ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಸಮಾಧಾನಕರ ಸಂಗತಿಯೊಂದನ್ನು ಸಿಎಂ ಸಿದ್ದರಾಮಯ್ಯ ಬಜೆಟ್ ಮೂಲಕ ರವಾನಿಸಿದ್ದು ಇನ್ನೊಂದು ವರ್ಷದಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಅನುದಾನದ ಕೊರತೆಯಿಂದ ಬಸವಳಿದಿದ್ದ ಭದ್ರಾ ಮೇಲ್ದಂಡೆಗೆ ಇದೊಂದು ಆಶಾದಾಯಕ ಬೆಳವಣಿಗೆ.ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. 30 ಕೆರೆಗಳಿಗೆ ನೀರು ತುಂಬಿಸುವುದು,70 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮನೀರಾವರಿ ಕಲ್ಪಿಸುವ ಕೆಲಸ ಬಾಕಿ ಇದೆ. ಇದಕ್ಕಾಗಿ ನೀರಾವರಿ ನಿಗಮವು 2,611 ಕೋಟಿ ರು. ವೆಚ್ಚದ ಟೆಂಡರ್ ರೂಪಿಸಿದ್ದು ಬಜೆಟ್ ಮೂಲಕ ಒಪ್ಪಿಗೆ ನೀಡಿದಂತಾಗಿದೆ. ಹಾಗೊಂದು ವೇಳೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಲ್ಲಿ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಜಗಳೂರು, ಪಾವಗಡ ಭಾಗದಲ್ಲಿ ಸೂಕ್ಷ್ಮ ನೀರಾವರಿಗಾಗಿ ಪೈಪ್‌ಲೈನ್ ವಿಸ್ತೃತ ಸ್ವರೂಪ ಪಡೆದುಕೊಳ್ಳಲಿದೆ. ಭದ್ರಾ ಮೇಲ್ದಂಡೆಗಾಗಿ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವ 5,300 ಕೋಟಿ ರು. ಸಂಗತಿಯ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರವು ಅಗತ್ಯ ಅನುದಾನ ಒದಗಿಸಿ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮವಹಿಸುತ್ತಿದೆ. ತರೀಕೆರೆ ಏತ ನೀರಾವರಿ ಯೋಜನೆಯಡಿ 79 ಕೆರೆಗಳನ್ನು ತುಂಬಿಸುವ ಮೂಲಕ 49,790 ಎಕರೆ ಸೂಕ್ಷ್ಮ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದೆ ಎಂದಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳಿಗೆ ಒಟ್ಟು 22 ಸಾವಿರ ಕೋಟಿ ರು. ಅನುದಾನ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ರಾಜ್ಯದಲ್ಲಿ ಒಟ್ಟು ನಾಲ್ಕು ನೀರಾವರಿ ನಿಗಮಗಳಿದ್ದು ಈ ಅನುದಾನ ಹಂಚಿಕೆಯಾದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಕನಿಷ್ಟ 5 ಸಾವಿರ ಕೋಟಿ ರು. ಲಭ್ಯವಾಗಬಹುದೆಂದು ಅಂದಾಜಿಸಲಾಗಿದೆ. ಎತ್ತಿನಹೊಳೆ, ಭದ್ರಾ ಮೇಲ್ದಂಡೆಗೆ ಅನುದಾನ ಹಂಚಿಕೆಯಾದಲ್ಲಿ ಕನಿಷ್ಠ 2,500 ಸಾವಿರ ಕೋಟಿ ರು. ಭದ್ರಾ ಮೇಲ್ದಂಡೆಗೆ ಸಿಗುವ ಸಾಧ್ಯತೆಗಳಿವೆ.ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಲ್‌ಗೆ 7,550 ರು. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ ಪ್ರೋತ್ಸಾಹಧನ 450 ರು.ಗಳಂತೆ ಒಟ್ಟು 138 ಕೋಟಿ ರು. ನೀಡಲು ತೀರ್ಮಾನಿಸಲಾಗಿದ್ದು, ಚಿತ್ರದುರ್ಗ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ. ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗಟ್ಟಲು ಹಿಂದುಳಿದ ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಕಿಟ್ ಗಳು, ಪ್ರೋತ್ಸಾಹ ಧನ ಹಾಗೂ ತಾಯಂದಿರಿಗೆ ವಾತ್ಸಲ್ಯ ಕಿಟ್‌ಗಳನ್ನು ವಿತರಣೆ ಮಾಡಲಾಗುವುದು. ಹುದ್ದೆಗಳನ್ನು ಪುನರ್ ಹಂಚಿಕೆ ಮಾಡುವ ಮೂಲಕ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಎಂಸಿಎಚ್ ತಜ್ಞರ ನಿಯೋಜನೆ ಕೂಡಾ ಚಿತ್ರದುರ್ಗಕ್ಕೆ ವರದಾನ.
ಮೊಳಕಾಲ್ಮೂರಿನಲ್ಲಿ 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳನ್ನು ಸ್ಥಾಪಿಸುವ ಭರವಸೆ ನೀಡಲಾಗಿದೆ. ಮೊಳಕಾಲ್ಮೂರು ತಾಲೂಕಿನ ಜನತೆಗೆ ಆರೋಗ್ಯ ಕೆಟ್ಟರೆ ಚಿತ್ರದುರ್ಗದ, ಬಳ್ಳಾರಿ ಆಸ್ಪತ್ರೆ ಆಶ್ರಯಿಸುತ್ತಿದ್ದದರು. 200 ಹಾಸಿಗೆ ಸಾಮರ್ಥ್ಯದಿಂದಾಗಿ ರಾಜ್ಯದ ಗಡಿ ತಾಲೂಕುಗಳಿಗೆ ಪ್ರಾಧಾನ್ಯತೆ ನೀಡಿದಂತಾಗಿದೆ.ಸುಧಾರಿತ ಆರೋಗ್ಯ ಸೇವೆ ಒದಗಿಸಲು ಚಿತ್ರದುರ್ಗದಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಚಿತ್ರದುರ್ಗದ ಮೂಲಕ ಹಾದುಹೋಗಿರುವದರಿಂದ ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್ ಅಗತ್ಯವಿತ್ತು. ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಕಾರ್ಯಾರಂಭ ಮಾಡಿರುವದರಿಂದ ಟ್ರಾಮಾ ಸೆಂಟರ್ ಸೇರ್ಪಡೆಗೊಂಡಲ್ಲಿ ಅಪಘಾತದಂತಹ ತುರ್ತು ಪ್ರಕರಣಗಳ ನಿರ್ವಹಿಸಲು ಅನುಕೂಲವಾಗುತ್ತದೆ.
ಚಿತ್ರದುರ್ಗದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಬೇಕೆಂಬ ಬಹು ವರ್ಷದ ಬೇಡಿಕೆಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದಲ್ಲದೇ ಚಿತ್ರದುರ್ಗದಲ್ಲಿ ಸ್ವಯಂ ಚಾಲಿತ ಪರೀಕ್ಷಾ ಪಥವನ್ನು ಚಿತ್ರದುರ್ಗದಲ್ಲಿ ಸ್ಥಾಪಿಸಲಾಗುತ್ತದೆ. ವಾಹನ ಸಂಚಾರ ಮೇಲ್ವಿಚಾರಣೆ ಮಾಡಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಚಿತ್ರದುರ್ಗದಲ್ಲಿ ಎಐ ಆಧಾರಿತ ವಿದ್ಯುನ್ಮಾನ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.