ಕನ್ನಡಪ್ರಭ ವಾರ್ತೆ ದಾವಣಗೆರೆ
ಬಡವರಿಗೋಸ್ಕರ ಅತೀ ಕಡಿಮೆ ದರದಲ್ಲಿ ಅಕ್ಕಿ ನೀಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಯಾವುದೇ ವ್ಯಕ್ತಿಯು ಮೊಬೈಲ್ ನಂಬರ್ ನೀಡಿ ಪ್ರತಿ ಕೆಜಿಗೆ 29 ರು. ನಂತೆ 10 ಕೆ.ಜಿ. ಅಕ್ಕಿಯನ್ನು 290 ರು. ಪಡೆದುಕೊಳ್ಳಬಹುದಾದ ಭಾರತ್ ರೈಸ್ ಯೋಜನೆ ದೇಶಾದ್ಯಂತ ಜಾರಿಗೊಳಿಸಿದ್ದು, ಬಡವರಿಗೆ ಯೋಜನೆ ಸಾಕಷ್ಟು ಅನುಕೂಲವಾಗಿದೆ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಗುರುವಾರ ಕೇಂದ್ರ ಸರ್ಕಾರದ ಭಾರತ್ ರೈಸ್ ಯೋಜನೆಯ ಅಕ್ಕಿ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಕೆಜಿಗೆ 29 ರು. ನಂತೆ 290 ರು.ಗೆ 10 ಕೆಜಿ ಪಾಕೆಟ್‌ನ ಭಾರತ್ ರೈಸ್‌ನ್ನು ಸಾರ್ವಜನಿಕರಿಗೆ ವಿತರಿಸುತ್ತಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಬಡವರ ಬಗ್ಗೆ ಹೊಂದಿರುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ಬಿಪಿಎಲ್ ಕಾರ್ಡ್‌ದಾರರಿಗೆ 5 ಕೆಜಿ ಅಕ್ಕಿ ನೀಡುವ ವ್ಯವಸ್ಥೆ ಇದೆ. ಹಿಂದೆ ಕೋವಿಡ್ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುವಂತೆ 10 ಕೆಜಿ ಅಕ್ಕಿ ನೀಡಲಾಗು ತ್ತಿತ್ತು. ಇನ್ನು 5 ವರ್ಷವೂ 5 ಕೆ.ಜಿ. ಭಾರತ್ ರೈಸ್ ನೀಡುವಂತಹ ವ್ಯವಸ್ಥೆಯನ್ನು ನರೇಂದ್ರ ಮೋದಿ ಮಾಡಿದ್ದಾರೆ. ಜನ ಸಾಮಾನ್ಯರಿಗೂ ಕಡಿಮೆ ದರದಲ್ಲಿ ಅಕ್ಕಿ ಸಿಗಬೇಕೆಂಬ ಸದುದ್ದೇಶದಿಂದ ಅತೀ ಕಡಿಮೆ ದರಕ್ಕೆ 29 ರು.ಗೆ ಕೆಜಿಯಂತೆ ಅಕ್ಕಿ ನೀಡುತ್ತಿದ್ದೇವೆ ಎಂದ ಅವರು, ಈ ಯೋಜನೆ ವರ್ಷಾನುಗಟ್ಟಲೇ ನಡೆಯುತ್ತಿದೆ. ಇದೇ ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿ ಎಂದು ಅವರು ಹೇಳಿದರು.ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಗಳಲ್ಲಿ ಭಾರತ್ ರೈಸ್ ಸಹ ಒಂದಾಗಿದೆ. ಬಡವರಿಗೆ ಅತೀ ಕಡಿಮೆ ದರದಲ್ಲಿ ಗುಣಮಟ್ಟದ ಅಕ್ಕಿ ನೀಡುವ ಮಾನವೀಯ ಯೋಜನೆಯಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಉಪ ಮೇಯರ್ ಯಶೋಧ ಯೋಗೇಶ, ಮಾಜಿ ಉಪ ಮೇಯರ್ ಗಾಯತ್ರಿ ಬಾಯಿ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಸದಸ್ಯರಾದ ಸೋಗಿ ಶಾಂತಕುಮಾರ, ಆರ್.ಎಲ್.ಶಿವಪ್ರಕಾಶ, ಗೌರಮ್ಮ ಗಿರೀಶ, ಮಾಯಕೊಂಡದ ಜಿ.ಎಸ್.ಶ್ಯಾಮ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ರೈತ ಮೋರ್ಚಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಬಿ.ಟಿ.ಸಿದ್ದಪ್ಪ, ಬೇತೂರು ಸಂಗನಗೌಡ್ರು, ಶಿವನಗೌಡ ಟಿ.ಪಾಟೀಲ, ಎಂ.ವಿ.ಜಯಪ್ರಕಾಶ ಮಾಗಿ, ಅತಿಥಿ ಅಂಬರಕರ್, ಶಾಬನೂರು ರಾಜು, ಮಹೇಂದ್ರ ಹೆಬ್ಬಾಳ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಾ ವಾಲಿ, ಭಾಗ್ಯ ಪಿಸಾಳೆ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು. ಭಾರತ್ ರೈಸ್ ಖರೀದಿಗೆ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಜನರು ಮುಗಿ ಬಿದ್ದು ಸೇರಿದ್ದು ಗಮನ ಸೆಳೆಯಿತು.ಶೀಘ್ರವೇ ಪ್ರತಿ ಮನೆಗೂ ಜಲಸಿರಿ ನೀರು
ದಾವಣಗೆರೆ: ದಾವಣಗೆರೆ ಮಹಾ ನಗರದ ಸುಮಾರು ವಾರ್ಡ್‌ಗಳಲ್ಲಿ ಈಗಾಗಲೇ ದಿನದ 24 ಗಂಟೆ ನೀರು ಪೂರೈಸುವ ಜಲ ಸಿರಿ ಯೋಜನೆಯಡಿ ನೀರು ಪೂರೈಸುತ್ತಿದ್ದು, ಇನ್ನು 6 ತಿಂಗಳಲ್ಲೇ ಮಹಾ ನಗರದ ಪ್ರತಿ ಮನೆಗೂ ನೀರೊದಗಿಸಲಾಗುವುದು ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದರು.ನಗರದಲ್ಲಿ ಭಾರತ್ ರೈಸ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಈಗಾಗಲೇ ಅನೇಕ ವಾರ್ಡ್‌ಗಳಲ್ಲಿ ನೀರು ಪೂರೈಸುವ ಕೆಲಸವಾಗುತ್ತಿದೆ. ಉಳಿದ ವಾರ್ಡ್‌ಗಳಿಗೂ ಶೀಘ್ರವೇ ನೀರು ಪೂರೈಕೆಯಾಗಲಿದೆ. ಜಲ ಜೀವನ್ ಮಿಷನ್, ಜಲ ಸಿರಿಯಡಿ ನಗರ, ಗ್ರಾಮೀಣರಿಗೆ ನೀರು ಪೂರೈಸುವ ಕೆಲಸ ನಡೆದಿದೆ ಎಂದರು.