ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಬಸವಕಲ್ಯಾಣದಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು, ಅದಕ್ಕೆ ಅನುದಾನ ನೀಡಿದ್ದು, ಅನುಭವ ಮಂಟಪದ ವಿನ್ಯಾಸ ಮಾಡಿ ನಮ್ಮ ಅವಧಿಯಲ್ಲಿ ಅನುಭವ ಮಂಟಪ ನಿರ್ಮಾಣದ ಕಾರ್ಯ ಆರಂಭಿಸಿದ್ದರೆ ಇಲ್ಲಿ ಬಿಜೆಪಿ ಸರ್ಕಾರದ ಕೇಂದ್ರ ಸಚಿವ ಭಗವಂತ ಖೂಬಾ ಸಾಧನೆ ಏನಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದರು.ನಗರದ ಶಿವಪೂರ ರಸ್ತೆಯಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಅವಧಿಯಲ್ಲಿ ಬಸವಕಲ್ಯಾಣ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಅಲ್ಲದೆ ಮಾಜಿ ಸಿಎಂ ದಿ. ಧರಂಸಿಂಗ್ ಮತ್ತು ಬಸವರಾಜ ಪಾಟೀಲ್ ಹುಮನಾಬಾದ್ ಅವರ ಅಧಿಕಾರವಧಿಯ ಸಂದರ್ಭದಲ್ಲಿ ಪ್ರಾಧಿಕಾರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ ಎಂದು ಹೇಳಿದರು.
ನಾನು ಪೌರಾಡಳಿತ ಸಚಿವನಾಗಿದ್ದಾಗ ಬಸವಕಲ್ಯಾಣ ನಗರಸಭೆಗೆ ಸುಮಾರು 60 ಕೋಟಿ ರು. ಅನುದಾನ ನೀಡಿದ್ದೇವೆ. ಅಲ್ಲದೆ ಸಿದ್ದರಾಮಯ್ಯ ಸರ್ಕಾರದಲ್ಲಿ ನೀರಾವರಿ ಯೋಜನೆಗೆ ಕೆರೆ ತುಂಬುವ ಕಾರ್ಯ ಮಾಡಿದ್ದೇವೆ ಎಂದರು.ಖೂಬಾಗೆ ಜನ ಪ್ರಶ್ನಿಸುವ ಅಲೆ ಸುನಾಮಿಯಾಗಿ ಪರಿವರ್ತನೆಯಾಗುತ್ತಿದೆ:
ಕೊರೋನಾ ಸಂದರ್ಭದಲ್ಲಿ ಭಗವಂತ ಖೂಬಾ ಏನು ಮಾಡಿದ್ದಾರೆ ಎಂಬುವುದು ಜನರ ಪ್ರಶ್ನೆಯಿದೆ. ಆದರೆ ಸಾಗರ ಖಂಡ್ರೆ ಅನೇಕ ಜನರಿಗೆ ಸಹಾಯ ಮಾಡಿ ಜೀವ ಉಳಿಸಿದ್ದಾರೆ. ಖೂಬಾರನ್ನು ಜನ ಪ್ರಶ್ನಿಸುವ ಅಲೆ ಸುನಾಮಿಯಾಗಿ ಪರಿವರ್ತನೆಯಾಗುತ್ತಿದೆ ಜಿಲ್ಲೆಯ ಜನತೆ ಇಂದು ಪರಿವರ್ತನೆ ಬಯಸುತ್ತಿದ್ದಾರೆ ಎಂದರು.ಖೂಬಾಗೆ ಮತ ಕೇಳುವ ನೈತಿಕತೆ ಇಲ್ಲ: ಬಿಜೆಪಿ ಒಳಗಿನವರೇ ಅವರಿಗೆ ಹತ್ತು ವರ್ಷಗಳ ಸಾಧನೆ ಮತ್ತು ನೀವು ಕೊಟ್ಟ ಒಂದಾದರೂ ಭರವಸೆ ಈಡೇರಿಸಿದ್ದಾರೆ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಹೀಗಾಗಿ ಸ್ವಪಕ್ಷದವರೆ ಖೂಬಾ ಅವರಿಗೆ ತಿರಸ್ಕಾರ ಮಾಡಿದ್ದಾರೆ ಹೀಗಾಗಿ ಜನರಿಗೆ ಮತ ಕೇಳುವ ಯಾವ ನೈತಿಕತೆ ಅವರಿಗಿದೆ ಎಂದು ಪ್ರಶ್ನಿಸಿದ್ದಾರೆ.2025ರ ಒಳಗಾಗಿ ನೂತನ ಅನುಭವ ಮಂಟಪ ಪೂರ್ಣ: ಮುಖ್ಯಮಂತ್ರಿಗಳು ನೂತನ ಅನುಭವ ಮಂಟಪ ಕಾರ್ಯಕ್ಕೆ 50 ಕೋಟಿ ಅನುದಾನ ನೀಡಿದ್ದಾರೆ. ಹೀಗಾಗಿ 2025ರ ಒಳಗೆ ಪೂರ್ಣ ಕಾಮಗಾರಿ ಮುಗಿಸುತ್ತೇವೆ. ಈ ಲೋಕಸಭೆ ಚುನಾವಣೆಯಲ್ಲಿ ಸಾಗರ ಖಂಡ್ರೆ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಈಶ್ವರ ಖಂಡ್ರೆ ಮನವಿಸಿದರು.
ಈ ಸಂದರ್ಭದಲ್ಲಿ ಸಚಿವ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಅರವಿಂದಕುಮಾರ ಅರಳಿ, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಜಿಲ್ಲಾದ್ಯಕ್ಷ ಬಸವರಾಜ ಜಾಬಶೆಟ್ಟಿ, ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಸಾಗರ ಖಂಡ್ರೆ, ಮುಖಂಡರಾದ ಧನರಾಜ ತಾಳಂಪಳ್ಳಿ, ಮಾಲಾ ಬಿ. ನಾರಾಯಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಮೂಲಗೆ, ಆನಂದ ದೇವಪ್ಪ, ಅಮೃತ ಚಿಮಕೋಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ, ಅಜರ್ ಅಲಿ ನವರಂಗ, ಬಾಬು ಹೊನ್ನಾ ನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.