ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾನುವಳ್ಳಿ ಗ್ರಾಮದಲ್ಲಿ ತೆರವು ಮಾಡಿರುವ ವೀರ ಮದಕರಿ ನಾಯಕ ಮಹಾದ್ವಾರ, ಮಹರ್ಷಿ ವಾಲ್ಮೀಕಿ ವೃತ್ತದ ಫಲಕ ಹಾಗೂ ಶಿಲಾನ್ಯಾಸದ ಶಿಲಾ ಫಲಕವನ್ನು ಮತ್ತೆ ಅದೇ ಸ್ಥಳದಲ್ಲೇ ನಿರ್ಮಿಸಲು ಒತ್ತಾಯಿಸಿ ನಾಯಕ ಸಮುದಾಯದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಮಾಜ ಬಾಂಧವರು ನಗರದ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಗೆ ಸಮಾಜದ ಮುಖಂಡರಾದ ಟಿ.ಶ್ರೀನಿವಾಸ ದಾಸಕರಿಯಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಬೆಂಗಳೂರಿನ ಟಿ.ಆರ್.ತುಳಸೀರಾಮ, ವಕೀಲರಾದ ಮಲ್ಲಿಕಾರ್ಜುನಪ್ಪ ಗುಮ್ಮನೂರು, ಆಂಜನೇಯ ಗುರೂಜಿ, ಹದಡಿ ಹಾಲೇಶಪ್ಪ, ಜಿಗಳಿ ರಂಗಣ್ಣ ಸೇರಿ ಹಲವಾರು ಮುಖಂಡರ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ಎಸ್ಟಿ ಸಮುದಾಯದವರು, ಹರಿಹರ ತಾ. ಭಾನುವಳ್ಳಿ ಗ್ರಾಮದಲ್ಲಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ದೌರ್ಜನ್ಯದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರ ಹಾಕಿದರು.
ಈ ವೇಳೆ ಮಾತನಾಡಿದ ಸಮಾಜದ ಮುಖಂಡರು, ಹರಿಹರ ತಾಲೂಕು ಭಾನುವಳ್ಳಿ ಗ್ರಾಮದಲ್ಲಿ 25ವರ್ಷ ಹಳೆಯ ಶ್ರೀ ರಾಜ ವೀರ ಮದಕರಿ ನಾಯಕರ ಮಹಾದ್ವಾರ, ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಹಾಗೂ 1999ರಲ್ಲಿ ಮಹಾದ್ವಾರ ಉದ್ಘಾಟಿಸಿದ್ದ ಶಿಲಾ ಫಲಕವನ್ನು ಸತ್ಯ ಶೋಧನಾ ಸಮಿತಿ ಹೆಸರಿನಲ್ಲಿ ಎಸಿ, ತಹಸೀಲ್ದಾರ್ ನೇತೃತ್ವದ ವರದಿ ಆದರಿಸಿ, ಜಿಲ್ಲಾಧಿಕಾರಿಗಳು ಅವುಗಳ ತೆರವಿಗೆ ಆದೇಶಿಸಿದ್ದು ಅಕ್ಷಮ್ಯ. ಯಾವುದೇ ಅಧಿಕಾರಿ, ಅಧಿಕಾರಸ್ಥರಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯವ್ಯಾಪಿ ಹೋರಾಟ ನಡೆಸುವ ಮೂಲಕ ಆಗಿರುವ ಲೋಪ ಸರಿಪಡಿಸುವಂತೆ ಮಾಡುತ್ತೇವೆ ಎಂದರು.ಯಾರ ಚಿತಾವಣೆಯಿಂದಾಗಿ ಭಾನುವಳ್ಳಿ ಗ್ರಾಮದಲ್ಲಿ ನಾಯಕ ಸಮುದಾಯದ ಮಹಿಳೆಯರು, ಪುರುಷರ ಮೇಲೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ದೌರ್ಜನ್ಯ ನಡೆಸುತ್ತಿವೆಯೆಂಬುದು ಗೊತ್ತಿದೆ. ಭಾನುವಳ್ಳಿ ಗ್ರಾಮದಲ್ಲಿ ಮುಂಚಿನಂತೆ ವೀರ ಮದಕರಿ ನಾಯಕ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತದ ನಾಮಫಲಕ ಹಾಗೂ 1999ರಲ್ಲಿ ಆಗಿನ ಸಚಿವರು, ಜನ ಪ್ರತಿನಿಧಿಗಳು ಶಿಲಾನ್ಯಾಸ ನೆರವೇರಿಸಿದ್ದ ಶಿಲಾಫಲಕಕ್ಕೆ ಸಿಗಬೇಕಾದ ನ್ಯಾಯ, ಗೌರವ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜಿಲ್ಲಾಡಳಿತ, ಹರಿಹರ ತಾಲೂಕು ಆಡಳಿತ, ಪೊಲೀಸ್ ಇಲಾಖೆ ನಾಯಕ ಸಮುದಾಯದ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಕಾರಣವಾಗಿದ್ದು, ಇದನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
ಮುಂದಿನ ಬುಧವಾರದ ಒಳಗಾಗಿ ನಮ್ಮ ಬೇಡಿಕೆಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಸ್ಪಂದಿಸದಿದ್ದರೆ, ರಾಜ್ಯವ್ಯಾಪಿ ನಾಯಕ ಸಮುದಾಯ ಬೀದಿಗಿಳಿದು ಹೋರಾಟ ನಡೆಸಲಿದೆ. ಲೋಕಸಭೆ ಚುನಾವಣೆಯಲ್ಲೂ ತಕ್ಕ ಪಾಠ ಕಲಿಸುವುದಾಗಿ ಸಮಾಜದ ಮುಖಂಡರು ಎಚ್ಚರಿಸಿದರು.ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಧಾವಿಸಿ, ಮನವಿ ಪತ್ರ ಸ್ವೀಕರಿಸಿದರು. ಸಮಾಜದ ಮುಖಂಡರಾದ ಭಾನುವಳ್ಳಿ ಗ್ರಾಪಂ ಸದಸ್ಯ ಧನ್ಯಕುಮಾರ, ಚನ್ನಬಸಪ್ಪ ಬಿಳಿಚೋಡು, ರೈತ ಸಂಘದ ಮಹೇಶ ಬೇವಿನಹಳ್ಳಿ, ಹಿರಿಯ ಪತ್ರಕರ್ತ ಜಿಗಳಿ ಪ್ರಕಾಶ, ದೇವರಾಜ ಮಲ್ಲಾಪುರ, ಶಾಮನೂರು ಪ್ರವೀಣ, ಕರೂರು ಹನುಮಂತಪ್ಪ, ಜಿಗಳಿ ಅನಂದಪ್ಪ, ಗುಮ್ಮನೂರು ಶಂಭಣ್ಣ, ಶ್ಯಾಗಲಿ ಮಂಜುನಾಥ, ಸತೀಶ್, ಗೋಶಾಲೆ ಸುರೇಶ, ದೇವರಬೆಳಕೆರೆ ಮಹೇಶ್ವರಪ್ಪ, ಚಂದ್ರಪ್ಪ, ಫಣಿಯಾಪುರ ಚಂದ್ರು, ಸುನೀಲ್, ಕೆ.ಆರ್.ರಂಗಪ್ಪ, ಕೆ.ಎಂ.ಚನ್ನಬಸಪ್ಪ, ರಂಗನಾಥ ನಾಯಕ, ಎಂ.ನಿಜಲಿಂಗಪ್ಪ ಜಗಳೂರು ಇತರರು ಪ್ರತಿಭಟನೆಯಲ್ಲಿದ್ದರು.