ಭರತನಾಟ್ಯ ನಮ್ಮ ಪರಂಪರೆ ಕಥೆಯನ್ನು ಸಾರುವ ಸಾಧನ

KannadaprabhaNewsNetwork |  
Published : Dec 16, 2024, 12:46 AM IST
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ನಮಿತ, ನೇಹಾ ನಂದನ್ ಹಾಗೂ ನಮ್ರತ ಅವರ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. | Kannada Prabha

ಸಾರಾಂಶ

ಭರತನಾಟ್ಯ ಮನರಂಜನಾ ಮಾಧ್ಯಮ ಮಾತ್ರವಲ್ಲ, ಇದು ನಮ್ಮ ಪರಂಪರೆ ಸಾರುವ ಕಥೆಗಳನ್ನು ಪೀಳಿಗೆಗೆ ಕೊಂಡೊಯ್ಯುವ ಮಹಾ ಸಾಧನ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ರಘು ಸಕಲೇಶಪುರ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಭರತನಾಟ್ಯ ಮನರಂಜನಾ ಮಾಧ್ಯಮ ಮಾತ್ರವಲ್ಲ, ಇದು ನಮ್ಮ ಪರಂಪರೆ ಸಾರುವ ಕಥೆಗಳನ್ನು ಪೀಳಿಗೆಗೆ ಕೊಂಡೊಯ್ಯುವ ಮಹಾ ಸಾಧನ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ರಘು ಸಕಲೇಶಪುರ ಅವರು ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀಕಂಠೇಶ್ವರ ಕಲಾ ಮಂದಿರದ ವಿದುಷಿ ಸುಮನಾ ರಾಮಚಂದ್ರ ಅವರ ಶಿಷ್ಯೆಯರಾದ ನಮಿತ, ನೇಹಾ ನಂದನ್ ಹಾಗೂ ನಮ್ರತ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ನಮ್ಮ ಸಂಸ್ಕೃತಿಯ ಕಲೆಯನ್ನು ಮುಂದಿನ ಪೀಳಿಗೆಗೆ ರವಾನಿಸುವುದು ಅತ್ಯಂತ ಅಗತ್ಯ. ಈ ದಿನದ ರಂಗ ಪ್ರವೇಶ, ನಮ್ಮ ಗುರು ಪರಂಪರೆಯ ಧ್ಯೋತಕವಾಗಿದೆ ಎಂದು ಹೇಳಿದರು.ಗುರುವಂದನೆ ಸ್ವೀಕರಿಸಿದ ತುಮಕೂರಿನ ಶ್ರಿ ಸಾಯಿ ರಾಮನ್ ನೃತ್ಯ ಕೇಂದ್ರದ ಸಾಗರ್ ಮಾತನಾಡಿ, ಭರತನಾಟ್ಯ ಕಲಾವಿದರು ಚಿಕ್ಕಮಗಳೂರಿನಂತಹ ಊರಿನಲ್ಲಿ ರಂಗ ಪ್ರವೇಶ ನಡೆಸುತ್ತಿರುವುದು ಶ್ಲಾಘನೀಯ. ಕಲೆಗೆ ಪ್ರೋತ್ಸಾಹ ನೀಡುವ ಪ್ರದೇಶಗಳಲ್ಲಿ ಸಂಸ್ಕೃತಿಯು ಶ್ರೀಮಂತವಾಗಿರುತ್ತದೆ. ರಾಜ ಪರಂಪರೆಯು ಗೌರವಿಸುತ್ತಿದ್ದ ಕಲೆಯನ್ನು ಈಗ ಪೋಷಕರ ಸಹಾಯದಿಂದ, ಗುರುವಿನ ಆಶೀರ್ವಾದದಿಂದ ಕಲಾವಿದರು ಮುನ್ನಡೆಸಿಕೊಂಡು ಹೋಗಬೇಕು ಎಂದರು. ಕಳಸಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎಂ. ನಾಗರಾಜರಾವ್‌ ಕಲ್ಕಟ್ಟೆ ಮಾತನಾಡಿ, ಸೀಮಿತ ವರ್ಗದವರಿಗೆ ಮೀಸಲಾಗಿದ್ದ ಮತ್ತು ದೇವರ ಪೂಜೆ, ಉತ್ಸವ, ಜಾತ್ರೆ ಹಾಗೂ ರಾಜರ ಸಡಗರದಲ್ಲಿ ಮಾತ್ರ ಪ್ರದರ್ಶನಗೊಳ್ಳುತ್ತಿದ್ದ ಭರತನಾಟ್ಯ, ಈಗ ಸಾಮಾನ್ಯ ಜನರ ಮನೆಯೊಳಗೆ ಪ್ರವೇಶಿಸಿದೆ. ರಂಗ ಪ್ರವೇಶಕ್ಕೆ ನಿಗದಿತ ಪಠ್ಯ ಬೋಧನೆಯಾದರೆ ಸಾಕು, ಪರೀಕ್ಷೆಗಳೆನ್ನುವುದು ಮುಖ್ಯವಲ್ಲ. ಮಾರ್ಗ ಪದ್ಧತಿಯ ಹನ್ನೊಂದು ಪಾಠಗಳನ್ನು ಕಲಿತುಕೊಂಡವರು ಗುರು ಮುಖೇನ ಆಶೀರ್ವಾದ ಪಡೆದು ರಂಗ ಪ್ರವೇಶ ಮಾಡಬಹುದು ಎಂದು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಮುಖಂಡರಾದ ಪಲ್ಲವಿ ಸಿ.ಟಿ.ರವಿ ಮಾತನಾಡಿ, ಅತೀ ಚಿಕ್ಕ ವಯಸ್ಸಿನಲ್ಲಿ ರಂಗಪ್ರವೇಶ ಮಾಡುತ್ತಿರುವುದು ಸಂತಸ ತಂದಿದೆ. ನಮ್ಮ ಸಂಸ್ಕೃತಿಯನ್ನು ಚಿಕ್ಕ ವಯಸ್ಸಿನಲ್ಲಿ ಕಲಿತಾಗ ಅದಕ್ಕೆ ಅರ್ಥ ಬರುತ್ತದೆ. ದೇಶ, ವಿದೇಶಗಳಲ್ಲಿ ಈ ಕಲೆಯನ್ನು ಪ್ರದರ್ಶಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಪಸರಿಸಿ ಎಂದರು. ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷ ಎಂ. ವೆಂಕಟಸುಬ್ಬರಾವ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಸಾಯಿ ಏಂಜಲ್ಸ್‌ ಶಾಲೆಯ ಸಂಸ್ಥಾಪಕರಾದ ನಾಗೇಶ್ ಹಾಗೂ ವಿಜಯಾ ನಾಗೇಶ್, ಇನ್ಫೆಂಟ್‌ ಜೀಸಸ್ ಶಾಲೆಯ ಪ್ರಾಂಶುಪಾಲರಾದ ಆಂಡ್ರ್ಯೂ ಜಯರಾಜ್ ಹಾಗೂ ಸಾಂಸ್ಕೃತಿಕ ಪೋಷಕಿ ಗೀತಾ ಸುಬ್ಬರಾವ್‌ ಉಪಸ್ಥಿತರಿದ್ದರು.ಇದೇ ವೇಳೆ ವಿದುಷಿ ಸುಮನಾ ರಾಮಚಂದ್ರ ಅವರನ್ನು ನಮಿತ, ನೇಹಾ ನಂದನ್ ಹಾಗೂ ನಮ್ರತ ಗೌರವಿಸಿದರು. ಸ್ವಾಗತಿಸಿದ ವಿದುಷಿ ಸುಮನಾ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು. ಸುಮಾ ಪ್ರಸಾದ್ ವಂದನಾರ್ಪಣೆ ನೆರವೇರಿಸಿದರು.ಸುಮಾರು ಎರಡೂವರೆ ಗಂಟೆಗಳ ಕಾಲ ನಮಿತ, ನೇಹಾ ನಂದನ್ ಹಾಗೂ ನಮ್ರತ ಅವರು ಭರತನಾಟ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ತಣಿಸಿದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?