ಭಾನುಮತಿ ಗರ್ಭಿಣಿ, ಮರಿ ಹಾಕಿದ್ದು ನೇತ್ರಾವತಿ

KannadaprabhaNewsNetwork |  
Published : Oct 25, 2023, 01:15 AM IST

ಸಾರಾಂಶ

ಅಂಬಾರಿ ಮೆರವಣಿಗೆ ರದ್ದು

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮೈಸೂರು ಮಾದರಿಯಲ್ಲೇ ನಡೆಯುವ ಶಿವಮೊಗ್ಗ ದಸರಾದ ಅಂಬಾರಿ ಮೆರವಣಿಗೆ ಹಿನ್ನೆಲೆ ಶಿವಮೊಗ್ಗಕ್ಕೆ ಆಗಮಿಸಿದ್ದ ಸಕ್ರೆಬೈಲಿನ ಹೆಣ್ಣಾನೆ ನೇತ್ರಾವತಿ ಅಂಬಾರಿ ಮೆರವಣಿಗೆ ಹಿಂದಿನ ದಿನ ಮರಿಯಾನೆಗೆ ಜನ್ಮ ನೀಡಿದೆ. ಇದು ಒಂದು ಕಡೆ ಖುಷಿ ವಿಚಾರವೇ ಆದರೂ, ತುಂಬು ಗರ್ಭಿಣಿ ಆನೆಯನ್ನು ದಸರಾ ಮೆರವಣೆಗೆ ಕರೆದಿದ್ದು ಏಕೆ ಎಂಬ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ. ದಸರಾ ಜಂಬೂ ಸವಾರಿಗೆ ಆಗಮಿಸಿದ್ದ ಮೂರು ಆನೆಗಳ ಪೈಕಿ ಶಿವಮೊಗ್ಗಕ್ಕೆ ನೇತ್ರಾವತಿಯನ್ನು ಕರೆತರಲಾಗಿತ್ತು. ಇಲ್ಲಿ ಜಂಬೂ ಸವಾರಿಯ ತಾಲೀಮು ನಡೆಸಲಾಗಿತ್ತು. ಸೋಮವಾರ ಸಂಜೆ ಅಂತಿಮ ಹಂತದ ತಾಲೀಮು ಕೂಡ ನಡೆಸಲಾಗಿತ್ತು. ತಾಲೀಮು ಮುಗಿಸಿ ವಾಸವಿ ಶಾಲೆ ಆವರಣಕ್ಕೆ ತೆರಳಿದ ಬಳಿಕ ನೇತ್ರಾವತಿ ಆನೆಯು ಹೆಣ್ಣುಮರಿಗೆ ಜನ್ಮ ನೀಡಿದೆ. ವಾಸವಿ ಶಾಲೆ ಆವರಣದಲ್ಲಿ ಆನೆಗಳು ತಂಗಿದ್ದವು. ಮೂರು ದಿನ ತಾಲೀಮಿನಲ್ಲಿ ತೊಡಗಿದ್ದ ನೇತ್ರಾವತಿ ಆನೆ ಮೆರವಣಿಗೆ ಹಿಂದಿನ ದಿನ ಆಗಿ ಮರಿ ಹಾಕಿರುವುದು ಎಲ್ಲರಿಗೂ ಶಾಕ್‌ ನೀಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ವೈದ್ಯರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಆನೆ ಮತ್ತು ಮರಿ ಎರಡೂ ಆರೋಗ್ಯವಾಗಿವೆ. ಮಂಗಳವಾರ ಬೆಳಗ್ಗೆಯೇ ಆನೆ ಹಾಗೂ ಮರಿಯನ್ನು ಶಿವಮೊಗ್ಗ ನಗರದಿಂದ ಮತ್ತೆ ಸಕ್ರೆಬೈಲ್‌ ಆನೆ ಬಿಡಾರಕ್ಕೆ ಕರೆದೊಯ್ಯಲಾಗಿದೆ. ಆನೆ ಅಂಬಾರಿ ರದ್ದು: ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಸಾಗರ್‌ ಆನೆ ಅಂಬಾರಿ ಹೊರಬೇಕಾಗಿತ್ತು. ನೇತ್ರಾವತಿ ಹಾಗೂ ಹೇಮಾವತಿ (ಇನ್ನೂ ಗರ್ಭಿಣಿ) ಆನೆಗಳು ಸಾಗರ್ ಆನೆ ಇಕ್ಕೆಲದಲ್ಲಿ ಸಾಗಬೇಕಾಗಿತ್ತು. ಆದರೆ, ನೇತ್ರಾವತಿ ಆನೆ ಮರಿ ಹಾಕಿದ್ದರಿಂದ ಸಾಗರ್ ಆನೆ ಮೇಲೆ ಅಂಬಾರಿ ಹೊರಿಸದಿರುವ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ, ಕಾರಣ ಅಲಂಕೃತ ವಾಹನದ ಮೇಲೆ ಚಾಮುಂಡೇಶ್ವರಿ ದೇವಿಯ ವಿಗ್ರಹ ಕೊಂಡೊಯ್ಯುವ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಮೆರವಣಿಯಲ್ಲಿ ಸಾಗರ ಮತ್ತು ಹೇಮಾವತಿ ಆನೆಗಳು ಹೆಜ್ಜೆಹಾಕಿದವು. 2019ರಲ್ಲಿ ವಿಜಯದಶಮಿ ದಿನ ಅಂಬಾರಿ ಹೊರಬೇಕಿದ್ದ ಸಾಗರ ಆನೆಗೆ ಭೇದಿ ಶುರುವಾಗಿ ದಿಢೀರ್‌ ಅಸ್ವಸ್ಥಗೊಂಡಿತ್ತು. ವನ್ಯಜೀವಿ ವಿಭಾಗದ ವೈದ್ಯ ಡಾ.ವಿನಯ್‌ ಆನೆಗೆ ಚಿಕಿತ್ಸೆ ನೀಡಿದರು. ಸಾಗರ್‌ ಆನೆ ಅಸ್ವಸ್ಥಗೊಂಡಿದ್ದರಿಂದ ಅಂಬಾರಿ ಮೆರವಣಿಗೆ ನಡೆಯಲಿದೆಯೋ, ಇಲ್ಲವೊ ಎಂಬ ಅನುಮಾನ ಮೂಡಿತ್ತು. ಕೊನೆ ಕ್ಷಣದಲ್ಲಿ ಲಾರಿಯಲ್ಲಿ ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬಳಿಕ ಚೇತರಿಸಿಕೊಂಡಿದ್ದ ಸಾಗರ್‌ ಆನೆ ಮೆರವಣಿಗೆಯ ಅಂಬಾರಿ ಹೊತ್ತು ಸಾಗಿತ್ತು. 2021ರ ದಸರಾ ಸಂದರ್ಭ ಸಕ್ರೆಬೈಲು ಬಿಡಾರದ ಆನೆಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರೂ, ಅಂಬಾರಿ ಹೊತ್ತಿರಲಿಲ್ಲ. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕಡೇ ಕ್ಷಣದಲ್ಲಿ ಅನುಮತಿ ನೀಡಲಾಗಿತ್ತು. ಹಾಗಾಗಿ, ಆನೆಗಳಿಗೆ ತಾಲೀಮು ನಡೆಸಿರಲಿಲ್ಲ. ಕೊನೆ ಘಳಿಗೆಯಲ್ಲಿ ಅಂಬಾರಿ ಹೊರಿಸುವುದು ಸರಿಯಲ್ಲ ಎಂದು ಪಾಲಿಕೆಯ ಲಾರಿಯಲ್ಲಿ ಮೆರವಣಿಗೆ ನಡೆಸಲಾಗಿತ್ತು. ಸಾಗರ್‌ ನೇತೃತ್ವದ ಗಜಪಡೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. - - - ಬಾಕ್ಸ್‌ ನೇತ್ರಾವತಿ ಆನೆ ಗರ್ಭಿಣಿ ಅನ್ನೋದು ಯಾರಿಗೂ ಗೊತ್ತಿರಲಿಲ್ಲ! ನೇತ್ರಾವತಿ ಆನೆ ಗರ್ಭವತಿಯಾದ ವಿಚಾರ ಅರಣ್ಯ ಇಲಾಖೆ, ಸಕ್ರೆಬೈಲು ಬಿಡಾರದ ಸಿಬ್ಬಂದಿ ಹಾಗೂ ವನ್ಯಜೀವಿ ವೈದ್ಯರಿಗೆ ಗೊತ್ತಿರಲಿಲ್ಲವೇ? ಈ ವಿಚಾರ ಈಗ ಎಲ್ಲರಲ್ಲೂ ಅತ್ಯಾಶ್ಚರ್ಯ ಉಂಟುಮಾಡಿದೆ. ಈ ಬಾರಿ ದಸರಾ ಮೆರವಣಿಗೆಯಲ್ಲಿ ಭಾಗಿ ಆಗಬೇಕಿದ್ದ ಭಾನುಮತಿ ಗರ್ಭಿಣಿ ಎಂಬ ಕಾರಣಕ್ಕೆ ಅದನ್ನು ದಸರಾ ಮೆರವಣಿಗೆಯಿಂದ ಕೈ ಬಿಡಲಾಗಿತ್ತು. ಆದರೆ, ತುಂಬು ಗರ್ಭಿ ಆಗಿರುವ ನೇತ್ರಾವತಿ ಆನೆಯನ್ನು ಹೇಗೆ ದಸರಾಕ್ಕೆ ಕರೆತಂದರು? ಅದನ್ನು ಹೇಗೆ ತಾಲೀಮಿನಲ್ಲಿ ಬಳಸಿಕೊಂಡರು ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. 19ನೇ ತಿಂಗಳಲ್ಲಿನ ನೇತ್ರಾವತಿ ಹೆಣ್ಣಾನೆಗೆ ಜನ್ಮ ನೀಡಿರಬಹುದು ಎಂದು ವನ್ಯಜೀವಿ ವಿಭಾಗದ ವೈದ್ಯ ಡಾ.ವಿನಯ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಿದ್ದೂ, ಆನೆ ಗರ್ಭವತಿ ಆಗಿರುವುದು ಯಾರಿಗೂ ತಿಳಿಯದಿರುವುದು ಆಶ್ಚರ್ಯ ಹುಟ್ಟಿಸಿದೆ. ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಭಾಗವಹಿಸಲು ಆನೆಗಳ ತಲಾಷ್‌ ನಡೆಯುತ್ತಿತ್ತು. ಆಗ ಸಕ್ರೆಬೈಲು ಬಿಡಾರದ ಆನೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದರು. ಈ ಹಿನ್ನೆಲೆ ಬಿಡಾರದ ಆನೆಗಳ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಆಗ ಪ್ರೆಗ್ನೆನ್ಸಿ ಟೆಸ್ಟ್‌ ಕೂಡ ನಡೆದಿತ್ತು. ಭಾನುಮತಿ ಆನೆ ಗರ್ಭವತಿಯಾಗಿದೆ ಅನ್ನುವುದು ಆ ಟೆಸ್ಟ್‌ನಿಂದ ತಿಳಿದುಬಂದಿತ್ತು. ಹಾಗಾಗಿ, ಈ ಬಾರಿ ಶಿವಮೊಗ್ಗ ದಸರಾಗೆ ಭಾನುಮತಿಯನ್ನು ಕಳುಹಿಸಲು ನಿರಾಕರಿಸಲಾಗಿತ್ತು. ಆದರೆ, ನೇತ್ರಾವತಿ ಆನೆ ಗರ್ಭವತಿಯಲ್ಲ ಎಂದು ರಿಪೋರ್ಟ್‌ನಲ್ಲಿ ತಿಳಿಸಲಾಗಿತ್ತು. ಹಾಗಾಗಿ, ಅದನ್ನು ಮೈಸೂರಿಗೆ ಕಳಿಸುವಂತೆ ಅಧಿಕಾರಿಗಳು ತಿಳಿಸಿದ್ದರು. ಶಿವಮೊಗ್ಗ ದಸರಾ ಹಿನ್ನೆಲೆ ನೇತ್ರಾವತಿ ಆನೆಯನ್ನು ಇಲ್ಲಿಯೇ ಉಳಿಸಿಕೊಳ್ಳಲಾಗಿತ್ತು. - - - -24ಎಸ್‌ಎಂಜಿಕೆಪಿ01: ಶಿವಮೊಗ್ಗದ ವಾಸವಿ ಶಾಲೆ ಆವರಣದಲ್ಲಿ ಹೆಣ್ಣುಮರಿಗೆ ಜನ್ಮ ನೀಡಿದ ಸಕ್ರೆಬೈಲು ಆನೆಬಿಡಾರದ ನೇತ್ರಾವತಿ ಆನೆ.

PREV