ವೈ. ಗೋಪಾಲಕೃಷ್ಣ, ಟಿ. ರಘುಮೂರ್ತಿ, ಬಿ.ಜಿ. ಗೋವಿಂದಪ್ಪ, ಪಾವಗಡ ಶಾಸಕ ವೆಂಕಟೇಶ್, ಮಾಜಿ ಶಾಸಕಿ ಪೂರ್ಣಿಮ ಶ್ರೀನಿವಾಸ್ ಮಾತನಾಡಿದರು.ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ, ಮಾಜಿ ಸಚಿವ ಎಚ್. ಆಂಜನೇಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ. ಹಾಲೇಶಪ್ಪ, ಶಾಸಕ ಬಸವಂತಪ್ಪ, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ. ಯೋಗೇಶ್‍ಬಾಬು, ಶ್ರೀನಿವಾಸ್, ಸಾ.ಲಿಂಗಯ್ಯ, ಷಣ್ಮುಖಪ್ಪ, ವಿಪ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವಿಜಯಕುಮಾರ್, ರಾಮಪ್ಪ, ದಾವಣಗೆರೆ ಡಿ. ಬಸವರಾಜ್, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರ್, ಬಿ.ಟಿ.ಜಗದೀಶ್ ವೇದಿಕೆಯಲ್ಲಿದ್ದರು.