ಧಾರವಾಡ:
ಇಡೀ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಇಲ್ಲಿಯ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಒಂದೂವರೆ ವರ್ಷದ ನಂತರ ಸರ್ಕಾರ ನೇಮಕ ಮಾಡಿದ್ದು, ಶುಕ್ರವಾರ ವೃತ್ತಿ, ಹವ್ಯಾಸಿ ರಂಗಭೂಮಿ ಕಲಾವಿದ, ಹಾಸ್ಯ ನಟ ರಾಜು ತಾಳಿಕೋಟಿ ಅಧಿಕಾರ ಸ್ವೀಕರಿಸಿದರು.ಸರ್ಕಾರ ನೀಡಿರುವ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಧಾರವಾಡ ರಂಗಾಯಣದಲ್ಲಿ ಸಾಕಷ್ಟು ಸವಾಲುಗಳಿದ್ದು, ಸರ್ಕಾರದ ಎದುರು ಇಟ್ಟು ಭಂಡ ಧೈರ್ಯ ಮಾಡಿ ಅವುಗಳನ್ನು ಎದುರಿಸುತ್ತೇನೆ. ಹೊಸ ಹೊಸ ನಾಟಕಗಳನ್ನು ತಂದು ರಂಗಾಯಣವನ್ನು ಸಮರ್ಥವಾಗಿ ಮುನ್ನಡೆಸುವ ಕನಸು ಹೊಂದಿದ್ದೇನೆ. ಈ ಕನಸಿಗೆ ಈ ಭಾಗದ ಕಲಾವಿದರು, ಸಾಹಿತಿಗಳು, ರಂಗಾಸಕ್ತರು, ರಂಗ ಸಮಾಜ ಹಾಗೂ ಮಾಧ್ಯಮ ಬಳಗ ಸಹಕಾರ ನೀಡಬೇಕು ಎಂದು ಅಧಿಕಾರ ಸ್ವೀಕಾರದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಧಾರವಾಡ ರಂಗಾಯಣದ ನಿರ್ದೇಶಕ ಸ್ಥಾನಕ್ಕಿಂತಲೂ ಹೆಚ್ಚಿನ ಹುದ್ದೆಯ ಬೇಡಿಕೆ ಇಟ್ಟಿದ್ದೇನು. ತಾಯಿ ಮಗುವಿಗೆ ಹಾಲು ನೀಡಿದಾಗ ಹೇಗೆ ಸಮಾಧಾನ ಆಗುತ್ತದೆಯೋ ಹಾಗೆ ಧಾರವಾಡ ರಂಗಾಯಣ ನೀಡಿದ್ದು ಸಮಾಧಾನ ತಂದಿದೆ. ವೃತ್ತಿ ರಂಗಭೂಮಿಯಿಂದ ಬಂದಿರುವುದರಿಂದ ವಿರೋಧ ವ್ಯಕ್ತವಾಗಿದ್ದು, ಅವರನ್ನು ಕರೆದುಕೊಂಡು ಮುಂದೆ ಸಾಗುತ್ತೇನೆ. ಅದಕ್ಕಾಗಿಯೇ ಆ. 17ರಂದು ರಂಗಾಯಣದಲ್ಲಿ ಕಲಾವಿದರು, ಸಾಹಿತಿಗಳ, ರಂಗಾಸಕ್ತರ ಸಭೆ ಕರೆದಿದ್ದೇನೆ. ಸರ್ಕಾರ ಈ ಜವಾಬ್ದಾರಿ ವಹಿಸಿದ್ದು, ಇಷ್ಟಾಗಿಯೂ ವಿರೋಧ ಮಾಡಿದರೂ ನನ್ನ ಕೆಲಸದ ಮೂಲಕ ಅವರಿಗೆ ಉತ್ತರ ನೀಡುತ್ತೇನೆ ಎಂದರು.ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಎರಡೂ ಒಂದೇ ತಾಯಿ ಮಕ್ಕಳು. ಎರಡೂ ಕ್ಷೇತ್ರದವರನ್ನು ಒಗ್ಗೂಡಿಸಿಕೊಂಡು ರಂಗಾಯಣವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಒಯ್ಯೋಣ. ಅದರಲ್ಲೂ ಗ್ರಾಮೀಣ ಕಲಾವಿದರನ್ನು ಕಡೆಗಣಿಸಿದ್ದು ಅವರಿಗೆ ಈ ರಂಗಾಯಣ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ ಎಂದ ಅವರು, ರಂಗಾಯಣದ ಮೊದಲ ಕಾರ್ಯಕ್ರಮವಾಗಿ ಇಳಕಲ್ಲಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ರಂಗ ಶ್ರಾವಣ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೈಸೂರು ರಂಗಾಯಣದ ಅಭಿವೃದ್ಧಿ ಕುರಿತು ಪ್ರಶ್ನೆಯೊಂದಕ್ಕೆ, ಮೈಸೂರು ಬೆಂಗಳೂರಿಗೆ ಹತ್ತಿರವಿದೆ. ಧಾರವಾಡ ದೂರ ಇರುವುದರಿಂದ ಅಷ್ಟೊಂದು ಅನುದಾನ ನೀಡುತ್ತಿಲ್ಲ ಎಂದು ಹಾಸ್ಯವಾಗಿ ಉತ್ತರಿಸಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಉಕ ಭಾಗದವರು. ಮುಖ್ಯಮಂತ್ರಿಗಳ ಜತೆಗೆ ತಮ್ಮ ಒಡನಾಟವಿದ್ದು ರಂಗಾಯಣದ ಅಭಿವೃದ್ಧಿಗೆ ಬೇಕಾದ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಈ ವೇಳೆ ರಂಗಾಯಣ ಆಡಾಳಿತಾಧಿಕಾರಿ ಶಶಿಕಲಾ ಹುಡೇದ, ರಂಗ ಸಮಾಜದ ಸದಸ್ಯ ವಿಜಯ ಮಹಾಂತೇಶ ಇದ್ದರು.ದುಡ್ಯಾಕ ಬಂದೇನಿ..
ರಂಗಭೂಮಿಗೆ ದುಡ್ಯಾಕ ಬಂದೇನಿ, ನನ್ನನ್ನು ದುಡಿಸಿಕೊಳ್ಳಿ ಎಂದು ರಂಗಾಯಣ ನಿರ್ದೇಶಕರಾಗಿರುವ ರಾಜು ತಾಳಿಕೋಟಿ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡಿ, ಧಾರವಾಡಲ್ಲಿಯೇ ಮನೆ ಮಾಡುತ್ತೇನೆ. ಸ್ಥಳೀಯ ಕಲಾವಿದರು, ಗ್ರಾಮೀಣ ಕಲಾವಿದರನ್ನು ಒಗ್ಗೂಡಿಸಿಕೊಂಡು ರಂಗಾಯಣಕ್ಕೆ ಹೊಸ ರೂಪ ಕೊಡಲು ಪ್ರಯತ್ನಿಸುತ್ತೇನೆಂದರು.