ಭಾರತ ಸೇವಾದಳ ಮಕ್ಕಳಲ್ಲಿ ದೇಶಭಕ್ತಿ ತುಂಬುತ್ತಿದೆ: ದಿನೇಶ್ ಅಭಿಮತ

KannadaprabhaNewsNetwork | Published : May 14, 2024 1:02 AM

ಸಾರಾಂಶ

ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ 30 ದಿನಗಳ ಕಾಲ ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಮಕ್ಕಳ ಸಮಗ್ರ ವ್ಯಕ್ತಿತ್ವ ರೂಪಿಸುವ ದಿಕ್ಕಿನಲ್ಲಿ ಶಿಬಿರವು ಯಶಸ್ವಿಯಾಗಿ ನಡೆದಿರುವುದು ಸಂತೋಷ ತಂದಿದೆ ಎಂದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಸೇವಾ ಮನೋಭಾವನೆ, ಶಿಸ್ತು, ಸಂಯಮ ಮತ್ತು ದೇಶಭಕ್ತಿ ತುಂಬುವ ಕೆಲಸವನ್ನು ಭಾರತ ಸೇವಾದಳವು ಮಾಡುತ್ತಿದೆ ಎಂದು ಟಿಎಪಿಸಿಎಂಎಸ್ ನಿರ್ದೇಶಕ ಕೆ.ಎಸ್. ದಿನೇಶ್ ಹೇಳಿದರು.

ತಾಲೂಕಿನ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಕ್ಷೇತ್ರದಲ್ಲಿ ಭಾರತ ಸೇವಾದಳದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ತಿಂಗಳ ವಸತಿ ಸಹಿತ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ 30 ದಿನಗಳ ಕಾಲ ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಮಕ್ಕಳ ಸಮಗ್ರ ವ್ಯಕ್ತಿತ್ವ ರೂಪಿಸುವ ದಿಕ್ಕಿನಲ್ಲಿ ಶಿಬಿರವು ಯಶಸ್ವಿಯಾಗಿ ನಡೆದಿರುವುದು ಸಂತೋಷ ತಂದಿದೆ ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳು ನಾಲ್ಕು ಗೋಡೆಗಳ ಬಂಧನದಿಂದ ಮುಕ್ತರಾಗಿ ಹಾಡುತ್ತಾ, ಕುಣಿಯುತ್ತ, ಯೋಗ, ಧ್ಯಾನ ಸೇರಿ ಬ್ಯಾಂಡ್ ಬಾರಿಸುವ ಕಲೆಗಳನ್ನು ಕಲಿತು, ವಿವಿಧ ದೇಶಭಕ್ತಿ ಹಾಡುಗಳನ್ನು ಬ್ಯಾಂಡ್ ಸೆಟ್ ಧ್ವನಿಯ ಹಾಡುಗಳ ಮೂಲಕ ಝಲಕ್ ಗಳನ್ನು ಪ್ರಸ್ತುತ ಪಡಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ಎಂದು ಹೇಳಿದರು.

ಮಕ್ಕಳ ಬೇಸಿಗೆ ಶಿಬಿರವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿರುವುದು ಅಸಾಧಾರಣ ಕೆಲಸವಾಗಿದೆ. ಒಂದು ತಿಂಗಳ ಕಾಲ ನಡೆದ ಮಕ್ಕಳ ಬೇಸಿಗೆ ಶಿಬಿರದ ಯಶಸ್ಸಿಗಾಗಿ ದುಡಿದ ಪಂಚಭೂತೇಶ್ವರ ಕ್ಷೇತ್ರದ ಪೀಠಾಧಿಪತಿಗಳ ಸಂಘಟನಾ ಶಕ್ತಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಕೊಮ್ಮೆರಹಳ್ಳಿ ವಿಶ್ವಮಾನವ ಕ್ಷೇತ್ರದ ಹೈಸ್ಕೂಲ್ ವಿಭಾಗದ ಸಂಸ್ಕೃತ ಅಧ್ಯಾಪಕ ಮಂಜುನಾಥ್ ಮಾತನಾಡಿ, ಮಕ್ಕಳು ಶಾಲೆಯಲ್ಲಿ ಕಲಿಯುವ ಜೊತೆ ಜೊತೆಗೆ ಬೇಸಿಗೆ ಶಿಬಿರದಲ್ಲಿ ವಿಶೇಷವಾಗಿ ಕಲಿಯುವುದು ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೆ ನೆರವಾಗಲಿದೆ. ಮಕ್ಕಳಲ್ಲಿ ವೃತ್ತಿ ಕೌಶಲ್ಯವನ್ನು ಹೆಚ್ಚಿಸಿ ಸಾಧಿಸುವ ಛಲವನ್ನು ತುಂಬಿದೆ. ಶಿಕ್ಷಣ ಜ್ಞಾನದ ಬೆಳಕಿನ ಶಕ್ತಿ ಮೂಲಕ ಮಕ್ಕಳು ಸಾಧನೆಗೈಯಲು ಬೇಸಿಗೆ ಶಿಬಿರವು ವರದಾನವಾಗಿದೆ ಎಂದು ಹೇಳಿದರು.

ಬೆಡದಹಳ್ಳಿ ಪಂಚಭೂತೇಶ್ವರ ಮಠದ ಪೀಠಾಧಿಪತಿ ಶ್ರೀ ರುದ್ರಮುನಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ, ಶಿಬಿರದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದ ಭಾರತ ಸೇವಾದಳದ ಮಂಡ್ಯ ಜಿಲ್ಲಾ ಶಾಖೆ ಸ್ವಾಮಿ ಮತ್ತು ಸಂಘಟನಾ ಸಂಚಾಲಕ ಗಣೇಶ್ ಅವರ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಭಾರತೀಪುರ ಗ್ರಾಪಂ ಸದಸ್ಯ ಸುನಿಲ್, ಶ್ರೀ ಮಠದ ಕಾರ್ಯದರ್ಶಿ ಕಾಂತರಾಜು, ಶಿಬಿರದ ಸಂಚಾಲಕ ಕಾಡುಮೆಣಸ ಚಂದ್ರು, ಖಜಾಂಚಿ ಮಹೇಶ್, ಕೆ.ಆರ್.ನೀಲಕಂಠ, ಹಿರಿಕಳಲೆ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶಿವಮ್ಮ ಸೇರಿ ಮಕ್ಕಳ ಪೋಷಕರು ಹಾಗೂ ಬೆಡದಹಳ್ಳಿ ಗ್ರಾಮಸ್ಥರು ಮಕ್ಕಳ ಸಂಭ್ರಮವನ್ನು ಕಣ್ತುಂಬಿಕೊಂಡರು.

Share this article